logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Bihar Rail Accident: ಬಿಹಾರದಲ್ಲಿ ಹಳಿ ತಪ್ಪಿದ ದೆಹಲಿ-ಕಾಮಾಕ್ಯ ರೈಲು: 4 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

Bihar Rail Accident: ಬಿಹಾರದಲ್ಲಿ ಹಳಿ ತಪ್ಪಿದ ದೆಹಲಿ-ಕಾಮಾಕ್ಯ ರೈಲು: 4 ಸಾವು, 100ಕ್ಕೂ ಹೆಚ್ಚು ಮಂದಿಗೆ ಗಾಯ

HT Kannada Desk HT Kannada

Oct 12, 2023 06:24 AM IST

google News

ಬಿಹಾರದಲ್ಲಿ ರೈಲು ಹಳಿ ತಪ್ಪಿ ನಾಲ್ವರು ಮೃತಪಟ್ಟಿದ್ದಾರೆ

    • Bihar Rail Accident ಬಿಹಾರದ ಬುಕ್ಸಾರ್‌ ಜಿಲ್ಲೆಯ ರಘುನಾಥಪುರ ಎಂಬಲ್ಲಿ ದೆಹಲಿ- ಕಾಮಾಕ್ಯ ಈಶಾನ್ಯ ರೈಲು(Dehli Kamakhya North East Express) ಹಳಿ ತಪ್ಪಿ ನಾಲ್ವರು ಮೃತಪಟ್ಟು ನೂರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. 
ಬಿಹಾರದಲ್ಲಿ ರೈಲು ಹಳಿ ತಪ್ಪಿ ನಾಲ್ವರು ಮೃತಪಟ್ಟಿದ್ದಾರೆ
ಬಿಹಾರದಲ್ಲಿ ರೈಲು ಹಳಿ ತಪ್ಪಿ ನಾಲ್ವರು ಮೃತಪಟ್ಟಿದ್ದಾರೆ

ಪಾಟ್ನಾ: ಬಿಹಾರದಲ್ಲಿ ದೆಹಲಿ- ಕಾಮಾಕ್ಯ ಈಶಾನ್ಯ ಎಕ್ಸ್‌ಪ್ರೆಸ್‌ ರೈಲು ಹಳಿ ತಪ್ಪಿದ ಕಾರಣ ನಾಲ್ವರು ಮೃತಪಟ್ಟು ನೂರಕ್ಕೈ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಬಿಹಾರದ ಬುಕ್ಸಾರ್‌ ಸಮೀಪದ ರಘುನಾಥಪುರ ರೈಲ್ವೆ ನಿಲ್ದಾಣದ ಬಳಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.

ರೈಲಿನ ಆರು ಬೋಗಿಗಳು ಉರುಳಿದ್ದು, ಅದರಲ್ಲಿ ಎರಡು ಎಸಿ ಕೋಚ್‌ಗಳು, ನಾಲ್ಕು ಇತರೆ ಕೋಚ್ ಗಳು ಸೇರಿವೆ.

ಸತತ ಏಳು ಗಂಟೆಗಳ ನಿರಂತರ ಪ್ರಯತ್ನಗಳ ನಂತರ ಹಳಿ ಮೇಲಿದ್ದ ಕೋಚ್‌ಗಳನ್ನು ತೆಗೆಯುವ ಕೆಲಸ ಮಾಡಲಾಗಿದೆ. ಇನ್ನೂ ರಕ್ಷಣಾ ಕಾರ್ಯ ಮುಂದುವರಿದಿದೆ.

ರೈಲು ಹಳಿ ತಪ್ಪಲು ನಿಖರ ಕಾರಣ ತಿಳಿದುಬಂದಿಲ್ಲ. ತನಿಖೆ ನಂತರ ಖಚಿತವಾದ ಕಾರಣ ತಿಳಿಯಬಹುದು. ಈಗ ರಕ್ಷಣಾ ಕಾರ್ಯ ನಡೆಯುತ್ತಿರುವುದರಿಂದ ಈ ಕುರಿತು ಬಳಿಕ ಗಮನ ಹರಿಸಲಾಗುವುದು ಎಂದು ಹಿರಿಯ ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ರೈಲು ಹಳಿ ತಪ್ಪಿ ಈ ಮಾರ್ಗದಲ್ಲಿ ವ್ಯತ್ಯಯ ಉಂಟಾಗಿದ್ದರಿಂದ ಕಾಶಿ ಪಾಟ್ನಾ ಜನಶತಾಬ್ದಿ ಎರಡು ರೈಲುಗಳ ಸಂಚಾರವನ್ನು ರದ್ದುಪಡಿಸಲಾಯಿತು. 21 ರೈಲುಗಳ ಮಾರ್ಗಗಳನ್ನು ಬದಲು ಮಾಡಲಾಗಿದೆ.

ದೆಹಲಿಯ ಆನಂದ್‌ ವಿಹಾರದಿಂದ ಬುಧವಾರ ಬೆಳಿಗ್ಗೆ ಹೊರಟಿದ್ದ 23 ಕೋಚ್‌ಗಳಿದ್ದ ಸೂಪರ್‌ಫಾಸ್ಟ್‌ ಎಕ್ಸ್‌ಪ್ರೆಸ್‌ ರೈಲು (12506) ಅಸ್ಸಾಂನ ಗುವಾಹಟಿಯ ಕಾಮಾಕ್ಯಕ್ಕೆ ಹೊರಟಿತ್ತು. ರಾತ್ರಿ 9.35 ರ ಸಮಯದಲ್ಲಿ ದಾನಾಪುರ ರೈಲ್ವೆ ವಿಭಾಗಕ್ಕೆ ಸೇರಿದ ರಘುನಾಥಪುರ ಎಂಬಲ್ಲಿ ಹಳಿ ತಪ್ಪಿತು. ಈ ವೇಳೆ ಆರು ಬೋಗಿಗಳು ಉರುಳಿ ಬಿದ್ದಿವೆ. ಬೋಗಿಗಳ ಉರುಳಿದ ರಭಸಕ್ಕೆ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೋಚ್‌ಗಳಲ್ಲಿ ಗಾಯಗೊಂಡಿದ್ದ ಹಲವರನ್ನು ಸ್ಥಳೀಯ ಬುಕ್ಸಾರ್‌ ಆಸ್ಪತ್ರೆಗೆ ದಾಖಲಿಸಲಾಯಿತು. ರೈಲ್ವೆ ವೈದ್ಯಕೀಯ ವಾಹನಗಳೂ ಆಗಮಿಸಿ ಗಾಯಾಗಳ ರಕ್ಷಣೆ ಆರಂಭಿಸಿದವು.

ವಿಷಯ ತಿಳಿದ ತಕ್ಷಣ ಕೇರಳ ಪ್ರವಾಸದಲ್ಲಿದ್ದ ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿಯಾದವ್‌ ಅವರು ಬಿಹಾರ ರಾಜ್ಯದ ವಿಪತ್ತು ನಿರ್ವಹಣಾ ಘಟಕದ ಅಧಿಕಾರಿಗಳು ಹಾಗೂ ಹಿರಿಯ ಅಧಿಕಾರಿಗಳಿಗೆ ರಕ್ಷಣಾ ಕಾರ್ಯದಲ್ಲಿ ಸಂಪೂರ್ಣ ಸಹಕಾರ ನೀಡುವಂತೆ ಸೂಚಿಸಿದರು. ಅಲ್ಲದೇ ಅಸ್ಸಾಂ ಮುಖ್ಯಮಂತ್ರಿ ಹಿಮಂತ್‌ ಬಿಸ್ವಾ ಶರ್ಮ ಕೂಡ ಪ್ರಯಾಣಿಕರ ಸುರಕ್ಷತೆಗೆ ಸಂಬಂಧಿಸಿ ಸಹಾಯವಾಣಿಗಳನ್ನು ಆರಂಭಿಸಿ ರಕ್ಷಣಾ ಕಾರ್ಯಕ್ಕೆ ಸಹಕರಿಸಿದರು.

ಕೇಂದ್ರ ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ, ಈಗಾಗಲೇ ರೈಲು ದುರಂತ ನಡೆದ ಸ್ಥಳದಲ್ಲಿ ಅಧಿಕಾರಿಗಳು, ಸಿಬ್ಬಂದಿಗಳ ತಂಡ ಬೀಡು ಬಿಟ್ಟಿದೆ. ರೈಲಿ ಬೋಗಿಗಳ ಸ್ಥಳಾಂತರ ಕಾರ್ಯ ಮುಗಿದಿದೆ. ಎಲ್ಲಾ ಕೋಚ್‌ಗಳನ್ನು ತಪಾಸಣೆ ಮಾಡಲಾಗಿದೆ. ವಿಶೇಷ ರೈಲಿನ ಮೂಲಕ ಎಲ್ಲಾ ಪ್ರಯಾಣಿಕರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಲಾಗುವುದು. ಎನ್‌ಡಿಆರ್‌ ಎಫ್‌ ಹಾಗೂ ಎಸ್‌ಡಿಆರ್‌ಎಫ್‌, ಬುಕ್ಸಾರ್‌ ಜಿಲ್ಲಾಡಳಿತ ಸಹಕಾರ ನೀಡುತ್ತಿವೆ ಎಂದು ಹೇಳಿದ್ದಾರೆ.

ಜೂನ್‌ ತಿಂಗಳಿನಲ್ಲಿ ಒಡಿಶಾದ ಬಾಲಸೋರ್‌ನಲ್ಲಿ ಮೂರು ರೈಲುಗಳ ನಡುವೆ ಸಂಭವಿಸಿದ್ದ ಅಪಘಾತದಲ್ಲಿ 296 ಮಂದಿ ಮೃತಪಟ್ಟು ಹಲವರು ಗಾಯಗೊಂಡಿದ್ದರು. ಭಾರತದ ಅತಿ ದೊಡ್ಡ ರೈಲ್ವೆ ದುರಂತಗಳಲ್ಲಿ ಇದೂ ಒಂದು. ಇದಾದ ಬಳಿಕ ಒಂದೆರಡು ಕಡೆ ರೈಲು ಅಪಘಾತಗಳಾಗಿದ್ದವು. ಇದಾದ ಬಳಿಕ ಬಿಹಾರದಲ್ಲಿ ರೈಲ್ವೆ ಅಪಘಾತ ಸಂಭವಿಸಿದೆ.

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ