logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Amit Shah In Chintan Shivir: 'ದೇಶದ ಎಲ್ಲ ರಾಜ್ಯಗಳಲ್ಲೂ 2024ರ ವೇಳೆಗೆ ಎನ್‌ಐಎ ಶಾಖೆ ಸ್ಥಾಪನೆ'

Amit Shah in Chintan Shivir: 'ದೇಶದ ಎಲ್ಲ ರಾಜ್ಯಗಳಲ್ಲೂ 2024ರ ವೇಳೆಗೆ ಎನ್‌ಐಎ ಶಾಖೆ ಸ್ಥಾಪನೆ'

HT Kannada Desk HT Kannada

Oct 28, 2022 06:15 AM IST

ಚಿಂತನ ಶಿಬಿರದಲ್ಲಿ ಅಮಿತ್‌ ಶಾ ಭಾಗಿ

  • ಪ್ರಸ್ತುತ ದೆಹಲಿ, ಹೈದರಾಬಾದ್, ಗುವಾಹಟಿ, ಕೊಚ್ಚಿ, ಲಖನೌ, ಮುಂಬೈ, ಕೋಲ್ಕತ್ತಾ, ರಾಯಪುರ, ಜಮ್ಮು, ಚಂಡೀಗಢ, ರಾಂಚಿ, ಚೆನ್ನೈ, ಇಂಫಾಲ್, ಬೆಂಗಳೂರು ಮತ್ತು ಪಾಟ್ನಾದಲ್ಲಿ ಎನ್‌ಐಎ 15 ಶಾಖೆಗಳನ್ನು ಹೊಂದಿದೆ.

ಚಿಂತನ ಶಿಬಿರದಲ್ಲಿ ಅಮಿತ್‌ ಶಾ ಭಾಗಿ
ಚಿಂತನ ಶಿಬಿರದಲ್ಲಿ ಅಮಿತ್‌ ಶಾ ಭಾಗಿ

ಭಯೋತ್ಪಾದನೆ ಪ್ರಕರಣಗಳನ್ನು ಸಮರ್ಥವಾಗಿ ಎದುರಿಸಲು 2024ರ ವೇಳೆಗೆ ದೇಶದ ಎಲ್ಲಾ ರಾಜ್ಯಗಳಲ್ಲೂ ರಾಷ್ಟ್ರೀಯ ತನಿಖಾ ಸಂಸ್ಥೆ(NIA)ಯ ಶಾಖೆಗಳನ್ನು ಸ್ಥಾಪಿಸಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಇದೇ ವಿಚಾರವಾಗಿ ಕೇಂದ್ರದೊಂದಿಗೆ ಕೈಜೋಡಿಸುವಂತೆ ಅವರು ವಿವಿಧ ರಾಜ್ಯಗಳೊಂದಿಗೆ ಮನವಿ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಶುಕ್ರವಾರವೂ ಏರಿಕೆಯಾದ ಚಿನ್ನ, ಬೆಳ್ಳಿ ದರ; ದೇಶದಲ್ಲಿಂದು ಆಭರಣ ದರ ಎಷ್ಟಾಗಿದೆ ಗಮನಿಸಿ

ಇಪಿಎಫ್‌ಒ; ಈ 3 ಕಾರಣ ನೀಡಿದ್ರೆ ಇಪಿಎಫ್‌ ಹಣ ಬೇಗ ಹಿಂಪಡೆಯಬಹುದು, ಹಂತ ಹಂತದ ಮಾರ್ಗದರ್ಶಿ ಇಲ್ಲಿದೆ ನೋಡಿ

ಗುವಾಹಟಿ ಬೀದಿಯಲ್ಲಿ ಸೋಷಿಯಲ್ ಮೀಡಿಯಾ ಪ್ರಭಾವಿಯ ಮಂಜುಲಿಕಾ ನೃತ್ಯನಾಟಕ, ದಂಗಾಗಿ ನೋಡುತ್ತ ನಿಂತ ಜನ-ವೈರಲ್ ವಿಡಿಯೋ

Gold Rate Today: ಬಂಗಾರ ಪ್ರಿಯರಿಗೆ ಮತ್ತೆ ನಿರಾಸೆ; ತುಸು ಕಡಿಮೆಯಾಗಿ ಪುನಃ ಹೆಚ್ಚಾದ ಚಿನ್ನದ ದರ, ಬೆಳ್ಳಿ ಬೆಲೆಯೂ ಏರಿಕೆ

ಹರಿಯಾಣದ ಸೂರಜ್‌ಕುಂಡ್‌ನಲ್ಲಿ ವಿವಿಧ ರಾಜ್ಯಗಳ ಗೃಹಸಚಿವರ ಮೊಟ್ಟಮೊದಲ ಚಿಂತನ ಶಿಬಿರದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಶಾ, ದೇಶದ ಆಂತರಿಕ ಮತ್ತು ಬಾಹ್ಯ ಭದ್ರತಾ ಸಮಸ್ಯೆಗಳಿಗೆ “ಜಂಟಿ ಕಾರ್ಯತಂತ್ರ” ಸಿದ್ಧಪಡಿಸುವಂತೆ ರಾಜ್ಯಗಳನ್ನು ಕೇಳಿಕೊಂಡರು. ಗಡಿ ರಹಿತ ಅಪರಾಧಗಳು, ಗಡಿಯಾಚೆಗಿನ ಭಯೋತ್ಪಾದನೆ ಮತ್ತು ಸಂಘಟಿತ ಅಪರಾಧಗಳನ್ನು ನಿಯಂತ್ರಿಸುವ ಸಲುವಾಗಿ ಈ ನಿರ್ಧಾರದ ಅಗತ್ಯವನ್ನು ಅವರು ವಿವರಿಸಿದರು.

“ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ನಿರ್ಣಾಯಕ ವಿಜಯ ಸಾಧಿಸಲು, ಕಾನೂನು ಚೌಕಟ್ಟನ್ನು ಬಲಪಡಿಸಲಾಗುತ್ತಿದೆ. ಅದರ ಅಡಿಯಲ್ಲಿ ಎನ್ಐಎ ಮತ್ತು ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ( UAPA)ಗೆ ತಿದ್ದುಪಡಿ ಮಾಡುವ ಮೂಲಕ ವೈಯಕ್ತಿಕ ಭಯೋತ್ಪಾದಕರು ಎಂದು ಘೋಷಿಸಲು ಅವಕಾಶ ಕಲ್ಪಿಸಲಾಗಿದೆ. ಇ-NIAಗೆ ಹೆಚ್ಚುವರಿ ಪ್ರಾದೇಶಿಕ ಅಧಿಕಾರ ವ್ಯಾಪ್ತಿ ಹಾಗೂ ಭಯೋತ್ಪಾದಕರು ಸಂಪಾದಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ನೀಡಲಾಗಿದೆ. ಮುಂದೆ 2024ರ ವೇಳೆಗೆ ಎಲ್ಲಾ ರಾಜ್ಯಗಳಲ್ಲೂ ಎನ್ಐಎ ಶಾಖೆಗಳನ್ನು ಸ್ಥಾಪಿಸಲು ನಾವು ನಿರ್ಧರಿಸಿದ್ದೇವೆ” ಎಂದು ಎರಡು ದಿನಗಳ ಸಮ್ಮೇಳನದಲ್ಲಿ ಶಾ ಹೇಳಿದರು.

ಪ್ರಸ್ತುತ ದೆಹಲಿ, ಹೈದರಾಬಾದ್, ಗುವಾಹಟಿ, ಕೊಚ್ಚಿ, ಲಖನೌ, ಮುಂಬೈ, ಕೋಲ್ಕತ್ತಾ, ರಾಯಪುರ, ಜಮ್ಮು, ಚಂಡೀಗಢ, ರಾಂಚಿ, ಚೆನ್ನೈ, ಇಂಫಾಲ್, ಬೆಂಗಳೂರು ಮತ್ತು ಪಾಟ್ನಾದಲ್ಲಿ ಎನ್‌ಐಎ 15 ಶಾಖೆಗಳನ್ನು ಹೊಂದಿದೆ. 26/11 ಮುಂಬೈ ದಾಳಿಯ ಬಳಿಕ ರಚಿಸಲಾದ ಈ ಭಯೋತ್ಪಾದನಾ ವಿರೋಧಿ ಸಂಸ್ಥೆಯು, ಇದುವರೆಗೆ 468 ಪ್ರಕರಣಗಳನ್ನು ದಾಖಲಿಸಿದೆ. ಅಲ್ಲದೆ 93.25%ದಷ್ಟು ಶಿಕ್ಷೆಯ ಪ್ರಮಾಣವನ್ನು ಹೊಂದಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಯೋತ್ಪಾದನೆ ವಿಚಾರವಾಗಿ ಯಾವುದೇ ಸಹಿಷ್ಣುತೆ ಹೊಂದಿಲ್ಲ ಎಂದು ಶಾ ಹೇಳಿದ್ದಾರೆ. ಕೇಂದ್ರ ಮತ್ತು ರಾಜ್ಯಗಳ ನಡುವಿನ ಪರಸ್ಪರ ಸಹಕಾರ ಮತ್ತು ಸಮನ್ವಯದಿಂದಾಗಿ ದೇಶದ ಹೆಚ್ಚಿನ ಭದ್ರತಾ ಹಾಟ್‌ಸ್ಪಾಟ್‌ಗಳು ಈಗಾಗಲೇ ದೇಶವಿರೋಧಿ ಚಟುವಟಿಕೆಗಳಿಂದ ಮುಕ್ತವಾಗಿವೆ ಎಂದು ಶಾ ಪ್ರತಿಪಾದಿಸಿದರು. ಮುಂದೆ ಸ್ಥಾಪಿಸಲಾಗುವ ಹೊಸ ಶಾಖೆಗಳು ಭಯೋತ್ಪಾದನೆ, ಅಪರಾಧ ಮತ್ತು ಸಾಮಾನ್ಯ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳೊಂದಿಗೆ ಜಂಟಿ ಕಾರ್ಯತಂತ್ರ ಮತ್ತು ಭವಿಷ್ಯದ ಮಾರ್ಗಸೂಚಿಯನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡುತ್ತದೆ ಎಂದು ಹೇಳಿದರು.

“ಕಾನೂನು ಮತ್ತು ಸುವ್ಯವಸ್ಥೆ ಒಂದು ರಾಜ್ಯದ ಒಳಗಿನ ವಿಷಯವಾಗಿದೆ. ಆದರೆ ತಂತ್ರಜ್ಞಾನವು ಅಪರಾಧಗಳನ್ನು ಗಡಿಯಿಲ್ಲದಂತೆ ಮಾಡಿದೆ. ಸೈಬರ್ ಅಪರಾಧಗಳು, ಭಯೋತ್ಪಾದನೆ, ಮಾದಕವಸ್ತು ಕಳ್ಳಸಾಗಣೆ, ಹಣಕಾಸು ಅಪರಾಧಗಳು ಸೇರಿದಂತೆ ಈ ಎಲ್ಲ ಗಡಿ ರಹಿತ ಅಪರಾಧಗಳನ್ನು ಎದುರಿಸಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರ ಒಟ್ಟಾಗಿ ಚರ್ಚಿಸುವುದು ಮತ್ತು ಕಾರ್ಯತಂತ್ರವನ್ನು ರೂಪಿಸುವುದು ಮುಖ್ಯವಾಗಿದೆ” ಎಂದು ಶಾ ಹೇಳಿದರು.

ಈ ಬಾರಿಯ ಸ್ವಾತಂತ್ರ್ಯ ದಿನದ ಭಾಷಣದಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು 2047ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನಾಗಿ ಮಾಡುವ ಐದು ಸಂಕಲ್ಪಗಳ ಕುರಿತು ಮಾತನಾಡಿದರು. 'ಸಂಪೂರ್ಣ ಸರ್ಕಾರ' ಮತ್ತು ಎಲ್ಲಾ ಇಲಾಖೆಗಳು ಒಂದು ತಂಡವಾಗಿ ಕೆಲಸ ಮಾಡುವ' ಇದು ಸಾಧ್ಯ ಎಂದು ಪ್ರಧಾನಿ ವಿವರಿಸಿದ್ದಾರೆ.

“ಈ ಸಮ್ಮೇಳನದಲ್ಲಿ, ನಮ್ಮ ರಾಷ್ಟ್ರೀಯ ಭದ್ರತೆಗೆ ಇರುವ ಬೆದರಿಕೆಗಳನ್ನು ಎದುರಿಸಲು ರಾಜ್ಯಗಳು ಹೇಗೆ ಒಟ್ಟಾಗಿ ಕೆಲಸ ಮಾಡಬಹುದು ಎಂಬುದನ್ನು ನಾವು ಚರ್ಚಿಸುತ್ತೇವೆ. ಕಾನೂನು ಮತ್ತು ಸುವ್ಯವಸ್ಥೆಗಾಗಿ ಲಭ್ಯವಿರುವ ಸಂಪನ್ಮೂಲಗಳನ್ನು ಕೇಂದ್ರ ಮತ್ತು ರಾಜ್ಯಗಳು ಹೇಗೆ ಅತ್ಯುತ್ತಮವಾಗಿ ಮತ್ತು ತರ್ಕಬದ್ಧವಾಗಿ ಬಳಸಿಕೊಳ್ಳಬಹುದು ಮತ್ತು ಸಂಯೋಜಿಸಬಹುದು ಎಂಬುದನ್ನು ನಾವು ಚರ್ಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ರಾಜ್ಯಗಳು ಒಟ್ಟಾಗಿ ಸಂಪೂರ್ಣ ಸಹಯೋಗದ ಕಾರ್ಯತಂತ್ರ ಮತ್ತು ಮಾರ್ಗಸೂಚಿಯನ್ನು ಸಿದ್ಧಪಡಿಸುವುದು ಮುಖ್ಯವಾಗಿದೆ,” ಎಂದು ಶಾ ಹೇಳಿದರು.

ಎರಡು ದಿನಗಳ ಈ ಸಮ್ಮೇಳನದಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶ, ಅಸ್ಸಾಂ, ಕೇರಳ, ಗೋವಾ, ಮಣಿಪುರ, ಉತ್ತರಾಖಂಡ, ಸಿಕ್ಕಿಂ ಮತ್ತು ಮಣಿಪುರ ಸೇರಿದಂತೆ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಭಾಗವಹಿಸುತ್ತಿದ್ದಾರೆ. ಮಹಾರಾಷ್ಟ್ರ ಮತ್ತು ನಾಗಾಲ್ಯಾಂಡ್‌ನ ಉಪ ಮುಖ್ಯಮಂತ್ರಿಗಳು; ಗುಜರಾತ್, ಅರುಣಾಚಲ ಪ್ರದೇಶ, ಮೇಘಾಲಯ, ಒಡಿಶಾ, ತೆಲಂಗಾಣ, ಪುದುಚೇರಿ, ಛತ್ತೀಸ್‌ಗಢ, ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಧ್ಯಪ್ರದೇಶದ ಗೃಹಸಚಿವರು; ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಹಾಗೂ ಆಯಾ ರಾಜ್ಯಗಳ ಗೃಹ ಕಾರ್ಯದರ್ಶಿಗಳು ಮತ್ತು ಪೊಲೀಸ್ ಮುಖ್ಯಸ್ಥರು ಭಾಗವಹಿಸಿದ್ದಾರೆ. ಎನ್‌ಡಿಎಯೇತರ ಪಕ್ಷಗಳು ಆಡಳಿತ ನಡೆಸುತ್ತಿರುವ ಐದು ರಾಜ್ಯಗಳಾದ ಪಶ್ಚಿಮ ಬಂಗಾಳ, ರಾಜಸ್ಥಾನ, ಒಡಿಶಾ, ಬಿಹಾರ ಮತ್ತು ತಮಿಳುನಾಡು ರಾಜ್ಯಗಳಿಂದ ಸಿಎಂ ಅಥವಾ ಗೃಹಸಚಿವರು ಹಾಜರಾಗಿಲ್ಲ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ