logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Noida: ಮಗಳ ಮದುವೆಗೆ ತಂದ ಕೋಟಿ ರೂ ಮೌಲ್ಯದ ಚಿನ್ನಾಭರಣ ಕ್ಯಾಬ್‌ನಲ್ಲೇ ಬಿಟ್ಟ ತಂದೆ; ನಾಲ್ಕು ಗಂಟೆ ಬಳಿಕ ಆಗಿದ್ದೇನು?

Noida: ಮಗಳ ಮದುವೆಗೆ ತಂದ ಕೋಟಿ ರೂ ಮೌಲ್ಯದ ಚಿನ್ನಾಭರಣ ಕ್ಯಾಬ್‌ನಲ್ಲೇ ಬಿಟ್ಟ ತಂದೆ; ನಾಲ್ಕು ಗಂಟೆ ಬಳಿಕ ಆಗಿದ್ದೇನು?

HT Kannada Desk HT Kannada

Dec 01, 2022 04:33 PM IST

google News

ಸಾಂದರ್ಭಿಕ ಚಿತ್ರ

    • ಸತತ ನಾಲ್ಕು ಗಂಟೆಗಳ ಹುಡುಕಾಟದ ಬಳಿಕ, ಗಾಜಿಯಾಬಾದ್‌ನ ಲಾಲ್ ಕುವಾನ್ ಪ್ರದೇಶದಲ್ಲಿ ಕ್ಯಾಬ್ ಡ್ರೈವರ್ ಪತ್ತೆಯಾಗಿದ್ದಾನೆ. ಬಳಿಕ ವಾಹನದಲ್ಲಿದ್ದ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಇದ್ದ ಎಲ್ಲಾ ವಸ್ತುಗಳು ಸುರಕ್ಷಿತವಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (Reuters)

ನೋಯ್ಡಾ: ತನ್ನ ಮಗಳ ಮದುವೆಗೆಂದು ಯುಕೆಯಿಂದ ಬಂದ ಅನಿವಾಸಿ ಭಾರತೀಯರೊಬ್ಬರು, ತಾವು ಬಂದ ಕ್ಯಾಬ್‌ನಲ್ಲೇ ಸುಮಾರು 1 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಚಿನ್ನಾಭರಣ ಹಾಗೂ ಬೆಲೆಬಾಳುವ ವಸ್ತುಗಳನ್ನು ಮರೆತು ಬಿಟ್ಟುಹೋಗಿರುವ ಘಟನೆ ನೋಯ್ಡಾ ಬಳಿ ನಡೆದಿದೆ.

ಬಿಸ್ರಖ್ ಪೊಲೀಸ್ ಠಾಣೆಯ ಪೊಲೀಸರ ತಂಡವು ಪಕ್ಕದ ಗಾಜಿಯಾಬಾದ್ ಜಿಲ್ಲೆಯಲ್ಲಿ, ಚಿನ್ನಾಭರಣ ಉಳಿದಿರುವ ಉಬರ್ ಕ್ಯಾಬ್ ಅನ್ನು ಪತ್ತೆಹಚ್ಚಿದ್ದಾರೆ. ಸುಮಾರು ನಾಲ್ಕು ಗಂಟೆಗಳ ಬಳಿಕ ಬ್ಯಾಗ್ ಮತ್ತು ಅದರಲ್ಲಿದ್ದ ಇತರ ವಸ್ತುಗಳನ್ನು ಉಬರ್‌ ಚಾಲಕನಿಂದ ಪಡೆದುಕೊಂಡು, ಸಂಬಂಧಿಸಿದ ವ್ಯಕ್ತಿಗೆ ಮರಳಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 50 ವರ್ಷದ ನಿಖಿಲೇಶ್ ಕುಮಾರ್ ಸಿನ್ಹಾ ಲಂಡನ್‌ನಲ್ಲಿ ತಮ್ಮ ಕುಟುಂಬದೊಂದಿಗೆ ವಾಸಿಸುತ್ತಿದ್ದಾರೆ. ಅವರು ತಮ್ಮ ಮಗಳ ಮದುವೆಗಾಗಿ ಗ್ರೇಟರ್ ನೋಯ್ಡಾಗೆ ಬಂದಿದ್ದಾರೆ.

ಏನಾಯ್ತು?

ಭಾರತಕ್ಕೆ ಬಂದಿಳಿದ ಅವರು, ವಿಮಾನ ನಿಲ್ದಾಣದಿಂದ ಕ್ಯಾಬ್‌ ಮೂಲಕ ಗೌರ್ ಸಿಟಿ ಪ್ರದೇಶದಲ್ಲಿರುವ ಸರೋವರ್ ಪೋರ್ಟಿಕೋ ಹೋಟೆಲ್‌ಗೆ ಬಂದಿದ್ದಾರೆ. ಅಲ್ಲಿ ಬಂದು ನೋಡಿದದಾಗ ಚಿನ್ನಾಭರಣ ಮತ್ತು ಇತರ ಬೆಲೆಬಾಳುವ ವಸ್ತುಗಳಿದ್ದ ಬ್ಯಾಗ್‌ಗಳಲ್ಲಿ ಒಂದು ಬ್ಯಾಗ್‌ ನಾಪತ್ತೆಯಾಗಿರುವುದು ಅವರ ಗಮನಕ್ಕೆ ಬಂದಿದೆ. ಹೋಟೆಲ್‌ಗೆ ಬಂದಿದ್ದ ಕ್ಯಾಬ್‌ನಲ್ಲೇ ಅದನ್ನು ಮರೆತಿಬಹುದು ಎಂದು ಶಂಕಿಸಿ, ಪೊಲೀಸರ ಗಮನಕ್ಕೆ ತಂದಿದ್ದಾರೆ.

ಈ ಬಗ್ಗೆ ಬಿಸ್ರಖ್ ಪೊಲೀಸ್ ಠಾಣೆಯ ಉಸ್ತುವಾರಿ ಅನಿಲ್ ಕುಮಾರ್ ರಾಜ್‌ಪೂತ್ ಅವರು ಸುದ್ದಿ ಸಂಸ್ಥೆ ಪಿಟಿಐಗೆ ಮಾಹಿತಿ ನೀಡಿದ್ದು, “ಕುಟುಂಬವು ಸಂಜೆ 4 ಗಂಟೆ ಸುಮಾರಿಗೆ ಪೊಲೀಸ್ ಠಾಣೆಯನ್ನು ಸಂಪರ್ಕಿಸಿತು. ದೂರು ಬಂದ ತಕ್ಷಣ ಹುಡುಕಾಟ ಪ್ರಾರಂಭಿಸಲಾಯಿತು. ಕುಟುಂಬವು ನಮಗೆ ಕ್ಯಾಬ್ ಚಾಲಕನ ಸಂಖ್ಯೆಯನ್ನು ಒದಗಿಸಿತು. ನಾವು ಗುರುಗ್ರಾಮದಲ್ಲಿರುವ ಉಬರ್‌ನ ಕಚೇರಿಯಿಂದ ಅದರ ಲೈವ್ ಸ್ಥಳವನ್ನು ವಿಚಾರಿಸಿದೆವು. ಅದೇ ರೀತಿ ಅದನ್ನು ಗಾಜಿಯಾಬಾದ್‌ನಲ್ಲಿ ಪತ್ತೆ ಮಾಡಿದೆವು,” ಎಂದು ಅವರು ಹೇಳಿದ್ದಾರೆ.

ಸತತ ನಾಲ್ಕು ಗಂಟೆಗಳ ಹುಡುಕಾಟದ ಬಳಿಕ, ಗಾಜಿಯಾಬಾದ್‌ನ ಲಾಲ್ ಕುವಾನ್ ಪ್ರದೇಶದಲ್ಲಿ ಕ್ಯಾಬ್ ಡ್ರೈವರ್ ಪತ್ತೆಯಾಗಿದ್ದಾನೆ. ಬಳಿಕ ವಾಹನದಲ್ಲಿದ್ದ ಬ್ಯಾಗ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಅದರಲ್ಲಿ ಇದ್ದ ಎಲ್ಲಾ ವಸ್ತುಗಳು ಸುರಕ್ಷಿತವಾಗಿವೆ ಎಂದು ರಾಜ್‌ಪೂತ್ ಹೇಳಿದ್ದಾರೆ.

“ಬ್ಯಾಗ್ ತನ್ನ ಕ್ಯಾಬ್‌ನ ಬೂಟ್‌ನಲ್ಲಿರುವುದು ತನಗೆ ತಿಳಿದಿರಲಿಲ್ಲ ಎಂದು ಚಾಲಕ ಪೊಲೀಸರಿಗೆ ತಿಳಿಸಿದ್ದಾನೆ. ಬ್ಯಾಗ್ ಲಾಕ್ ಆಗಿದ್ದು, ಪೊಲೀಸ್ ಠಾಣೆಯಲ್ಲಿ ದೂರುದಾರರು, ಅವರ ಸಂಬಂಧಿಕರು ಮತ್ತು ಚಾಲಕನ ಮುಂದೆಯೇ ತೆರೆಯಲಾಗಿದೆ,” ಎಂದು ಅಧಿಕಾರಿ ಹೇಳಿದ್ದಾರೆ.

“ಸಿನ್ಹಾಗೆ ಹಸ್ತಾಂತರಿಸಲಾದ ಬ್ಯಾಗ್‌ನಲ್ಲಿ ಸುಮಾರು 1 ಕೋಟಿ ರೂಪಾಯಿ ಮೌಲ್ಯದ ಎಲ್ಲಾ ಆಭರಣಗಳು ಸುರಕ್ಷಿತವಾಗಿ ಕಂಡುಬಂದಿವೆ. ಪೊಲೀಸರು ಮಾಡಿದ ಕೆಲಸಕ್ಕೆ ಕುಟುಂಬವು ಕೃತಜ್ಞತೆ ಸಲ್ಲಿಸಿದೆ,” ಎಂದು ಅನಿಲ್ ಕುಮಾರ್ ರಾಜ್‌ಪೂತ್ ಹೇಳಿದ್ದಾರೆ.

ಮಗಳ ಮದುವೆಗೆಂದು ವಿದೇಶದಿಂದ ತಂದ ಚಿನ್ನಾಭರಣ ನಾಪತ್ತೆಯಾದಾಗ, ತಂದೆ ಒಂದು ಕ್ಷಣ ಕಂಗೆಟ್ಟಿದ್ದರು. ಕೊನೆಗೂ ಕೋಟಿ ರೂಪಾಯಿ ಬೆಲೆಬಾಳುವ ಆಭರಣ ಕೈಸೇರಿದ್ದು, ತಂದೆ ಹಾಗೂ ಕುಟುಂಬಸ್ಥರು ನಿರಾಳರಾಗಿದ್ದಾರೆ. ನ್ಯಾಯಯುತವಾಗಿ ದುಡಿದು ಸಂಪಾದಿಸಿದ ವಸ್ತುಗಳು ಕೊನೆಗೂ ಅದು ಸೇರಬೇಕಾದವರ ಕೈ ಸೇರಿಯೇ ಸೇರುತ್ತದೆ ಎಂಬುದಕ್ಕೆ ಈ ಘಟನೆ ಉತ್ತಮ ಉದಾಹರಣೆ.

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ