Salary Money Save: ವೇತನದ ಹಣದಲ್ಲಿ ಪ್ರತಿತಿಂಗಳು ಉಳಿತಾಯ ಮಾಡುವುದು ಹೇಗೆ? ಉದ್ಯೋಗಿಗಳು ಓದಲೇಬೇಕಾದ ಮಾಹಿತಿ
Jun 01, 2023 05:30 PM IST
Salary Money Save: ವೇತನದ ಹಣದಲ್ಲಿ ಪ್ರತಿತಿಂಗಳು ಉಳಿತಾಯ ಮಾಡುವುದು ಹೇಗೆ? ಉದ್ಯೋಗಿಗಳು ಓದಲೇಬೇಕಾದ ಮಾಹಿತಿ
- Save money from your salary: ಉದ್ಯೋಗಿಗಳು ಹಣ ಉಳಿತಾಯ ಮಾಡಬೇಕಿದ್ದರೆ ಹಣಕಾಸು ಶಿಸ್ತು ಬೆಳೆಸಿಕೊಳ್ಳುವುದು ಅತ್ಯಂತ ಅಗತ್ಯ. ಇಲ್ಲವಾದರೆ ತಿಂಗಳಾಂತ್ಯಕ್ಕೆ ಇನ್ನೊಬ್ಬರ ಬಳಿ ಸ್ವಲ್ಪ ಸಾಲ ಕೊಡು ಎಂದು ಕೇಳಬೇಕಾಗಬಹುದು. ಉದ್ಯೋಗಿಗಳು ತಮ್ಮ ಉದ್ಯೋಗದ ಆರಂಭಿಕ ಹಂತದಲ್ಲಿಯೇ ಉಳಿತಾಯ ಮಾಡಲು ಕಲಿಯಬೇಕು.
ಹತ್ತಿಪ್ಪತ್ತು ಸಾವಿರ ರೂ. ವೇತನವನ್ನು ತಿಂಗಳಿಗೆ ಪಡೆಯುವವರು ಅತ್ಯುತ್ತಮ ಸೌಕರ್ಯಗಳೊಂದಿಗೆ ಬದುಕುತ್ತಿರಬಹುದು. ಐವತ್ತು ಸಾವಿರ, ಒಂದು ಲಕ್ಷ ರೂ. ವೇತನ ಪಡೆಯುವವರು ಇನ್ನೊಬ್ಬರ ಬಳಿ ಸದಾ ಸಾಲ ಕೇಳುತ್ತ ಇರಬಹುದು. ಅತ್ಯುತ್ತಮ ವೇತನ ಇರುವವರೂ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ಪಾವತಿಸಲಾಗದೆ ಪರಿತಪಿಸುತ್ತ ಇರಬಹುದು. ಉದ್ಯೋಗಿಗಳಲ್ಲಿ ಹೆಣ್ಮಕ್ಕಳು ಉಳಿತಾಯ ಮಾಡುವುದರಲ್ಲಿ ಮುಂದಿರುತ್ತಾರೆ. ಗಂಡಸರು ತಮ್ಮ ಹಣ ಖರ್ಚು ಮಾಡುವುದರಲ್ಲಿ ಮುಂದಿರುತ್ತಾರೆ. ಆದರೆ, ಈಗ ಹಣ ಉಳಿತಾಯದಲ್ಲಿ ಯುವಕರು, ಯುವತಿಯರು ಸೇರಿದಂತೆ ಸಮಸ್ತ ಉದ್ಯೋಗಿಗಳು ಜಾಣರಾಗಿರುತ್ತಾರೆ.
ಪ್ರತಿತಿಂಗಳ ಅಂತ್ಯದಲ್ಲಿ ವೇತನವು ಅಕೌಂಟ್‌ಗೆ ಬೀಳುತ್ತದೆ. ಕೆಲವೇ ದಿನಗಳಲ್ಲಿ ಮನೆ ಬಾಡಿಗೆ, ಇಎಂಐ, ಮಕ್ಕಳ ಶುಲ್ಕ, ದಿನಸಿ ಎಂದೆಲ್ಲ ಖರ್ಚಾಗಿ ಖಾತೆ ಖಾಲಿಯಾಗಿಬಿಡುತ್ತದೆ. ಇನ್ನು ಉಳಿತಾಯದ ಮಾತೆಲ್ಲಿ ಎಂದು ಕೇಳಬಹುದು. ಉಳಿತಾಯ ಮಾಡಲು ಇಲ್ಲೊಂದಿಷ್ಟು ಸಲಹೆಗಳು ನೀಡಲಾಗಿದೆ.
ಸಾಲ ಬೇಡ, ಇಎಂಐ ಹೊರೆಯಿಂದ ತಪ್ಪಿಸಿ
ನಿಮ್ಮ ತಿಂಗಳ ವೇತನ ಎಷ್ಟು, ಅದರಲ್ಲಿ ಎಷ್ಟು ಹಣ ಖರ್ಚು ಮಾಡಬೇಕು ಎನ್ನುವ ಸ್ಪಷ್ಟತೆ ಇರಲಿ. ಸಾಲ ಕೊಡುತ್ತಾರೆ ಎಂದು ಸ್ನೇಹಿತರಲ್ಲಿ ಸಾಲ ಕೇಳುತ್ತ ಇರಬೇಡಿ. ಈಗ ಸಾಲ ಸುಲಭವಾಗಿ ದೊರಕುತ್ತದೆ. ಕ್ರೆಡಿಟ್ ಕಾರ್ಡ್ ಅಥವಾ ಗೂಗಲ್ ಪೇ ಇತ್ಯಾದಿಗಳ ಮೂಲಕವೂ ಸಾಲ ಪಡೆಯಬಹುದು. ಕೆಲವು ಬ್ಯಾಂಕ್‌ಗಳು ಕರೆದುಕರೆದು ಸಾಲ ನೀಡುತ್ತವೆ. ಇಂತಹ ಸಾಲದ ಶೂಲಕ್ಕೆ ಸಿಲುಕಬೇಡಿ. ನಿಮ್ಮ ಆದಾಯದ ಶೇಕಡ 30ಕ್ಕಿಂತ ಹೆಚ್ಚು ಮೊತ್ತ ಇಎಂಐಗೆ ಹೋಗುವಂತೆ ಇರಬಾರದು.
ಕ್ರೆಡಿಟ್ ಕಾರ್ಡ್ ಬೇಕಾ?
ನೀವು ಕ್ರೆಡಿಟ್ ಕಾರ್ಡ್ ಅನ್ನು ಬಳಸಿ ತೊಂದರೆ ಅನುಭವಿಸುತ್ತಿದ್ದರೆ, ಅದೇ ನಿಮ್ಮ ಸಮಸ್ಯೆಯಾಗಿದ್ದರೆ ಕ್ರೆಡಿಟ್ ಕಾರ್ಡ್ ಬಿಟ್ಟುಬಿಡಿ. ಪ್ರತಿತಿಂಗಳು ಸರಿಯಾದ ಸಮಯದಲ್ಲಿ ಕ್ರೆಡಿಟ್ ಕಾರ್ಡ್‌ಗೆ ಪಾವತಿ ಮಾಡುತ್ತಿದ್ದರೆ ಮುಂದುವರೆಸಿ. ವಿಳಂಬ ಪಾವತಿ ಮಾಡುತ್ತಿದ್ದರೆ ನಿಮಗೆ ಕ್ರೆಡಿಟ್ ಕಾರ್ಡ್ ಸಹವಾಸ ಬೇಡ.
ಹಣ ಖರ್ಚು ಮಾಡುವಾಗ ಎಚ್ಚರಿಕೆ, ವೆಚ್ಚದ ಮೇಲೆ ನಿಯಂತ್ರಣ
ನೀವು ಪ್ರತಿನಿತ್ಯ, ತಿಂಗಳು ಮಾಡುವ ಖರ್ಚುಗಳ ಪಟ್ಟಿ ಮಾಡಿ. ಆಹಾರ, ಪ್ರಯಾಣ, ಮನೆ ಖರ್ಚು ಎಂದೆಲ್ಲ ಲೆಕ್ಕ ಹಾಕಿ. ಈ ರೀತಿಯ ಪಟ್ಟಿಯಲ್ಲಿ ಯಾವುದೆಲ್ಲ ಅನಗತ್ಯವಾಗಿತ್ತು ಎಂದು ಪರಿಶೀಲಿಸಿ. ಮುಂದಿನ ತಿಂಗಳಿನಿಂದ ಇಂತಹ ಅನಗತ್ಯ ಖರ್ಚು ಮಾಡುವ ಮೊದಲು ಹತ್ತು ಬಾರಿ ಯೋಚಿಸಿ. ನೆನಪಿಡಿ, ನೀವು ಏನು ಉಳಿಸುವಿರೋ ಅದೇ ನಿಮ್ಮ ಗಳಿಕೆಯಾಗಿದೆ.
ಗುರಿ ನಿಗದಿಪಡಿಸಿ
ವರ್ಷಕ್ಕೆ ವೇತನದಲ್ಲಿ ಇಷ್ಟು ಹಣ ಉಳಿತಾಯ ಮಾಡಬೇಕೆನ್ನುವ ಗುರಿ ಹಾಕಿಕೊಳ್ಳಿ. ಕೆಲವು ವರ್ಷದಲ್ಲಿ ಕಾರು ಖರೀದಿಸಬೇಕೆನ್ನುವ ಕನಸು, ಮನೆ ನಿರ್ಮಿಸಬೇಕೆನ್ನುವ ಕನಸು ಇಂತಹ ಗುರಿ ಹಾಕಿಕೊಂಡು ಅದಕ್ಕೆ ತಕ್ಕಂತೆ ತಿಂಗಳಿಗೆ ಇಂತಿಷ್ಟು ಹಣ ಉಳಿತಾಯ ಮಾಡಿ.
ಬ್ಯಾಂಕ್‌ನಲ್ಲಿ ಹಣ ಉಳಿತಾಯ
ತಿಂಗಳಿಗೆ ಐದು ಅಥವಾ ಹತ್ತು ಸಾವಿರ ಕಟ್ ಆಗುವಂತೆ ಬ್ಯಾಂಕ್‌ಗಳ ಆರ್‌ಡಿಗೆ ಸೇರಬಹುದು. ವರ್ಷದ ಕೊನೆಗೆ ಐವತ್ತು ಅಥವಾ ಒಂದು ಲಕ್ಷ ರೂಪಾಯಿ ಅಲ್ಲಿ ಉಳಿತಾಯವಾಗಬಹುದು. ಷೇರುಪೇಟೆ, ಮ್ಯೂಚುಯಲ್ ಫಂಡ್ ಇತ್ಯಾದಿಗಳ ಕುರಿತು ಜ್ಞಾನ ಸಂಪಾದಿಸಿಕೊಂಡು ಅಲ್ಲೂ ಹೂಡಿಕೆ ಮಾಡಬಹುದು. ವಿವಿಧ ಉಳಿತಾಯ ಖಾತೆಗಳಲ್ಲಿ ಹಣ ಇಡಬಹುದು.
ತುರ್ತು ಅವಶ್ಯಕತೆಗೆ ಹಣ ಉಳಿತಾಯ ಮಾಡಿ
ಈಗ ಆಸ್ಪತ್ರೆಗಳು ನಿಮ್ಮನ್ನು ಬಡವರನ್ನಾಗಿ ಮಾಡುವ ಶಕ್ತಿ ಹೊಂದಿವೆ. ಅನಿರೀಕ್ಷಿತವಾಗಿ ಆರೋಗ್ಯ ಕೆಟ್ಟರೆ ಆಸ್ಪತ್ರೆಯಲ್ಲಿ ಹಲವು ಲಕ್ಷ ರೂಪಾಯಿ ಖರ್ಚು ಮಾಡಬೇಕಾಗಬಹುದು. ಇಂತಹ ಖರ್ಚುಗಳನ್ನು ನಿಭಾಯಿಸುವ ಸಲುವಾಗಿ ಸೂಕ್ತವಾದ ಆರೋಗ್ಯ ವಿಮೆ ನಿಮ್ಮಲ್ಲಿ ಇರಲಿ. ಸಂಪೂರ್ಣ ಕುಟುಂಬಕ್ಕೆ ಇಂತಹ ವಿಮೆ ಇರಬೇಕು. ಜತೆಗೆ, ಆರೋಗ್ಯದ ಖರ್ಚಿಗೆ ಎಂದು ಕೆಲವು ಲಕ್ಷ ಹಣ ಇಟ್ಟುಕೊಳ್ಳುವುದು ಅವಶ್ಯಕ.
ಇದರೊಂದಿಗೆ ಕಾರು ಹಾಳಾದರೆ, ಉದ್ಯೋಗ ನಷ್ಟವಾದರೆ, ಗ್ಯಾಡ್ಜೆಟ್ ರಿಪೇರಿಗೆ ಎಂದೆಲ್ಲ ಹಣ ಬೇಕಾಗಬಹುದು. ಇಂತಹ ಖರ್ಚುಗಳಿಗೂ ಫಂಡ್ ಇರಲಿ. ಆರು ತಿಂಗಳು ಕೆಲಸವಿಲ್ಲದೆ ಇದ್ದರೂ ಬದುಕಬಲ್ಲೆ ಎನ್ನುವಂತೆ ನಿಮ್ಮ ತುರ್ತು ನಿಧಿ ಇರಬೇಕು.
ತೆರಿಗೆ ಉಳಿಸುವ ಮೂಲಕ ಹಣ ಉಳಿತಾಯ
ನಿಮ್ಮ ವೇತನದ ದೊಡ್ಡ ಮೊತ್ತವು ಆದಾಯ ತೆರಿಗೆಯಾಗಿ ಕಡಿತಗೊಳ್ಳುತ್ತಿದೆಯೇ? ಹಾಗಾದರೆ, ಆ ತೆರಿಗೆ ಕಡಿತ ಉಳಿತಾಯ ಮಾಡುವ ವಿವಿಧ ವಿಧಾನಗಳನ್ನು ನೀವು ಯೋಚಿಸಬೇಕು. ಈ ಕುರಿತು ತೆರಿಗೆ ತಜ್ಞರ ಜತೆ ಮಾತುಕತೆ ನಡೆಸಿ ಪ್ಲಾನ್ ಮಾಡಬಹುದು.
ಇನ್ಶೂರನ್ಸ್ ಖರೀದಿಸಲು ಹಿಂಜರಿಯಬೇಡಿ
ಅಯ್ಯೋ ನಾನು ಸತ್ತ ನಂತರ ಸಿಗುತ್ತೆ ಅದ್ಯಾಕೆ ಎಂದೆಲ್ಲ ವಿಮೆ ಖರೀದಿಸದೆ ಇಡಬೇಡಿ. ನಿಮ್ಮ ಮಕ್ಕಳು ಅಥವಾ ಸಂಗಾತಿಗೆ ಇದರಿಂದ ಅನುಕೂಲವಾಗುತ್ತದೆ. ಇದೇ ರೀತಿ ಜೀವಂತವಾಗಿರುವಾಗಲೇ ಮೆಚ್ಯುರಿಟಿಯಾಗುವಂತಹ ಹೂಡಿಕೆ ವಿಮೆಯ ಮೇಲೂ ಹಣ ಹಾಕಿರಿ.
ನೀವು ಉದ್ಯೋಗದ ಆರಂಭಿಕ ಹಂತದಲ್ಲಿಯೇ ಹೆಲ್ತ್ ಇನ್ಸುರೆನ್ಸ್, ಲೈಫ್ ಇನ್ಸುರೆನ್ಸ್ ಖರೀದಿಸಿದರೆ ಪ್ರೀಮಿಯಂ ಹಣ ಕಡಿಮೆ ಇರುತ್ತದೆ. ಐದು ವರ್ಷದ, ಹತ್ತು ವರ್ಷದ, ಇಪ್ಪತ್ತು ವರ್ಷದ ಟರ್ಮ್ ವಿಮೆ ಖರೀದಿಸುವುದು ಒಂದು ಒಳ್ಳೆಯ ಹೂಡಿಕೆಯಾಗಬಹುದು. ಮುಂದೆ ನಿಮ್ಮ ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳಲು ನೆರವಾಗಬಹುದು.