logo
ಕನ್ನಡ ಸುದ್ದಿ  /  Nation And-world  /  Right To Freedom Of Religion Does Not Include Fraudulent Conversion Centre Tells To Supreme Court

Right To Freedom Of Religion: ಮೋಸದ ಮತಾಂತರ ಧಾರ್ಮಿಕ ಸ್ವಾತಂತ್ರ್ಯಕ್ಕೆ ಹೊರತಾದುದು: ಸುಪ್ರೀಂಕೋರ್ಟ್‌ಗೆ ಕೇಂದ್ರದ ಅಫಿಡವಿಟ್!

HT Kannada Desk HT Kannada

Nov 29, 2022 07:33 AM IST

ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ)

    • ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇತರ ಜನರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ಮೋಸದ ಮತಾಂತರದ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅಫಿಡವಿಟ್‌ ಸಲ್ಲಿಸಿದ್ದು, ಮೋಸದ ಮತಾಂತರದ ಸಮಸ್ಯೆಯನ್ನು ಭಾರತದ ಒಕ್ಕೂಟವು ಗಂಭೀರವಾಗಿ ಪರಿಗಣಿಸಿದೆ ಎಂದು ತಿಳಿಸಿದೆ.
ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ)
ಸುಪ್ರೀಂಕೋರ್ಟ್‌ (ಸಂಗ್ರಹ ಚಿತ್ರ) (HT_PRINT)

ನವದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಇತರ ಜನರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಸುಪ್ರೀಂಕೋರ್ಟ್‌ಗೆ ಕೇಂದ್ರ ಸರ್ಕಾರ ತಿಳಿಸಿದೆ. ಮೋಸದ ಮತಾಂತರದ ಕುರಿತು ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಅಫಿಡವಿಟ್‌ ಸಲ್ಲಿಸಿದ್ದು, ದೇಶದಾದ್ಯಂತ ಮೋಸದ ಧಾರ್ಮಿಕ ಮತಾಂತರವು ವ್ಯಾಪಕವಾಗಿದೆ ಎಂದು ಹೇಳಿದೆ.

ಟ್ರೆಂಡಿಂಗ್​ ಸುದ್ದಿ

20 ವರ್ಷಗಳಲ್ಲಿ 115 ಐಐಟಿ ವಿದ್ಯಾರ್ಥಿಗಳ ಆತ್ಮಹತ್ಯೆ; ಅಗ್ರ ಸ್ಥಾನದಲ್ಲಿರುವ ಮದ್ರಾಸ್‌ನಲ್ಲಿ 26 ಸಾವು, ಆರ್‌ಟಿಐನಿಂದ ಮಾಹಿತಿ ಬಹಿರಂಗ

ತಿರುಮಲ ತಿರುಪತಿ ದೇವಸ್ಥಾನದಲ್ಲಿ ವಿಶೇಷ ಉತ್ಸವಗಳು, ಮೇ ತಿಂಗಳ ಉತ್ಸವ ವೇಳಾಪಟ್ಟಿ ಪ್ರಕಟಿಸಿದ ಟಿಟಿಡಿ

Gold Rate Today: ಚಿನ್ನಾಭರಣ ಪ್ರಿಯರಿಗೆ ಇಲ್ಲಿದೆ ಗುಡ್‌ನ್ಯೂಸ್‌; 10ಗ್ರಾಂ ಚಿನ್ನಕ್ಕೆ 1000 ರೂ ಇಳಿಕೆ, ಬೆಳ್ಳಿ ದರವೂ ಕುಸಿತ

RED NOTICE: ಇಂಟರ್‌ಪೋಲ್ ರೆಡ್ ನೋಟಿಸ್‌ ಎಂದರೇನು, ಇದನ್ನು ಯಾರು ಯಾವಾಗ ಪ್ರಕಟಿಸುತ್ತಾರೆ, ಇದರ ಮಹತ್ವವೇನು

ಮೋಸದ ಮತಾಂತರದ ಸಮಸ್ಯೆಯನ್ನು ಭಾರತದ ಒಕ್ಕೂಟವು ಗಂಭೀರವಾಗಿ ಪರಿಗಣಿಸಿದೆ. ಅಲ್ಲದೇ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿದ ಅಫಿಡವಿಟ್‌ನಲ್ಲಿ ತಿಳಿಸಿದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಖಂಡಿತವಾಗಿಯೂ ವಂಚನೆ, ಬಲಾತ್ಕಾರ, ಆಮಿಷ ಅಥವಾ ಇತರ ವಿಧಾನಗಳ ಮೂಲಕ ವ್ಯಕ್ತಿಯನ್ನು ಪರಿವರ್ತಿಸುವ ಹಕ್ಕನ್ನು ಒಳಗೊಂಡಿಲ್ಲ ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಸ್ಪಷ್ಟವಾಗಿ ಹೇಳಿದೆ.

ಮೋಸದ ಧಾರ್ಮಿಕ ಮತಾಂತರವನ್ನು ನಿಗ್ರಹಿಸಲು ಒಡಿಶಾ, ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ, ಜಾರ್ಖಂಡ್, ಉತ್ತರಾಖಂಡ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಹರಿಯಾಣ ರಾಜ್ಯಗಳು, ಮತಾಂತರಕ್ಕೆ ಸಂಬಂಧಿಸಿದಂತೆ ಈಗಾಗಲೇ ತಮ್ಮದೇ ಆದ ಶಾಸನಗಳನ್ನು ಜಾರಿಗೆ ತಂದಿವೆ ಎಂದೂ ಕೇಂದ್ರ ಸರ್ಕಾರ ಅಫಿಡವಿಟ್‌ ಮೂಲಕ ಸುಪ್ರೀಂಕೋರ್ಟ್‌ಗೆ ಮಾಹಿತಿ ನೀಡಿದೆ.

"ಮಹಿಳೆಯರು ಮತ್ತು ಆರ್ಥಿಕವಾಗಿ ಮತ್ತು ಸಾಮಾಜಿಕವಾಗಿ ಹಿಂದುಳಿದ ವರ್ಗಗಳು ಸೇರಿದಂತೆ ಸಮಾಜದ ದುರ್ಬಲ ವರ್ಗಗಳ ಹಕ್ಕುಗಳನ್ನು ರಕ್ಷಿಸಲು ಇಂತಹ ಕಾಯ್ದೆಗಳು ಅಗತ್ಯ" ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಲಾಗಿದೆ.

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತ್ತು ದೇಶದ ಎಲ್ಲಾ ನಾಗರಿಕರ ಪ್ರಜ್ಞೆಯ ಹಕ್ಕು ಅತ್ಯಂತ ಮೌಲ್ಯಯುತವಾದ ಹಕ್ಕಾಗಿದ್ದು, ಈ ಹಕ್ಕುಗಳನ್ನು ಕಾರ್ಯಾಂಗ ಮತ್ತು ಶಾಸಕಾಂಗವು ರಕ್ಷಿಸಬೇಕು ಎಂದು ಕೇಂದ್ರ ಸರ್ಕಾರ ಸಲ್ಲಿಸಿರುವ ಅಫಿಡವಿಟ್‌ನಲ್ಲಿ ಅಭಿಪ್ರಾಯಪಟ್ಟಿದೆ.

ಬಲವಂತದ ಧಾರ್ಮಿಕ ಮತಾಂತರದ ವಿಷಯವು ತುಂಬ ಗಂಭೀರ ವಿಷಯವಾಗಿದ್ದು, ಈ ಕುರಿತು ತನ್ನ ನಿಲುವನ್ನು ಸ್ಪಷ್ಟಪಡಿಸಲು ವಿವರವಾದ ಅಫಿಡವಿಟ್ ಸಲ್ಲಿಸುವಂತೆ, ನ್ಯಾಯಮೂರ್ತಿ ಎಂಆರ್ ಶಾ ನೇತೃತ್ವದ ಪೀಠವು ಕೇಂದ್ರ ಸರ್ಕಾರವನ್ನು ಕೋರಿತ್ತು. ರಾಜ್ಯ ಸರ್ಕಾರಗಳ ಸೂಚನೆಗಳೊಂದಿಗೆ ಅಫಿಡವಿಟ್ ಸಲ್ಲಿಸುವಂತೆಯೂ, ಪೀಠವು ಕೇಂದ್ರ ಸರ್ಕಾರಕ್ಕೆ ಕೇಳಿತ್ತು.

ಇದೀಗ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿರುವುದರಿಂದ, ಪೀಠವು ವಿಚಾರಣೆಯನ್ನು ಡಿಸೆಂಬರ್ 5ಕ್ಕೆ ಮುಂದೂಡಿದೆ. ಬಲವಂತದ ಧಾರ್ಮಿಕ ಮತಾಂತರವು ಬಹಳ ಗಂಭೀರ ವಿಷಯವಾಗಿದ್ದು, ಧರ್ಮಕ್ಕೆ ಸಂಬಂಧಿಸಿದಂತೆ ನಾಗರಿಕರ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಜೊತೆಗೆ, ದೇಶದ ಭದ್ರತೆ ಮೇಲೆ ಅಪಾಯಕಾರಿ ಪರಿಣಾಮ ಬೀರಬಹುದು ಎಂದು ಈ ಹಿಂದೆ ಸುಪ್ರೀಂಕೋರ್ಟ್ ಟೀಕಿಸಿತ್ತು.

ದೇಶಾದ್ಯಂತ ಮೋಸದ ಧಾರ್ಮಿಕ ಮತಾಂತರ ವ್ಯಾಪಕವಾಗಿದ್ದು, ಅದರ ಹಾವಳಿಯನ್ನು ನಿಯಂತ್ರಿಸುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ, ವಕೀಲ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸುತ್ತಿದೆ.

ಮೋಸದ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ವರದಿ ಮತ್ತು ಮಸೂದೆಯನ್ನು ಸಿದ್ಧಪಡಿಸಲು ಭಾರತದ ಕಾನೂನು ಆಯೋಗಕ್ಕೆ ನಿರ್ದೇಶನಗಳನ್ನು ನೀಡಬೇಕೆಂದು ಅಶ್ವಿನಿ ಕುಮಾರ್ ಉಪಾಧ್ಯಾಯ ಸಲ್ಲಿಸಿದ ಮನವಿಯಲ್ಲಿ ಕೋರಲಾಗಿದೆ.

ಬೆದರಿಕೆ, ಉಡುಗೊರೆಗಳು ಮತ್ತು ವಿತ್ತೀಯ ಪ್ರಯೋಜನಗಳ ಮೂಲಕ, ಮೋಸದ ಧಾರ್ಮಿಕ ಮತಾಂತರವು ಭಾರತೀಯ ಸಂವಿಧಾನದ 14, 21 ಮತ್ತು 25ನೇ ವಿಧಿಗಳನ್ವಯ ಅಪರಾಧ ಎಂದು ನ್ಯಾಯಾಲಯ ಘೋಷಿಸಬೇಕು ಎಂದೂ ಮನವಿಯಲ್ಲಿ ಕೋರಲಾಗಿದೆ. ಬಲವಂತದ ಧಾರ್ಮಿಕ ಮತಾಂತರದಿಂದ ಮುಕ್ತವಾದ ಒಂದು ಜಿಲ್ಲೆಯೂ ದೇಶದಲ್ಲಿ ಇಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಲಾಗಿದೆ.

ಇಂತಹ ಮೋಸದ ಮತಾಂತರಗಳನ್ನು ಪರಿಶೀಲಿಸದಿದ್ದರೆ, ಹಿಂದೂಗಳು ಶೀಘ್ರದಲ್ಲೇ ಭಾರತದಲ್ಲಿ ಅಲ್ಪಸಂಖ್ಯಾತರಾಗುತ್ತಾರೆ. ಹೀಗಾಗಿ ಕೇಂದ್ರವು ದೇಶಾದ್ಯಂತ ಕಾನೂನನ್ನು ಜಾರಿಗೊಳಿಸಲು, ಸುಪ್ರೀಂಕೋರ್ಟ್‌ ನಿರ್ದೇಶನ ನೀಡಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೂಲಕ ಕೋರಲಾಗಿದೆ. ಈ ಹಿಂದೆ ಉಪಾಧ್ಯಾಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು.

    ಹಂಚಿಕೊಳ್ಳಲು ಲೇಖನಗಳು