Tirumala Temple Gold Plating: ತಿರುಪತಿ ವೆಂಕಟೇಶ್ವರ ದೇಗುಲದ ಗರ್ಭಗುಡಿ 6-8 ತಿಂಗಳು ಕ್ಲೋಸ್? ಭಕ್ತರಿಗೆ ತಿಮ್ಮಪ್ಪನ ದರ್ಶನ ಹೇಗೆ?
Dec 26, 2022 07:40 AM IST
ತಿರುಪತಿ ವೆಂಕಟೇಶ್ವರ ದೇಗುಲದ ಗರ್ಭಗುಡಿ 6-8 ತಿಂಗಳು ಕ್ಲೋಸ್?
- ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರುಪತಿ ತಿಮ್ಮಪ್ಪನ ದೇಗುಲದ ಆನಂದ ನಿಲಯಂನ ಚಿನ್ನದ ಲೇಪನವನ್ನು ಬದಲಾಯಿಸಲು ಯೋಜಿಸಿದೆ.
ಹೈದರಾಬಾದ್: ಆಂಧ್ರಪ್ರದೇಶದ ತಿರುಪತಿ ಜಿಲ್ಲೆಯಲ್ಲಿರುವ ತಿರುಮಲ ದೇವಸ್ಥಾನದ ಮುಖ್ಯ ಗರ್ಭಗುಡಿಯನ್ನು 2023 ರಲ್ಲಿ ಆರರಿಂದ ಎಂಟು ತಿಂಗಳವರೆಗೆ ಮುಚ್ಚುವ ಸಾಧ್ಯತೆಯಿದೆ, ಭಾರತದ ಶ್ರೀಮಂತ ದೇವಾಲಯಗಳಲ್ಲಿ ಒಂದನ್ನು ನಿರ್ವಹಿಸುವ ತಿರುಮಲ ತಿರುಪತಿ ದೇವಸ್ಥಾನಮ್ (ಟಿಟಿಡಿ) ತಿರುಪತಿ ತಿಮ್ಮಪ್ಪನ ದೇಗುಲದ ಆನಂದ ನಿಲಯಂನ ಚಿನ್ನದ ಲೇಪನವನ್ನು ಬದಲಾಯಿಸಲು ಯೋಜಿಸಿದೆ. ಆನಂದ ನಿಲಯಂ ಅಂದರೆ ಗರ್ಭಗುಡಿಯ ಮೇಲಿರುವ ಮೂರು ಅಂತಸ್ತಿನ "ವಿಮಾನ" (ಗುಮ್ಮಟದ ಆಕಾರದ ಗೋಪುರ).
ಹಾಗಾದರೆ, ಈ ಸಮಯದಲ್ಲಿ ಭಕ್ತರು ತಿರುಪತಿ ತಿಮ್ಮಪ್ಪನ ದರ್ಶನ ಪಡೆಯುವುದು ಹೇಗೆ? ಎಂಬ ಪ್ರಶ್ನೆ ಸಹಜ. ಇದಕ್ಕಾಗಿ, ಮುಖ್ಯ ದೇವಾಲಯದ ಪಕ್ಕದಲ್ಲಿ ತಾತ್ಕಾಲಿಕವಾಗಿ ತಿರುಪತಿ ವೆಂಕಟೇಶ್ವರ ದೇವರ ತದ್ರೂಪಿ ಮೂರ್ತಿಯನ್ನು ಪ್ರತಿಷ್ಠಾಪಿಸಿ ಭಕ್ತರ ದರ್ಶನಕ್ಕೆ ಅನುವು ಮಾಡಲು ಯೋಜಿಸಲಾಗಿದೆ ಎಂದು ಟಿಟಿಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
" ಡಿಸೆಂಬರ್ ಮೊದಲ ವಾರದಲ್ಲಿ ಟ್ರಸ್ಟ್‌ನ ಮಂಡಳಿ ಸಭೆಯಲ್ಲಿ ಈ ಕುರಿತು ನಿರ್ಧಾರ ತೆಗೆದುಕೊಳ್ಳಲಾಗಿದೆ. "ಆಗಮ ಶಾಸ್ತ್ರ" ಸಲಹೆಗಾರರು (ಆಗಮ ಶಾಸ್ತ್ರವು ದೇವಾಲಯದ ನಿರ್ಮಾಣಗಳು ಮತ್ತು ಆಚರಣೆಗಳ ನಡವಳಿಕೆಯ ಬಗ್ಗೆ ವ್ಯವಹರಿಸುವ ಪುರಾತನ ಗ್ರಂಥವಾಗಿದೆ), ಪುರೋಹಿತರು, ಸಿವಿಲ್ ಎಂಜಿನಿಯರ್‌ಗಳು ಮತ್ತು ಇತರ ತಜ್ಞರೊಂದಿಗೆ ಸುದೀರ್ಘ ಚರ್ಚೆ ಮತ್ತು ಸಮಲೋಚನೆಯ ನಂತರ ಈ ನಿರ್ಧಾರ ತೆಗೆದುಕೊಳ್ಳಲಾಗಿದೆʼʼ ಎಂದು ಟಿಟಿಡಿ ಅಧಿಕಾರಿಗಳು ತಿಳಿಸಿದ್ದಾರೆ.
ಇದಕ್ಕೂ ಮುನ್ನ 1958 ರಲ್ಲಿ ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡಲಾಗಿದೆ. ಆ ಸಮಯದಲ್ಲಿ ಚಿನ್ನದ ಲೇಪನ ಮಾಡಲು ಸುಮಾರು ಎಂಟು ವರ್ಷ ಬೇಕಾಗಿತ್ತು. ಕ್ರಿ.ಶ 839 ರಲ್ಲಿ ಪಲ್ಲವ ರಾಜ ವಿಜಯ ದಂತಿವರ್ಮನ್ ಅವರು ಮೊದಲ ಬಾರಿಗೆ ಚಿನ್ನದ ಲೇಪನವನ್ನು ಮಾಡಿದ್ದರು. ಲಭ್ಯವಿರುವ ದಾಖಲೆಗಳ ಪ್ರಕಾರ, ಅಂದಿನಿಂದ, 1958 ರ ಪ್ರಯತ್ನವನ್ನು ಒಳಗೊಂಡಂತೆ, ಇಲ್ಲಿನ ಗೋಪುರದ ಚಿನ್ನದ ಲೇಪನವನ್ನು ಏಳು ಬಾರಿ ಬದಲಾಯಿಸಲಾಗಿದೆ ಅಥವಾ ಮಾರ್ಪಡಿಸಲಾಗಿದೆ.
2018 ರಲ್ಲಿ ಟಿಟಿಡಿ ಪ್ರಕಟಿಸಿದ ತಮಿಳು ವಿದ್ವಾಂಸ ಎಂ ವರದರಾಜನ್ ಅವರು ಬರೆದ “ಆನಂದ ನಿಲಯಂ ವಿಮಾನದ ಮಹತ್ವ” ಎಂಬ ಲೇಖನದ ಪ್ರಕಾರ, ತಿರುಮಲ ದೇವಸ್ಥಾನದ ಗೋಪುರವು ಮೂರು ಅಂತಸ್ತಿನ ರಚನೆಯಾಗಿದ್ದು, ಅದರ ಚೌಕದ ತಳವು 27.4 ಅಡಿ ಮತ್ತು ಪರಿಧಿಯು 37.8 ಅಡಿ. ಎತ್ತರವಿದೆ. ವರದರಾಜನ್ ಪ್ರಕಾರ, ಮೊದಲ ಎರಡು ಹಂತಗಳು ಆಯತಾಕಾರದಲ್ಲಿವೆ ಮತ್ತು ಮೂರನೆಯ ಹಂತವು ವೃತ್ತಾಕಾರದಲ್ಲಿದೆ.
ಭಕ್ತರ ಕಳವಳವೇನು?
ತಿರುಮಲ ದೇಗುಲದ ಆನಂದ ನಿಲಯವನ್ನು ನವೀಕರಿಸುವ ಟಿಟಿಡಿ ಟ್ರಸ್ಟ್ ಬೋರ್ಡ್‌ನ ನಿರ್ಧಾರಕ್ಕೆ ಯಾರಿಂದಲೂ ವಿರೋಧ ಬಂದಿಲ್ಲ. ಆದರೆ, ಪ್ರತಿನಿತ್ಯ ಬೃಹತ್ ಸಂಖ್ಯೆಯಲ್ಲಿ ಭೇಟಿ ನೀಡುವ ಭಕ್ತರನ್ನು ನಿಭಾಯಿಸುವುದು ಹೇಗೆ? ಇಂತಹ ಸಮಯದಲ್ಲಿ ದೇಗುಲದ ನವೀಕರಣ ಹೇಗೆ ಎಂದು ಕೆಲವು ಭಕ್ತರು ಕಳವಳ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಟಿಟಿಡಿ ಅಧಿಕಾರಿಗಳು ಪರಿಹಾರವನ್ನು ಕಂಡುಕೊಂಡಿದ್ದಾರೆ. "ಈಗಿನ ದೇಗುಲದ ಸಮೀಪದಲ್ಲಿ ತಾತ್ಕಾಲಿಕ ದೇವಾಲಯ "ಬಾಲಾಲಯʼʼ ನಿರ್ಮಿಸಲಾಗುವುದು. ಭಕ್ತರಿಗೆ ದೇವರ ದರ್ಶನಕ್ಕೆ ತಡೆಯಾಗದಂತೆ ವೆಂಕಟೇಶ್ವರ ದೇವರ ಪ್ರತಿಕೃತಿ ಮೂರ್ತಿಯನ್ನು ಸ್ಥಾಪಿಸಲಾಗುವುದುʼʼ ಎಂದು ಟಿಟಿಡಿ ಅಧ್ಯಕ್ಷರಾದ ವೈವಿ ಸುಬ್ಬಾ ರೆಡ್ಡಿ ಹೇಳಿದ್ದಾರೆ.
ತಾತ್ಕಾಲಿಕ ದೇವಾಲಯ ಬಾಲಾಲಯಕ್ಕೆ ಸಂಬಂಧಿಸಿದ ಕೆಲಸವು ಮುಂದಿನ ವರ್ಷ ಫೆಬ್ರವರಿ 23ರಂದು ಆರಂಭವಾಗಲಿದೆ. ಧಾರ್ಮಿಕ ನಿಯಮಗಳಂತೆ ಈ ತಾತ್ಕಾಲಿಕ ದೇವಾಲಯ ನಿರ್ಮಿಸಲಾಗುತ್ತದೆ. ಮೂಲ ದೇವಾಲಯದ ಮೇಲಿನ ಆನಂದ ನಿಲಯದ ಚಿನ್ನದ ಲೇಪನ ಪೂರ್ಣಗೊಳ್ಳುವ ತನಕ ಈ ವ್ಯವಸ್ಥೆ ಮುಂದುವರೆಯುತ್ತದೆ. ಇದಕ್ಕೆ ಆರರಿಂದ ಎಂಟು ತಿಂಗಳು ಬೇಕಾಗಬಹುದುʼʼ ಎಂದು ಸುಬ್ಬಾ ರೆಡ್ಡಿಯವರು ಮಾಹಿತಿ ನೀಡಿದ್ದಾರೆ. "ಬಾಲಾಲಯ ನಿರ್ಮಾಣಕ್ಕೂ ಆಗಮ ಶಾಸ್ತ್ರದ ನಿಯಮಗಳನ್ನು ಪಾಲಿಸಬೇಕು. ಪೀಠಾಧಿಪತಿಯ "ಪರಮ ಶಕ್ತಿ" ಯನ್ನು ವ್ಯವಸ್ಥಿತ ವೈದಿಕ ಆಚರಣೆಯ ನಂತರ ಕೆಲವು "ಕಲಶಗಳು" (ಕುಂಡಗಳು) ಆಗಿ ವರ್ಗಾಯಿಸಲಾಗುತ್ತದೆ ಮತ್ತು ಈ ಮಡಕೆಗಳನ್ನು ಸ್ಥಳಾಂತರ ಮಾಡಲಾಗುತ್ತದೆ. ತಾತ್ಕಾಲಿಕ ದೇವಾಲಯದಲ್ಲಿ ದೇವರ ಪ್ರತಿಕೃತಿಯನ್ನು ಪ್ರತಿಷ್ಠಾಪಿಸಲಾಗುವುದು" ಎಂದು ತಿರುಮಲ ದೇವಸ್ಥಾನದ ಗೌರವ ಪ್ರಧಾನ ಅರ್ಚಕ ಮತ್ತು ಟಿಟಿಡಿಯ ಆಗಮ ಸಲಹೆಗಾರ ಎವಿ ರಮಣ ದೀಕ್ಷಿತುಲು ಮಾಹಿತಿ ನೀಡಿದ್ದಾರೆ.
"ಮೂಲ ದೇವಾಲಯವನ್ನು ಪುನಃಸ್ಥಾಪಿಸುವವರೆಗೆ, ಎಲ್ಲಾ ದೈನಂದಿನ ಆಚರಣೆಗಳನ್ನು ತಾತ್ಕಾಲಿಕ ದೇವಾಲಯದಲ್ಲಿ ಮಾಡಲಾಗುವುದು ಮತ್ತು ಭಕ್ತರಿಗೆ ದೇವರ ದರ್ಶನವನ್ನು ಇಲ್ಲೇ ಒದಗಿಸಲಾಗುವುದು" ಎಂದು ದೀಕ್ಷಿತುಲು ಹೇಳಿದ್ದಾರೆ. ಇದೇ ಸಂದರ್ಭದಲ್ಲಿ ಮೂಲ ದೇವಾಲಯದ ಗರ್ಭಗುಡಿಯೊಳಗೆ ಕೆಲವು ಕಡ್ಡಾಯ ಆಚರಣೆಗಳನ್ನು ನಡೆಸುವುದನ್ನು ಮುಂದುವರಿಸುತ್ತಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡಲು ಟಿಟಿಡಿ ಅಧಿಕಾರಿಗಳು ಅಂದಾಜಿಸಿರುವ ಕನಿಷ್ಠ ಆರು ತಿಂಗಳ ಸಮಯದಲ್ಲಿ ಮೂಲ ದೇವಾಲಯದಲ್ಲಿ ಭಕ್ತರು ಪ್ರಧಾನ ದೇವರ ದರ್ಶನವನ್ನು ಪಡೆಯಲು ಸಾಧ್ಯವಾಗುವುದಿಲ್ಲ ಎನ್ನುವುದು ಇದರ ಅರ್ಥವೇ? ಎಂಬ ಪ್ರಶ್ನೆಗೆ ಟಿಟಿಡಿ ಅಧಿಕಾರಿಗಳು ಇನ್ನೂ ಸ್ಪಷ್ಟವಾಗಿ ತಿಳಿಸಿಲ್ಲ. "ಈ ಹಿಂದೆ ಆನಂದ ನಿಲಯಕ್ಕೆ ಚಿನ್ನದ ಲೇಪನ ಮಾಡುವಾಗ, ಭಗವಂತನ ದರ್ಶನಕ್ಕಾಗಿ 1950-58ರಲ್ಲಿ ಟಿಟಿಡಿ ಅನುಸರಿಸಿದ ವಿಧಾನವನ್ನೇ ಅನುಸರಿಸುತ್ತೇವೆʼʼ ಎಂದು ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಎವಿ ಧರ್ಮಾ ರೆಡ್ಡಿ ಹೇಳಿದ್ದಾರೆ.
ಈ ಹಿಂದಿನ ಚಿನ್ನದ ಲೇಪನ
ತಿರುಪತಿ ತಿಮ್ಮಪ್ಪ ಮತ್ತು ಇತರೆ ದೇಗುಲಗಳ ನಿರ್ವಹಣೆಗಾಗಿ ಟಿಟಿಡಿಯನ್ನು 1932ರಲ್ಲಿ ರಚನೆ ಮಾಡಲಾಗಿತ್ತು. ಶತಮಾನದ ಹಿಂದೆ ಮಾಡಿದ ಚಿನ್ನದ ಲೇಪನ ಸವೆದು ಹೋಗುತ್ತಿದೆ. ಗರ್ಭಗುಡಿಯ ಛಾವಣಿಯ ಭಾಗಗಳು ಶಿಥಿಲಾವಸ್ಥೆಯಲ್ಲಿವೆ. ಮೇಲ್ಚಾವಣಿಯನ್ನು ಸರಿಪಡಿಸಲು ಮತ್ತು ಲೋಹಲೇಪನವನ್ನು ಬದಲಿಸುವ ಕೆಲಸವನ್ನು ಟಿಟಿಡಿ ಮಾಡುತ್ತಿದೆ. ಮೊದಲ ಬಾರಿಗೆ ಈ ರೀತಿ ಛಾವಣಿಯ ರಿಪೇರಿ ಮತ್ತು ಚಿನ್ನದ ಲೇಪನದ ಕಾರ್ಯವನ್ನು 1950ರಲ್ಲಿ ಟಿಟಿಡಿ ಆರಂಭಿಸಿತ್ತು. ಗೋಪುರದ ಚಿನ್ನದ ಲೇಪನಕ್ಕಾಗಿ ಸುಮಾರು 12,000 ತೊಲ ಶುದ್ಧ ಚಿನ್ನ (ಸುಮಾರು 120 ಕೆಜಿ; ಪ್ರತಿ ತೊಲ 10 ಗ್ರಾಂ) ಮತ್ತು 12 ಟನ್ ತಾಮ್ರವನ್ನು ಈ ಹಿಂದೆ ಬಳಸಲಾಗಿದೆ ಎಂದು ಟಿಟಿಡಿ ದಾಖಲೆಗಳಿಂದ ತಿಳಿದುಬಂದಿದೆ.
“ಆ ಸಮಯದಲ್ಲಿ ಗೋಪುರಕ್ಕೆ ಯಾವುದೇ ಹಾನಿಯಾಗದಂತೆ ವಿವಿಧ ತಂತ್ರಗಳನ್ನು ಬಳಸಲಾಯಿತು. ಶತಮಾನಗಳ ಹಿಂದೆ ಸರಿಪಡಿಸಲಾದ ಸವೆದ ಫಲಕಗಳನ್ನು ತೆಗೆದುಹಾಕಲು ಕಾರ್ಮಿಕರು ಮತ್ತು ಎಂಜಿನಿಯರ್‌ಗಳು ಸಾಕಷ್ಟು ಹೆಣಗಾಡಬೇಕಾಯಿತು. ನಂತರ ಚಿನ್ನದ ಪದರಗಳಿಂದ ಆವೃತವಾದ ತಾಮ್ರದ ಫಲಕಗಳನ್ನು ಸ್ಥಾಪಿಸಲಾಯಿತು, ”ಎಂದು ಮಾಜಿ ಹಿರಿಯ ಟಿಟಿಡಿ ಅಧಿಕಾರಿ ನೆನಪಿಸಿಕೊಂಡಿದ್ದಾರೆ. ಹಾನಿಗೀಡಾದ ಗೋಪುರದ ಭಾಗಗಳಿಗೆ ಸಮಯದಲ್ಲಿ ಸಿಮೆಂಟ್ ಕೂಡ ಬಳಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.
ಆ ಸಮಯದಲ್ಲಿ ನವೀಕರಣದ ಕಾರ್ಯವು ಸುಮಾರು ಎಂಟು ವರ್ಷಗಳನ್ನು ತೆಗೆದುಕೊಂಡಿತ್ತು. ಆ ಸಮಯದಲ್ಲಿ ಮೂಲ ದೇಗುಲದಲ್ಲಿ ಯಾವುದೇ ಪೂಜೆ ನಡೆಯಲಿಲ್ಲ. ಎಲ್ಲಾ ಧಾರ್ಮಿಕ ವಿಧಿವಿಧಾನಗಳು ಬಾಲಾಲಯಂಗೆ ಶಿಫ್ಟ್ ಆಗಿತ್ತು. ಸುಮಾರು ಎಂಟು ವರ್ಷಗಳ ಕಾಲ ಭಕ್ತರು ಬಾಲಾಲಯಂನಲ್ಲಿಯೇ ದೇವರ ದರ್ಶನ ಪಡೆದಿದ್ದರು ಎಂದು ಗತಕಾಲವನ್ನು ಮಾಜಿ ಟಿಟಿಡಿ ಅಧಿಕಾರಿಯೊಬ್ಬರು ನೆನಪಿಸಿಕೊಂಡಿದ್ದಾರೆ.
"ಆ ಸಮಯದಲ್ಲಿ ದೇವಾಲಯಕ್ಕೆ ಭಕ್ತರು ಭೇಟಿ ನೀಡುವ ಸಂಖ್ಯೆ ಕಡಿಮೆ ಇದ್ದಕಾರಣ ಎಂಟು ವರ್ಷಗಳ ಕಾಲ ಮುಖ್ಯ ದೇಗುಲಕ್ಕೆ ಬಾಗಿಲು ಹಾಕುವುದು ಸಾಧ್ಯವಿತ್ತು. ಆಗ ಪ್ರತಿನಿತ್ಯ ಭೇಟಿ ನೀಡುವ ಸಂಖ್ಯೆ ನೂರಾರು ಆಗಿತ್ತು. ಆ ಸಮಯದಲ್ಲಿ ಸಂಜೆ ಆರು ಗಂಟೆಯ ನಂತರ ದೇವರ ದರ್ಶನ ಪಡೆಯಲು ಅವಕಾಶ ಿರಲಿಲ್ಲ. ಆದರೆ, ಈಗ ಸಾವಿರಾರು ಭಕ್ತರು ಪ್ರತಿನಿತ್ಯ ಭೇಟಿ ನೀಡುತ್ತಿದ್ದಾರೆ. ದಿನಕ್ಕೆ 60,000-70,000 ಭಕ್ತರು ಈಗ ಭೇಟಿ ನೀಡುತ್ತಿದ್ದಾರೆ. ವಾರಾಂತ್ಯಗಳಲ್ಲಿ ಮತ್ತು ರಜಾ ದಿನಗಳಲ್ಲಿ ಲಕ್ಷಕ್ಕೂ ಹೆಚ್ಚು ಭಕ್ತರು ಭೇಟಿ ನೀಡುತ್ತಿದ್ದಾರೆ. ಇಂತಹ ಭಕ್ತರ ದಟ್ಟಣೆಯನ್ನು ಪರ್ಯಾಯ ದೇಗುಲದಲ್ಲಿ ನಿಭಾಯಿಸಲು ಸಾಧ್ಯವೇ?ʼʼ ಎಂಬ ಪ್ರಶ್ನೆಯೂ ಉಂಟಾಗಿದೆ. ಆದರೆ, ಭಕ್ತರು ಸಹಕರಿಸಬಹುದು ಎನ್ನುವ ಉತ್ತರವನ್ನೂ ಕೆಲವರು ನೀಡಿದ್ದಾರೆ.
"ಚಿನ್ನದ ಲೇಪನದ ಕೆಳಗಿರುವ ವಿಮಾನಗೋಪುರದ ಪರಿಸ್ಥಿತಿ ಹೇಗಿದೆ ಎಂದು ಯಾರಿಗೂ ಗೊತ್ತಿಲ್ಲ. ಕಳೆದ ಆರು ದಶಕದಿಂದ ಈ ಗೋಪುರವು ಹನ್ನೆರಡು ಟನ್‌ಗೂ ಅಧಿಕ ಭಾರವನ್ನು ಹೊತ್ತಿದೆ. ಈ ಗೋಪುರವನ್ನು ಸದೃಢಗೊಳಿಸುವುದು ಪ್ರಮುಖ ಆದ್ಯತೆಯಾಗಿದೆ. ಈ ಕೆಲಸಕ್ಕೆ ಎಷ್ಟು ಸಮಯ ಬೇಕಾಗಬಹುದು ಎನ್ನುವ ಬ್ಲೂಪ್ರಿಂಟ್‌ನೊಂದಿಗೆ ಟಿಟಿಡಿ ಅಧಿಕಾರಿಗಳು ಬರಬೇಕಿದೆʼʼ ಎಂದು ಆರ್‌ಟಿಐ ಕಾರ್ಯಕರ್ತ ಬಿಕೆಎಸ್‌ಆರ್ ಐಯ್ಯಂಗಾರ್ ಹೇಳಿದ್ದಾರೆ.
ಚಿನ್ನದ ಲೇಪನ ಮಾಡುವ ಸಮಯದಲ್ಲಿಯೇ ಮುಖ್ಯ ದೇಗುಲದಲ್ಲಿ ದರ್ಶನ ಸಾಧ್ಯವಿಲ್ಲವೇ ಎಂಬ ಪ್ರಶ್ನೆಗೆ ಐಯ್ಯಂಗಾರ್ ಈ ರೀತಿ ಹೇಳಿದ್ದಾರೆ. "ಎರಡು ಕಾರಣದಿಂದ ಇದು ಸಾಧ್ಯವಿಲ್ಲ. ಮೊದಲನೆಯದು, ದೇವರ ಶಕ್ತಿಯನ್ನು ಬಾಲಾಯಾಲಂಗೆ ಕೊಂಡೊಯ್ಯುವ ಕಾರಣ ಭಕ್ತರು ಮುಖ್ಯ ದೇಗುಲಕ್ಕೆ ಪ್ರವೇಶಿಸುವುದಕ್ಕೆ ಅರ್ಥವಿಲ್ಲ. ಆ ಸಮಯದಲ್ಲಿ ಮೂಲಮೂರ್ತಿಗೆ ಯಾವುದೇ ಪ್ರಮುಖ ಪೂಜೆಗಳು, ಧಾರ್ಮಿಕ ಕ್ರಿಯೆಗಳು ನಡೆಯುವುದಿಲ್ಲ. ಎರಡನೆಯದು, ರಿಪೇರಿ ಕೆಲಸ ನಡೆಯುವ ಸಮಯದಲ್ಲಿ ಸಾವಿರಾರು ಭಕ್ತರು ದೇಗುಲ ಪ್ರವೇಶಿಸುವುದು ಸುರಕ್ಷತೆಯ ದೃಷ್ಟಿಯಿಂದ ಸರಿಯಲ್ಲʼʼ ಎಂದಿದ್ದಾರೆ.
ನವೀಕರಣ ಕಾರ್ಯಕ್ಕೆ ಎಷ್ಟು ಹಣ ಖರ್ಚಾಗಲಿದೆ ಎಂಬ ಮಾಹಿತಿ ಇನ್ನೂ ಲಭ್ಯವಿಲ್ಲ. ನವೆಂಬರ್ ತಿಂಗಳಿನಲ್ಲಿ ಟಿಟಿಡಿ ರಿಲೀಸ್ ಮಾಡಿದ ವೈಟ್ ಪೇಪರ್ ಪ್ರಕಾರ, ಈ ದೇವಾಲಯವು ಸುಮಾರು 5,300 ಕೋಟಿ ರೂ. ಮೌಲ್ಯದ 10.3 ಟನ್‌ನಷ್ಟು ಚಿನ್ನ ಮತ್ತು ವಿವಿಧ ಬ್ಯಾಂಕ್‌ಗಳಲ್ಲಿ 16 ಸಾವಿರ ಕೋಟಿ ರೂ.ನಷ್ಟು ಹಣವನ್ನು ಹೊಂದಿದೆ. ಟಿಟಿಡಿಗೆ ಪ್ರತಿದಿನ ಹುಂಡಿ ಕಾಣಿಕೆಯಿಂದ 4-5 ಕೋಟಿ ರೂ. ಆದಾಯ ಬರುತ್ತಿದೆ. "ಹೀಗಾಗಿ, ಹಣ ಅಥವಾ ಚಿನ್ನದ ಸಮಸ್ಯೆಯಿಲ್ಲ. ದೇಗುಲದ ಗೋಪುರವನ್ನು ಸದೃಢಗೊಳಿಸುವುದೇ ಪ್ರಮುಖ ಆದ್ಯತೆ. ಚಿನ್ನದ ಬಾರವು ಆನಂದ ನಿಲಯಂಗೆ ಹೆಚ್ಚಿನ ಒತ್ತಡ ನೀಡಬಹುದೇ? ಇತ್ಯಾದಿ ವಿಷಯಗಳನ್ನು ಮಾತ್ರ ಆಲೋಚಿಸಬೇಕುʼʼ ಎಂದು ಐಯ್ಯಂಗಾರ್ ಹೇಳಿದ್ದಾರೆ.