WTC Final 2023: ಇಂದಿನಿಂದ ಭಾರತ-ಆಸ್ಟ್ರೇಲಿಯಾ ನಡುವೆ ಟೆಸ್ಟ್ ವಿಶ್ವಕಪ್ ಫೈನಲ್; ನೀಗುವುದೇ 10 ವರ್ಷಗಳ ಐಸಿಸಿ ಟ್ರೋಫಿ ಬರ
Jun 07, 2023 08:27 AM IST
ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ಮತ್ತು ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್
- ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship Final 2023) ಪಂದ್ಯದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ (Team India vs Australia) ತಂಡವನ್ನು ಎದುರಿಸಲಿದೆ. ಪ್ರಶಸ್ತಿ ಸುತ್ತಿನ ಹೋರಾಟದ ಪಂದ್ಯಕ್ಕೆ ಲಂಡನ್ನ ಕೆನ್ನಿಂಗ್ಟನ್ ಓವಲ್ (Kennington Oval, London) ಮೈದಾನವು ವೇದಿಕೆ ಕಲ್ಪಿಸಲಿದೆ.
ಬಹುನಿರೀಕ್ಷಿತ 2ನೇ ಆವೃತ್ತಿಯ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ (ICC World Test Championship Final 2023) ಪಂದ್ಯಕ್ಕೆ ಇಂಗ್ಲೆಂಡ್ ಸಜ್ಜಾಗಿದೆ. ಲಂಡನ್ನ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ (Kennington Oval, London) ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು (India vs Australia) ಸೆಣಸಾಟ ನಡೆಸಲಿವೆ. 10 ವರ್ಷಗಳ ನಂತರ ಐಸಿಸಿ ಟ್ರೋಫಿ ಬಲಿಸಿಕೊಳ್ಳುವ ತುಡಿತದಲ್ಲಿರುವ ಟೀಮ್ ಇಂಡಿಯಾ ಇಂದಿನಿಂದ (ಜೂನ್ 7) ಆಸ್ಟ್ರೇಲಿಯಾ ತಂಡದ ವಿರುದ್ಧ ಟೆಸ್ಟ್ ವಿಶ್ವಕಪ್ ಪ್ರಶಸ್ತಿ ಗೆಲ್ಲಲು ಸಜ್ಜಾಗಿದೆ.
ಕಳೆದ ಆವೃತ್ತಿಯ ಫೈನಲ್ನಲ್ಲಿ ನ್ಯೂಜಿಲೆಂಡ್ ಎದುರು ನಿರಾಸೆ ಅನುಭವಿಸಿದ್ದ ಟೀಮ್ ಇಂಡಿಯಾ, ಈ ಬಾರಿ ರೋಹಿತ್ ಶರ್ಮಾ (Rohit Sharma) ನಾಯಕತ್ವ ಮತ್ತು ರಾಹುಲ್ ದ್ರಾವಿಡ್ (Rahul Dravid) ಕೋಚಿಂಗ್ ಅಡಿಯಲ್ಲಿ ಹೊಸ ಇತಿಹಾಸ ಬರೆಯುವ ವಿಶ್ವಾಸದಲ್ಲಿದೆ. ಕಳೆದ ಫೆಬ್ರವರಿ-ಮಾರ್ಚ್ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ (Border Gavaskar Trophy) ಭಾರತ ಮೇಲುಗೈ ಸಾಧಿಸಿತು. ಈ ಸರಣಿ ಭಾರತದಲ್ಲಿ ನಡೆದಿತ್ತು.
ಆದರೆ, ಇಂಗ್ಲೆಂಡ್ನ ವೇಗದ ಬೌಲಿಂಗ್ ಸ್ನೇಹಿ ಪಿಚ್ ಆಸಿಸ್ಗೆ ಹೆಚ್ಚು ನೆರವಾಗಲಿದೆ. ಇನ್ನು ಭಾರತ ತಂಡವೂ, ಇತ್ತೀಚಿನ ವರ್ಷಗಳಲ್ಲಿ ಎಲ್ಲಾ ಸವಾಲುಗಳಿಗೂ ದಿಟ್ಟ ಹೋರಾಟ ನಡೆಸಿದೆ. ಆಸಿಸ್ ಪ್ರವಾಸಗಳಲ್ಲಿ ಅತಿಥೇಯರನ್ನು ಮಣಿಸಿರುವುದು ಕೂಡ ಸೋಲಿಸಿರುವುದು ಗಮನಾರ್ಹ. ಆಸಿಸ್ ಬಲಿಷ್ಠ ಬೌಲಿಂಗ್ ಎದುರು ಭಾರತ ತಂಡದ ಬ್ಯಾಟಿಂಗ್ ವಿಭಾಗಕ್ಕೆ ಸತ್ವಪರೀಕ್ಷೆಯೂ ಎದುರಾಗಲಿದೆ. 16ನೇ ಆವೃತ್ತಿಯ ಭಾರತದ ಬ್ಯಾಟಿಂಗ್ ಸ್ಪಿನ್ ಸ್ನೇಹಿ ಪಿಚ್ಗಳಲ್ಲಿ ಆಡಿದ್ದ ಬ್ಯಾಟರ್ಗಳು, ಒಂದೇ ವಾರದಲ್ಲಿ ಇಂಗ್ಲೆಂಡ್ ನೆಲದ ಬೌನ್ಸಿ ಪಿಚ್ಗೆ ಒಗ್ಗಿಕೊಳ್ಳಬೇಕಾದ ಸವಾಲಿದೆ.
ಬ್ಯಾಟಿಂಗ್ ವರ್ಸಸ್ ಬೌಲಿಂಗ್
ಯುವ ಆರಂಭಿಕ ಆಟಗಾರ ಶುಭ್ಮನ್ ಗಿಲ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಜೊತೆಗೆ ವಿರಾಟ್ ಕೊಹ್ಲಿ ಹಳೆಯ ಲಯಕ್ಕೆ ಮರಳಿರುವುದು, ಚೇತೇಶ್ವರ್ ಪೂಜಾರ ಕಳೆದ ಒಂದು ತಿಂಗಳಿಂದ ಇಂಗ್ಲೆಂಡ್ನಲ್ಲೇ ಕೌಂಟಿ ಆಡಿ ರನ್ ಮಳೆ ಹರಿಸಿರುವುದು, ಅಜಿಂಕ್ಯ ರಹಾನೆಗೆ 16 ತಿಂಗಳ ನಂತರ ತಂಡಕ್ಕೆ ಮರಳಿರುವುದು ಮಿಡಲ್ ಆರ್ಡರ್ಗೆ ಬಲ ಬಂದಿದೆ. ಮತ್ತೊಂದೆಡೆ ಆಸಿಸ್ ವೇಗಿಗಳಾದ ಮಿಚೆಲ್ ಸ್ಟಾರ್ಕ್ ಮತ್ತು ನಾಯಕ ಪ್ಯಾಟ್ ಕಮಿನ್ಸ್, ಸ್ಕಾಟ್ ಬೋಲ್ಯಾಂಡ್, ನೇಥನ್ ಲಿಯಾನ್ ಅವರ ವಿರುದ್ಧ ಭಾರತದ ಬ್ಯಾಟರ್ಗಳು ಹೇಗೆ ಪ್ರದರ್ಶನ ನೀಡುತ್ತಾರೆ ಎಂಬುದು ಕುತೂಹಲ ಮೂಡಿಸಿದೆ.
ರೋಹಿತ್ ಮುಂದಿದೆ ಉತ್ತಮ ಅವಕಾಶ
ಕಪಿಲ್ ದೇವ್, ಸೌರವ್ ಗಂಗೂಲಿ, ಎಂಎಸ್ ಧೋನಿ ಬಳಿಕ ಐಸಿಸಿ ಟ್ರೋಫಿ 4ನೇ ನಾಯಕ ಎಂಬ ದಾಖಲೆಗೆ ರೋಹಿತ್ ಪಾತ್ರವಾಗಲಿದ್ದಾರೆ.
ಬಹುಮಾನ ಮೊತ್ತ
- ಗೆದ್ದವರಿಗೆ 13.21 ಕೋಟಿ
- ರನ್ನರ್ಅಪ್ 6.60 ಕೋಟಿ
- ಜಂಟಿ ಚಾಂಪಿಯನ್ 9.9 ಕೋಟಿ
ಓವಲ್ ಪಿಚ್ನಲ್ಲಿ ಉಭಯ ತಂಡಗಳ ದಾಖಲೆ
ಭಾರತ ತಂಡ ಓವಲ್ನಲ್ಲಿ ಈ ಹಿಂದೆ ಅತಿಥೇಯರ ವಿರುದ್ಧ 14 ಪಂದ್ಯಗಳನ್ನು ಆಡಿದೆ. ಈ ಪೈಕಿ 2ರಲ್ಲಿ ಗೆದ್ದು, 5ರಲ್ಲಿ ಸೋಲು ಕಂಡಿದೆ. 7ರಲ್ಲಿ ಡ್ರಾ ಸಾಧಿಸಿದೆ. ಆಸಿಸ್ ಇದೇ ಪಿಚ್ನಲ್ಲಿ 38 ಟೆಸ್ಟ್ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 17ರಲ್ಲಿ ಸೋಲು ಕಂಡಿದೆ. 17 ಪಂದ್ಯಗಳಲ್ಲಿ ಡ್ರಾ ಸಾಧಿಸಿದೆ.
ಡಬ್ಲ್ಯುಟಿಸಿ ಫೈನಲ್ ಹಾದಿ
ಭಾರತ ತಂಡ
- ಇಂಗ್ಲೆಂಡ್ ವಿರುದ್ಧ 2-2 ಡ್ರಾ
- ನ್ಯೂಜಿಲೆಂಡ್ ವಿರುದ್ಧ 1-0 ಗೆಲುವು
- ದಕ್ಷಿಣ ಆಫ್ರಿಕಾ ವಿರುದ್ಧ 1-2 ಸೋಲು
- ಶ್ರೀಲಂಕಾ ವಿರುದ್ಧ 2-0 ಗೆಲುವು
- ಆಸ್ಟ್ರೇಲಿಯಾ ವಿರುದ್ಧ 2-1 ಗೆಲುವು
- 18 ಟೆಸ್ಟ್ ಪಂದ್ಯಗಳಲ್ಲಿ 10ರಲ್ಲಿ ಜಯ, 5ರಲ್ಲಿ ಸೋಲು, 3ರಲ್ಲಿ ಡ್ರಾ.
ಆಸ್ಟ್ರೇಲಿಯಾ ತಂಡ
- ಇಂಗ್ಲೆಂಡ್ ವಿರುದ್ಧ 4-0ರಲ್ಲಿ ಜಯ
- ಪಾಕಿಸ್ತಾನ ವಿರುದ್ಧ 1-0ರಲ್ಲಿ ಗೆಲುವು
- ಶ್ರೀಲಂಕಾ ವಿರುದ್ಧ 1-1ರಲ್ಲಿ ಸಮಬಲ
- ವೆಸ್ಟ್ ಇಂಡೀಸ್ ವಿರುದ್ಧ 2-0ರಲ್ಲಿ ಜಯ
- ದಕ್ಷಿಣ ಆಫ್ರಿಕಾ ವಿರುದ್ಧ 2-0ರಲ್ಲಿ ಗೆಲುವು
- ಭಾರತ ವಿರುದ್ಧ 1-2ರಲ್ಲಿ ಸೋಲು
- 19 ಟೆಸ್ಟ್ ಪಂದ್ಯಗಳಲ್ಲಿ 11ರಲ್ಲಿ ಜಯ, 3ರಲ್ಲಿ ಸೋಲು, 5ರಲ್ಲಿ ಡ್ರಾ.
ಗೆದ್ದವರಿಗೆ ಚಿನ್ನದ ಗದೆ ಟ್ರೋಫಿ
ಈ ಫೈನಲ್ ಪಂದ್ಯದಲ್ಲಿ ಗೆದ್ದ ತಂಡಕ್ಕೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಗದೆಯನ್ನು ವಿತರಿಸಲಾಗುತ್ತದೆ. ಇದನ್ನು ಈ ಹಿಂದೆ ಪ್ರತಿ ವರ್ಷ ಐಸಿಸಿ ರ್ಯಾಂಕಿಂಗ್ನಲ್ಲಿ ನಂ 1 ಸ್ಥಾನ ಪಡೆದ ತಂಡಕ್ಕೆ ನೀಡಲಾಗುತ್ತಿತ್ತು. ಜಂಟಿ ಚಾಂಪಿಯನ್ ಆದರೆ ಇದೇ ಚಿನ್ನದ ಟ್ರೋಫಿ ಇಬ್ಬರಿಗೂ ಹಂಚಿಕೆಯಾಗಲಿದೆ.
ಆಸ್ಟ್ರೇಲಿಯಾ ಮತ್ತು ಭಾರತ ಮುಖಾಮುಖಿ
ಟೀಮ್ ಇಂಡಿಯಾ ಮತ್ತು ಆಸ್ಟ್ರೇಲಿಯಾ ತಂಡಗಳು ಈವರೆಗೂ ಒಟ್ಟು 106 ಬಾರಿ ಟೆಸ್ಟ್ ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ಪೈಕಿ 32ರಲ್ಲಿ ಭಾರತ, 44ರಲ್ಲಿ ಆಸ್ಟ್ರೇಲಿಯಾ ಗೆದ್ದಿವೆ. 29ರಲ್ಲಿ ಡ್ರಾ ಸಾಧಿಸಿವೆ. 1 ಟೈ ಕಂಡಿವೆ. ಭಾರತದಲ್ಲಿ54, ಆಸಿಸ್ನಲ್ಲಿ 52 ಪಂದ್ಯಗಳು ನಡೆದಿವೆ. ಇದೇ ಮೊದಲ ಬಾರಿಗೆ ಉಭಯ ತಂಡಗಳು ತಟಸ್ಥ ಸ್ಥಳದಲ್ಲಿ ಮುಖಾಮುಖಿಯಾಗುತ್ತಿವೆ.
2021ರಲ್ಲಿ ಭಾರತ ರನ್ನರ್ಅಪ್
2021ರಲ್ಲಿ ಮೊದಲ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ನಲ್ಲಿ ಭಾರತ ತಂಡವು ಸೋಲು ಕಂಡಿತ್ತು. ನ್ಯೂಜಿಲೆಂಡ್ ತಂಡದ ಎದುರು, 8 ವಿಕೆಟ್ಗಳಿಂದ ಪರಾಭವಗೊಂಡಿತ್ತು. ಅಂದು ರನ್ನರ್ಅಪ್ ಆಗಿದ್ದ ಭಾರತ ಈ ಬಾರಿ ಚಾಂಪಿಯನ್ ಆಗಲು ಪಣತೊಟ್ಟಿದೆ.
ಪಿಚ್ ರಿಪೋರ್ಟ್
ಓವಲ್ ಮೈದಾನವು 1880ರಿಂದಲೂ ಟೆಸ್ಟ್ ಪಂದ್ಯಗಳು ನಡೆಯುತ್ತಾ ಬಂದಿವೆ. ಆದರೆ ಇಲ್ಲಿ ಜೂನ್ ತಿಂಗಳಲ್ಲಿ ಟೆಸ್ಟ್ ನಡೆಯುತ್ತಿರುವುದು ಇದೇ ಮೊದಲು. ಹೀಗಾಗಿ ಈ ಪಿಚ್ ಬಗ್ಗೆ ಕೌತುಕ ಸೃಷ್ಟಿಯಾಗಿದೆ. ಸಾಂಪ್ರಾದಾಯಿಕ ಬೌನ್ಸ್ನಿಂದ ಕೂಡಿರುವ ಇಲ್ಲಿನ ಪಿಚ್ ವೇಗಿಗಳ ಪ್ರಾಬಲ್ಯದ ನಡುವೆ ಸ್ಪಿನ್ನರ್ಗಳಿಗೂ ನೆರವು ನೀಡುತ್ತಿದೆ. ಪಂದ್ಯದ 4 ಅಥವಾ 5ನೇ ದಿನದಾಟ ಮತ್ತು 6ನೇ ದಿನದಾಟವೂ ಮಳೆಯ ಅಡ್ಡಿಉಂಟು ಮಾಡುವ ಸಾಧ್ಯತೆ ಇದೆ.
ನೇರ ಪ್ರಸಾರ
ಡಿಸ್ನಿ ಸ್ಟಾರ್ ಇಂಡಿಯಾ ಟಿವಿ ಗೈಡ್ ಪ್ರಕಾರ, WTC ಫೈನಲ್ ಅನ್ನು ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್ ಸ್ಪೋರ್ಟ್ಸ್ 2, ಸ್ಟಾರ್ ಸ್ಪೋರ್ಟ್ಸ್ 3, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ, ಸ್ಟಾರ್ ಸ್ಪೋರ್ಟ್ಸ್ 1 HD, ಸ್ಟಾರ್ ಸ್ಪೋರ್ಟ್ಸ್ 2 HD, ಸ್ಟಾರ್ ಸ್ಪೋರ್ಟ್ಸ್ 1 ಹಿಂದಿ HD ನಲ್ಲಿ ನೇರ ಪ್ರಸಾರ ಮಾಡಲಾಗುತ್ತದೆ. ಸ್ಟಾರ್ ಸ್ಪೋರ್ಟ್ಸ್ 1 ತಮಿಳು, ಸ್ಟಾರ್ ಸ್ಪೋರ್ಟ್ಸ್ 1 ತೆಲುಗು ಮತ್ತು ಸ್ಟಾರ್ ಸ್ಪೋರ್ಟ್ಸ್ 1 ಕನ್ನಡ.
ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ, ಅಜಿಂಕ್ಯ ರಹಾನೆ, ರವೀಂದ್ರ ಜಡೇಜಾ, ಕೆಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್/ಶಾರ್ದೂಲ್ ಠಾಕೂರ್, ಉಮೇಶ್ ಯಾದವ್/ಜಯದೇವ್ ಉನದ್ಕತ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್
ಆಸ್ಟ್ರೇಲಿಯಾ ಸಂಭಾವ್ಯ ತಂಡ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಾರ್ನಸ್ ಲಬುಶೇನ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.