Steve Smith: ಡಬ್ಲ್ಯುಟಿಸಿಗಿಂತ ಆ್ಯಶಸ್ ಉನ್ನತ ಮಟ್ಟದ್ದು; ಇಂಗ್ಲೆಂಡ್ ಆಸೀಸ್ ಕದನವೇ ರೋಚಕ ಎಂದ ಸ್ಮಿತ್
Jan 09, 2024 08:13 PM IST
ಸ್ಟೀವ್ ಸ್ಮಿತ್
- Ashes Cricket: ಆ್ಯಶಸ್ ಸರಣಿಯ ಕುರಿತು ಮಾತನಾಡಿದ ಆಸ್ಟ್ರೇಲಿಯಾ ಬ್ಯಾಟರ್ ಸ್ಟೀವ್ ಸ್ಮಿತ್, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಬಗ್ಗೆ ಹೇಳಿಕೆ ನೀಡಿದ್ದಾರೆ.
ಆಸ್ಟ್ರೇಲಿಯಾ ತಂಡವು ಎರಡನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್ (World Test Championship) ಟ್ರೋಫಿಯನ್ನು ಎತ್ತಿ ಹಿಡಿಯಿತು. ಸ್ಟಾರ್ ಬ್ಯಾಟರ್ ಸ್ಟೀವ್ ಸ್ಮಿತ್, ಮಹತ್ವದ ಪಂದ್ಯದಲ್ಲಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಭಾರತದ ವಿರುದ್ಧ ಮೊದಲ ಇನ್ನಿಂಗ್ಸ್‌ನಲ್ಲಿ ಶತಕ (121) ಸಿಡಿಸಿದ ಸ್ಮಿತ್, ತಮ್ಮ ತಂಡವು 469 ರನ್‌ಗಳ ಬೃಹತ್ ಮೊತ್ತ ಕಲೆಹಾಕುವಲ್ಲಿ ನೆರವಾದರು. ಅಂತಿಮವಾಗಿ ರೋಹಿತ್ ಶರ್ಮಾ ಬಳಗವನ್ನು 209 ರನ್‌ಗಳಿಂದ ಹೀನಾಯವಾಗಿ ಸೋಲಿಸಿದ ಕಾಂಗರೂಗಳು, ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಡಬ್ಲ್ಯೂಟಿಸಿ ಟ್ರೋಫಿ ಗೆದ್ದ ಆಸೀಸ್, ಇಂದಿನಿಂದ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ವಿರುದ್ಧ ಕಣಕ್ಕಳಿಯುತ್ತಿದೆ. ಈ ಪಂದ್ಯಕ್ಕೂ ಮೊದಲು, ಆಸೀಸ್ ಆಟಗಾರ ಸ್ಟೀವ್ ಸ್ಮಿತ್ ಡಬ್ಲ್ಯುಟಿಸಿ ಬಗ್ಗೆ ಆಸಕ್ತಿದಾಯಕ ಹೇಳಿಕೆ ನೀಡಿದ್ದಾರೆ. ಕ್ರೀಡೆಯಲ್ಲಿ ಆ್ಯಶಸ್ ಎನ್ನುವುದು ತುಂಬಾ ಉತ್ತುಂಗದಲ್ಲಿದೆ ಎಂದು ಸ್ಮಿತ್ ಹೇಳಿದ್ದಾರೆ. ಎಡ್ಜ್‌ಬಾಸ್ಟನ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ಗೂ ಮುಂಚಿತವಾಗಿ, ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್ ವಿರುದ್ಧದ ಐದು ಟೆಸ್ಟ್‌ಗಳ ಸರಣಿಯ ಕುರಿತಾಗಿ ವಿಮರ್ಷಾತ್ಮಕ ಹೇಳಿಕೆ ನೀಡಿದರು. ಈ ವೇಳೆ ಟೆಸ್ಟ್ ಚಾಂಪಿಯನ್‌ಶಿಪ್‌ಗಿಂತ ಆ್ಯಶಸ್ ಉನ್ನತ ಸ್ಥಾನದಲ್ಲಿದೆ ಎಂದರು.
“ನಾವು ಕಳೆದ ವಾರ ಟೆಸ್ಟ್ ಚಾಂಪಿಯನ್‌ಶಿಪ್ ಗೆದ್ದುಕೊಂಡಿದ್ದೇವೆ. ಎರಡು ವರ್ಷಗಳ ಕಠಿಣ ಪರಿಶ್ರಮ ಆ ಮೂಲಕ ಕಂಡುಬಂತು. ತಂಡದ ಎಲ್ಲಾ ಆಟಗಾರರಿಗೂ ಅದೊಂದು ಹೆಮ್ಮೆಯ ಕ್ಷಣ. ಆದರೆ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ಕ್ರಿಕೆಟಿಗರಿಗೆ ಆ್ಯಶಸ್ ಎಂಬುದು ಉನ್ನತ ಕ್ರಿಕೆಟ್. ನಾವು ನಮ್ಮ ಜೀವನದುದ್ದಕ್ಕೂ ಅದಕ್ಕಾಗಿ ಕೆಲಸ ಮಾಡುತ್ತೇವೆ. ಇದು ತುಂಬಾ ರೋಮಾಂಚನಕಾರಿಯಾಗಿದೆ,” ಎಂದು ಸ್ಮಿತ್ ಹೇಳಿದ್ದಾರೆ.
ಆ್ಯಶಸ್ ಅಷ್ಟು ಉನ್ನತ ಹಂತದಲ್ಲಿರಲು ಕಾರಣವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಉಭಯ ತಂಡಗಳು ಪರಸ್ಪರ ಮುಖಾಮುಖಿಗೆ ಶ್ರೀಮಂತ ಇತಿಹಾಸವಿದೆ. ಆದರೂ, ತಂಡಗಳ ಪ್ರಸ್ತುತ ಫಾರ್ಮ್ ರೋಚಕ ಸ್ಪರ್ಧೆಗೆ ಪ್ರಮುಖ ಕಾರಣ ಎಂದರು.
“ಅದರ ಇತಿಹಾಸ ಹಾಗಿದೆ. ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಇದು ಅತಿದೊಡ್ಡ ಸರಣಿಯಾಗಿದೆ. ಉತ್ತಮವಾಗಿ ಆಡಬೇಕು ಹಾಗೂ ತಂಡ ಯಶಸ್ವಿಯಾಗಬೇಕು ಎಂದು ಎರಡೂ ತಂಡಗಳು ಅಂದುಕೊಳ್ಳುವ ಸರಣಿ ಇದು. ಇಂಗ್ಲೆಂಡ್ ಆಡುತ್ತಿರುವ ರೀತಿ ಮತ್ತು ನಾವು ಆಡುತ್ತಿರುವ ರೀತಿ ನೋಡಿದರೆ ಇದು ರೋಚಕ ಸರಣಿಯಾಗಲಿದೆ,” ಎಂದು ಸ್ಟಾರ್ ಬ್ಯಾಟರ್ ಹೇಳಿದ್ದಾರೆ.
ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ (England vs Australia 1st Test) ನಡುವಿನ ಆ್ಯಶಸ್ ಟೆಸ್ಟ್ ಸರಣಿಯು (The Ashes) ಇಂದು ಆರಂಭವಾಗುತ್ತಿದೆ. 2021-22ರಲ್ಲಿ ಕೊನೆಯ ಬಾರಿಗೆ ಆಸ್ಟ್ರೇಲಿಯಾ ಪ್ರವಾಸ ಮಾಡಿದ್ದ ಇಂಗ್ಲೆಂಡ್, 4-0 ಅಂತರದಿಂದ ಸೋತಿತ್ತು. ಆದರೆ ಅಂದಿನಿಂದ ಆಂಗ್ಲರ ತಂಡದಲ್ಲಿ ನಾಯಕತ್ವ ಮತ್ತು ಟೆಸ್ಟ್ ಕ್ರಿಕೆಟ್‌ನಲ್ಲಿ ಒಂದಷ್ಟು ಬದಲಾವಣೆಗಳಾಗಿವೆ. ಹೀಗಾಗಿ ಹೊಸತನದೊಂದಿಗೆ ತಂಡವು ಕಾಂಗರೂಗಳ ವಿರುದ್ಧ ಕಣಕ್ಕಿಳಿಯುತ್ತಿದೆ.
ಭಾರತದಲ್ಲಿ ಇಂಗ್ಲೆಂಡ್ vs ಆಸ್ಟ್ರೇಲಿಯಾ ನಡುವಿನ ಆ್ಯಶಸ್ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳು ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರವಾಗಲಿದೆ. ಇದೇ ವೇಳೆ ಸೋನಿ ಲೈವ್ ಅಪ್ಲಿಕೇಶನ್ ಹಾಗೂ ವೆಬ್‌ಸೈಟ್‌ನಲ್ಲಿಯೂ ಪಂದ್ಯದ ಲೈವ್ ಸ್ಟ್ರೀಮಿಂಗ್ ವೀಕ್ಷಿಸಬಹುದು.
ಇಂಗ್ಲೆಂಡ್ ತಂಡ
ಬೆನ್ ಡಕೆಟ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಮೊಯಿನ್ ಅಲಿ, ಸ್ಟುವರ್ಟ್ ಬ್ರಾಡ್, ಆಲಿ ರಾಬಿನ್ಸನ್, ಜೇಮ್ಸ್ ಆಂಡರ್ಸನ್, ಡೇನಿಯಲ್ ಲಾರೆನ್ಸ್, ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್ , ಮಾರ್ಕ್ ವುಡ್, ಕ್ರಿಸ್ ವೋಕ್ಸ್.
ಆಸ್ಟ್ರೇಲಿಯಾ ತಂಡ
ಡೇವಿಡ್ ವಾರ್ನರ್, ಉಸ್ಮಾನ್ ಖವಾಜಾ, ಮಿಚೆಲ್ ಮಾರ್ಷ್, ಸ್ಟೀವನ್ ಸ್ಮಿತ್, ಟ್ರಾವಿಸ್ ಹೆಡ್, ಕ್ಯಾಮರೂನ್ ಗ್ರೀನ್, ಮಾರ್ನಸ್ ಲ್ಯಾಬುಶೆನ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮ್ಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಜೋಶ್ ಹ್ಯಾಜಲ್‌ವುಡ್, ಸ್ಕಾಟ್ ಬೋಲ್ಯಾಂಡ್, ಟಾಡ್ ಮರ್ಫಿ , ಜೋಶ್ ಇಂಗ್ಲಿಸ್, ಮ್ಯಾಟ್ ರೆನ್ಶಾ, ಮಾರ್ಕಸ್ ಹ್ಯಾರಿಸ್.