logo
ಕನ್ನಡ ಸುದ್ದಿ  /  ಕ್ರೀಡೆ  /  Women's T20 Wc: ಕಿವೀಸ್ ವಿರುದ್ಧ ಹಾಲಿ ಚಾಂಪಿಯನ್ನರಿಗೆ ಜಯ; ಐದು ವಿಕೆಟ್ ಪಡೆದು ದಾಖಲೆ ಬರೆದ ಬೌಲರ್

Women's T20 WC: ಕಿವೀಸ್ ವಿರುದ್ಧ ಹಾಲಿ ಚಾಂಪಿಯನ್ನರಿಗೆ ಜಯ; ಐದು ವಿಕೆಟ್ ಪಡೆದು ದಾಖಲೆ ಬರೆದ ಬೌಲರ್

HT Kannada Desk HT Kannada

Feb 12, 2023 09:39 AM IST

ಆಸ್ಟ್ರೇಲಿಯಾಗೆ ಜಯ

    • ಆಶ್ಲೀಗ್ ಗಾರ್ಡ್ನರ್ ಅವರ ವೃತ್ತಿಜೀವನದಲ್ಲೇ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದರು. ಕೇವಲ 12 ರನ್‌ ಬಿಟ್ಟುಕೊಟ್ಟು ಪ್ರಮುಖ 5 ವಿಕೆಟ್‌ ಪಡೆದರು. ಆ ಮೂಲಕ ಆಸೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.
ಆಸ್ಟ್ರೇಲಿಯಾಗೆ ಜಯ
ಆಸ್ಟ್ರೇಲಿಯಾಗೆ ಜಯ (twitter)

ವನಿತೆಯರ ಟಿ20 ವಿಶ್ವಕಪ್‌ನ ಎರಡನೇ ದಿನದಾಟದಲ್ಲಿ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್ ತಂಡವನ್ನು 97 ರನ್‌ಗಳಿಂದ ಸೋಲಿಸಿದೆ. ಗೆಲುವಿನೊಂದಿಗೆ ಆಸೀಸ್‌ ಅಭಿಯಾನ ಆರಂಭಿಸಿದೆ. ಮತ್ತೊಂದೆಡೆ ದಿನದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಇಂಗ್ಲೆಂಡ್‌ 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ.

ಟ್ರೆಂಡಿಂಗ್​ ಸುದ್ದಿ

42 ವರ್ಷದ ಎಂಎಸ್‌ ಧೋನಿ ಫಿಟ್ನೆಸ್ ಸೀಕ್ರೆಟ್ ಏನು; ಕೂಲ್ ಕ್ಯಾಪ್ಟನ್ ಡಯಟ್, ವರ್ಕೌಟ್ ಪ್ಲಾನ್ ಹೀಗಿರುತ್ತೆ

RCB vs CSK IPL 2024: ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಸಿಎಸ್‌ಕೆ ರಣತಂತ್ರ; ಚೆನ್ನೈ ಸೂಪರ್ ಕಿಂಗ್ಸ್ ಆಡುವ ಸಂಭಾವ್ಯ 11ರ ಬಳಗ ಹೀಗಿದೆ

ತಂದೆ-ತಾಯಿಯೂ ಕ್ರೀಡಾಪಟುಗಳು, ಕೋಚ್​ ಮಗಳನ್ನೇ ಪಟಾಯಿಸಿದ್ರು; ಇದು ನಿವೃತ್ತಿ ಘೋಷಿಸಿದ ಸುನಿಲ್ ಛೆಟ್ರಿ ಲೈಫ್​ಸ್ಟೋರಿ

ಅಂತಾರಾಷ್ಟ್ರೀಯ ಫುಟ್ಬಾಲ್​ಗೆ ಕಾಲ್ಚೆಂಡಿನ ಚತುರ ಸುನಿಲ್ ಛೆಟ್ರಿ ನಿವೃತ್ತಿ; ಈ ದಿನವೇ ದಿಗ್ಗಜ ಆಟಗಾರನ ಕೊನೆಯ ಪಂದ್ಯ

ಆಸೀಸ್‌ ಪರ ಬ್ಯಾಟಿಂಗ್‌ನಲ್ಲಿಅಲಿಸ್ಸಾ ಹೀಲಿ ಹಾಗೂ ನಾಯಕಿ ಮೆಗ್ ಲ್ಯಾನಿಂಗ್ ಮಿಂಚಿದರೆ, ಬೌಲಿಂಗ್‌ನಲ್ಲಿ ಆಶ್ಲೀಗ್ ಗಾರ್ಡ್ನರ್ ಐದು ವಿಕೆಟ್‌ಗಳನ್ನು ಕಿತ್ತು ಕಿವೀಸ್‌ಗೆ ಕಂಟಕವಾದರು. ವಿಶ್ವದ ಅಗ್ರ ಶ್ರೇಯಾಂಕಿತ ತಂಡವು ತಮ್ಮ ಪ್ರಶಸ್ತಿಯನ್ನು ರಕ್ಷಿಸಿಕೊಳ್ಳುವ ಹೋರಾಟದಲ್ಲಿ ಆರಂಭಿಕ ಯಶಸ್ಸು ಪಡೆದಿದ್ದಾರೆ. ಬ್ಯಾಟ್ ಮತ್ತು ಬಾಲ್‌ನೊಂದಿಗೆ ಪ್ರಬಲವಾದ ಪ್ರದರ್ಶನ ನೀಡಿದ ಆಸೀಸ್‌, ತಮ್ಮ ಪ್ರತಿಸ್ಪರ್ಧಿಗಳಿಗೆ ಪ್ರಬಲ ಸಂದೇಶ ನೀಡಿದೆ.

ಆಶ್ಲೀಗ್ ಗಾರ್ಡ್ನರ್ ಅವರ ವೃತ್ತಿಜೀವನದಲ್ಲೇ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದರು. ಕೇವಲ 12 ರನ್‌ ಬಿಟ್ಟುಕೊಟ್ಟು ಪ್ರಮುಖ 5 ವಿಕೆಟ್‌ ಪಡೆದರು. ಆ ಮೂಲಕ ಆಸೀಸ್‌ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಬ್ಯಾಟಿಂಗ್‌ನಲ್ಲಿ ಅಲಿಸ್ಸಾ ಹೀಲಿ ತಂಡದ ಪರ ಹೆಚ್ಚು ಮೊತ್ತ ಕಲೆ ಹಾಕಿದರು. 173 ರನ್‌ ಗುರಿ ಬೆನ್ನತ್ತಿದ ಕಿವೀಸ್‌ನ ಇಬ್ಬರು ಆರಂಭಿಕರು ಗೋಲ್ಡನ್‌ ಡಕ್‌ಗೆ ಬಲಿಯಾದರು. ಮೇಗನ್ ಶಟ್ ತಮ್ಮ ಮೊದಲ ಓವರ್‌ನಲ್ಲೇ ಇಬ್ಬರನ್ನೂ ಪೆವಿಲಿಯನ್‌ಗೆ ಕಳುಹಿಸಿದರು.

ಡಾರ್ಸಿ ಬ್ರೌನ್ ಅದ್ಭುತ ಕ್ಯಾಚ್‌ ಹಿಡಿದು ಬರ್ನಾಡೈನ್ ಬೆಝುಡೆನ್‌ಹೌಟ್ ಅವರನ್ನು 14 ರನ್‌ಗಳಿಗೆ ಡಗೌಟ್‌ಗೆ ಕಳುಹಿಸಿದರು. ಅಮೆಲಿಯಾ ಕೆರ್ 21 ರನ್‌ ಗಳಿಸಿ, ಕಾಂಗರೂಗಳಿಗೆ ತುಸು ಪ್ರತಿರೋಧ ಒಡ್ಡಲು ಮುಂದಾದರು. ಅದಕ್ಕೆ ಆಶ್ ಗಾರ್ಡ್ನರ್ ಅವಕಾಶ ನೀಡಲಿಲ್ಲ. ಮ್ಯಾಡಿ ಗ್ರೀನ್ 9 ರನ್‌ ಗಳಿಸಿದ್ದಾಗ ರನೌಟ್ ಮೂಲಕ ನ್ಯೂಜಿಲೆಂಡ್‌ ಪಾಳಯದ ಐದು ವಿಕೆಟ್‌ಗಳು ಪತನವಾಯ್ತು.

ಅಂತಿಮವಾಗಿ ಕಿವೀಸ್‌ ಇನ್ನೂ ಆರು ಓವರ್‌ಗಳು ಉಳಿದಿರುವಂತೆಯೇ 97 ರನ್‌ಗಳ ಕೊರತೆಯೊಂದಿಗೆ ಆಲೌಟ್‌ ಆಯ್ತು. ಮೊದಲ ಜಯದೊಂದಿಗೆ ಆಸ್ಟ್ರೇಲಿಯಾ ಎ ಗುಂಪಿನ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದೆ.

ದಿನದ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಇಂಗ್ಲೆಂಡ್‌ ವಿಜಯದ ನಗೆ ಬೀರಿತು. ವಿಂಡೀಸ್‌ ಗಳಿಸಿದ ಸುಲಭ 135 ರನ್‌ಗಳನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 14.3 ಓವರ್‌ಗಳಲ್ಲಿ 3‌ ವಿಕೆಟ್‌ ನಷ್ಟಕ್ಕೆ 138 ರನ್‌ ಗಳಿಸಿ ಜಯ ಸಾಧಿಸಿತು. ಬ್ಯಾಟಿಂಗ್‌ನಲ್ಲಿ ಅಜೇಯ 40 ರನ್‌ ಗಳಿಸಿದ ನಟಾಲಿ ಸ್ಕಿವರ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಭರ್ಜರಿ ಜಯದೊಂದಿಗೆ ಇಂಗ್ಲೆಂಡ್‌ ಕೂಡಾ ಬಿ ಗುಂಪಿನ ಅಂಕಪಟ್ಟಿಯಲ್ಲಿ‌ ಮೊದಲ ಸ್ಥಾನಕ್ಕೇರಿದೆ.

ವನಿತೆಯರ ವಿಶ್ವಕಪ್‌ನಲ್ಲಿ ಇಂದು ಕೂಡಾ ಎರಡು ಪಂದ್ಯಗಳು ನಡೆಯಲಿವೆ. ದಿನದ ಮೊದಲ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ಕಾದಾಡಿದರೆ, ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶ ಹಾಗೂ ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ. ಹಾಲಿ ರನ್ನರ್‌ ಅಪ್‌ ಭಾರತ ತಂಡದಲ್ಲಿ, ಮೊದಲ ಪಂದ್ಯದಿಂದ ಸ್ಟೈಲಿಶ್‌ ಆಟಗಾರ್ತಿ ಸ್ಮೃತಿ ಮಂಥನಾ ಹೊರಬಿದ್ದಿದ್ದಾರೆ. ಇದು ಭಾರತ ತಂಡಕ್ಕೆ ಹಿನ್ನಡೆಯಾಗಲಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ