ಕನ್ನಡ ಸುದ್ದಿ  /  ಮನರಂಜನೆ  /  Megha Shetty: ಜೊತೆ ಜೊತೆಯಲಿ ಧಾರಾವಾಹಿ ಅಂತ್ಯ, ಇನ್ಮುಂದೆ ಸಿನಿಮಾಗಳತ್ತ ಹೆಚ್ಚು ಗಮನ ಹರಿಸುತ್ತೇನೆ; ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ

Megha Shetty: ಜೊತೆ ಜೊತೆಯಲಿ ಧಾರಾವಾಹಿ ಅಂತ್ಯ, ಇನ್ಮುಂದೆ ಸಿನಿಮಾಗಳತ್ತ ಹೆಚ್ಚು ಗಮನ ಹರಿಸುತ್ತೇನೆ; ಅನು ಸಿರಿಮನೆ ಖ್ಯಾತಿಯ ಮೇಘಾ ಶೆಟ್ಟಿ

ಇನ್ನು ಮುಂದೆ ಸಿನಿಮಾಗಳತ್ತ ಹೆಚ್ಚು ಗಮನ ನೀಡುತ್ತೇನೆ. ಸಾಕಷ್ಟು ಸ್ಕ್ರಿಪ್ಟ್‌ ಕೇಳಿದ್ದೇನೆ. ಹೊಸ ಸಿನಿಮಾಗಳ ಬಗ್ಗೆ ಶೀಘ್ರದಲ್ಲೇ ಅಪ್‌ಡೇಟ್‌ ನೀಡುತ್ತೇನೆ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

ಜೊತೆ ಜೊತೆಯಲಿ ಖ್ಯಾತಿ ಮೇಘಾ ಶೆಟ್ಟಿ
ಜೊತೆ ಜೊತೆಯಲಿ ಖ್ಯಾತಿ ಮೇಘಾ ಶೆಟ್ಟಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಜೊತೆ ಜೊತೆಯಲಿ ಧಾರಾವಾಹಿ ಕೊನೆಗೊಳ್ಳುತ್ತಿದೆ. 2019ರಲ್ಲಿ ಆರಂಭವಾದ ಈ ಧಾರಾವಾಹಿ 4 ವರ್ಷಗಳ ಕಾಲ ಕಿರುತೆರೆಪ್ರಿಯರನ್ನು ರಂಜಿಸಿತ್ತು. ಇದೀಗ ಈ ಧಾರಾವಾಹಿ ಪ್ರಸಾರ ನಿಲ್ಲಿಸುತ್ತಿದ್ದು ಇದು ಕಿರುತೆರೆಪ್ರಿಯರು ಹಾಗೂ ಧಾರಾವಾಹಿ ತಂಡ ಇಬ್ಬರಿಗೂ ಬೇಸರವಾಗಿದೆ.

ಧಾರಾವಾಹಿ ಆರಂಭದಿಂದ ಕೊನೆವರೆಗೂ ಬಹಳ ಕುತೂಹಲ ಕೆರಳಿಸಿತ್ತು. 45ರ ವ್ಯಕ್ತಿ ಹಾಗೂ 18ರ ಯುವತಿ ನಡುವಿನ ಪ್ರೀತಿ, ಮದುವೆ ಹಾಗೂ ಇನ್ನಿತರ ಅಂಶಗಳನ್ನು ಧಾರಾವಾಹಿಯಲ್ಲಿ ತೋರಿಸಲಾಗಿತ್ತು. ಈ ಧಾರಾವಾಹಿ ಅನಿರುದ್ಧ್‌ಗೆ ಒಂದೊಳ್ಳೆ ಬ್ರೇಕ್‌ ನೀಡಿತು. ಇದಕ್ಕೂ ಮುನ್ನ ಸಿನಿಮಾಗಳಲ್ಲಿ ನಟಿಸಿದ್ದ ಅನಿರುದ್ಧ್‌ಗೆ ಈ ಧಾರಾವಾಹಿ ಕಿರುತೆರೆ ಸ್ಟಾರ್‌ ಪಟ್ಟ ತಂದು ನೀಡಿತು. ಹಾಗೇ ಇದು ಮೇಘಾ ಶೆಟ್ಟಿಗೆ ಮೊದಲ ಧಾರಾವಾಹಿ. ನಟನೆಯ ಬಗ್ಗೆ ಕಿಂಚಿತ್ತೂ ತಿಳಿಯದ ಮೇಘಾ ಶೆಟ್ಟಿ ಈ ಧಾರಾವಾಹಿಯಿಂದ ಸಾಕಷ್ಟು ಕಲಿತಿದ್ದಾರೆ. ಜೊತೆಗೆ ಸಿನಿಮಾಗಳಲ್ಲಿ ನಟಿಸುವ ಅವಕಾಶವನ್ನೂ ಪಡೆದಿದ್ದಾರೆ. ಧಾರಾವಾಹಿಯಲ್ಲಿ ನಟಿಸಲು ಅವಕಾಶ ನೀಡಿದ ನಿರ್ದೇಶಕ ಜಗದೀಶ್‌, ಸಹ ನಟ ಅನಿರುದ್ಧ್‌ ಜತ್ಕರ್‌, ತಮಗೆ ನಟನೆ ಹೇಳಿಕೊಟ್ಟ ಹಿರಿಯ ಕಲಾವಿದರು, ತಂತ್ರಜ್ಞರು, ಸಹ ಕಲಾವಿದರು ಎಲ್ಲರಿಗೂ ಮೇಘಾ ಶೆಟ್ಟಿ ಥ್ಯಾಂಕ್ಸ್‌ ಹೇಳಿದ್ದಾರೆ.

ಧಾರಾವಾಹಿ ಅನುಭವ ಹಾಗೂ ಮುಂದಿನ ಪ್ಲಾನ್‌ಗಳ ಬಗ್ಗೆ ಮೇಘಾ ಹಿಂದುಸ್ತಾನ್‌ ಟೈಮ್ಸ್‌ ಕನ್ನಡದೊಂದಿಗೆ ಮಾತನಾಡಿದ್ದಾರೆ. ಧಾರಾವಾಹಿ ಮುಗಿದಿದ್ದಕ್ಕೆ ಬೇಸರ ಇದೆ. ಇಷ್ಟು ದಿನಗಳ ಕಾಲ ನಾವೆಲ್ಲಾ ಒಂದು ಕುಟುಂಬದಂತೆ ಇದ್ದೆವು. ಇದೀಗ ಧಾರಾವಾಹಿ ಮುಗಿಯುತ್ತಿದ್ದು ಇನ್ಮುಂದೆ ಈ ಕುಟುಂಬದ ಸದಸ್ಯರನ್ನು ನೋಡಲಾಗುವುದಿಲ್ಲ ಎಂಬ ಬೇಸರ ಇದೆ. ಈ ಧಾರಾವಾಹಿ ನನಗೆ ಒಳ್ಳೆ ಗುರುತು ತಂದುಕೊಟ್ಟಿದೆ. ಜನರು ನನ್ನ ನಿಜವಾದ ಹೆಸರು ಮರೆತು ಅನು ಸಿರಿಮನೆ ಎಂದೇ ಕರೆಯುತ್ತಿದ್ದಾರೆ. ನಾನು ಇಂದು ಏನೇ ಕಲಿತಿದ್ದರೂ ಎಲ್ಲಾ ಈ ಧಾರಾವಾಹಿಯಿಂದಲೇ. ಆರೂರು ಜಗದೀಶ್‌ ಸರ್‌ ನನ್ನ ಗುರುಗಳು. ನಟನೆಯೇ ತಿಳಿಯದ ನನಗೆ ಅವರು ವರ್ಕ್‌ಶಾಪ್‌ ಏರ್ಪಡಿಸಿ ಎಲ್ಲವನ್ನೂ ಹೇಳಿಕೊಟ್ಟರು. ಹಾಗೇ ಅನಿರುದ್ಧ್‌ ಅವರೊಂದಿಗೆ ನಟಿಸಿದ್ದು ನನಗೆ ಬಹಳ ಖುಷಿ ನೀಡಿದೆ. ಮೊದಲ ಧಾರಾವಾಹಿಯಲ್ಲೇ ಅಂತಹ ದೊಡ್ಡ ನಟನೊಂದಿಗೆ ನಟಿಸಿದ್ದು ನನ್ನ ಅದೃಷ್ಟ ಎಂದೇ ಹೇಳಬಹುದು.

ಧಾರಾವಾಹಿ 1000 ಎಪಿಸೋಡ್‌ಗಳಿಗಾಗಿ ಮೊದಲೇ ನಿರ್ಧರಿಸಿದ್ದೆವು. ಬಹುಶ: ನಾಳೆ ಕೊನೆಯ ಎಪಿಸೋಡ್‌ ಇರಬಹುದು. ವಾರದ ಹಿಂದೆಯೇ ನನ್ನ ಭಾಗದ ಶೂಟಿಂಗ್‌ ಮುಗಿದಿತ್ತು. ಇನ್ನು ಮುಂದೆ ಸಿನಿಮಾಗಳತ್ತ ಹೆಚ್ಚು ಗಮನ ನೀಡುತ್ತೇನೆ. ಸಾಕಷ್ಟು ಸ್ಕ್ರಿಪ್ಟ್‌ ಕೇಳಿದ್ದೇನೆ. ಸದ್ಯಕ್ಕೆ ಕೈವ , ಆಪರೇಷನ್‌ ಲಂಡನ್‌ ಕೆಫೆ ಸಿನಿಮಾಗಳು ರಿಲೀಸ್‌ಗೆ ರೆಡಿ ಇವೆ. ಹೊಸ ಸಿನಿಮಾಗಳ ಬಗ್ಗೆ ಶೀಘ್ರದಲ್ಲೇ ಅಪ್‌ಡೇಟ್‌ ನೀಡುತ್ತೇನೆ. ನನಗೆ ಹೆಸರು ತಂದುಕೊಟ್ಟದ್ದೇ ಧಾರಾವಾಹಿ. ಮುಂದೆ ಧಾರಾವಾಹಿಗಳಲ್ಲಿ ನಟಿಸಬಾರದು ಎಂಬ ಉದ್ದೇಶ ಇಲ್ಲ. ಇದೇ ರೀತಿ ಒಂದೊಳ್ಳೆ ಸ್ಕ್ರಿಪ್ಟ್‌, ತಂಡ ದೊರೆತರೆ ಖಂಡಿತ ನಟಿಸುತ್ತೇನೆ ಎಂದು ಮೇಘಾ ಶೆಟ್ಟಿ ಹೇಳಿದ್ದಾರೆ.

IPL_Entry_Point