ವಿರಾಟ್ ಕೊಹ್ಲಿ ಸೂಪರ್​ಮ್ಯಾನ್ ರನೌಟ್​ಗೆ ಡಗೌಟ್ ಸೇರಿದ ಶಾರುಖ್ ಖಾನ್; ವಾರೆವ್ಹಾ ಎನ್ನುವ ಎವರ್‘ಗ್ರೀನ್’ ರಿಯಾಕ್ಷನ್ ವೈರಲ್
ಕನ್ನಡ ಸುದ್ದಿ  /  ಕ್ರಿಕೆಟ್  /  ವಿರಾಟ್ ಕೊಹ್ಲಿ ಸೂಪರ್​ಮ್ಯಾನ್ ರನೌಟ್​ಗೆ ಡಗೌಟ್ ಸೇರಿದ ಶಾರುಖ್ ಖಾನ್; ವಾರೆವ್ಹಾ ಎನ್ನುವ ಎವರ್‘ಗ್ರೀನ್’ ರಿಯಾಕ್ಷನ್ ವೈರಲ್

ವಿರಾಟ್ ಕೊಹ್ಲಿ ಸೂಪರ್​ಮ್ಯಾನ್ ರನೌಟ್​ಗೆ ಡಗೌಟ್ ಸೇರಿದ ಶಾರುಖ್ ಖಾನ್; ವಾರೆವ್ಹಾ ಎನ್ನುವ ಎವರ್‘ಗ್ರೀನ್’ ರಿಯಾಕ್ಷನ್ ವೈರಲ್

Virat Kohli : ಗುಜರಾತ್ ಟೈಟಾನ್ಸ್ ತಂಡದ ಬ್ಯಾಟರ್​ ಶಾರುಖ್ ಖಾನ್ ಅವರನ್ನು ಸೂಪರ್​ಮ್ಯಾನ್​ ಶೈಲಿಯಲ್ಲಿ ಆರ್​​ಸಿಬಿ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ರನೌಟ್ ಮಾಡಿದ್ದಾರೆ. ಕ್ಯಾಮರೂನ್ ಗ್ರೀನ್ ಸಖತ್ ರಿಯಾಕ್ಷನ್ ಕೊಟ್ಟಿದ್ದು ವೈರಲ್ ಆಗಿದೆ.

ವಿರಾಟ್ ಕೊಹ್ಲಿ ಸೂಪರ್​ಮ್ಯಾನ್ ರನೌಟ್​ಗೆ ಡಗೌಟ್ ಸೇರಿದ ಶಾರುಖ್ ಖಾನ್; ವಾರೆವ್ಹಾ ಎನ್ನುವ ಗ್ರೀನ್ ರಿಯಾಕ್ಷನ್ ವೈರಲ್
ವಿರಾಟ್ ಕೊಹ್ಲಿ ಸೂಪರ್​ಮ್ಯಾನ್ ರನೌಟ್​ಗೆ ಡಗೌಟ್ ಸೇರಿದ ಶಾರುಖ್ ಖಾನ್; ವಾರೆವ್ಹಾ ಎನ್ನುವ ಗ್ರೀನ್ ರಿಯಾಕ್ಷನ್ ವೈರಲ್

ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ (ಮೇ 4) ನಡೆದ ಐಪಿಎಲ್​​ನ 52ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಆರ್​​ಸಿಬಿ (RCB vs GT) ಭರ್ಜರಿ 4 ರನ್​ಗಳಿಂದ ಗೆದ್ದು ಬೀಗಿತು. ಅದ್ಭುತ ಬೌಲಿಂಗ್​ ಪ್ರದರ್ಶಿಸಿದ ಆರ್​ಸಿಬಿ, ಶುಭ್ಮನ್ ಗಿಲ್ ನೇತೃತ್ವದ ತಂಡವನ್ನು 147 ರನ್​ಗಳಿಗೆ ಕಟ್ಟಿ ಹಾಕಿತು. ಆದರೆ ಗಮನ ಸೆಳೆದಿದ್ದು ಮಾತ್ರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಅವರ ಸೂಪರ್​ಮ್ಯಾನ್ ಶೈಲಿಯ ರನೌಟ್. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾಗುತ್ತಿದ್ದ ಜಿಟಿ ತಂಡದ ಶಾರುಖ್ ಖಾನ್ ಅವರನ್ನು ವಿರಾಟ್ ಕೊಹ್ಲಿ ಮಿಂಚಿನ ರನೌಟ್ ಮಾಡಿದ್ದು ಅದ್ಭುತವಾಗಿತ್ತು. ಟಾಸ್ ಸೋತು ಗುಜರಾತ್ ಮೊದಲು ಬ್ಯಾಟಿಂಗ್ ನಡೆಸಿತು. ಪವರ್​ಪ್ಲೇನಲ್ಲಿ 3 ವಿಕೆಟ್ ನಷ್ಟಕ್ಕೆ 23 ರನ್ ಗಳಿಸಿದ್ದ ಗುಜರಾತ್​ಗೆ, ಡೇವಿಡ್ ಮಿಲ್ಲರ್ ಮತ್ತು ಶಾರುಖ್ ಖಾನ್ 4ನೇ ವಿಕೆಟ್‌ಗೆ 61 ರನ್ ಸೇರಿಸಿ ಅಲ್ಪಮೊತ್ತಕ್ಕೆ ಕುಸಿಯುವುದರಿಂದ ಪಾರು ಮಾಡಿದರು. ಇಬ್ಬರು ಸಹ 30 ಪ್ಲಸ್ ಸ್ಕೋರ್ ಮಾಡಿ ಆರ್​​ಸಿಬಿ ಬೌಲರ್​ಗಳ ಮೇಲೆ ಹಿಡಿತ ಸಾಧಿಸುತ್ತಿದ್ದರು.

ಆದರೆ ಕರಣ್ ಶರ್ಮಾ 12ನೇ ಓವರ್‌ನಲ್ಲಿ ಮಿಲ್ಲರ್ ವಿಕೆಟ್ ಉರುಳಿಸಿ ಆರ್​​ಸಿಬಿಗೆ ಮೇಲುಗೈ ತಂದುಕೊಟ್ಟರು. ಮರು ಓವರ್​​ನಲ್ಲೇ ಶಾರೂಖ್ ಖಾನ್​ ಅಚ್ಚರಿಯ ರನೌಟ್​ಗೆ ಬಲಿಯಾದರು. ವಿಜಯ್​ ಕುಮಾರ್​ ವೈಶಾಕ್ ಎಸೆದ 13ನೇ ಓವರ್‌ನ 4ನೇ ಎಸೆತವನ್ನು ಸ್ಟ್ರೈಕ್​ನಲ್ಲಿದ್ದ ರಾಹುಲ್ ತೆವಾಟಿಯಾ, ಡಿಫೆಂಡ್ ಮಾಡುವಲ್ಲಿ ಯಶಸ್ವಿಯಾದರು. ಆಗ ನಾನ್​ಸ್ಟ್ರೈಕ್​ನಲ್ಲಿ ಶಾರುಖ್, ರನ್​ಗಾಗಿ ಕ್ರೀಸ್​ನ ಅರ್ಧಭಾಗಕ್ಕೆ ಓಡಿದರು. ಆಗ ಶರ ವೇಗದಲ್ಲಿ ನುಗ್ಗಿದ ಕೊಹ್ಲಿ, ಸೆಕೆಂಡ್​ಗಳಲ್ಲಿ ನಾನ್​ಸ್ಟ್ರೈಕರ್​ ವಿಕೆಟ್ ಬೇಲ್ಸ್ ಎಗಿರಿದ್ದರು.

ಸೂಪರ್​​ಮ್ಯಾನ್​ ಶೈಲಿಯಲ್ಲಿ ಮಿಂಚಿನ ರನೌಟ್​ ಮಾಡಿದ ವಿರಾಟ್, ತಮ್ಮ ಪ್ರಸಿದ್ಧ ಫೀಲ್ಡಿಂಗ್ ಕೌಶಲ್ಯವನ್ನು ಜಗತ್ತಿಗೆ ತೋರಿಸಿದರು. ವಿರಾಟ್ ಕೊಹ್ಲಿ ಎಸೆದ ಚೆಂಡು ವಿಕೆಟ್ ಬೇಲ್ಸ್ ಎಗರಿಸುತ್ತಿದ್ದಂತೆ ಕ್ಯಾಮರೂನ್ ಗ್ರೀನ್ ಒಂದು ಕ್ಷಣ ದಂಗಾಗಿ ವಾರೆವ್ಹಾ ಎನ್ನುವ ರಿಯಾಕ್ಷನ್ ಕೊಟ್ಟರು. 24 ಎಸೆತಗಳಲ್ಲಿ 37 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದ ಶಾರುಖ್, ಜಿಟಿ ಪರ ಗರಿಷ್ಠ ಸ್ಕೋರರ್​ ಆದರು. ಟೈಟಾನ್ಸ್ 19.3 ಓವರ್‌ಗಳಲ್ಲಿ 147ಕ್ಕೆ ಆಲೌಟ್ ಆಯಿತು. ಈ ರನೌಟ್ ವಿಡಿಯೋ ಟಾಪ್ ಟ್ರೆಂಡ್​​ನಲ್ಲಿದೆ.

ವಿರಾಟ್ ಕೊಹ್ಲಿ ಬ್ಯಾಟಿಂಗ್​ನಲ್ಲೂ ಅಬ್ಬರ

148 ರನ್​ಗಳ ಸಾಧಾರಣ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ, ಮೊದಲ ಓವರ್​​ನಲ್ಲೇ ಭರ್ಜರಿ 2 ಸಿಕ್ಸರ್ ಬಾರಿಸಿ ಸ್ಪೋಟಕ ಆರಂಭ ಒದಗಿಸಿದರು. ಕೊಹ್ಲಿ, ಫಾಫ್ ಡು ಪ್ಲೆಸಿಸ್ ಬೌಂಡರಿ-ಸಿಕ್ಸರ್​ಗಳ ಸುರಿಮಳೆಗೈದರು. ಫಾಫ್​ ಬೆಂಡೆತ್ತಲು ಶುರುವಿಟ್ಟ ಕಾರಣ ಕೊಹ್ಲಿ ರನ್​ ವೇಗವನ್ನು ನಿಧಾನಗೊಳಿಸಿದರು. ಬಳಿಕ 5ನೇ ಓವರ್​​ನಲ್ಲಿ ಮತ್ತೆ ಚಾರ್ಜ್​ ಮಾಡಿದ ವಿರಾಟ್, ಆಗಲೂ 2 ಸಿಕ್ಸರ್ ಚಚ್ಚಿದರು. 27 ಎಸೆತಗಳಲ್ಲಿ 2 ಬೌಂಡರಿ, 4 ಸಿಕ್ಸರ್​ ಸಹಿತ 42 ರನ್ ಬಾರಿಸಿದರು. ಆದರೆ ನೂರ್ ಅಹ್ಮದ್ ಬೌಲಿಂಗ್​​ನಲ್ಲಿ ಕೀಪರ್​ಗೆ ಕ್ಯಾಚ್​ ಔಟಾದರು. ಫಾಫ್ 23 ಎಸೆತಗಳಲ್ಲಿ 10 ಬೌಂಡರಿ, 3 ಸಿಕ್ಸರ್ ಸಹಿತ 64 ರನ್ ಚಚ್ಚಿದರು.

ಆರ್​ಸಿಬಿಗೆ ಹ್ಯಾಟ್ರಿಕ್ ಗೆಲುವು

ಸತತ ಸೋಲುಗಳಿಂದ ಕಂಗೆಟ್ಟಿದ್ದ ಆರ್​ಸಿಬಿ ಇದೀಗ ಹ್ಯಾಟ್ರಿಕ್ ಜಯ ಸಾಧಿಸಿದೆ. ಗೆದ್ದಿರುವ ಕಳೆದ 3 ಪಂದ್ಯಗಳ ಪೈಕಿ ಗುಜರಾತ್ ವಿರುದ್ಧವೇ ಎರಡು ಸಲ ಜಯಿಸಿದೆ. ಸನ್​​ರೈಸರ್ಸ್ ಹೈದರಾಬಾದ್ ವಿರುದ್ಧವೂ ಅಮೋಘ ಗೆಲುವು ಸಾಧಿಸಿತ್ತು. ಗುಜರಾತ್ 20 ಓವರ್​​ಗಳಲ್ಲಿ 147 ರನ್​​ಗಳಿಗೆ ಆಲೌಟ್ ಆಗಿತ್ತು. ಈ ಗುರಿ ಬೆನ್ನಟ್ಟಿದ ಆರ್​ಸಿಬಿ, 13.4 ಓವರ್​​ಗಳಲ್ಲೇ 148 ರನ್ ಗಳಿಸಿ ಎದುರಾಳಿ ತಂಡ ಮಣಿಸಿತು. ಇದರೊಂದಿಗೆ ಆರ್​ಸಿಬಿ ಪ್ಲೇಆಫ್​ ಪ್ರವೇಶಿಸುವ ಕನಸು ಇನ್ನೂ ಜೀವಂತವಾಗಿದೆ. ಅಂಕಪಟ್ಟಿಯಲ್ಲಿ 10ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. ಒಟ್ಟು 11 ಪಂದ್ಯಗಳಲ್ಲಿ 7 ಸೋಲು, 4 ಗೆಲುವು ಸಾಧಿಸಿದೆ. 8 ಅಂಕ ಸಂಪಾದಿಸಿದೆ.

Whats_app_banner