The Goat Life review: ಆಡುಜೀವಿತಂ ಸಿನಿಮಾ ಹೇಗಿದೆ? ಪೃಥ್ವಿರಾಜ್‌ ಸುಕುಮಾರನ್‌ ಅಪೂರ್ವ ಅಭಿನಯ, ಸ್ವಾತಂತ್ರ್ಯದಡೆಗೆ ಪ್ರಯಾಸಕರ ಪ್ರಯಾಣ-mollywood news the goat life movie review actor prithviraj sukumaran delivers extraordinary performance pcp ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  The Goat Life Review: ಆಡುಜೀವಿತಂ ಸಿನಿಮಾ ಹೇಗಿದೆ? ಪೃಥ್ವಿರಾಜ್‌ ಸುಕುಮಾರನ್‌ ಅಪೂರ್ವ ಅಭಿನಯ, ಸ್ವಾತಂತ್ರ್ಯದಡೆಗೆ ಪ್ರಯಾಸಕರ ಪ್ರಯಾಣ

The Goat Life review: ಆಡುಜೀವಿತಂ ಸಿನಿಮಾ ಹೇಗಿದೆ? ಪೃಥ್ವಿರಾಜ್‌ ಸುಕುಮಾರನ್‌ ಅಪೂರ್ವ ಅಭಿನಯ, ಸ್ವಾತಂತ್ರ್ಯದಡೆಗೆ ಪ್ರಯಾಸಕರ ಪ್ರಯಾಣ

The Goat Life movie review: ನಜೀಬ್‌ ಪಾತ್ರವನ್ನು ಇನ್ಯಾರೂ ಇಷ್ಟು ಅದ್ಭುತವಾಗಿ ಮಾಡಲು ಸಾಧ್ಯವಿಲ್ಲ ಎಂಬಂತೆ ಪೃಥ್ವಿರಾಜ್‌ ಸುಕುಮಾರನ್‌ ಅವರು ಆಡುಜೀವಿತಂ ಸಿನಿಮಾದ ಪಾತ್ರದಲ್ಲಿ ಜೀವಿಸಿದ್ದಾರೆ. ದಿ ಗೋಟ್‌ ಲೈಫ್‌ ಸಿನಿಮಾದ ಚಿತ್ರವಿಮರ್ಶೆ ಇಲ್ಲಿದೆ ಓದಿ.

ದಿ ಗೋಟ್‌ ಲೈಪ್‌ ಸಿನಿಮಾ ವಿಮರ್ಶೆ
ದಿ ಗೋಟ್‌ ಲೈಪ್‌ ಸಿನಿಮಾ ವಿಮರ್ಶೆ

The Goat Life movie review: ಸರ್ವೈವಲ್‌ ಡ್ರಾಮಾ ಅಥವಾ ಬದುಕಿ ಉಳಿಯಲು ಪ್ರಯತ್ನಿಸುವ ಕಥೆಯ ಸಿನಿಮಾಗಳು ಇತರೆ ಸಿನಿಮಾಗಳಿಗಿಂತ ಸದಾ ಭಿನ್ನವಾಗಿ ಇರುತ್ತವೆ. ಇತ್ತೀಚೆಗೆ ತೆರೆಕಂಡ ಸೂಪರ್‌ಹಿಟ್‌ ಮಲಯಾಳಂ ಚಿತ್ರ ಮಂಜುಮ್ಮೆಲ್ ಬಾಯ್ಸ್ ಸಿನಿಮಾ ಈಗಾಗಲೇ ಇದನ್ನು ಸಾಬೀತುಪಡಿಸಿದೆ. ಇದೇ ಸಮಯದಲ್ಲಿ ಮತ್ತೊಂದು ಸರ್ವೈವಲ್‌ ಸಿನಿಮಾ ಬಿಡುಗಡೆಯಾಗಿದೆ. ಆಡುಜೀವಿತಂ ಅಥವಾ ದಿ ಗೋಟ್‌ ಲೈಪ್‌ ಸಿನಿಮಾದಲ್ಲಿ ಪೃಥ್ವಿರಾಜ್‌ ಸುಕುಮಾರನ್‌ ನಟಿಸಿದ್ದಾರೆ. ನಟಿಸಿದ್ದಾರೆ ಅಂದರೆ ಕಡಿಮೆಯಾಗಬಹುದು, ಈ ಸಿನಿಮಾದಲ್ಲಿ ನಜೀಬ್‌ ಪಾತ್ರದಲ್ಲಿ ಅವರು ಜೀವಿಸಿದ್ದಾರೆ ಅಥವಾ ಪರಕಾಯ ಪ್ರವೇಶ ಮಾಡಿದ್ದಾರೆ ಎನ್ನಬಹುದು. ಮಂಜುಮ್ಮೇಲ್‌ ಬಾಯ್ಸ್‌ ಮತ್ತು ಆಡುಜೀವಿತಂ ನಿಜಜೀವನ ಆಧರಿತ ಸಿನಿಮಾವಾಗಿದ್ದರೂ ಸಿನಿಮಾದ ಅಂಶಗಳು ವಿಭಿನ್ನವಾಗಿವೆ. ಬ್ಲೆಸ್ಸಿ ನಿರ್ದೇಶಿಸಿದ ದಿ ಗೋಟ್ ಲೈಫ್ ಸಿನಿಮಾವು ಬೆನ್ಯಾಮಿನ್ ಅವರ ಕಾದಂಬರಿ ದಿ ಗೋಟ್ ಡೇಸ್ ಆಧರಿತವಾಗಿದೆ. ಮಲಯಾಳಿ ವಲಸಿಗ ನಜೀಬ್‌ ಮಹಮ್ಮದ್‌ ಅವರ ಬದುಕಿನ ಸತ್ಯಘಟನೆ ಆಧರಿತ ಸಿನಿಮಾ ಇದಾಗಿದೆ.

ದಿ ಗೋಟ್‌ ಲೈಫ್‌ ಸಿನಿಮಾದ ಕಥೆಯೇನು?

ನಜೀಬ್‌ (ಪೃಥ್ವಿರಾಜ್‌ ಸುಕುಮಾರನ್‌) ತನ್ನ ಪತ್ನಿ ಸೈನಿ (ಅಮಲಾ ಪೌಲ್‌) ಜತೆ ಕೇರಳದಲ್ಲಿ ಸುಂದರವಾದ ಜೀವನ ನಡೆಸುತ್ತಿರುವ ವ್ಯಕ್ತಿ. ತನ್ನ ಕುಟುಂಬದ ಜೀವನವನ್ನು ಇನ್ನಷ್ಟು ಸುಧಾರಿಸುವ ನಿಟ್ಟಿನಲ್ಲಿ ಆತ ಗಲ್ಫ್‌ಗೆ ಕೆಲಸಕ್ಕೆ ಹೋಗಲು ನಿರ್ಧರಿಸುತ್ತಾನೆ. ತನ್ನ ಸ್ನೇಹಿತ ಹಕೀಮ್‌ ಜತೆ ಅಲ್ಲಿಗೆ ತಲುಪುತ್ತಾನೆ. ಅಲ್ಲಿ ಸ್ಥಳೀಯ ವ್ಯಕ್ತಿಯೊಬ್ಬನನ್ನು ಭೇಟಿಯಾಗುತ್ತಾನೆ. ತನ್ನನ್ನು ಅವರ ಬಾಸ್‌ನಲ್ಲಿಗೆ ಕರೆದುಕೊಂಡು ಹೋಗುತ್ತಾರೆ ಎಂದುಕೊಳ್ಳುತ್ತಾನೆ ನಜೀಬ್‌. ಆದರೆ, ಗುರುತು ಪರಿಚಯವಿಲ್ಲದ ಸ್ಥಳವೊಂದಕ್ಕೆ ಈತನನ್ನು ಕರೆದೊಯ್ಯಲಾಗುತ್ತದೆ. ಸ್ಥಳೀಯ ಕುರಿಗಾಹಿ ಜತೆಗೆ ಮರುಭೂಮಿಯ ಮಧ್ಯಭಾಗದಲ್ಲಿ ಈತನನ್ನು ಬಿಡಲಾಗುತ್ತದೆ. ಹೊರಪ್ರಪಂಚದ ಯಾವುದೇ ಕನೆಕ್ಷನ್‌ ಇವರಿಗೆ ಇರುವುದಿಲ್ಲ. ಈತನಿಗೆ ಮಲಯಾಳಂ ಭಾಷೆ ಮಾತ್ರ ಗೊತ್ತು. ತನ್ನ ಬಾಸ್‌ ಕಾಫೀಲ್‌ ಜತೆಗೆ ಸಂವಹನ ನಡೆಸಲು ಮಾಡಿದ ಯಾವುದೇ ಪ್ರಯತ್ನಗಳು ಸಫಲವಾಗುವುದಿಲ್ಲ.

ಮರುಭೂಮಿಯ ಮಧ್ಯದಲ್ಲಿ ಆಡುಗಳನ್ನು ಮೇಯಿಸುವ ಜೀತದಾಳುವಿನಂತೆ ಈತನ ಬದುಕು ಬದಲಾಗುತ್ತದೆ. ಕೊಂಚ ಆಹಾರ ಮಾತ್ರ ನೀಡಲಾಗುತ್ತದೆ. ಕುಡಿಯಲು ನೀರು ಇರುವುದಿಲ್ಲ. ಅಲ್ಲಿಂದ ತಪ್ಪಿಸಿಕೊಂಡು ಮನೆಗೆ ವಾಪಸ್‌ ಬರಲು ಬಯಸುತ್ತಾನೆ. ದಿನಗಳು, ವಾರಗಳು, ತಿಂಗಳುಗಳು, ವರ್ಷಗಳು ಉರುಳುತ್ತವೆ. ಅಲ್ಲಿನ ಚಿತ್ರಹಿಂಸೆ, ಗುಲಾಮಗಿರಿಯ ಭಯಾನಕ ಜೀವನದಲ್ಲಿ ನಜೀಬ್‌ ಹೇಗೆ ಬದುಕುತ್ತಾನೆ? ಮನೆಗೆ ವಾಪಸ್‌ ಬರಲು ಸಾಧ್ಯವಾಗುತ್ತದೆಯೇ? ಇಬ್ರಾಹಿಂ ಖಾದಿರಿ (ಜಿಮ್ಮಿ ಜೀನ್-ಲೂಯಿಸ್) ಮತ್ತು ಹಕೀಮ್ ಬಂದ ಬಳಿಕ ಈತನ ಬದುಕಿನಲ್ಲಿ ಏನು ಬದಲಾವಣೆಯಾಗುತ್ತದೆ? ಇತ್ಯಾದಿ ಪ್ರಶ್ನೆಗಳಿಗೆ ಚಿತ್ರ ಉತ್ತರಿಸುತ್ತದೆ.

ಸಿನಿಮಾದಲ್ಲಿ ಇಷ್ಟವಾಗುವ ವಿಚಾರಗಳು

ನಜೀಬ್‌ ಬದುಕಿನ ಕಥೆಯನ್ನು ಅದೇ ರೀತಿ ತರಲು ನಿರ್ದೇಶಕ ಬ್ಲೆಸ್ಸಿ ಪ್ರಯತ್ನಿಸಿದ್ದಾರೆ. ಇವರು ಅತ್ಯಂತ ಕಠಿಣವಾದ ಕಥೆಯನ್ನು ಸಿನಿಮಾಕ್ಕಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಇದಕ್ಕೆ ಇವರನ್ನು ಅಭಿನಂದಿಸಲೇಬೇಕು. ಅವರಿಗೆ ನಜೀಬ್‌ನ ಕಥೆಯನ್ನು ಹೇಳುವ ಆತುರವಿಲ್ಲ. ನಜೀಬ್‌ ಈ ಹೊಸ ಜಗತ್ತಿನಲ್ಲಿ ಹೇಗೆ ಬದಲಾಗುತ್ತಾನೆ, ಹೇಗೆ ಹೊಂದಿಕೊಳ್ಳುತ್ತಾನೆ ಎನ್ನುವು ಪ್ರತಿಹಂತವನ್ನೂ ನೀವು ತೆರೆಯಮೇಲೆ ನೋಡುವಿರಿ. ಸಂತೋಷ ಮತ್ತು ಆರೋಗ್ಯವಂತ ನಜೀಬ್‌ ಕೇರಳದ ಹಿನ್ನೀರಿನಲ್ಲಿ ಈಜುವ ಚಿತ್ರಣದೊಂದಿಗೆ ಹಸಿವಿನಿಂದ ಬಳಲಿ, ಹತಾಶನಾಗಿ ತೆಳ್ಳಗಿನ ಶರೀರದಲ್ಲಿ ಮರುಭೂಮಿಯಲ್ಲಿ ಒರಟಾದ ಮೇಕೆಗಳ ನಡುವೆ ನಿರ್ಮಲವಾಗಿ ಬದುಕುವ ಸ್ಥಿತಿಗೆ ತಲುಪುವ ದೃಶ್ಯಗಳನ್ನು ನೋಡಬಹುದು.

ನಜೀಬ್‌ನ ಪ್ರತಿಯೊಂದು ಭಾವನೆಯನ್ನೂ, ಸಣ್ಣಸಣ್ಣ ವಿವರಗಳನ್ನೂ ಅದ್ಭುತವಾಗಿ ತೋರಿಸಲಾಗಿದೆ. ಆತನ ಮತ್ತು ಮೇಕೆಮರಿ ನಡುವಿನ ಕ್ಷಣ, ಮೇಕೆಗಳಿಗೆ ವಿದಾಯ ಹೇಳುವ ಸಂದರ್ಭ ಹೃದಯವನ್ನು ತಟ್ಟುತ್ತದೆ. ಸಿನಿಮಾದ ಮೊದಲಾರ್ಧದ ಬಹುಪಾಲು ಮರುಭೂಮಿ, ಮೇಕೆ ಹಿಂಡು ಮತ್ತು ನರಳುತ್ತಿರುವ ನಜೀಬ್‌ನ ಬದುಕನ್ನು ನೋಡಬಹುದು. ದ್ವಿತೀಯಾರ್ಧದಲ್ಲಿ ನಜೀಬ್ ಮತ್ತು ಹಕೀಮ್ ಅವರ ಸ್ವಾತಂತ್ರ್ಯದ ಕಡೆಗಿನ ಪ್ರಯಾಸಕರ, ಅಸಾಧ್ಯವಾದ ಪ್ರಯಾಣವಿದೆ.

ಗಮನ ಸೆಳೆಯುವ ದೃಶ್ಯಗಳು

ನಜೀಬ್ ಆಗಿ ಪೃಥ್ವಿರಾಜ್ ಸುಕುಮಾರನ್ ಅಸಾಧಾರಣ ಅಭಿನಯ ನೀಡಿದ್ದಾರೆ. ಅವರು ನಜೀಬ್ ಪಾತ್ರದಲ್ಲಿ ಅಕ್ಷರಶಃ ಜೀವಿಸಿದ್ದಾರೆ. ನಟನೆಗಾಗಿ ಅವರ ಬದ್ಧತೆಯನ್ನು ಶ್ಲಾಘಿಸಲೇಬೇಕು. ಮಲಯಾಳಂ ನಟ ತಮ್ಮ ತೂಕ ಇಳಿಸಿಕೊಂಡು ಗಡ್ಡ, ಕಪ್ಪು, ಹಲ್ಲು, ಕೊಳಕು ಉಗುರು... ಹೀಗೆ ಈ ಪಾತ್ರಕ್ಕಾಗಿ ತಮ್ಮ ಪ್ರತಿಭೆಯನ್ನೂ ಧಾರೆ ಎರೆದಿದ್ದಾರೆ. ಈ ಪಾತ್ರವನ್ನು ಪೃಥ್ವಿರಾಜ್‌ ಹೊರತುಪಡಿಸಿ ಬೇರೆ ಯಾರೇ ನಟರಿಗೆ ಮಾಡಲು ಸಾಧ್ಯವಿಲ್ಲ ಎನ್ನುವಂತಹ ಹಲವು ದೃಶ್ಯಗಳು ಇವೆ. ಉದಾಹರಣೆಗೆ ತೆಳ್ಳಗಿರುವ ಮತ್ತು ಹಲವು ವರ್ಷಗಳ ನಂತರ ಸ್ನಾನ ಮಾಡಲು ನೀರಿನ ತೊಟ್ಟಿಯತ್ತ ಬೆತ್ತಲೆಯಾಗಿ ನಡೆಯುವ ದೃಶ್ಯವು ಭಾವನಾತ್ಮಕವಾಗಿ ಹೃದಯವನ್ನು ತಟ್ಟುತ್ತದೆ. ಜಿಮ್ಮಿ ಜೀನ್-ಲೂಯಿಸ್, ತಾಲಿಬ್ (ಕಫೀಲ್) ಮತ್ತು ಕೆಆರ್ ಗೋಕುಲ್ (ಹಕೀಮ್) ಅಭಿನಯವೂ ಅದ್ಭುತ. ಕೆಲವೇ ಪಾತ್ರಗಳಲ್ಲಿ ಮಾತ್ರ ಅಮಲಾ ಪೌಲ್‌ ಕಾಣಿಸಿಕೊಂಡಿದ್ದಾರೆ. ತಮ್ಮ ಪಾತ್ರಕ್ಕೆ ಎಷ್ಟು ಅಗತ್ಯವೋ ಅಷ್ಟನ್ನು ನೀಡಿದ್ದಾರೆ.

ಅಡವಿಜೀವಿತಂ ಸಿನಿಮಾ ವಿಮರ್ಶೆ
ಅಡವಿಜೀವಿತಂ ಸಿನಿಮಾ ವಿಮರ್ಶೆ

ತಾಂತ್ರಿಕವಾಗಿಯೂ ಈ ಸಿನಿಮಾ ಅದ್ಭುತ. , ಸುನಿಲ್ ಕೆಎಸ್ ಸಿನಿಮಾಟೊಗ್ರಫಿಯೂ ಈ ಸಿನಿಮಾದ ಜೀವಾಳ. ಹಲವು ದೃಶ್ಯಗಳು ಮನಮುಟ್ಟುವಂತೆ ಮಾಡಿದ್ದಾರೆ. ನಜೀಬ್‌ ಅವರ ಪ್ರಯಾಣದ ಪ್ರತಿಯೊಂದು ಅಂಶದ ಮೇಲೂ ಕ್ಯಾಮೆರಾ ಕಣ್ಣನ್ನು ಇಟ್ಟಿದ್ದಾರೆ. ನಜೀಬ್‌ ಅನುಭವಿಸುವ ಬಾಯಾರಿಕೆಯು ನಮ್ಮ ಕಣ್ಣಿಗೆ, ಹೃದಯಕ್ಕೆ ತಾಗುವಂತೆ ಶೂಟ್‌ ಮಾಡಿದ್ದಾರೆ. ಆತನ ಒಣಗಿದ ತುಟಿಗಳನ್ನು ನೀರು ತಣಿಸುವಾಗ ನಿಮಗೂ ನೀರು ಕುಡಿಯಬೇಕು ಎಂದೆನಿಸಬಹುದು.

ಎಆರ್‌ ರೆಹಮಾನ್‌ ಸಂಗೀತ

ಈ ಸಿನಿಮಾವನ್ನು ಮತ್ತೊಂದು ಹಂತ ಮೇಲಕ್ಕೆ ಕೊಂಡೊಯ್ಯುವಲ್ಲಿ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ ಹಿನ್ನೆಲೆ ಸಂಗೀತದ ಪಾತ್ರವೂ ಪ್ರಮುಖವಾದದ್ದು. ಚಿತ್ರದ ಧ್ವನಿ ಮತ್ತು ಭಾವನೆಗಳಿಗೆ ತಕ್ಕಂತೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಅರೇಬಿಕ್, ಭಾರತೀಯ, ಇಸ್ಲಾಮಿಕ್ ಸೇರಿದಂತೆ ಹಲವು ಹಿನ್ನೆಲೆ ಸಂಗೀತಗಳ ಮಿಳಿತವಿದೆ. ಕೇರಳದ ಹಿನ್ನೀರಿನಿಂದ ಗಲ್ಫ್‌ನ ಭೀಕರ ಮರುಭೂಮಿಯ ಮರಳು ಬಿರುಗಾಳಿಯವರೆಗೆ ನಜೀಬ್‌ನ ಸುಖದುಃಖಗಳನ್ನು ಭಾವನಾತ್ಮಕವಾಗಿ ಕನೆಕ್ಟ್‌ ಮಾಡುವಲ್ಲಿ ಸಂಗೀತದ ಕೊಡುಗೆಯೂ ಇದೆ.

ಅಂತಿಮ ಅಭಿಪ್ರಾಯ

ಸುಮಾರು ಮೂರು ಗಂಟೆಯ ಅವಧಿಯ ಸಿನಿಮಾವಿದು. ಕೆಲವೊಂದು ಭಾಗದಲ್ಲಿ ದೀರ್ಘವಾದಂತೆ ಅನಿಸಬಹುದು. ದ್ವಿತೀಯಾರ್ಧದಲ್ಲಿ ಕೆಲವು ಕಡೆ ಬೋರ್‌ ಹೊಡೆಸಬಹುದು. ಆದರೆ ದೊಡ್ಡ ಪರದೆಯಲ್ಲಿ ದಿ ಗೋಟ್‌ ಲೈಫ್‌ ಸಿನಿಮಾ ನೋಡುವುದು ನಿಜಕ್ಕೂ ಒಂದು ಅನನ್ಯ ಅನುಭವವಾಗುತ್ತದೆ.

ಚಿತ್ರವಿಮರ್ಶೆ: ಲತಾ ಶ್ರೀನಿವಾಸನ್‌, ಹಿಂದೂಸ್ತಾನ್‌ ಟೈಮ್ಸ್‌

ಕನ್ನಡಕ್ಕೆ: ಪ್ರವೀಣ್‌ ಚಂದ್ರ ಪುತ್ತೂರು, ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ

mysore-dasara_Entry_Point