Juhi Chawla: ದಕ್ಷಿಣದಲ್ಲಿ ಸಾಕಷ್ಟು ನಟಿಯರಿದ್ರೂ ಪ್ರೇಮಲೋಕ ಸಿನಿಮಾಗೆ ರವಿಚಂದ್ರನ್ ನಾಯಕಿಯಾಗಿ ಜೂಹಿ ಚಾವ್ಲಾ ಕರೆತಂದಿದ್ದು ಇದೇ ಕಾರಣಕ್ಕೆ
ಭಾಷೆ ಗೊತ್ತಿಲ್ಲದಿದ್ದರೂ ನಮ್ಮ ಸಿನಿಮಾದಲ್ಲಿ ನಟಿಸುವಾಗ ಆಕೆ 2ನೇ ಟೇಕ್ ತೆಗೆದುಕೊಂಡ ಉದಾಹರಣೆಯೇ ಇಲ್ಲ. ಡೈಲಾಗ್ ಅಭ್ಯಾಸ ಮಾಡದೆ ಜೂಹಿ ಎಂದಿಗೂ ಕ್ಯಾಮರಾ ಮುಂದೆ ಬರುತ್ತಿರಲಿಲ್ಲ.
ಕ್ರೇಜಿಸ್ಟಾರ್ ರವಿಚಂದ್ರನ್ ಎಂದರೆ ತಕ್ಷಣ ನೆನಪಿಗೆ ಬರುವುದು 'ಪ್ರೇಮಲೋಕ' ಸಿನಿಮಾ. ವೃತ್ತಿ ಜೀವನದಲ್ಲಿ ರವಿಚಂದ್ರನ್ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರೂ ಈ ಸಿನಿಮಾ ರವಿಮಾಮನ ಅಭಿಮಾನಿಗಳಿಗೆ ಬಹಳ ಸ್ಪೆಷಲ್. ಹಂಸಲೇಖ ಸಂಗೀತ ಸಂಯೋಜನೆಯ ಈ ಚಿತ್ರದ ಹಾಡುಗಳು ಇಂದಿಗೂ ಕಿವಿಯಲ್ಲಿ ಗುಂಯ್‌ಗುಟ್ಟುತ್ತಿದೆ.
ಚಿತ್ರದ ಕಥೆ, ಹಾಡುಗಳು, ಪಾತ್ರವರ್ಗ ಸೇರಿದಂತೆ ಈ ಸಿನಿಮಾದ ಪ್ರತಿ ವಿಚಾರವೂ ಸಿನಿಮಾಗೆ ಅಷ್ಟು ದೊಡ್ಡ ಹೆಸರು ತಂದು ನೀಡಿತು. ಈ ಚಿತ್ರದ ಮೂಲಕ ಬಾಲಿವುಡ್ ನಟಿ ಜೂಹಿ ಚಾವ್ಲಾ ಕನ್ನಡಕ್ಕೆ ಕಾಲಿಟ್ಟರು. 1984 ರಲ್ಲಿ ಜೂಹಿ ಚಾವ್ಲಾ ಮಿಸ್ ಇಂಡಿಯಾ ಪಟ್ಟ ಗೆದ್ದಿದ್ದರು. ಜೂಹಿ, ಮೊದಲು ನಟಿಸಿದ ಸಿನಿಮಾ ಹಿಂದಿಯ 'ಸುಲ್ತಾನತ್'. ಆದರೆ ಅದು ಆಕೆಗೆ ಹೆಸರು ತರಲಿಲ್ಲ. ನಂತರ ಆಕೆ ಕನ್ನಡದಲ್ಲಿ ನಟಿಸಿದ 'ಪ್ರೇಮಲೋಕ' ರಿಲೀಸ್ ಆಗಿದ್ದೇ ತಡ, ಜೂಹಿಗೆ ಹಿಂದಿಯಲ್ಲಿ ಒಂದರ ಹಿಂದೊಂದರಂತೆ ಆಫರ್ ಒಲಿಯಿತು. ಆಕೆಗೆ ಸ್ಟಾರ್ ನಟಿ ಪಟ್ಟ ಕೂಡಾ ದೊರೆಯಿತು. ದಕ್ಷಿಣದಲ್ಲಿ ಅಷ್ಟೆಲ್ಲಾ ನಾಯಕಿಯರಿದ್ದರೂ ರವಿಚಂದ್ರನ್ ಬಾಲಿವುಡ್‌ನಿಂದ ಜೂಹಿಯನ್ನು ಕರೆತರಲು ಕಾರಣ ಏನು ಎಂಬುದು ಎಲ್ಲರಿಗೂ ಕಾಡುವ ಪ್ರಶ್ನೆ. ಕೆಲವು ದಿನಗಳ ಹಿಂದೆ ಟಿವಿ 9 ವಾಹಿನಿಗೆ ನೀಡಿದ ವಿಶೇಷ ಸಂದರ್ಶನದಲ್ಲಿ ರವಿಚಂದ್ರನ್ ಈ ವಿಚಾರದ ಬಗ್ಗೆ ಮಾತನಾಡಿದ್ದರು.
ಜೂಹಿ ಚಾವ್ಲಾಗೂ ಮುನ್ನ 50 ನಟಿಯರನ್ನು ರಿಜೆಕ್ಟ್ ಮಾಡಿದ್ದ ರವಿಚಂದ್ರನ್
''ನಮಗೆ ಬಹಳ ಆಪ್ತರಾಗಿದ್ದ ರಾಮನಾಥನ್ ಎಂಬುವವರು ಮುಂಬೈನಲ್ಲಿ ( ಆಗಿನ ಬಾಂಬೆ) ಯಲ್ಲಿ ನೆಲೆಸಿದ್ದರು. ನಾವು ಮುಂಬೈಗೆ ಹೋದಾಗಲೆಲ್ಲಾ ಅವರ ಮನೆಯಲ್ಲೇ ಉಳಿದುಕೊಳ್ಳುತ್ತಿದ್ದೆವು. ಅದೇ ಸಮಯಕ್ಕೆ ನಮ್ಮ ಚಿತ್ರಕ್ಕೆ ಹೀರೋಯಿನ್ ಬೇಕಾಗಿತ್ತು. ನಮ್ಮ ಚಿತ್ರಕ್ಕೆ ಸ್ಕರ್ಟ್, ಸ್ವಿಮ್ ಸೂಟ್ ಹಾಕುವ, ವೆಸ್ಟರ್ನ್ ಕಲ್ಚರ್ ಫಾಲೋ ಮಾಡುವಂತೆ ಕಾಣುವ ನಾಯಕಿ ಬೇಕಿತ್ತು. ಆಗಲೇ ನಾವು 50 ಹುಡುಗಿಯರನ್ನು ನೋಡಿ ರಿಜೆಕ್ಟ್ ಮಾಡಿದ್ದೆವು. ನಮ್ಮ ದಕ್ಷಿಣದಲ್ಲಿ ಆಗ ಅಷ್ಟು ಬೋಲ್ಡ್ ಆಗಿ ನಟಿಸುವ ಸಂಪ್ರದಾಯ ಇನ್ನೂ ಇರಲಿಲ್ಲ. ರಾಮನಾಥನ್ ಪರಿಚಯಿಸಿದ ಜೂಹಿ ಚಾವ್ಲಾ ನೋಡಿ, ಫೋಟೋಶೂಟ್ ಮಾಡಿಸಿದ ನಂತರ ನಮ್ಮ ಚಿತ್ರಕ್ಕೆ ಈಕೆ ಪರ್ಫೆಕ್ಟ್ ಎನಿಸಿತು.''
''ಅಷ್ಟೇ ಅಲ್ಲ, ಜೂಹಿ ಬಹಳ ಶ್ರಮಜೀವಿ, ಇದುವರೆಗೂ ಆಕೆಯಷ್ಟು ಡೆಡಿಕೇಶನ್ ಮಾಡುವವರನ್ನು ನಾನು ನೋಡಿಲ್ಲ. ಭಾಷೆ ಗೊತ್ತಿಲ್ಲದಿದ್ದರೂ ನಮ್ಮ ಸಿನಿಮಾದಲ್ಲಿ ನಟಿಸುವಾಗ ಆಕೆ 2ನೇ ಟೇಕ್ ತೆಗೆದುಕೊಂಡ ಉದಾಹರಣೆಯೇ ಇಲ್ಲ. ಡೈಲಾಗ್ ಅಭ್ಯಾಸ ಮಾಡದೆ ಜೂಹಿ ಎಂದಿಗೂ ಕ್ಯಾಮರಾ ಮುಂದೆ ಬರುತ್ತಿರಲಿಲ್ಲ. ಮೊದಲ ದಿನವೇ ಆ ಹುಡುಗಿ ಸೆಟ್‌ನಲ್ಲಿದ್ದವರ ಮನಸ್ಸು ಗೆದ್ದಿದ್ದರು. ಆಕೆ ಇಂದಿಗೂ ನನಗೆ ಒಳ್ಳೆ ಫ್ರೆಂಡ್'' ಎಂದು ರವಿಚಂದ್ರನ್ ಪ್ರೇಮಲೋಕದ ಅನುಭವ ಹೇಳಿಕೊಂಡಿದ್ದಾರೆ.
ರವಿಚಂದ್ರನ್ ಕುಟುಂಬದೊಂದಿಗೆ ಉತ್ತಮ ಒಡನಾಟ
ರವಿಚಂದ್ರನ್ ಹೇಳಿದಂತೆ ಜೂಹಿ ಚಾವ್ಲಾಗೆ ಇಂದಿಗೂ ರವಿಚಂದ್ರನ್ ಹಾಗೂ ಅವರ ಕುಟುಂಬದೊಂದಿಗೆ ಉತ್ತಮ ಒಡನಾಟ ಇದೆ. 8 ವರ್ಷಗಳ ಹಿಂದೆ ಮನೋರಂಜನ್ ರವಿಚಂದ್ರನ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಾಗ ಈ ಚೆಲುವೆ ಮುಂಬೈನಿಂದ ಬಂದು ರವಿಚಂದ್ರನ್ ಪುತ್ರನಿಗೆ ಶುಭ ಹಾರೈಸಿದ್ದರು. ಹಾಗೇ 'ಪ್ರೇಮಲೋಕ' ನಂತರ ಹಿಂದಿ ಚಿತ್ರರಂಗದಲ್ಲಿ ಹೆಸರು ಗಳಿಸಿದ ನಂತರ ಕೂಡಾ ಜೂಹಿ ಚಾವ್ಲಾ ಕನ್ನಡದಲ್ಲಿ ರಣಧೀರ, ಕಿಂದರಿಜೋಗಿ, ಶಾಂತಿ ಕ್ರಾಂತಿ ಚಿತ್ರದಲ್ಲಿ ಕ್ರೇಜಿಸ್ಟಾರ್ ಜೊತೆ ನಟಿಸಿದರು. ರಮೇಶ್ ಅರವಿಂದ್ ನಟನೆಯ ಪುಷ್ಪಕವಿಮಾನ, ವೆರಿಗುಡ್ 10/10 ಸಿನಿಮಾಗಳಲ್ಲೂ ಜೂಹಿ ನಟಿಸಿದ್ದಾರೆ.
ರವಿಚಂದ್ರನ್ ಸಿನಿಮಾಗಳ ಬಗ್ಗೆ ಹೇಳುವುದಾದರೆ ದರ್ಶನ್ ತಂದೆ ಪಾತ್ರದಲ್ಲಿ ನಟಿಸಿದ್ದ 'ಕ್ರಾಂತಿ' ಸಿನಿಮಾ ಇತ್ತೀಚೆಗೆ ತೆರೆ ಕಂಡಿತ್ತು. ಅಲ್ಲಿಂದ ನಂತರ ಅವರು ಹೊಸ ಸಿನಿಮಾಗಳನ್ನು ಅನೌನ್ಸ್ ಮಾಡಿಲ್ಲ.