ಕನ್ನಡ ಸುದ್ದಿ  /  ಮನರಂಜನೆ  /  5 Years Of Mahanati: ಕೀರ್ತಿ ಸುರೇಶ್‌ ನಟನೆಯ ಮಹಾನಟಿ ಚಿತ್ರಕ್ಕೆ 5ರ ಸಂಭ್ರಮ; ಯಾರಿಂದಲೂ ಮರೆಯಲು ಸಾಧ್ಯವಿಲ್ಲ 2 ಹನಿ ಕಣ್ಣೀರಿನ ದೃಶ್ಯ

5 Years of Mahanati: ಕೀರ್ತಿ ಸುರೇಶ್‌ ನಟನೆಯ ಮಹಾನಟಿ ಚಿತ್ರಕ್ಕೆ 5ರ ಸಂಭ್ರಮ; ಯಾರಿಂದಲೂ ಮರೆಯಲು ಸಾಧ್ಯವಿಲ್ಲ 2 ಹನಿ ಕಣ್ಣೀರಿನ ದೃಶ್ಯ

ದೃಶ್ಯವೊಂದರಲ್ಲಿ ನಟಿ ಸಾವಿತ್ರಿ ತಮ್ಮ ಎಡಕಣ್ಣಿನಿಂದ ಮಾತ್ರ ಅಳಬೇಕಿತ್ತು. ಆದರೆ ಗ್ಲಿಸರಿನ್‌ ಬಾಟಲ್‌ ಒಡೆದಿದ್ದರಿಂದ ಅದು ದೊರೆತ ನಂತರ ಶೂಟಿಂಗ್‌ ಮಾಡಿದರಾಯ್ತು ಎಂದು ನಿರ್ದೇಶಕ ಪ್ಯಾಕ್‌ ಅಪ್‌ ಮಾಡುವಂತೆ ಹೇಳುತ್ತಾರೆ. ಆದರೆ ಆ ದೃಶ್ಯವನ್ನು ಗ್ಲಿಸರಿನ್‌ ಇಲ್ಲದೆ ಮಾಡುತ್ತೇನೆ ಎಂದು ನಟಿ ಸಾವಿತ್ರಿ ಭರವಸೆ ನೀಡುತ್ತಾರೆ.

ಮಹಾನಟಿ ಚಿತ್ರದ ದೃಶ್ಯ
ಮಹಾನಟಿ ಚಿತ್ರದ ದೃಶ್ಯ (PC: Twitter)

ಕೆಲವೊಂದು ಸಿನಿಮಾಗಳು ಎಷ್ಟು ವರ್ಷಗಳಾದರೂ ಸಿನಿ ಅಭಿಮಾನಿಗಳು ಮನಸ್ಸಲ್ಲಿ ಅಚ್ಚಳಿಯದೆ ಉಳಿಯುತ್ತವೆ. ಅದರಲ್ಲಿ ಕೀರ್ತಿ ಸುರೇಶ್‌ ಅಭಿನಯದ ಮಹಾನಟಿ ಕೂಡಾ ಒಂದು. ಈ ಚಿತ್ರದ ನಟನೆಯಾಗಿ ಕೀರ್ತಿ ಸುರೇಶ್‌ಗೆ ರಾಷ್ಟ್ರಪ್ರಶಸ್ತಿ ಕೂಡಾ ದೊರೆತಿತ್ತು. ಈ ಬ್ಲಾಕ್‌ ಬಸ್ಟರ್‌ ಸಿನಿಮಾ ಈಗ 5 ವರ್ಷಗಳನ್ನು ಪೂರೈಸಿದೆ.

ಟ್ರೆಂಡಿಂಗ್​ ಸುದ್ದಿ

ಖ್ಯಾತ ನಟಿ ಸಾವಿತ್ರಿ ಅವರ ಬಯೋಪಿಕ್‌, ಈ ಮಹಾನಟಿ ಸಿನಿಮಾ. 9 ಮೇ 2018ರಲ್ಲಿ ಈ ಸಿನಿಮಾ ತೆರೆ ಕಂಡಿತ್ತು. ತೆಲುಗು ಚಿತ್ರರಂಗದಲ್ಲಿ ತಯಾರಾದ ಬಯೋಪಿಕ್‌ ಸಿನಿಮಾಗಳಲ್ಲಿ ಮಹಾನಟಿ ಅತ್ಯುತ್ತಮ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಈ ಸಿನಿಮಾ ಬಿಡುಗಡೆ ಆದಾಗ ಬಹುತೇಕ ಚಿತ್ರಮಂದಿರಗಳಲ್ಲಿ ಯುವಕರಿಗಿಂತ ಹಿರಿಯ ನಾಗರಿಕರೇ ಹೆಚ್ಚಾಗಿ ತುಂಬಿದ್ದರು. ಇದಕ್ಕೆ ಈ ಸಿನಿಮಾ ಮೇಲೆ ಜನರಿಗೆ ಇದ್ದ ನಂಬಿಕೆ ಹಾಗೂ ನಟಿ ಸಾವಿತ್ರಿ ಅವರ ಮೇಲಿನ ಅಭಿಮಾನವೇ ಕಾರಣ.

ನಾಗ್‌ ಅಶ್ವಿನ್‌ ನಿರ್ದೇಶನದ ಸಿನಿಮಾ

ವೈಜಯಂತಿ ಮೂವೀಸ್‌ ಹಾಗೂ ಸ್ವಪ್ನ ಸಿನಿಮಾಸ್‌ ಬ್ಯಾನರ್‌ ಅಡಿಯಲ್ಲಿ ಈ ಚಿತ್ರವನ್ನು ಪ್ರಿಯಾಂಕಾ ದತ್‌ ನಿರ್ಮಿಸಿದ್ದರು. ಚಿತ್ರಕ್ಕೆ ನಾಗ್‌ ಅಶ್ವಿನ್‌ ಕಥೆ ಬರೆದು ನಿರ್ದೇಶನ ಮಾಡಿದ್ದರು. ಚಿತ್ರದ ಹಾಡುಗಳಿಗೆ ಮಿಕ್ಕಿ ಎಸ್‌ ಸಂಗೀತ ನೀಡಿದ್ದರು. ಚಿತ್ರದಲ್ಲಿ ತಂತ್ರಜ್ಞರಿಂದ ಹಿಡಿದು ಸ್ಟಾರ್‌ ಕಲಾವಿದರವರೆಗೂ ಎಲ್ಲರೂ ಈ ಚಿತ್ರಕ್ಕಾಗಿ ಸಾಕಷ್ಟು ಶ್ರಮ ವಹಿಸಿದ್ದರು. ಮಹಾನಟಿ ಚಿತ್ರದಲ್ಲಿ ಕೀರ್ತಿ ಸುರೇಶ್‌, ಸಮಂತಾ, ದುಲ್ಕರ್‌ ಸಲ್ಮಾನ್‌, ವಿಜಯ್‌ ದೇವರಕೊಂಡ, ಪ್ರಕಾಶ್‌ ರಾಜ್‌ ಹಾಗೂ ಇನ್ನಿತರ ನಟ-ನಟಿಯರು ಅಭಿನಯಿಸಿದ್ದರು. ಕೀರ್ತಿ ಸುರೇಶ್‌ ಸಾವಿತ್ರಿ ಪಾತ್ರದಲ್ಲಿ ಮೋಡಿ ಮಾಡಿದ್ದರೆ ದುಲ್ಕರ್‌ ಸಲ್ಮಾನ್‌ ಜೆಮಿನಿ ಗಣೇಶನ್‌ ಪಾತ್ರದಲ್ಲಿ ಮಿಂಚಿದ್ದರು.

ನಟಿ ಸಾವಿತ್ರಿ ಭಾರತೀಯ ಸಿನಿಮಾರಂಗದ ಅತ್ಯದ್ಭುತ ನಟಿಯರಲ್ಲಿ ಒಬ್ಬರು. 1950 ರಿಂದ 1980ವರೆಗೆ ಚಿತ್ರರಂಗವನ್ನು ಆಳಿದ ಈ ಮಹಾನ್‌ ನಟಿ ಅಭಿನಯ ಮಾತ್ರವಲ್ಲದೆ ಸಿನಿಮಾ ನಿರ್ದೇಶನ, ಹಿನ್ನೆಲೆ ಗಾಯನ, ಸಿನಿಮಾ ನಿರ್ಮಾಣದಲ್ಲೂ ತೊಡಗಿಸಿಕೊಂಡಿದ್ದರು. ಸಾವಿತ್ರಿ ಅವರ ಬಗ್ಗೆ ಅವರ ಸಮಕಾಲೀನ ನಟ-ನಟಿಯರು ಅವರ ವಿರುದ್ಧ ಕೆಲವೊಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದರು. ಆದರೆ ಮಹಾನಟಿ ಚಿತ್ರವನ್ನು ನೋಡಿದ ನಂತರ ಅನೇಕರಿಗೆ ಸಾವಿತ್ರಿ ಅವರು ಯಾರು ಏನು ಎಂಬುದು ತಿಳಿಯಿತು. ಸೋಲನ್ನು ಎಂದಿಗೂ ಒಪ್ಪಿಕೊಳ್ಳದ ಅವರ ವ್ಯಕ್ತಿತ್ವ ಹಾಗೂ ಕೀರ್ತಿ ಸುರೇಶ್‌ ಅವರ ನಟನೆ ನೋಡಿ ಬಹುತೇಕ ಎಲ್ಲರೂ ಭಾರವಾದ ಹೃದಯದಿಂದ ಚಿತ್ರಮಂದಿರದಿಂದ ಹೊರಗೆ ಬಂದಿದ್ದರು.

ಚಿತ್ರದಲ್ಲಿ ಗಮನ ಸೆಳೆದಿದ್ದ ಎರಡು ಹನಿ ಕಣ್ಣೀರಿನ ದೃಶ್ಯ

ಮಹಾನಟಿ ಚಿತ್ರದ ಅನೇಕ ದೃಶ್ಯಗಳು ಪ್ರೇಕ್ಷಕರ ಕಣ್ಣಿನಲ್ಲಿ ಇನ್ನೂ ಹಸಿರಾಗಿದೆ. ಅದರಲ್ಲೂ 2 ಹನಿ ಕಣ್ಣೀರಿನ ದೃಶ್ಯವನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಈಗಂತೂ ಅನೇಕ ಕಲಾವಿದರು ಎಮೋಷನಲ್‌ ದೃಶ್ಯಕ್ಕೆ ಗ್ಲಿಸರಿನ್‌ ಬಳಸುತ್ತಾರೆ. ಆದರೆ ಕೆಲವೇ ಕೆಲವು ನಟ-ನಟಿಯರು ನೈಸರ್ಗಿಕವಾಗಿ ಅಭಿನಯಿಸುತ್ತಾರೆ. ನಟಿ ಸಾವಿತ್ರಿ ಕೂಡಾ ಸಿನಿಮಾವೊಂದರ ಭಾವುಕ ದೃಶ್ಯದಲ್ಲಿ ನೈಜವಾಗಿ ಅಭಿನಯಿಸಿದ್ದರು.

ದೃಶ್ಯವೊಂದರಲ್ಲಿ ನಟಿ ಸಾವಿತ್ರಿ ತಮ್ಮ ಎಡಕಣ್ಣಿನಿಂದ ಮಾತ್ರ ಅಳಬೇಕಿತ್ತು. ಆದರೆ ಗ್ಲಿಸರಿನ್‌ ಬಾಟಲ್‌ ಒಡೆದಿದ್ದರಿಂದ ಅದು ದೊರೆತ ನಂತರ ಶೂಟಿಂಗ್‌ ಮಾಡಿದರಾಯ್ತು ಎಂದು ನಿರ್ದೇಶಕ ಪ್ಯಾಕ್‌ ಅಪ್‌ ಮಾಡುವಂತೆ ಹೇಳುತ್ತಾರೆ. ಆದರೆ ಆ ದೃಶ್ಯವನ್ನು ಗ್ಲಿಸರಿನ್‌ ಇಲ್ಲದೆ ಮಾಡುತ್ತೇನೆ ಎಂದು ನಟಿ ಸಾವಿತ್ರಿ ಭರವಸೆ ನೀಡುತ್ತಾರೆ. ಅದು ಅಷ್ಟು ಸುಲಭದ ಮಾತಲ್ಲ , ಒಂದೇ ಟೇಕ್‌ನಲ್ಲಿ ಮಾಡಬೇಕು ಎಂದು ನಿರ್ದೇಶಕರು ಸೂಚಿಸುತ್ತಾರೆ. ಕೊನೆಗೆ ನಿರ್ದೇಶಕರು ಹೇಳಿದಂತೆ ಎಡಗಣ್ಣಿನಿಂದ ಮಾತ್ರ 2 ಹನಿ ಕಣ್ಣೀರು ಬರುವಂತೆ ಸಾವಿತ್ರಿ ಅಭಿನಯಿಸುತ್ತಾರೆ. ಶಾಟ್‌ ಓಕೆ ಆಗುತ್ತಿದ್ದಂತೆ ಆಕೆಯ ಬಗ್ಗೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಈ ದೃಶ್ಯವನ್ನು ಸಿನಿಮಾಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ.

 

IPL_Entry_Point