Kannada News  /  Entertainment  /   Vani Jayaram Post Mortem Report
ಹೃದಯಾಘಾತದಿಂದ ನಿಧನರಾದ ಗಾಯಕಿ ವಾಣಿ ಜಯರಾಮ್
ಹೃದಯಾಘಾತದಿಂದ ನಿಧನರಾದ ಗಾಯಕಿ ವಾಣಿ ಜಯರಾಮ್

Vani Jayaram Post-mortem report: ಗಾಯಕಿ ವಾಣಿ ಜಯರಾಮ್‌ ನಿಗೂಢ ಸಾವು ಪ್ರಕರಣ...ಪೋಸ್ಟ್‌ ಮಾರ್ಟಂ ರಿಪೋರ್ಟ್‌ನಲ್ಲಿ ಏನಿದೆ..?

06 February 2023, 11:42 ISTHT Kannada Desk
06 February 2023, 11:42 IST

ಪೊಲೀಸರು ನೋಡಿದಾಗ ವಾಣಿ ಜಯರಾಮ್‌ ಅವರು ನೆಲಕ್ಕೆ ಉರುಳಿ ಬಿದ್ದಿದ್ದು, ಅವರ ಹಣೆಯಲ್ಲಿ ಗಾಯದ ಗುರುತು ಕಂಡುಬಂದಿತ್ತು. ಈ ಕಾರಣದಿಂದ ಅವರದ್ದು ಸಹಜ ಸಾವಲ್ಲ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅವರ ದೇಹವನ್ನು ಪೋಸ್ಟ್‌ ಮಾರ್ಟಂಗೆ ರವಾನಿಸಲಾಗಿತ್ತು.

ಖ್ಯಾತ ಹಿನ್ನೆಲೆ ಗಾಯಕಿ, ಪದ್ಮಭೂಷಣ ಪ್ರಶಸ್ತಿ ಪುರಸ್ಕೃತೆ ವಾಣಿ ಜಯರಾಮ್‌ ಫೆಬ್ರವರಿ 4 ರಂದು ಚೆನ್ನೈನ ತಮ್ಮ ನಿವಾಸದಲ್ಲಿ ನಿಧನರಾಗಿದ್ದರು. ವಾಣಿ ಜಯರಾಮ್‌ ಅವರದ್ದು ಅಸಹಜ ಸಾವು ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇದೀಗ ಪೋಸ್ಟ್‌ ಮಾರ್ಟಂ ವರದಿ ಬಂದಿದೆ.

ಟ್ರೆಂಡಿಂಗ್​ ಸುದ್ದಿ

ಫೆಬ್ರವರಿ 4 ಶನಿವಾರ ಎಂದಿನಂತೆ ಮನೆ ಕೆಲಸದವರು ಬಂದು ಕಾಲಿಂಗ್‌ ಬೆಲ್‌ ಮಾಡಿದಾಗ ವಾಣಿ ಜಯರಾಮ್‌ ಪ್ರತಿಕ್ರಿಯಿಸಿರಲಿಲ್ಲ. ಬಹಳ ಸಮಯ ಕಾದು ನೋಡಿದ ಆಕೆ ನೆರೆಯವರಿಗೆ ತಿಳಿಸಿದ್ದರು. ಅನುಮಾನಗೊಂಡ ಪಕ್ಕದ ಮನೆಯವರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ಮನೆಯ ಬಾಗಿಲು ತೆಗೆದಾಗ ವಾಣಿ ಜಯರಾಮ್‌ ನಿಧನರಾಗಿರುವುದು ತಿಳಿದು ಬಂದಿದೆ. ಆದರೆ ಪೊಲೀಸರು ನೋಡಿದಾಗ ವಾಣಿ ಜಯರಾಮ್‌ ಅವರು ನೆಲಕ್ಕೆ ಉರುಳಿ ಬಿದ್ದಿದ್ದು, ಅವರ ಹಣೆಯಲ್ಲಿ ಗಾಯದ ಗುರುತು ಕಂಡುಬಂದಿತ್ತು. ಈ ಕಾರಣದಿಂದ ಅವರದ್ದು ಸಹಜ ಸಾವಲ್ಲ ಎಂದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅವರ ದೇಹವನ್ನು ಪೋಸ್ಟ್‌ ಮಾರ್ಟಂಗೆ ರವಾನಿಸಲಾಗಿತ್ತು.

ಆದರೆ ಇದೀಗ ಮರಣೋತ್ತರ ವರದಿ ಪೊಲೀಸರ ಕೈ ಸೇರಿದೆ. ಮರಣೋತ್ತರ ಪರೀಕ್ಷೆಯಲ್ಲಿ ಅನುಮಾನ ವ್ಯಕ್ತಪಡಿಸುವ ಯಾವುದೇ ಅಂಶಗಳು ಕಂಡು ಬಂದಿಲ್ಲ ಎಂದು ತಿಳಿದುಬಂದಿದೆ. ಅಸಲಿಗೆ ವಾಣಿ ಜಯರಾಮ್‌ ಅವರಿಗೆ ಹೃದಯಾಘಾತವಾಗಿ ಕೆಳಗೆ ಬಿದ್ದಿದ್ದಾರೆ. ಆದರೆ ಪಕ್ಕದಲ್ಲೇ ಮರದ ಟೇಬಲ್‌ ಇದ್ದಿದ್ದರಿಂದ ಅವರ ಹಣೆಗೆ ಪೆಟ್ಟು ಬಿದ್ದು ರಕ್ತಸ್ರಾವವಾಗಿದೆ ಎಂಬುದು ಸ್ಪಷ್ಟವಾಗಿದೆ. ಈ ಮೂಲಕ ಗಾಯಕಿ ವಾಣಿ ಜಯರಾಮ್‌ ಅವರ ನಿಧನದ ಬಗ್ಗೆ ಇದ್ದ ಅನುಮಾನಗಳು ಪರಿಹಾರವಾಗಿದೆ.

ವಾಣಿ ಜಯರಾಮ್ ಅವರಿಗೆ 78 ವರ್ಷ ವಯಸ್ಸಾಗಿತ್ತು. ಇತ್ತೀಚೆಗಷ್ಟೇ ಕೇಂದ್ರ ಸರ್ಕಾರ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಿಸಿತ್ತು. ಇದರ ಬೆನ್ನ ಹಿಂದೆಯೇ ಅವರ ನಿಧನದ ಸುದ್ದಿ ಸಂಗೀತ ಪ್ರಿಯರು, ಸಿನಿಪ್ರಿಯರಿಗೆ ಶಾಕ್‌ ನೀಡಿತ್ತು. ವಾಣಿ ಜಯರಾಮ್ ಕನ್ನಡ, ತಮಿಳು, ತೆಲುಗು, ಮಲಯಾಳಂ, ತುಳು, ಬೆಂಗಾಲಿ, ಮಲಯಾಳಂ, ಹಿಂದಿ, ಭೋಜ್‌ಪುರಿ, ಉರ್ದು ಸೇರಿ ಒಟ್ಟು 19 ಭಾಷೆಗಳಲ್ಲಿ 10 ಸಾವಿರಕ್ಕೂ ಅಧಿಕ ಹಾಡುಗಳನ್ನು ಹಾಡಿದ್ದರು. ಸಿನಿಮಾ ಹಿನ್ನೆಲೆ ಕ್ಷೇತ್ರದಲ್ಲಿ ಮಾಡಿದ ಸಾಧನೆಗೆ ಮೂರು ಬಾರಿ ರಾಷ್ಟ್ರಪ್ರಶಸ್ತಿಯನ್ನೂ ಪಡೆದಿದ್ದರು. ಇವರ ಪತಿ ಜಯರಾಮ್‌ 5 ವರ್ಷಗಳ ಹಿಂದೆ ನಿಧನರಾಗಿದ್ದರು. ಅಂದಿನಿಂದ ವಾಣಿ ಜಯರಾಮ್ ಚೆನ್ನೈನ ನುಂಗಂಬಾಕ್ಕಂನಲ್ಲಿ ಒಬ್ಬರೇ ವಾಸವಿದ್ದರು. ಅವರಿಗೆ ಮಕ್ಕಳು ಇರಲಿಲ್ಲ ಎನ್ನಲಾಗಿದೆ.

ಅನುಭವ ಚಿತ್ರದ ಹೋದೆಯ ದೂರ ಓ ಜೊತೆಗಾರ...ರಣರಂಗ ಚಿತ್ರದ ಇವ ಯಾವ ಸೀಮೆ ಗಂಡು...ಯುಗ ಪುರುಷ ಚಿತ್ರದ ಮುತ್ತೇ ಪ್ರಥಮ, ಅದುವೆ ಜಗದ ನಿಯಮ...ರಣಧೀರ ಚಿತ್ರದ ಏನ್‌ ಹುಡ್ಗೀರೋ...ಅಪರಂಜಿ ಚಿತ್ರದ ಮೋಹನ ಮುರಳಿಯ ನಾದ ವೀಣೆಗೆ...ಹೊಸ ಬೆಳಕು ಚಿತ್ರದ ತೆರೆದಿದೆ ಮನೆ ಓ ಬಾ ಅತಿಥಿ....ಎರಡು ರೇಖೆಗಳು ಚಿತ್ರದ ನೀಲ ಮೇಘ ಶಾಮ ಸೇರಿದಂತೆ ಅನೇಕ ಸುಂದರ ಹಾಡುಗಳನ್ನು ವಾಣಿ ಜಯರಾಮ್‌ ಅವರ ದನಿಯಲ್ಲಿ ಕೇಳಬಹುದು. ಇಂತಹ ಅದ್ಭುತ ಗಾಯಕಿ ಇಂದು ನಮ್ಮನ್ನು ಅಗಲಿರುವುದು ನಿಜಕ್ಕೂ ಬೇಸರದ ವಿಚಾರ.