ಕನ್ನಡ ಸುದ್ದಿ  /  ಕರ್ನಾಟಕ  /  Amul Vs Nandini: ಮೊದಲು ನಮ್ಮನ್ನು ಉಳಿಸಿ, ನಂದಿನಿ ತಾನಾಗಿಯೇ ಉಳಿಯುತ್ತದೆ; ಹೈನುಗಾರರ ಮನದ ಮಾತು

Amul Vs Nandini: ಮೊದಲು ನಮ್ಮನ್ನು ಉಳಿಸಿ, ನಂದಿನಿ ತಾನಾಗಿಯೇ ಉಳಿಯುತ್ತದೆ; ಹೈನುಗಾರರ ಮನದ ಮಾತು

ಅಮೂಲ್‌ ಸಂಸ್ಥೆಯೊಂದಿಗೆ ಕೆಎಂಎಫ್‌ ಸಂಸ್ಥೆಯ ವಿಲೀನ ಸುದ್ದಿ ಪ್ರಸ್ತಾಪವಾದ ದಿನದಿಂದ ಎಲ್ಲೆಲ್ಲೂ ʼನಂದಿನಿʼಯ ಕುರಿತೇ ಮಾತು. ಈ ಹೊತ್ತಿನಲ್ಲಿ ರಾಜ್ಯದ ಹೈನುಗಾರರ ಪರಿಸ್ಥಿತಿ, ಸ್ಥಳೀಯ ಹಾಲಿನ ಡೇರಿಗಳಲ್ಲಿ ಹಾಲು ಸಂಗ್ರಹಣಾ ಕೊರತೆ, ಹೈನುಗಾರರ ಸಮಸ್ಯೆಗಳು, ಕೆಎಂಎಫ್‌ ಸಂಸ್ಥೆಯ ಒಳನೋಟದ ಚಿತ್ರಣವನ್ನು ಫೇಸ್‌ಬುಕ್‌ ಪುಟದಲ್ಲಿ ಕಟ್ಟಿಕೊಟ್ಟಿದ್ದಾರೆ ನಾಗೇಂದ್ರ ಸಾಗರ್‌.

ಹಾಲಿನ ಡೇರಿ (ಚಿತ್ರ: ನಾಗೇಂದ್ರ ಸಾಗರ್‌)
ಹಾಲಿನ ಡೇರಿ (ಚಿತ್ರ: ನಾಗೇಂದ್ರ ಸಾಗರ್‌)

ಸಂಜೆ ಡೇರಿಗೆ ಹಾಲು ಹಾಕಲು ಹೋದಾಗ ಕಾರ್ಯದರ್ಶಿ ದೀಕ್ಷಿತರು ʼತಗೊಳ್ಳಿ, ಕಳೆದ ತಿಂಗಳ ನಿಮ್ಮ ಹಾಲಿನ ಬಾಬ್ತುʼ ಎಂದು ಹಣ ನೀಡಿದರು. ಪಟ್ಟಿ ನೋಡಿ, ಹಣ ಎಣಿಸಿದೆ. ಮಾರ್ಚ್ ತಿಂಗಳಲ್ಲಿ 239.1 ಲೀಟರ್‌ ಹಾಲು ಹಾಕಿದ್ದೇನೆ. 7955 ರೂಪಾಯಿ ಸಿಕ್ಕಿದೆ. ಅಂದಾಜು ಲೀಟರಿಗೆ 33.27 ರೂಪಾಯಿ ಸಿಕ್ಕ ಹಾಗಾಯಿತು.

ಎರಡನೇ ಬಾರಿ ಹಣ ಎಣಿಸಿದೆ, ನಗು ಬಂತು. ಬಹುಶಃ ನನ್ನ ಹೈನುಗಾರಿಕೆ ಇತಿಹಾಸದಲ್ಲಿ ಇಷ್ಟು ಕಡಿಮೆ ಪ್ರಮಾಣದಲ್ಲಿ ನಾನು ಹಾಲು ಹಾಕಿರಲಿಲ್ಲ. ಇಷ್ಟು ಕಡಿಮೆ ಹಣ ಪಡೆದ ಇತಿಹಾಸವೇ ಇರಲಿಲ್ಲ. ಇದೇ ಡೇರಿಯಿಂದ ಪ್ರತಿ ತಿಂಗಳು 40, 50 ಸಾವಿರ ಹಣ ಒಯ್ದ ದಿನಗಳು ನೆನಪಾದವು. ಅಷ್ಟು ದುಡ್ಡು ಎಣಿಸುವುದೂ ಸಾಕು, ಹೈನುಗಾರಿಕೆ ಮಾಡಿ ಬಸವಳಿಯವುದೂ ಸಾಕು ಎನ್ನುವ ತೀರ್ಮಾನಕ್ಕೆ ಬಂದಿದ್ದೇನೆ.

ನಮ್ಮ ಕೊಟ್ಟಿಗೆಯಲ್ಲಿ ಹಾಲು ಕೊಡುವ ನಾಲ್ಕು ಹಸುಗಳು, ಗಬ್ಬವಿರುವ (ಗರ್ಭ ಧರಿಸಿರುವ) ಎರಡು ಹಸುಗಳು, ಮಣಕ, ಗಂಡು ಕರು, ಪುಟ್ಟ ಕರು ಅಂತೆಲ್ಲ ಹನ್ನೆರಡು ಕರಾವಿದೆ (ಹಸುಗಳು). ಪ್ರತಿದಿನ ಸುಮಾರು ಮೂವತ್ತು ಲೀಟರ್ ಹಾಲು ಹಿಂಡುತ್ತೇವೆ. ಆದರೆ ಅಷ್ಟೂ ಹಾಲು ಮನೆ ಬಾಗಿಲಿನಲ್ಲೇ ಬಿಕರಿ ಆಗುತ್ತದೆ. ಡೇರಿಯಲ್ಲಿ ಸ್ಥಳೀಯ ಮಾರಾಟ ದರ ನಲವತ್ತು ರೂಪಾಯಿ ಇದ್ದು, ನಾವು ಕೂಡ ಅದೇ ದರದಲ್ಲಿ ಮಾರುತ್ತಿದ್ದೇವೆ. ನಂದಿನಿಯವರು ಕೊಡುವ ಈಗಿನ ದರ 33 ರೂಪಾಯಿ ಆಸುಪಾಸು ಇದ್ದು ಸರಕಾರ ಕೊಡುವ ಪ್ರೋತ್ಸಾಹ ಧನ ಸೇರಿಸಿ 38 ರೂಪಾಯಿ ಸಿಗುತ್ತದೆ. ಸದ್ಯ ನಂದಿನಿಯಲ್ಲಿ ಹಾಲಿನ ಸರಬರಾಜು ಕಡಿಮೆ ಇರುವ ಕಾರಣಕ್ಕೆ ಈ ದರ ನಿಗದಿ ಮಾಡಲಾಗಿದೆ. ಇಲ್ಲದೇ ಹೋದರೆ 30 ರೂಪಾಯಿ ಸಿಗುವುದು ಕಷ್ಟವಿತ್ತು.

ಈಗಿನ ಮೇವಿನ ದರ (ಹಿಂಡಿ), ದಾನಿ ಮಿಶ್ರಣದ ದರ, ನಿರ್ವಹಣಾ ವೆಚ್ಚ ಇವೆಲ್ಲ ಲೆಕ್ಕ ಹಾಕಿದರೆ ಹಾಲಿಗೆ 50 ರೂಪಾಯಿ ದರ ನಿಗದಿ ಮಾಡಿದರೂ ಲಾಭದಾಯಕ ಅಲ್ಲವೇ ಅಲ್ಲ. ಹಸು ಸಾಕಾಣಿಕೆಯ ಖರ್ಚು ವೆಚ್ಚಗಳಲ್ಲಿ ಉಳಿಸುವ ಸರ್ವ ಉಪಾಯ ಮತ್ತು ಉಳಿತಾಯದ ಸೂತ್ರಗಳನ್ನು ಪಾಲನೆ ಮಾಡುತ್ತಿರುವ ನನ್ನಂತಹವನಿಗೇ ಹಾಲಿನ ಉತ್ಪಾದನೆಗಾಗಿ ಹೈನುಗಾರಿಕೆ ಬೇಡವಾಗಿದೆ. ಇನ್ನು ಬೇಕಾಬಿಟ್ಟಿ ಹೈನುಗಾರಿಕೆ ಮಾಡುವವರಿಗೆ ಇದು ನಷ್ಟದ ಬಾಬತ್ತೇ ಸರಿ.

ಡೇರಿಯಲ್ಲಿ ಸಿಗಲಿಲ್ಲ ಒಂದು ಕುಡ್ತೆ ಹಾಲು!

ನಮ್ಮ ಮಲೆನಾಡಿನಲ್ಲಂತೂ ದಿನೇ ದಿನೇ ಹಸು ಸಾಕಣಿಕೆಯಿಂದ ವಿಮುಖರಾಗುವವರ ಸಂಖ್ಯೆಯೇ ಹೆಚ್ಚು. ನಮ್ಮ ವರದಾಮೂಲ ಹಾಲು ಸೊಸೈಟಿಯ ಕತೆಯನ್ನೇ ನೋಡಿ. ಸಂಘ ಆರಂಭ ಆಗಿ ಹೆಚ್ಚು ಕಡಿಮೆ ಇಪ್ಪತ್ತೈದು ವರ್ಷಗಳಾಗುತ್ತಾ ಬಂದಿದೆ. ಈ ವರ್ಷ ಹಾಲಿನ ಸಂಗ್ರಹ ನೆಲ ಕಚ್ಚಿದೆ. ಇಂದು ಬೆಳಿಗ್ಗೆ ಸಂಘಕ್ಕೆ ಬಂದಿದ್ದು ಕೇವಲ 9.1 ಲೀಟರ್‌ ಎಂದರೆ ನಂಬಲೇಬೇಕು. ನಮ್ಮಲ್ಲಿ ಸ್ಥಳೀಯವಾಗಿಯೇ 20 ರಿಂದ 30 ಲೀಟರ್‌ ಹಾಲಿನ ಬೇಡಿಕೆ ಇದೆ. ಇಂದಂತೂ ಕಡೆಯ ಗಳಿಗೆಯಲ್ಲಿ ಒಬ್ಬರು ʼಮಗುವಿಗೆ ಔಷಧಿಗಾಗಿ ಹಾಲು ಬೇಕಿತ್ತು. ಒಂದು ಕುಡ್ತೆಯಾದರೂ ಸಾಕುʼ ಎಂದು ಗೋಗರೆದಿದ್ದರು. ಆದರೆ ಏನು ಮಾಡುವುದು ಡೇರಿಯಲ್ಲಿ ಹಾಲೇ ಇರಲಿಲ್ಲ. ಸಂಜೆಯಾದರೂ ಅಷ್ಟೆ. 40 ರಿಂದ 50 ಲೀಟರ್ ಮಾತ್ರ ಹಾಲು ಸಂಗ್ರಹವಾಗುತ್ತಿದೆ.

ಕದ ಮುಚ್ಚುತ್ತಿರುವ ಡೇರಿಗಳು

ನಮ್ಮ ವರದಾಮೂಲ ಅಂತಲ್ಲ. ಮಲೆನಾಡಿನ ಬಹುತೇಕ ಸಂಘಗಳಲ್ಲಿ ಇದೇ ಕತೆ. ಕೆಲವು ಸಂಘಗಳು ಈಗಾಗಲೇ ಕದ ಮುಚ್ಚಿವೆ. ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಸಂಘವೂ ಸೇರಿದಂತೆ ಇನ್ನಷ್ಟು ಸಂಘಗಳು ಕದ ಮುಚ್ಚುವ ಅಪಾಯ ಎದ್ದು ಕಾಣುತ್ತಿದೆ.

ನನಗೆ ಆಶ್ಚರ್ಯ ಆಗುವುದೇನೆಂದರೆ ಹೈನುಗಾರಿಕೆಯಿಂದ ನಮ್ಮ ರೈತರು ಇಷ್ಟು ತ್ವರಿತಗತಿಯಲ್ಲಿ ವಿಮುಖರಾಗುತ್ತಿದ್ದರೂ ಕೆಎಂಎಫ್‌ನವರು ಈ ಕುರಿತು ನಯಾ ಪೈಸೆ ತಲೆ ಕೆಡಿಸಿಕೊಂಡಂತಿಲ್ಲ. ಯಾವ ಅಧಿಕಾರಿಯೂ ಯಾವ ಚುನಾಯಿತ ಪ್ರತಿನಿಧಿಯೂ ನಮ್ಮಲ್ಲಿಗೆ ಬಂದು ನಿಮ್ಮ ಸಮಸ್ಯೆ ಏನು ಎಂದಾಗಲಿ, ಅದಕ್ಕೆ ಈ ರೀತಿ ಪರಿಹಾರ ಕಂಡುಕೊಳ್ಳಬಹುದು ಎಂದು ಹೇಳುವ ಸಲುವಾಗಿಯಾಗಲಿ ಬರಲೇ ಇಲ್ಲ.

ಅದೆಲ್ಲಾ ಬಿಡಿ, ನಾನು ಒಂದರ ಹಿಂದೆ ಒಂದರಂತೆ, ಹೆಚ್ಚು ಹಾಲು ಕೊಡುವ ನಾಲ್ಕೈದು ರಾಸುಗಳನ್ನು ಕಳೆದುಕೊಂಡಿದ್ದೆ. ಅದರ ಪರಿಹಾರದ ಹಣ ಪಡೆಯಲು ಹರಸಾಹಸ ಪಟ್ಟಿದ್ದೆ. ಫೇಸ್‌ಬುಕ್‌ ಜಾಲತಾಣದಲ್ಲಿ ನನ್ನ ಆಕ್ರೋಶವನ್ನು ಹೊರ ಹಾಕಿದ ಮೇಲೆಯೇ ನನಗೆ ಇನ್ಸೂರೆನ್ಸ್ ಹಣ ಸಿಕ್ಕಿದ್ದು. ಅದೂ ಕೂಡ ನನ್ನ ಸಮಸ್ಯೆಯನ್ನು ಸಹೃದಯರಾದ ರೇಣುಕಾ ಮಂಜುನಾಥ್‌ ಅವರು ಕೆಎಂಎಫ್‌ನ ಹಳೆಯ ಎಂಡಿ ಪ್ರೇಮನಾಥ್ ಅವರ ಗಮನಕ್ಕೆ ತಂದು, ಅವರು ಒತ್ತಡ ಹಾಕಿದ ಮೇಲೆಯೇ ಪರಿಹಾರ ಕೈಗೆ ಸಿಕ್ಕಿದ್ದು. ನನ್ನಂತೆಯೇ ಹಸು ಕಳೆದುಕೊಂಡ ಎಷ್ಟೋ ಹೈನುಗಾರರಿಗೆ ಇನ್ನೂ ಪರಿಹಾರ ಸಿಕ್ಕಿಲ್ಲ ಎಂದರೆ ಅಲ್ಲಿ ಎಷ್ಟು ಜಡತ್ವವಿದೆ ನೋಡಿ.

ಸಿಗದ ಪ್ರತಿಸ್ಪಂದನೆ

ನಾವು ಹೈನುಗಾರರು ಎಂತಹ ಸಂಕಷ್ಟದಲ್ಲಿದ್ದೇವೆ ಎನ್ನುವುದು ನಮಗೆ ಮಾತ್ರ ಗೊತ್ತು. ಇಂತಹ ಸಮಸ್ಯೆಗಳನ್ನು, ಅದಕ್ಕೆ ನಾವು ನಿರೀಕ್ಷಿಸುವ ಪರಿಹಾರವನ್ನು ನಾನು ಆಗಾಗ ಈ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುತ್ತಲೇ ಇರುತ್ತೇನೆ. ಆದರೆ ಇದಕ್ಕೆ ಪ್ರತಿಸ್ಪಂದನೆ ಬಹಳ ಕಡಿಮೆ.

ಈಗ ನಂದಿನಿಯನ್ನು ಗುಜರಾತಿನ ಅಮುಲ್ ನುಂಗಿ ಹಾಕಲಿದೆ ಎಂದು ಹುಯಿಲು ಎದ್ದಿದೆ. ಹಾಗಾಗಿ ಅಮುಲ್ ಅನ್ನು ಒದ್ದೋಡಿಸಿ ಎಂಬ ಧ್ವನಿಯೂ ಕೇಳಿ ಬರುತ್ತಿದೆ. ಆದರೆ ಇಂದು ನಂದಿನಿ ಉಳಿಸಿಕೊಳ್ಳುವ ವಿಷಯದಲ್ಲಿ ಮಾತನಾಡುತ್ತಿರುವ ಇದೇ ಜನ ನಮ್ಮ ಅಳಲಿಗೆ ಧ್ವನಿಯಾಗಿದ್ದಾರಾ? ಖಂಡಿತ ಇಲ್ಲ.

ನಮ್ಮ ನಂದಿನಿಯನ್ನು ಉಳಿಸುವ ಹೋರಾಟದಲ್ಲಿ ಇರುವ ಸಾವಿರಾರು ಜನ ಸಾಮಾಜಿಕ ಜಾಲತಾಣದಲ್ಲಿ ನನ್ನ ಸ್ನೇಹಿತರೂ ಹೌದು. ಆದರೆ ಇವರ್ಯಾರೂ ನಾನು ಸಮಸ್ಯೆ ಮುಂದಿಟ್ಟಾಗ ಜೊತೆಗೂಡಿರಲಿಲ್ಲ. ಕಾಳಜಿಯನ್ನು ಶೇರ್ ಮಾಡಿರಲಿಲ್ಲ. ಹ್ಯಾಷ್ ಟ್ಯಾಗಿನಡಿಯ ಹೋರಾಟವಂತೂ ಇಲ್ಲವೇ ಇಲ್ಲ ಬಿಡಿ.

ಹೈನುಗಾರರು ಉಳಿದರೆ ಮಾತ್ರ ನಂದಿನಿ ಉಳಿಯುತ್ತದೆ ಎಂಬ ಅಂಶವನ್ನು ಈ ಜನರು ಅರ್ಥ ಮಾಡಿಕೊಳ್ಳಬೇಕಿದೆ. ಮೊಟ್ಟ ಮೊದಲು ನನ್ನಂತಹ ಹೈನುಗಾರರಿಗೆ ನ್ಯಾಯ ಒದಗಿಸಿ. ನಮ್ಮ ಪರವಾಗಿ ಬೀದಿಗಿಳಿಯುವುದು ಹೋಗಲಿ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಕನಿಷ್ಠ ಸಾಂತ್ವಾನದ ಮಾತುಗಳನ್ನು ಹೇಳದ ಮಂದಿ ಈಗ ಏಕಾಏಕಿ ಈ ಪರಿಯ ಹೋರಾಟಕ್ಕೆ ಹೊರಟಿರುವುದು ಬೂಟಾಟಿಕೆ ಆಗಿ ನನಗೆ ಕಾಣುತ್ತದೆ.

ಕೆಎಂಎಫ್‌ ಜಡತ್ವ ತೊಲಗಿಸಿ

ನಂದಿನಿಯನ್ನು ಉಳಿಸಬೇಕೆಂದರೆ ಮೊದಲು ಜಡತ್ವವನ್ನೇ ಹಾಸಿ ಹೊದ್ದು ಮಲಗಿರುವ ಸಿಬ್ಬಂದಿಗಳನ್ನು ಎಬ್ಬಿಸಿ. ಭ್ರಷ್ಟಾಚಾರದ ಆಡೊಂಬಲ ಆಗಿರುವ ಕೆಎಂಎಫ್‌ನಲ್ಲಿ ಸೇರಿಕೊಂಡಿರುವ ಹೆಗ್ಗಣಗಳನ್ನು ಹೊಡೆದೋಡಿಸಿ. ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಕ್ಕಿರುವ ರಾಜಕಾರಣಿಗಳು, ಮತ್ತವರ ಚೇಲಾಗಳನ್ನು ಸಂಸ್ಥೆಯಿಂದ ಹೊರ ಹಾಕಲು ಶ್ರಮಿಸಿ. ಹೈನುಗಾರ ಬೆವರು ಬಸಿದದ್ದರಿಂದಲೇ ತಾವು ತುತ್ತು ಅನ್ನ ತಿನ್ನುತ್ತಿದ್ದೇವೆ ಎನ್ನುವ ಕೃತಜ್ಞತೆಯನ್ನು ಅಲ್ಲಿನ ಸಿಬ್ಬಂದಿಗೆ ಮೊದಲು ಕಲಿಸಿ. ವೃತ್ತಿಪರತೆ ಮತ್ತು ಬದ್ಧತೆ ಇಲ್ಲದ ಸಿಬ್ಬಂದಿಯಿಂದ ಕೆಎಂಎಫ್ ಹಾಳಾಗುತ್ತಿದೆ. ಮೊದಲು ಇದನ್ನು ಸರಿಪಡಿಸದ ಹೊರತು ಇನ್ನಿತರ ವಿಷಯಗಳ ಬಗ್ಗೆ ವೃಥಾ ಹುಯಿಲು ಎಬ್ಬಿಸುವುದರಲ್ಲಿ ಅರ್ಥವಿಲ್ಲ.

ತಪ್ಪು, ತೊಡಕುಗಳು ನಮ್ಮಲ್ಲೇ ಇದೆ. ಇಚ್ಛಾಶಕ್ತಿ ಒಂದಿದ್ದರೆ ಪರಿಹಾರವೂ ನಮ್ಮಲ್ಲೇ ಇದೆ. ಅದನ್ನು ಬಿಟ್ಟು ಗುಲ್ಲು ಎಬ್ಬಿಸುತ್ತಾ ಹೋದರೆ ಆಗುವುದು ಅನರ್ಥವೇ ಹೊರತು ಪರಿಹಾರವಂತೂ ಅಲ್ಲ. ಕೆಎಂಎಫ್ ಬದಲಾಗದೇ ಹೋದರೆ ಮುಳುಗಿ ಹೋದ ಇನ್ನಿತರ ಸಾರ್ವಜನಿಕ ಸಂಸ್ಥೆಗಳ ಹಣೆಬರಹವೇ ಇದಕ್ಕೂ ಆಗುವುದರಲ್ಲಿ ಸಂಶಯ ಇಲ್ಲ. ಕೊನೆಗೆ ಯಾರನ್ನೂ ದೂರಿಯೂ ಪ್ರಯೋಜನ ಇಲ್ಲವಾಗುತ್ತದೆ.

IPL_Entry_Point

ವಿಭಾಗ