ಕನ್ನಡ ಸುದ್ದಿ  /  ಕ್ರಿಕೆಟ್  /  ಲಕ್ನೋ ವಿರುದ್ಧ ಭರ್ಜರಿ 98 ರನ್‌ಗಳಿಂದ ಗೆದ್ದ ಕೆಕೆಆರ್;‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ

ಲಕ್ನೋ ವಿರುದ್ಧ ಭರ್ಜರಿ 98 ರನ್‌ಗಳಿಂದ ಗೆದ್ದ ಕೆಕೆಆರ್;‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ

KKR vs LSG: ಎಲ್‌ಎಸ್‌ಜಿ ವಿರುದ್ಧ ಕೆಕೆಆರ್‌ ತಂಡ 98 ರನ್‌ಗಳ ಅದ್ಧೂರಿ ಜಯ ಸಾಧಿಸಿದೆ. ಇದರೊಂದಿಗೆ ಐಪಿಎಲ್‌ 2024ರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಲಕ್ನೋ ವಿರುದ್ಧ ಭರ್ಜರಿ 98 ರನ್‌ಗಳಿಂದ ಗೆದ್ದ ಕೆಕೆಆರ್
ಲಕ್ನೋ ವಿರುದ್ಧ ಭರ್ಜರಿ 98 ರನ್‌ಗಳಿಂದ ಗೆದ್ದ ಕೆಕೆಆರ್ (AP)

ಲಕ್ನೋ ಸೂಪರ್‌ ಜೈಂಟ್ಸ್‌ ವಿರುದ್ಧ ಕೋಲ್ಕತ್ತಾ ನೈಟ್‌ ರೈಡರ್ಸ್‌ (Lucknow Super Giants vs Kolkata Knight Riders) ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರಾಜಸ್ಥಾನ ರಾಯಲ್ಸ್‌ ಕೆಳಗಿಳಿಸಿ ಐಪಿಎಲ್‌ 2024ರ (IPL 2024 Points Table) ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ಲಕ್ನೋದ ಏಕಾನಾ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಲ್‌ಎಸ್‌ಜಿ ವಿರುದ್ಧ ಭರ್ಜರಿ 98 ರನ್‌ಗಳಿಂದ ಗೆದ್ದ ಕೆಕೆಆರ್‌, ಪ್ಲೇಆಫ್‌ ಹಂತಕ್ಕೆ ಬಹುತೇಕ ಹತ್ತಿರವಾಗಿದೆ. ಸುನಿಲ್‌ ನರೈನ್‌ ಸ್ಫೋಟಕ ಬ್ಯಾಟಿಂಗ್‌, ರಸೆಲ್‌ ಮಾರಕ ಬೌಲಿಂಗ್‌ ದಾಳಿಯ ನೆರವಿಂದ ತಂಡವು ಸುಲಭ ಗೆಲುವು ಒಲಿಸಿಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌, 6 ವಿಕೆಟ್‌ ಕಳೆದುಕೊಂಡು 235 ರನ್‌ ಗಳಿಸಿತು. ಇದಕ್ಕೆ ಪ್ರತಿಯಾಗಿ ಚೇಸಿಂಗ್‌ ನಡೆಸಿದ ಎಲ್‌ಎಸ್‌ಜಿ ಕೇವಲ 16.1 ಓವರ್‌ಗಳಲ್ಲಿ 137 ರನ್‌ಗಳಿಗೆ ಆಲೌಟ್‌ ಆಯ್ತು.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ ಕೆಕೆಆರ್‌, ಎಂದಿನಂತೆ ಸ್ಫೋಟಕ ಆಟ ಆರಂಭಿಸಿತು. ಸುನಿಲ್‌ ನರೈನ್‌ ಹಾಗೂ ಫಿಲ್‌ ಸಾಲ್ಟ್‌ ಅರ್ಧಶತಕದ ಜೊತೆಯಾಟವಾಡಿದರು. 14 ಎಸೆತಗಳಲ್ಲಿ 32 ರನ್‌ ಗಳಿಸಿ ಸಾಲ್ಟ್‌ ಔಟಾದರು. ಈ ವೇಳೆ ಅಂಗ್ಕ್ರಿಷ್‌ ರಘುವಂಶಿ ಜೊತೆಗೂಡಿದ ನರೈನ್‌ ಮತ್ತಷ್ಟು ಸ್ಫೋಟಕ ಪ್ರದರ್ಶನ ನೀಡಿದರು. ಬೌಂಡರಿ ಸಿಕ್ಸರ್‌ಗಳ ಮಳೆ ಸುರಿಸಿದರು. ಕೇವಲ 39 ಎಸೆತಗಳಲ್ಲಿ 6 ಬೌಂಡರಿ ಹಾಗೂ 7 ಸಿಕ್ಸರ್‌ ಸಹಿತ 81 ರನ್‌ ಕಲೆ ಹಾಕಿ ರವಿ ಬಿಷ್ಣೋಯ್‌ ಎಸೆತದಲ್ಲಿ ಔಟಾದರು.

ಇದನ್ನೂ ಓದಿ | ಮುಸ್ತಫಿಜುರ್, ಚಹಾರ್ ಬಳಿಕ ಶ್ರೀಲಂಕಾ ವೇಗಿಯೂ ಔಟ್; ಸಿಎಸ್‌ಕೆ ತಂಡದಿಂದ ಹೊರನಡೆದ ಘಟಾನುಘಟಿ ಬೌಲರ್‌ಗಳು

ನವೀನ್‌ ಉಲ್‌ ಹಕ್‌ 3 ವಿಕೆಟ್

ಸ್ಫೋಟಕ ಆಟಗಾರ ರಸೆಲ್‌ 12 ರನ್‌ ಗಳಿಸಿ ಔಟಾಗಿ ನಿರಾಶೆ ಮೂಡಿಸಿದರು. 32 ರನ್‌ ಗಳಿಸಿದ್ದ ರಘುವಂಶಿ, ಇಂಪ್ಯಾಕ್ಟ್‌ ಆಟಗಾರ ಯುಧ್ವಿರ್‌ ಸಿಂಗ್‌ ಎಸೆತದಲ್ಲಿ ವಿಎಕಟ್‌ ಒಪ್ಪಿಸಿದರು. ಮತ್ತೆ ವಿಫಲರಾದ ರಿಂಕು ಸಿಂಗ್‌ 16 ರನ್‌ ಗಳಿಸಿ ಔಟಾದರೆ, ನಾಯಕ ಶ್ರೇಯಸ್‌ ಅಯ್ಯರ್‌ 23 ರನ್‌ ಗಳಿಸಿ ನಿರ್ಗಮಿಸಿದರು. ರಮಣ್‌ದೀಪ್‌ ಸಿಂಗ್‌ ಕೇವಲ 6 ಎಸೆತಗಳಲ್ಲಿ ಅಜೇಯ 25 ರನ್‌ ಸಿಡಿಸಿ ಕೆಕೆಆರ್‌ ಇನ್ನಿಂಗ್ಸ್‌ಗೆ ಭರ್ಜರಿ ಅಂತ್ಯ ಒದಗಿಸಿದರು. ಲಕ್ನೋ ಪರ ನವೀನ್‌ ಉಲ್‌ ಹಕ್‌ 3 ವಿಕೆಟ್ ಕಬಳಿಸಿದರು.

ಲಕ್ನೋ ನೀರಸ ಚೇಸಿಂಗ್

ಬೃಹತ್‌ ಮೊತ್ತ ಚೇಸಿಂಗ್‌ಗೆ ಇಳಿದ ಲಕ್ನೋ, 9 ರನ್‌ ಗಳಿಸಿದ ಅರ್ಶಿನ್‌ ವಿಕೆಟ್‌ ಬೇಗನೆ ಕಳೆದುಕೊಂಡಿತು. ಈ ವೇಳೆ ಸ್ಟೋಯ್ನಿಸ್‌ ಜೊತೆಗೂಡಿ ಇನ್ನಿಂಗ್ಸ್‌ ಮುಂದುವರೆಸಿದ ನಾಯಕ ಕೆಎಲ್‌ ರಾಹುಲ್‌ 25 ರನ್‌ ಗಳಿಸಿ ಔಟಾದರು. ದೀಪಕ್‌ ಹೂಡಾ ಕೇವಲ 5 ರನ್‌ಗೆ ಸುಸ್ತಾದರು. ತಂಡದ ಭರವಸೆಯ ಬ್ಯಾಟರ್‌ ಸ್ಟೋಯ್ನಿಸ್‌ 36 ರನ್‌ ಗಳಿಸಿದ್ದಾಗ ರಸೆಲ್‌ ಮ್ಯಾಜಿಕ್‌ಗೆ ಬಲಿಯಾದರು. ಅವರ ಬೆನ್ನಲ್ಲೇ ಡೇಂಜರಸ್‌ ಬ್ಯಾಟರ್‌ ನಿಕೋಲಸ್‌ ಪೂರನ್‌ ಕೂಡಾ 10 ರನ್‌ ಗಳಿಸಿ ರಸೆಲ್‌ಗೆ ವಿಕೆಟ್‌ ಒಪ್ಪಿಸಿದರು.

ಆಯುಷ್‌ ಬದೋನಿ 15, ಆಷ್ಟನ್‌ ಟರ್ನರ್‌ 16, ಯುಧ್ವಿರ್‌ ಸಿಂಗ್‌ 7 ರನ್‌ ಗಳಿಸಿ ಅಳಿಲ ಸೇವೆ ಒದಗಿಸಿದರು. ಆದರೆ ತಂಡದಿಂದ ಗೆಲುವಿನ ದಡ ಸೇರಲು ಸಾಧ್ಯವಾಗಲಿಲ್ಲ.

ಕೆಕೆಆರ್‌ ಪರ ವರುಣ್‌ ಚಕ್ರವರ್ತಿ ಹಾಗೂ ಹರ್ಷಿತ್‌ ರಾಣಾ ತಲಾ 3 ವಿಎಕಟ್‌ ಕಬಳಿಸಿದರು. ರಸೆಲ್‌ 2 ಪ್ರಮುಖ ವಿಕೆಟ್‌ ಕಬಳಿಸಿ ಮಿಂಚಿದರು.

IPL_Entry_Point