ಸೂರ್ಯಕುಮಾರ್ ಯಾದವ್ ಪ್ರಚಂಡ ಶತಕ; ಸನ್‌ರೈಸರ್ಸ್ ವಿರುದ್ಧ 7 ವಿಕೆಟ್ ಗೆಲುವು ಸಾಧಿಸಿದ ಮುಂಬೈ ಇಂಡಿಯನ್ಸ್
ಸೂರ್ಯಕುಮಾರ್ ಯಾದವ್ ಪ್ರಚಂಡ ಶತಕ ಹಾಗೂ ತಿಲಕ್ ವರ್ಮಾ ಭರ್ಜರಿ ಜೊತೆಯಾಟದ ನರವಿಂದ ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಭರ್ಜರಿ ಜಯ ಸಾಧಿಸಿದೆ. 51 ಎಸೆತಗಳಲ್ಲಿ 102 ರನ್ ಗಳಿಸಿದ ಸೂರ್ಯ, ಐಪಿಎಲ್‌ನಲ್ಲಿ ಎರಡನೇ ಶತಕ ಸಾಧನೆ ಮಾಡಿದರು.

ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಮುಂಬೈ ಇಂಡಿಯನ್ಸ್ ಪ್ರಚಂಡ ಗೆಲುವು ಸಾಧಿಸಿದೆ. ತವರು ಮೈದಾನ ಮುಂಬೈನ ವಾಂಖೆಡೆ ಕ್ರೀಡಾಂಣದಲ್ಲಿ ಒಂದು ಹಂತದಲ್ಲಿ ಸೋಲಿನ ಸುಳಿಗೆ ಸಿಲುಕಿದ್ದ ಎಂಐ, ಸೂರ್ಯಕುಮಾರ್ ಸ್ಫೋಟಕ ಶತಕ ಹಾಗೂ ತಿಲಕ್ ವರ್ಮಾ ಜವಾಬ್ದಾರಿಯುತ ಕೊಡುಗೆ ನೆರವಿಂದ 7 ವಿಕೆಟ್‌ಗಳಿಂದ ಗೆದ್ದು ಬೀಗಿದೆ. ಇದರೊಂದಿಗೆ ಹೈದರಾಬಾದ್‌ನಲ್ಲಿ ಎದುರಿಸಿದ್ದ ಸೋಲಿಗೆ ಸೇಡು ತೀರಿಸಿಕೊಂಡಿದೆ. ಈ ಗೆಲುವಿನೊಂದಿಗೆ ಎಂಐ ಅಂಕಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿ 9ನೇ ಸ್ಥಾನದಲ್ಲಿದೆ.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಹೈದರಾಬಾದ್, 8 ವಿಕೆಟ್ ನಷ್ಟಕ್ಕೆ 173 ರನ್ ಕಲೆ ಹಾಕಿತು. ಇದಕ್ಕೆ ಪ್ರತಿಯಾಗಿ ಸುಲಭವಾಗಿ ಚೇಸಿಂಗ್ ನಡೆಸಿದ ಮುಂಬೈ, ಕೇವಲ 17.2 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು 174 ರನ್ ಗಳಿಸಿ ಗೆದ್ದು ಬೀಗಿತು. ವಿಶ್ವದ ನಂಬರ್ ವನ್ ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಎರಡನೇ ಐಪಿಎಲ್ ಶತಕದೊಂದಿಗೆ ತಂಡವನ್ನು ಗೆಲ್ಲಿಸಿದರು.
ಮೊದಲು ಬ್ಯಾಟಿಂಗ್ ನಡೆಸಿದ ಸನ್‌ರೈಸರ್ಸ್ ಹೈದರಾಬಾದ್, ಎಂದಿನಂತೆ ಉತ್ತಮ ಆರಂಭ ಪಡೆಯಿತು. ಆರಂಭಿಕರಾದ ಟ್ರಾವಿಸ್ ಹೆಟ್ ಹಾಗೂ ಅಭಿಷೇಕ್ ಶರ್ಮಾ ಉತ್ತಮ ಆರಂಭ ಕೊಟ್ಟರು. ಮೊದಲ ವಿಕೆಟ್‌ಗೆ 56 ರನ್‌ಗಳ ಜೊತೆಯಾಟವಾಡಿದರು, ಆದರೆ, ಪವರ್‌ಪ್ಲೇ ಅಂತಿಮ ಎಸೆತದಲ್ಲಿ ಅಭಿಷೇಕ್ ಔಟಾದರು. ಇವರ ಗಳಿಕೆ 11 ರನ್. ಅಪರೂಪಕ್ಕೆ ಆಡುವ ಅವಕಾಶ ಪಡೆ ಕನ್ನಡಿಗ ಮಯಾಂಕ್ ಅಗರ್ವಾಲ್ 5 ರನ್ ಗಳಿಸಿದ್ದಾಗ, ಪಂದ್ಯಕ್ಕೆ ಪದಾರ್ಪಣೆ ಮಾಡಿದ್ದ ಅಂಶುಲ್ ಕಾಂಬೋಜ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು.
ಎಸ್‌ಆರ್‌ಎಚ್ 173 ರನ್
48 ರನ್ ಗಳಿಸಿದ ಹೆಡ್, ಅರ್ಧಶತಕದ ಹೊಸ್ತಿಲಲ್ಲಿ ಚಾವ್ಲಾಗೆ ವಿಕೆಟ್ ಒಪ್ಪಿಸಿದರು. ನಿತೀಶ್ ರೆಡ್ಡಿ 20 ರನ್ ಗಳಿಸಿ ಪಾಂಡ್ಯ ಎಸೆತದಲ್ಲಿ ಔಟಾದರೆ, ಸ್ಫೋಟಕ ಬ್ಯಾಟರ್ ಕ್ಲಾಸೆನ್ ಕೇವಲ 2 ರನ್ ಕಲೆ ಹಾಕಿ ಚಾವ್ಲಾ ಎಸೆತದಲ್ಲಿ ಕ್ಲೀನ್ ಬೋಲ್ಡ್ ಆದರು. ಶಹಬಾಜ್ ಅಹ್ಮದ್ 10 ರನ್ ಗಳಿಸಿದರೆ, ಮಾರ್ಕೊ ಜಾನ್ಸೆನ್ 17 ರನ್ ಪೇರಿಸಿದರು. 9ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಲು ಬಂದು ನಾಯಕ ಪ್ಯಾಟ್ ಕಮಿನ್ಸ್ 17 ಎಸೆತಗಳಲ್ಲಿ 35 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಿದರು. ಪರಿಣಾಮ ಎಸ್‌ಆರ್‌ಎಚ್ 173 ರನ್ ಒಟ್ಟುಗೂಡಿಸಿತು.
ಇದನ್ನೂ ಓದಿ | ಐಪಿಎಲ್‌ನಲ್ಲಿ ಸುನಿಲ್ ನರೈನ್ ವಿಶೇಷ ಮೈಲಿಗಲ್ಲು; ಜಡೇಜಾ, ಬ್ರಾವೋ ಬಳಿಕ ಈ ಸಾಧನೆ ಮಾಡಿದ 3ನೇ ಆಲ್‌ರೌಂಡರ್
ಸ್ಪರ್ಧಾತ್ಮಕ ಮೊತ್ತ ಚೇಸಿಂಗ್‌ಗಿಳಿದ ಮುಂಬೈ ಇಂಡಿಯನ್ಸ್ ಮೇಲಿಂದ ಮೇಲೆ 3 ವಿಕೆಟ್ ಕಳೆದುಕೊಂಡಿತು. ಇಶಾನ್ ಕಿಶನ್ 9 ರನ್ ಗಳಿಸಿದರೆ, ರೋಹಿತ್ ಶರ್ಮಾ ಆಟ 4 ರನ್‌ಗಳಿಗೆ ಅಂತ್ಯವಾಯ್ತು. ಅದರ ಬೆನ್ನಲ್ಲೇ ನಮನ್ ಧೀರ್ ಕೂಡಾ 9 ಎಸೆತ ಎದುರಿಸಿ ಖಾತೆ ತೆರೆಯದೆ ವಿಕೆಟ್ ಒಪ್ಪಿಸಿದರು. 4.1 ಓವರ್‌ಗಳಲ್ಲಿ ತಂಡದ ಮೊತ್ತವು 31 ರನ್ ಆಗುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡು ತಂಡ ಸಂಕಷ್ಟಕ್ಕೆ ಸಿಲುಕಿತು. ಆದರೆ, ಅಷ್ಟಕ್ಕೆ ತಂಡ ಭರವಸೆ ಕಳೆದುಕೊಳ್ಳಲಿಲ್ಲ.
ಸೂರ್ಯಕುಮಾರ್ ಯಾದವ್ ಆರನೇ ಟಿ20 ಶತಕ
ವಿಶ್ವದ ನಂಬರ್ 1 ಟಿ20 ಬ್ಯಾಟರ್ ಸೂರ್ಯಕುಮಾರ್ ಯಾದವ್ ಹಾಗೂ ತಂಡದ ಪರ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರುವ ತಿಲಕ್ ವರ್ಮಾ ಭರ್ಜರಿ ಜೊತೆಯಾಟವಾಡಿದರು. ಈ ಜೋಡಿ ಆರಂಭದಿಂದಲೇ ದೊಡ್ಡ ಹೊಡೆತಗಳಿಗೆ ಕೈ ಹಾಕಿತು. ಕೆಲವೇ ಓವರ್‌ಗಳಲ್ಲಿ ಪಂದ್ಯವು ಆತಿಥೇಯ ತಂಡದತ್ತ ತಿರುವು ಪಡೆಯಿತು. ಶತಕದ ಜೊತೆಯಾಟವಾಡಿದ ಈ ಜೋಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು. 200ರ ಸ್ಟ್ರೈಕ್ ರೇಟ್‌ನಲ್ಲಿ ಬ್ಯಾಟ್ ಬೀಸಿದ ಸೂರ್ಯ 51 ಎಸೆತಗಳಲ್ಲಿ 12 ಬೌಂಡರಿ ಹಾಗೂ 6 ಸಿಕ್ಸರ್ ಸಹಿತ 102 ರನ್ ಗಳಿಸಿದರು. ಟಿ20ಯಲ್ಲಿ ಇದು ಅವರ ಆರನೇ ಶತಕ. ಇವರಿಗೆ ಜೊತೆಯಾದ ತಿಲಕ್, ಅಜೇಯ 37 ರನ್ ಗಳಿಸಿದರು. ಪರಿಣಾಮ ತಂಡ ಸುಲಭ ಜಯ ಒಲಿಸಿಕೊಂಡಿತು.
ಐಪಿಎಲ್ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ | RCB vs CSK: ರೋಹಿತ್ ಶರ್ಮಾ ಎಂಐ ತೊರೆದು ಈ ತಂಡದ ಪರ ಆಡ್ಬೇಕು; ಎಚ್ಟಿ ಸಮೀಕ್ಷೆಯಲ್ಲಿ ಫ್ಯಾನ್ಸ್ ಹೀಗಂದ್ರು
