ಕನ್ನಡ ಸುದ್ದಿ  /  ಕರ್ನಾಟಕ  /  Maadal Virupakshappa: ಲೋಕಾಯುಕ್ತ 'ಹೊಡೆತ' ತಡೆಯದೇ ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಡಾಳ್‌ ವಿರೂಪಾಕ್ಷಪ್ಪ!

Maadal Virupakshappa: ಲೋಕಾಯುಕ್ತ 'ಹೊಡೆತ' ತಡೆಯದೇ ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಮಾಡಾಳ್‌ ವಿರೂಪಾಕ್ಷಪ್ಪ!

ತಮ್ಮ ಪುತ್ರ ಹಾಗೂ ಕೆಎಎಸ್‌ ಅಧಿಕಾರಿ ಪ್ರಶಾಂತ್‌ ಮಾಡಾಳ್‌ ವಿರುದ್ಧ ನಡೆದ ಲೋಕಾಯುಕ್ತ ದಾಳಿಯ ಕಾರಣಕ್ಕೆ, ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಿಎಂ ಸೂಚನೆ ಹಿನ್ನೆಲೆಯಲ್ಲಿ, ವಿರೂಪಾಕ್ಷಪ್ಪ ರಾಜೀನಾಮೆ ನೀಡಿದ್ದಾರೆ ಎನ್ನಲಾಗಿದೆ.

ಲೋಕಾಯುಕ್ತ ದಾಳಿ
ಲೋಕಾಯುಕ್ತ ದಾಳಿ (ANI)

ಬೆಂಗಳೂರು: ತಮ್ಮ ಪುತ್ರ ಹಾಗೂ ಕೆಎಎಸ್‌ ಅಧಿಕಾರಿ ಪ್ರಶಾಂತ್‌ ಮಾಡಾಳ್‌ ವಿರುದ್ಧ ನಡೆದ ಲೋಕಾಯುಕ್ತ ದಾಳಿಯ ಕಾರಣಕ್ಕೆ, ಚನ್ನಗಿರಿ ಬಿಜೆಪಿ ಶಾಸಕ ಮಾಡಾಳ್‌ ವಿರೂಪಾಕ್ಷಪ್ಪ ಅವರು ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಲೋಕಾಯುಕ್ತ ದಾಳಿಯಿಂದ ರಾಜ್ಯ ಸರ್ಕಾರಕ್ಕೆ ಎದುರಾಗುವ ಮುಜುಗರವನ್ನು ತಪ್ಪಿಸಲು, ಕೆಎಸ್‌ಡಿಎಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಮಾಡಾಳ್‌ ವಿರೂಪಾಕ್ಷಪ್ಪ ಅವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದ್ದರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ತಮ್ಮ ಆಪ್ತರ ಮೂಲಕ ಕೆಎಸ್‌ಡಿಎಲ್ ನಿಗಮ ಮಂಡಳಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಪತ್ರವನ್ನು, ಮಾಡಾಳ್‌ ವಿರೂಪಾಪಕ್ಷಪ್ಪ ಅವರಿಗೆ ಸಿಎಂ ಸೂಚನೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ತಮ್ಮ ಆಪ್ತರ ಮೂಲಕ ಸಿಎಂ ಕಚೇರಿಗೆ ರಾಜೀನಾಮೆ ಪತ್ರವನ್ನು ಮಾಡಾಳ್ ವಿರೂಪಾಕ್ಷಪ್ಪ ಸಲ್ಲಿಕೆ ಮಾಡಿದ್ದಾರೆ. ಪತ್ರದಲ್ಲಿ, ''2.03.2023ರಂದು ನಡೆದ ಲೋಕಾಯುಕ್ತ ದಾಳಿಗೂ ನನಗೂ ಸಂಬಂಧವಿಲ್ಲ. ಇದು ನನ್ನ ಕುಟುಂಬದ ವಿರುದ್ಧ ಹೆಣೆಯಲಾಗಿರುವ ಷಡ್ಯಂತ್ರ. ಆದರೂ ನನ್ನ ಮೇಲೆ ಆಪಾದನೆ ಬಂದಿರುವುದರಿಂದ. ನಾನು ನೈತಿಕ ಹೊಣೆ ಹೊತ್ತು ಕೆಎಸ್‌ಡಿಲ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿದ್ದೇನೆ..'' ಎಂದು ವಿರೂಪಾಕ್ಷಪ್ಪ ಉಲ್ಲೇಖ ಮಾಡಿದ್ದಾರೆ.

ಏನಿದು ಪ್ರಕರಣ?:

ಕರ್ನಾಟಕ ಸಾಬೂನು ಹಾಗೂ ಮಾರ್ಜಕ ನಿಯಮಿತ (ಕೆಎಸ್‌ಡಿಎಲ್‌) ಅಧ್ಯಕ್ಷರಾಗಿರುವ ಬಿಜೆಪಿ ಶಾಸಕ ಕೆ. ಮಾಡಾಳ್‌ ವಿರೂಪಾಕ್ಷಪ್ಪ ಪುತ್ರ ಹಾಗೂ ಕೆಎಎಸ್‌ ಅಧಿಕಾರಿ ಪ್ರಶಾಂತ್‌ ಮಾಡಾಳ್‌, 40 ಲಕ್ಷ ರೂಪಾಯಿ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದರು.

ಆರೋಪಿ ಪ್ರಶಾಂತ್‌ ಮಾಡಾಳ್‌ ಬೆಂಗಳೂರು ಜಲಮಂಡಳಿಯ ಮುಖ್ಯ ಲೆಕ್ಕಪರಿಶೋಧಕರಾಗಿ ಸೇವೆ ಸಲ್ಲಿಸುತ್ತಿದ್ದು, ಕೆಎಸ್‌ಡಿಎಲ್‌ಗೆ ಕಚ್ಚಾವಸ್ತು ಪೂರೈಕೆ ಟೆಂಡರ್‌ ನೀಡುವ ಸಂಬಂಧ ಲಂಚ ಪಡೆಯುತ್ತಿದ್ದಾಗ ಲೋಕಾಯಕ್ತ ಪೊಲೀಸರು ದಾಳಿ ಮಾಡಿದ್ದಾರೆ ಎನ್ನಲಾಗಿದೆ.

ದಾಳಿಯ ಸಂದರ್ಭದಲ್ಲಿ ಕಚೇರಿಯಲ್ಲಿ 2.2 ಕೋಟಿ ರೂ. ಅನಧಿಕೃತ ಹಣ ಕೂಡ ಪತ್ತೆಯಾಗಿತ್ತು. ಅಲ್ಲದೇ ದಾಖಲೆಗಳ ಪರಿಶೀಲನೆಗಾಗಿ ಪ್ರಶಾಂತ್‌ ಮಾಡಾಳ್‌ ಅವರ ಮನೆ ಮೇಲೆ ದಾಳಿ ಮಾಡಿದಾಗ, ಹೆಚ್ಚುವರಿಯಾಗಿ ಆರು ಕೋಟಿ ರೂ. ಅನಧಿಕೃತ ಹಣ ಕೂಡ ಪತ್ತೆಯಾಗಿತ್ತು ಎಂದು ಲೋಕಾಯುಕ್ತ ಪೊಲೀಸರು ಮಾಹಿತಿ ನೀಡಿದ್ದಾರೆ.

ಈ ಪ್ರಕರಣವನ್ನು ಎಸಿಬಿ ರದ್ದುಗೊಳಿಸಿ ಲೋಕಾಯುಕ್ತಕ್ಕೆ ಮರುಜನ್ಮ ನೀಡಿದ ಬಳಿಕ ನಡೆದ ಅತಿ ದೊಡ್ಡ ಕಾರ್ಯಾಚರಣೆ ಎಂದು ಬಣ್ಣಿಸಲಾಗಿದೆ.

ಸಿಎಂ ಪ್ರತಿಕ್ರಿಯೆ:

ಇನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯದಲ್ಲಿ ಭ್ರಷ್ಟಾಚಾರ ತಡೆಗಟ್ಟಲು ಲೋಕಾಯುಕ್ತಕ್ಕೆ, ಮರುಜನ್ಮ ನೀಡಿದ್ದು ತಮ್ಮ ನೇತೃತ್ವದ ಬಿಜೆಪಿ ಸರ್ಕಾರ ಎಂದು ಹೇಳಿದ್ದಾರೆ. ಬೆಂಗಳೂರಿನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನಿಷ್ಪಕ್ಷಪಾತ ತನಿಖೆ ನಡೆಸಲಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ಟೀಕೆ:

ಇನ್ನು ಪ್ರಶಾಂತ್‌ ಮಾಡಾಳ್‌ ಅವರ ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿಯನ್ನು ಟೀಕಿಸಿರುವ ಪ್ರತಿಪಕ್ಷ ಕಾಂಗ್ರೆಸ್‌, ಇದು ರಾಜ್ಯ ಬಿಜೆಪಿ ನಾಯಕರ ಭ್ರಷ್ಟಾಚಾರದ ಮುಖವಾಡ ಬಯಲು ಮಾಡಿದೆ ಎಂದು ಹರಿಹಾಯ್ದಿದೆ.

ಒಟ್ಟಿನಲ್ಲಿ ಕೆಎಎಸ್‌ ಅಧಿಕಾರಿ ಪ್ರಶಾಂತ್‌ ಮಾಡಾಳ್‌ ಅವರ ಕಚೇರಿ ಮತ್ತು ಮನೆ ಮೇಲೆ ನಡೆದ ಲೋಕಾಯುಕ್ತ ದಾಳಿ, ರಾಜ್ಯ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗೆ ಕಾರಣವಾಗಿದೆ. ಇದೀಗ ಕೆಎಸ್‌ಡಿಲ್‌ ಅಧ್ಯಕ್ಷ ಸ್ಥಾನಕ್ಕೆ ಮಾಡಾಳ್‌ ವಿರೂಪಾಕ್ಷಪ್ಪ ಅವರು ರಾಜೀನಾಮೆ ನೀಡುವ ಮೂಲಕ, ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ನೀಡಿದ್ದಾರೆ ಎಂದು ಹೇಳಬಹುದು.

IPL_Entry_Point

ವಿಭಾಗ