ಕನ್ನಡ ಸುದ್ದಿ  /  ಕರ್ನಾಟಕ  /  Baburao Chinchansur: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಗೆ ಬಾಬುರಾವ್ ಚಿಂಚನಸೂರ್ ಗುಡ್​ ಬೈ

Baburao Chinchansur: ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಗೆ ಬಾಬುರಾವ್ ಚಿಂಚನಸೂರ್ ಗುಡ್​ ಬೈ

ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿಗೆ ಮತ್ತೊಂದು ಆಘಾತವಾಗಿದೆ. ಬಿಜೆಪಿಯ ಬಾಬುರಾವ್ ಚಿಂಚನಸೂರ್ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದು, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಮಾತ್ರವಲ್ಲ ಬಿಜೆಪಿಗೂ ಗುಡ್​ ಬೈ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ
ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಬಾಬುರಾವ್ ಚಿಂಚನಸೂರ್ ರಾಜೀನಾಮೆ

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದು, ಬಿಜೆಪಿಗೆ ಮತ್ತೊಂದು ಆಘಾತವಾಗಿದೆ. ಬಿಜೆಪಿಯ ಬಾಬುರಾವ್ ಚಿಂಚನಸೂರ್ ಅವರು ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸೋಮವಾರ ರಾತ್ರಿ ರಾಜೀನಾಮೆ ನೀಡಿದ್ದು, ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರು ರಾಜೀನಾಮೆಯನ್ನು ಅಂಗೀಕರಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಮಾತ್ರವಲ್ಲ ಬಿಜೆಪಿಗೂ ಗುಡ್​ ಬೈ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಈ ಬಾರಿ ವಿಧಾನಸಭೆ ಚುನಾವಣೆಯಲ್ಲಿ ಬಾಬುರಾವ್ ಚಿಂಚನಸೂರ್ ಅವರು ಗುರುಮಿಠಕಲ್ ಕ್ಷೇತ್ರದಿಂದ ಟಿಕೆಟ್ ನೀಡುವಂತೆ ಬಿಜೆಪಿಗೆ ಕೇಳಿದ್ದರು. ಆದರೆ, ವಿಧಾನಪರಿಷತ್ ಸದಸ್ಯರಾಗಿರುವ ಕಾರಣ ಟಿಕೆಟ್ ನೀಡಲಾಗದು ಎಂದು ಬಿಜೆಪಿ ನಾಯಕರು ಹೇಳಿದ್ದರು. ಇದರಿಂದಾಗಿ ಬಾಬುರಾವ್ ಚಿಂಚನಸೂರ್ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಹಾಗೂ ಬಿಜೆಪಿಗೆ ಗುಡ್​ ಬೈ ಹೇಳಿದ್ದಾರೆ.

“ಕಳೆದ ವರ್ಷ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಅವಿರೋಧವಾಗಿ ಆಯ್ಕೆಯಾಗಿದ್ದ ಬಾಬುರಾವ್ ಚಿಂಚನಸೂರ್ ರಾಜೀನಾಮೆ ಸಲ್ಲಿಸಿದ್ದಾರೆ. ಅವರ ರಾಜೀನಾಮೆಯನ್ನು ನಾನು ಅಂಗೀಕರಿಸಿದ್ದೇನೆ” ಎಂದು ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.

ಮತ್ತೆ ಕಾಂಗ್ರೆಸ್​ ಸೇರ್ಪಡೆ?

ಯಾದಗಿರಿ ಜಿಲ್ಲೆಯ ಗುರುಮಿಠಕಲ್ ಕ್ಷೇತ್ರದ ಮಾಜಿ ಶಾಸಕರೂ ಆಗಿರುವ ಬಾಬುರಾವ್ ಚಿಂಚನಸೂರ್ (72) ಅವರು ಕೋಲಿ ಸಮಾಜಕ್ಕೆ ಸೇರಿದವರು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಜವಳಿ, ಬಂದರು ಮತ್ತು ಒಳನಾಡು ಸಾರಿಗೆ ಸಚಿವರಾಗಿದ್ದರು. 2018 ರಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಸೋತ ನಂತರ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಪ್ರಚಾರ ಮಾಡಿದವರಲ್ಲಿ ಇವರೂ ಕೂಡ ಒಬ್ಬರಾಗಿದ್ದರು. ಇದೀಗ 5 ವರ್ಷಗಳ ಬಳಿಕ ಮತ್ತೆ ಕಾಂಗ್ರೆಸ್​ ಸೇರಲು ಚಿಂಚನಸೂರ್ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದೇ ತಿಂಗಳಲ್ಲಿ ಬಿಜೆಪಿಯ ಇಬ್ಬರು ಎಂಎಲ್‌ಸಿ ರಾಜೀನಾಮೆ

ಚಿಂಚನಸೂರ್ ಅವರು ಇತ್ತೀಚೆಗೆ ರಾಜೀನಾಮೆ ನೀಡಿದ ಎರಡನೇ ಬಿಜೆಪಿ ಎಂಎಲ್‌ಸಿ ಆಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಬಿಜೆಪಿಯ ಪುಟ್ಟಣ್ಣ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ರಾಜ್ಯ ಸರ್ಕಾರದ ಮೀತಿ ಮೀರಿದ ಭ್ರಷ್ಟಾಚಾರದ ಕಾರಣಕ್ಕೆ ಬಿಜೆಪಿ ತೊರೆಯುತ್ತಿರುವುದಾಗಿ ಪುಟ್ಟಣ್ಣ ಹೇಳಿದ್ದರು.

ಶಿಕ್ಷಣ ಕ್ಷೇತ್ರ, ಶಿಕ್ಷಕರ ಪರವಾಗಿ ನಾನು ಸಾಕಷ್ಟು ಹೋರಾಟ ಮಾಡಿದ್ದೇನೆ. ಫ್ರೀಡಂ ಪಾರ್ಕ್‌ನಲ್ಲಿ ನಡೆದ ಶಿಕ್ಷಕರ ಪ್ರತಿಭಟನೆ ವೇಳೆ ಇಬ್ಬರು ಶಿಕ್ಷಕರು ಆತ್ಮಹತ್ಯೆಗೆ ಶರಣಾದರೂ, ಬಿಜೆಪಿ ಸರ್ಕಾರ ಯಾವುದೇ ರೀತಿಯಲ್ಲಿ ಸ್ಪಂದಿಸಲಿಲ್ಲ. ಬಿಜೆಪಿ ಪಕ್ಷ ಸೇರಿ ತಪ್ಪು ಮಾಡಿದೆ ಎಂದು ಆತ್ಮಸಾಕ್ಷಿ ಹೇಳುತ್ತಿತ್ತು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿ ಪಕ್ಷ ಸೇರುತ್ತಿದ್ದೇನೆ ಎಂದು ಪುಟ್ಟಣ್ಣ ತಿಳಿಸಿದ್ದರು.

IPL_Entry_Point