ಕನ್ನಡ ಸುದ್ದಿ  /  Karnataka  /  Education News Karnataka Sslc Exam 2024 Mother And Daughter Writing Sslc Exam Sidlaghatta Chikkaballapur Uks

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಚಿಕ್ಕಬಳ್ಳಾಪುರದ ಶಿಡ್ಲಘಟ್ಟದಲ್ಲಿ ಬೋರ್ಡ್ ಪರೀಕ್ಷೆ ಬರೆಯುತ್ತಿದ್ದಾರೆ ಈ ಅಮ್ಮ, ಮಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ (Karnataka SSLC Exam) ಸೋಮವಾರ ಶುರುವಾಗಿದ್ದು ಏಪ್ರಿಲ್ 6ರ ತನಕ ನಡೆಯಲಿದೆ. ಇದರಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಈ ಅಮ್ಮ ಮತ್ತು ಮಗಳು ಒಟ್ಟಿಗೆ ಪರೀಕ್ಷೆ ಬರೆಯುತ್ತ ಗಮನಸೆಳೆದಿದ್ದಾರೆ.

ಮುತ್ತೂರು ಗ್ರಾಮದ ಛಾಯಮ್ಮ ಮತ್ತು ಅವರ ಮಗಳು ಶ್ರೀವಾಣಿ
ಮುತ್ತೂರು ಗ್ರಾಮದ ಛಾಯಮ್ಮ ಮತ್ತು ಅವರ ಮಗಳು ಶ್ರೀವಾಣಿ (Special arrangement)

ಚಿಕ್ಕಬಳ್ಳಾಪುರ: ಕರ್ನಾಟಕದ ಎಸ್‌ಎಸ್‌ಎಲ್‌ಸಿ ಪರೀಕ್ಷೆ (Karnataka SSLC Exam) ನಡೆಯುತ್ತಿದ್ದು, ಈ ಬಾರಿ ಚಿಕ್ಕಬಳ್ಳಾಪುರದಲ್ಲಿ ತಾಯಿ ಮತ್ತು ಮಗಳು ಇಬ್ಬರೂ ಪರೀಕ್ಷೆ ಬರೆಯುತ್ತಿರುವುದು ಗಮನಸೆಳೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕು ಮಳ್ಳೂರಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ತಾಯಿ ಮತ್ತು ಮಗಳು ಪರೀಕ್ಷೆ ಬರೆಯುತ್ತಿದ್ದಾರೆ.

ಶಿಡ್ಲಘಟ್ಟ ತಾಲೂಕು ಮುತ್ತೂರು ಗ್ರಾಮದ ಛಾಯಮ್ಮ (36) ಮತ್ತು ಅವರ ಮಗಳು ಶ್ರೀವಾಣಿ ಈ ಸಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ತಾಯಿ ಮತ್ತು ಮಗಳು. ಶ್ರೀವಾಣಿ ಮುತ್ತೂರು ಸರ್ಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ. ಹೀಗಾಗಿ ಇಬ್ಬರೂ ಜೊತೆಯಾಗಿ ಪರೀಕ್ಷಾ ಸಿದ್ಧತೆ ಮಾಡಿಕೊಂಡು ಪರೀಕ್ಷೆ ಬರೆಯುತ್ತಿದ್ದಾರೆ. ಛಾಯಮ್ಮ ಅವರು ಬಾಹ್ಯ ವಿದ್ಯಾರ್ಥಿನಿಯಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ. ಹಾಗಂತ ಅವರೇನೂ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿಲ್ಲ. ಇದೇ ಮೊದಲ ಸಲ ಪರೀಕ್ಷೆ ಎದುರಿಸುತ್ತಿದ್ದಾರೆ.

ವಿಶೇಷ ಎಂದರೆ ಛಾಯಮ್ಮ ಅವರು ಮುತ್ತೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷೆ. ಇದೇ ಶಾಲೆಯಲ್ಲಿ ಮಗಳು ಶ್ರೀವಾಣಿ ಕೂಡ ಓದಿದ್ದಾರೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ; ಅಮ್ಮ ಮತ್ತು ಮಗಳ ಸಂಭ್ರಮದ ಪ್ರತಿಕ್ರಿಯೆ

ಗ್ರಾಮೀಣ ಭಾಗದ ಸಾಮಾನ್ಯ ಹೆಣ್ಣುಮಕ್ಕಳಂತೆ ಬಹುಬೇಗ ಮದುವೆಯಾಗಿ ಸಂಸಾರ ಜೀವನ ಪ್ರವೇಶಿಸಿದಾಗ, ವಿದ್ಯಾಭ್ಯಾಸ ಮೊಟಕುಗೊಳ್ಳುತ್ತದೆ. ಹಾಗೆಯೇ ಛಾಯಮ್ಮ ಅವರ ಶಿಕ್ಷಣವೂ ಮೊಟಕುಗೊಂಡಿದ್ದು. ಅವರು ವರ್ಷಗಳ ಬಳಿಕ ಮತ್ತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಛಾಯಮ್ಮ ಬಹಳ ಸಂಭ್ರಮದಲ್ಲಿದ್ದಾರೆ. ಅವರು ಈ ವಿಚಾರವನ್ನು ಸ್ಥಳೀಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಹಂಚಿಕೊಂಡಿರುವುದು ಹೀಗೆ-

“ಚಿಕ್ಕಬಳ್ಳಾಪುರ ತಾಲ್ಲೂಕಿನ ನಾಯನಹಳ್ಳಿ ನನ್ನ ತವರೂರು. ಚಿಕ್ಕಬಳ್ಳಾಪುರದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಒಂಬತ್ತನೇ ತರಗತಿವರೆಗೂ ಓದಿದ್ದೆ. ಅದಾಗಿ ಮದುವೆ ಆಯಿತು. ಮುತ್ತೂರಿಗೆ ಬಂದು ನೆಲೆಸಿದೆ. ಈಗ ಮೂವರು ಹೆಣ್ಣುಮಕ್ಕಳು. ಮೊದಲ ಮಗಳು ದ್ವಿತೀಯ ಪಿಯುಸಿ, ಎರಡನೇ ಮಗಳು ಎಸ್‌ಎಸ್‌ಎಲ್‌ಸಿ, ಮೂರನೇ ಮಗಳು ಏಳನೇ ತರಗತಿ ಓದುತ್ತಿದ್ದಾಳೆ. ಮೂವರೂ ಓದಿನಲ್ಲಿ ಬಹಳ ಚುರುಕು" ಎನ್ನುತ್ತ ಛಾಯಮ್ಮ ತಾನು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವುದಕ್ಕೆ ಸಜ್ಜಾಗಿದ್ದು ಹೇಗೆ ಎಂಬುದನ್ನು ವಿವರಿಸಿದರು.

“ಒಂಬತ್ತನೇ ತರಗತಿ ತನಕ ಓದಿರುವುದು ಮಕ್ಕಳಿಗೂ ಗೊತ್ತಿತ್ತು. ಮನೆಯಲ್ಲಿ ಮಕ್ಕಳು, ಶಾಲೆಯ ಎಸ್‌ಡಿಎಂಸಿಯಲ್ಲಿ ಪದಾಧಿಕಾರಿಯೂ ಆಗಿರುವುದರಿಂದ ಅಲ್ಲಿನ ಶಿಕ್ಷಕರು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಎದುರಿಸುವಂತೆ ಪ್ರೋತ್ಸಾಹಿಸಿದರು. ನನಗೂ ಸರಿ ಎನಿಸಿದ ಕಾರಣ, ಎರಡನೆ ಮಗಳ ಜೊತೆಗೆ ನಾನೂ ಓದಲಾರಂಭಿಸಿದೆ. ಪರೀಕ್ಷೆ ಎದುರಿಸುವುದಕ್ಕೆ ಸಜ್ಜಾದೆ. ಈಗ ಮಗಳ ಜೊತೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವುದು ತುಂಬಾ ಖುಷಿಕೊಟ್ಟಿದೆ” ಎಂದು ಛಾಯಮ್ಮ ಹೇಳಿದ್ದಾರೆ.

"ಅಮ್ಮ ಕೂಡ ಓದಿನಲ್ಲಿ ಬಹಳ ಚುರುಕು. ವರ್ಷಗಳ ಬಳಿಕ ಪರೀಕ್ಷೆ ಬರೆಯುತ್ತಿದ್ದರೂ ಅಮ್ಮನಲ್ಲಿ ಕಲಿಯಬೇಕೆಂಬ ಹುರುಪು ಕಡಿಮೆಯಾಗಿಲ್ಲ. ಈಗ ತಾಯಿಯ ಜೊತೆಗೆ ಪರೀಕ್ಷೆ ಬರೆಯುತ್ತಿರುವುದು ಸಂತೋಷಕ್ಕೆ ಕಾರಣ. ಈ ಸಲ ನಾನು ಮತ್ತು ಅಮ್ಮ ಇಬ್ಬರೂ ಉತ್ತಮ ಅಂಕ ಗಳಿಸಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುತ್ತೇವೆ" ಎಂದು ಶ್ರೀವಾಣಿ ವಿಶ್ವಾಸ ವ್ಯಕ್ತಪಡಿಸಿರುವುದಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಏಪ್ರಿಲ್ 6ರ ತನಕ ಕರ್ನಾಟಕ ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಕರ್ನಾಟಕದಲ್ಲಿ ಸೋಮವಾರ (ಮಾರ್ಚ್ 25) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಶುರುವಾಗಿದೆ. ಏಪ್ರಿಲ್ 6ರ ಪರೀಕ್ಷೆ ನಡೆಯಲಿದೆ. ರಾಜ್ಯದ 2750 ಪರೀಕ್ಷಾ ಕೇಂದ್ರಗಳಲ್ಲಿ ಈ ಬೋರ್ಡ್ ಪರೀಕ್ಷೆ ನಡೆಯುತ್ತಿದೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ಹೇಳಿದೆ.

ಕರ್ನಾಟಕದಲ್ಲಿ ಈ ಸಲ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವುದಕ್ಕೆ ಒಟ್ಟು 8,69,968 ವಿದ್ಯಾರ್ಥಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ. ಈ ಪೈಕಿ 4,28,058 ಬಾಲಕಿಯರಿದ್ದಾರೆ. 4,41,910 ಬಾಲಕರು ಕೂಡ ಇದ್ದಾರೆ. ಅದೇ ರೀತಿ, 8,10,368 ಶಾಲಾ ವಿದ್ಯಾರ್ಥಿಗಳು, 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು. ಇನ್ನುಳಿದಂತೆ ವಿಭಿನ್ನ ಸಾಮರ್ಥ್ಯವುಳ್ಳ 5,424 ವಿದ್ಯಾರ್ಥಿಗಳು ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿದ್ದಾರೆ ಎಂದು ಕರ್ನಾಟಕ ಪರೀಕ್ಷಾ ಮಂಡಳಿ ತಿಳಿಸಿದೆ.

---------------------------------

IPL_Entry_Point