Kannada News  /  Karnataka  /  Hd Kumaraswamy Green Signal On Coalition Govt Jds Alliance With Congress Bjp Party With Conditions Karnataka Polls Mgb

JDS Alliance: ಮೈತ್ರಿಗೆ ಹೆಚ್​ಡಿ ಕುಮಾರಸ್ವಾಮಿ ಸಿದ್ಧ; ಆದ್ರೆ, ಷರತ್ತು ಒಪ್ಪುವ ಪಕ್ಷಕ್ಕೆ ಕಿಂಗ್ ಮೇಕರ್​ ಸಾಥ್​

ಮೈತ್ರಿಗೆ ಹೆಚ್​ಡಿ ಕುಮಾರಸ್ವಾಮಿ ಸಿದ್ಧ
ಮೈತ್ರಿಗೆ ಹೆಚ್​ಡಿ ಕುಮಾರಸ್ವಾಮಿ ಸಿದ್ಧ
Meghana B • HT Kannada
May 12, 2023 04:37 PM IST

HD Kumaraswamy on JDS Alliance: ಬಹುತೇಕ ಮತದಾನೋತ್ತರ ಸಮೀಕ್ಷೆಗಳು ಅತಂತ್ರ ಜನಾದೇಶವನ್ನು ತೋರಿಸಿದ್ದು, ಈ ವೇಳೆಯಲ್ಲಿ ಜೆಡಿಎಸ್​ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ ಅವರು ಮೈತ್ರಿಗೆ ಸಿದ್ಧ ಎಂಬ ಸಂದೇಶವನ್ನು ನೀಡಿದ್ದಾರೆ.

ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ (Karnataka Assembly Elections Result) ನಾಳೆ ( ಮೇ 13, ಶನಿವಾರ) ಹೊರಬೀಳಲಿದೆ. ಮತದಾನೋತ್ತರ ಸಮೀಕ್ಷೆಗಳು (Exit Poll) ಅತಂತ್ರ ಜನಾದೇಶವನ್ನು ತೋರಿಸಿದೆ. ಒಂದೆರಡು ಸಮೀಕ್ಷೆಗಳು ಕಾಂಗ್ರೆಸ್‌ಗೆ ಬಹುಮತದ ಸಾಮೀಪ್ಯವನ್ನೂ, ಇನ್ನೊಂದೆರಡು ಸಮೀಕ್ಷೆಗಳು ಬಿಜೆಪಿಗೆ ಬಹುಮತದ ಸಾಮೀಪ್ಯವನ್ನೂ ತೋರಿಸಿವೆ. ಆದರೆ ಯಾವ ಪಕ್ಷವು ಮ್ಯಾಜಿಕ್​ ನಂಬರ್​ ದಾಟುವ ಸಾಧ್ಯತೆಗಳಿವೆ ಎಂಬುದನ್ನು ತೋರಿಸಿಲ್ಲ. ಹೀಗಾಗಿ ಕಾಂಗ್ರೆಸ್​ ಅಥವಾ ಬಿಜೆಪಿ ಪಕ್ಷಗಳು ಬಹುತೇಕ ಜೆಡಿಎಸ್​ ಮೊರೆಹೋಗಲೇ ಬೇಕಾಗುತ್ತದೆ. ಇದೇ ವೇಳೆ ಚುನಾವಣೋತ್ತರ ಮೈತ್ರಿಗೆ ಸಿದ್ಧ ಎಂಬ ಸಂದೇಶವನ್ನು ಜೆಡಿಎಸ್​ ನಾಯಕ, ಮಾಜಿ ಮುಖ್ಯಮಂತ್ರಿ ಹೆಚ್​ ಡಿ ಕುಮಾರಸ್ವಾಮಿ (HD Kumaraswamy) ರವಾನಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮತದಾನದ ಬೆನ್ನಲ್ಲೇ ಸಿಂಗಾಪುರಕ್ಕೆ ಹಾರಿರುವ ಕುಮಾರಸ್ವಾಮಿ ರಿಲ್ಯಾಕ್ಸ್ ಮೂಡ್​ನಲ್ಲಿದ್ದಾರೆ. ಆದರೆ ಅಲ್ಲಿ ಕುಳಿತೇ ರಾಜಕೀಯ ಲೆಕ್ಕಾಚಾರ ಹಾಕುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಜೊತೆ ಮೈತ್ರಿ ಇಲ್ಲ ಎಂದು ಈ ಹಿಂದೆ ಮಾಜಿ ಪ್ರಧಾನಿ, ಜೆಡಿಎಸ್​ ವರಿಷ್ಠ ಹೆಚ್​ ಡಿ ದೇವೇಗೌಡರು ಹೇಳಿದ್ದರು. ಆದರೆ ಇದೀಗ ಅವರ ಪುತ್ರ ಕುಮಾರಸ್ವಾಮಿ ಅವರು ಷರತ್ತುಬದ್ಧ ಮೈತ್ರಿ ಸಂದೇಶ ನೀಡಿದ್ದು, ಫಲಿತಾಂಶದ ಕುರಿತು ತೀವ್ರ ಕುತೂಹಲ ಮೂಡಿದೆ.

ತಮ್ಮ ಸಿಂಗಾಪುರ ಪ್ರವಾಸಕ್ಕೂ ಡೆಕ್ಕನ್ ಹೆರಾಲ್ಡ್ ಪತ್ರಿಕೆ ಜೊತೆ ಮಾತನಾಡಿದ ಹೆಚ್​​ಡಿ ಕುಮಾರಸ್ವಾಮಿ ಅವರು, "ಜೆಡಿಎಸ್ ಕನಿಷ್ಠ 50 ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದೆ ಮತ್ತು ನನ್ನ ಷರತ್ತುಗಳನ್ನು ಒಪ್ಪುವ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಸಿದ್ಧನಿದ್ದೇನೆ" ಎಂದು ತಿಳಿಸಿದ್ದಾರೆ. ಎಕ್ಸಿಟ್ ಪೋಲ್‌ಗಳು ಜೆಡಿಎಸ್ 30 ಕ್ಕಿಂತ ಕಡಿಮೆ ಸ್ಥಾನಗಳನ್ನು ಗೆಲ್ಲುತ್ತದೆ ಎಂದು ಸೂಚಿಸಿದೆ. ಆದರೆ ಕಾಂಗ್ರೆಸ್ ಅಥವಾ ಬಿಜೆಪಿಯನ್ನು ಮ್ಯಾಜಿಕ್​ ನಂಬರ್​ 113 ತಲುಪಲು ಇಷ್ಟು ಜೆಡಿಎಸ್​ ಸ್ಥಾನಗಳು ಸಾಕಾಗುತ್ತದೆ.

ಹೆಚ್​ಡಿಕೆ ಷರತ್ತುಗಳೇನು?

  • ತಮ್ಮನ್ನು ಮುಖ್ಯಮಂತ್ರಿಯಾಗಿ ಮಾಡಬೇಕು
  • ಸಮ್ಮಿಶ್ರ ಸರ್ಕಾರದಲ್ಲಿ ಹೈಕಮಾಂಡ್ ಹಸ್ತಕ್ಷೇಪ ಇರಬಾರದು
  • ಜಲಸಂಪನ್ಮೂಲ, ಇಂಧನ, ಲೋಕೋಪಯೋಗಿ ಇಲಾಖೆ ಸೇರಿದಂತೆ ಪ್ರಮುಖ ಖಾತೆಗಳು ಜೆಡಿಎಸ್​ ಶಾಸಕರಿಗೆ ನೀಡಬೇಕು
  • ಜೆಡಿಎಸ್ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆಗಳನ್ನು ಜಾರಿಗೆ ತರಲು ಮೈತ್ರಿ ಪಾಲುದಾರರು ಅವಕಾಶ ನೀಡಬೇಕು

2018ರ ಮೈತ್ರಿ ಸರ್ಕಾರ ಪತನ

2018 ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿತ್ತು. 104 ಸ್ಥಾನಗಳನ್ನು ಗಳಿಸಿದ್ದ ಬಿಜೆಪಿ ಅಧಿಕಾರ ಪಡೆದು ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಆದರು. ಆದರೆ ವಿಶ್ವಾಸ ಮತ ಯಾಚನೆ ಮಾಡದೆ 3 ದಿನಗಳ ಮುಖ್ಯಮತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದರಿಂದ 78 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್‌ ಹಾಗೂ 38 ಸ್ಥಾನಗಳನ್ನು ಪಡೆದಿದ್ದ ಜೆಡಿಎಸ್‌ ಮೈತ್ರಿಯಲ್ಲಿ ಹೆಚ್‌ಡಿಕೆ ಮುಖ್ಯಮಂತ್ರಿ , ಕಾಂಗ್ರೆಸ್‌ನ ಡಾ. ಜಿ. ಪರಮೇಶ್ವರ್‌ ಉಪ ಮುಖ್ಯಮಂತ್ರಿ ಆದರು.

ಮೈತ್ರಿ ಪಕ್ಷದಲ್ಲಿ ಭಿನ್ನಮತ ಸ್ಫೋಟಿಸಿದ ಪರಿಣಾಮ 16 ಅತೃಪ್ತ ಶಾಸಕರ ಗುಂಪು ಮುಂಬೈಗೆ ಹಾರಿದ್ದರು. ಇದರ ಲಾಭ ಪಡೆಯಲು ಬಿಜೆಪಿ ಆಪರೇಷನ್‌ ಕಮಲ ಆರಂಭಿಸಿತು. ಇದರ ಪರಿಣಾಮ ಬಹಳಷ್ಟು ಶಾಸಕರು ರಾಜೀನಾಮೆ ಸಲ್ಲಿಸಿದರು. ಮುಂಗಾರು ಅಧಿವೇಶನದಲ್ಲಿ ಹೆಚ್‌ಡಿಕೆ ವಿಶ್ವಾಸಮತ ಸಾಬೀತುಪಡಿಸದ ಕಾರಣ ಈ ಮೈತ್ರಿ ಸರ್ಕಾರ ಕೂಡಾ ಪತನವಾಯ್ತು. ನಂತರ ಯಡಿಯೂರಪ್ಪ ಅವರೇ ಮತ್ತೆ ಸಿಎಂ ಕುರ್ಚಿ ಏರಿದ್ದರು. ಆದರೆ 2 ವರ್ಷಗಳ ನಂತರ ಹೈಕಮಾಂಡ್‌ ಸೂಚನೆ ಮೇರೆಗೆ ಬಿಎಸ್‌ವೈ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದಾದ ನಂತರ ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು.