CM Bommai on economy: ಆರ್ಥಿಕತೆಯಲ್ಲಿ ಭಾರತಕ್ಕೆ ಈಗ ವಿಶ್ವದಲ್ಲಿ 5ನೇ ಸ್ಥಾನ, ಮುಂದಿನ ದಶಕದಲ್ಲಿ 1ನೇ ಸ್ಥಾನಕ್ಕೇರುವ ಗುರಿ: ಸಿಎಂ
ಈ ವರ್ಷ ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಎರಡು ಎನ್.ಸಿ.ಸಿ ಶಿಬಿರ ಗಳನ್ನು ಏರ್ಪಡಿಸಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಬೆಂಗಳೂರು: ನಮ್ಮ ಪ್ರಧಾನಿ ದೇಶ ಮೊದಲು ಎಂದು ಆಲೋಚಿಸುತ್ತಾರೆ. ದೇಶ ಆರ್ಥಿಕವಾಗಿ ಬೆಳೆಯಬೇಕೆಂಬ ಆಲೋಚನೆ ಹೊಂದಿದ್ದಾರೆ. ಈಗ ನಾವು ವಿಶ್ವದಲ್ಲಿ 5 ನೇ ಸ್ಥಾನದಲ್ಲಿದ್ದೇವೆ. ಹತ್ತು ವರ್ಷಗಳಲ್ಲಿ ದೇಶ ವಿಶ್ವದಲ್ಲಿ ನಂಬರ್ ಒನ್ ಸ್ಥಾನಕ್ಕೆ ತಲುಪುವ ಗುರಿ ಹೊಂದಿದ್ದೇವೆ. ಅದಕ್ಕೆ ಯುವಕರ ಪಾತ್ರ ಬಹಳ ಮುಖ್ಯ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಟ್ರೆಂಡಿಂಗ್ ಸುದ್ದಿ
ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡಿದ್ದ ಕರ್ನಾಟಕ ಹಾಗೂ ಗೋವಾ ರಾಜ್ಯ ಎನ್ ಸಿ ಸಿ ಕೆಡೆಟ್ ಗಳಿಗೆ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಿಎಂ, ದೇಶದ ಶೇ.46ರಷ್ಟು ಜನಸಂಖ್ಯೆಯ ಯುವಕರು ನಮ್ಮ ದೇಶದ ಆಸ್ತಿ ಅಂತ ನಮ್ಮ ಪ್ರಧಾನಿ ದೇಶದ ಯುವಕರ ಸಾಮರ್ಥ್ಯ ಅರಿತು ಸ್ಕಿಲ್ ಇಂಡಿಯಾ ತರಬೇತಿ ಆರಂಭಿಸಿದ್ದಾರೆ ಎಂದರು.
ಯುವಕರು ತಮ್ಮ ಪಠ್ಯ ಚಟುವಟಿಕೆಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳ ಬಗ್ಗೆ ಆಸಕ್ತಿ ಇರುವವರಿಗೆ ಕೌಶಲ್ಯ ತರಬೇತಿ ನೀಡಲಾಗುವುದು. ಈ ವರ್ಷ ಕಲ್ಯಾಣ ಕರ್ನಾಟಕ ಹಾಗೂ ಮಧ್ಯ ಕರ್ನಾಟಕ ಭಾಗದಲ್ಲಿ ಎರಡು ಎನ್.ಸಿ.ಸಿ ಶಿಬಿರ ಗಳನ್ನು ಏರ್ಪಡಿಸಲಾಗುವುದು ಹಾಗೂ ಅದಕ್ಕೆ ಅಗತ್ಯವಿರುವ ಎಲ್ಲ ಸವಲತ್ತುಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.
ಎನ್ ಸಿಸಿ ಕೆಡೆಟ್ ಗಳು ಗಣ ರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಂಡು ಕರ್ನಾಟಕ ಹಾಗೂ ಗೋವಾ ರಾಜ್ಯ ಹೆಮ್ಮೆ ಪಡುವಂತೆ ಮಾಡಿದ್ದಾರೆ. ಹಾಗೂ ಪ್ರಶಸ್ತಿಗಳನ್ನು ಪಡೆದಿದ್ದಾರೆ. ಗಣರಾಜ್ಯೋತ್ಸವ ಪರೇಡ್ ನಲ್ಲಿ ಪಾಲ್ಗೊಳ್ಳುವುದು ಸುಲಭವಲ್ಲ. 95 ಸಾವಿರ ಕೆಡೆಟ್ ಗಳ ಪೈಕಿ 111 ಮಂದಿ ಮಾತ್ರ ಆಯ್ಕೆಯಾಗಿದ್ದು, ಇದು ನಿಮ್ಮ ಸಾಮರ್ಥ್ಯಕ್ಕೆ ಹಿಡಿದ ಕನ್ನಡಿ ಎಂದು ಎನ್ ಸಿಸಿ ಕೆಡೆಟ್ ಗಳನ್ನು ಶ್ಲಾಘಿಸಿದರು.
ರೆಜಿಮೆಂಟ್ ಮಾದರಿಯಲ್ಲಿ ಎನ್.ಸಿ.ಸಿ ಬೆಳೆಯಬೇಕು
ಎನ್ ಸಿ ಸಿ ರೆಜಿಮೆಂಟ್ ಮಾದರಿಯಲ್ಲಿ ಬೆಳೆಯಬೇಕು. ಬೆಟಾಲಿಯನ್ ಗಳನ್ನು ರೇಜಿಮೆಂಟ್ ಗಳಾಗಿ ಕಟ್ಟಿದಂತೆಯೇ ಎನ್.ಸಿ.ಸಿ ಯನ್ನೂ ರೆಜಿಮೆಂಟ್ ಗಳಾಗಿ ಬೆಳೆಸಬೇಕು. ಆಗ ಮಾತ್ರ ಎನ್.ಸಿ.ಸಿ ಗೆ ಪ್ರಾಮುಖ್ಯತೆ ದೊರೆಯುತ್ತದೆ ಹಾಗೂ ಯುವಕರೂ ಸೇರ್ಪಡೆ ಯಾಗಲು ಉತ್ತೇಜನ ದೊರೆಯುತ್ತದೆ ಎಂದರು.
ಈ ವರ್ಷ ಹೊಸ 75 ಯುನಿಟ್ ಗಳ ಪ್ರಾರಂಭ
ಎನ್ ಸಿಸಿಯಲ್ಲಿ ಕಲಿತ ಧೈರ್ಯ, ಆತ್ಮವಿಶ್ವಾಸ ಜೀವನದಲ್ಲಿ ನಿಮ್ಮನ್ನು ಯಶಸ್ವಿಗೊಳಿಸುತ್ತದೆ. ರಾಜ್ಯ ಸರ್ಕಾರ ಎನ್.ಸಿ.ಸಿ ಗೆ ಅಗತ್ಯವಿರುವ ನೆರವು ನೀಡುತ್ತದೆ. ಕಳೆದ ವರ್ಷ ಸುಭಾಸಚಂದ್ರ ಬೋಸ್ ಅವರ ಜನ್ಮ ದಿನಾಚರಣೆ ಅಂಗವಾಗಿ 75 ಹೊಸ ಯುನಿಟ್ ಆರಂಭಿಸುವುದಾಗಿ ಹೇಳಿದ್ದೆವು. ಈ ವರ್ಷ ಹೊಸದಾಗಿ 75 ಯುನಿಟ್ ಗಳನ್ನು ಆರಂಭವಾಗಲಿವೆ. ಕರ್ನಾಟಕದ ಇತಿಹಾಸದಲ್ಲಿ ಮೊದಲ ಬಾರಿಗೆ 75 ಯೂನಿಟ್ ಗಳನ್ನು ಸೇರಿಸಲಾಗಿದೆ. ಎನ್ ಸಿಸಿಯನ್ನು ಪ್ರೌಢ ಶಾಲಾ ಮಟ್ಟಕ್ಕೆ ವಿಸ್ತರಿಸಬೇಕು. ಕರಾವಳಿಯಲ್ಲಿ ಈ ವರ್ಷ 2,800 ಕ್ಕೂ ಹೆಚ್ಚು ಹೊಸ ಎನ್ ಸಿಸಿ ಕೆಡೆಟ್ ಗಳು ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.
ಪರಿಶ್ರಮ ಅಗತ್ಯ
ಬಹುತೇಕರು ಅದೃಷ್ಟದ ಮೇಲೆ ಹೆಚ್ಚು ನಂಬಿಕೆ ಇಟ್ಟಿರುತ್ತಾರೆ. ಆದರೆ ಪರಿಶ್ರಮಕ್ಕೂ ಮಿಗಿಲಾದುದು ಯಾವುದೂ ಇಲ್ಲ. ಎನ್ ಸಿ ಸಿ ಕೆಡೆಟ್ ಗಳು ದೇಶ, ರಾಜ್ಯ, ತಂದೆ ತಾಯಿಗಳನ್ನು ಪ್ರೀತಿಸಿ ಗೌರವಿಸುವ ಕೆಲಸ ಮಾಡಬೇಕು ಎಂದರು.
ಸಚಿವರಾದ ಡಾ: ಸಿ.ಎನ್ ಅಶ್ವತ್ಥ್ ನಾರಾಯಣ್, ಬಿ.ಎ. ಬಸವರಾಜ , ಕರ್ನಾಟಕ ಹಾಗೂ ಗೋವಾ ರಾಜ್ಯಗಳ ಎನ್.ಸಿ.ಸಿ.ಕಂಟಿಂಜೆಂಟ್ ಮುಖ್ಯಸ್ಥರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.