ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆಯ ರನ್ ಚೇಸ್; ಕೆಕೆಆರ್ ವಿರುದ್ಧ 262 ರನ್ ಗುರಿ ಬೆನ್ನಟ್ಟಿ ಗೆದ್ದ ಪಂಜಾಬ್ ಕಿಂಗ್ಸ್
Kolkata Knight Riders vs Punjab Kings: 17ನೇ ಆವೃತ್ತಿಯ ಐಪಿಎಲ್ನ 42ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನೀಡಿದ್ದ 262 ರನ್ ಬೃಹತ್ ಮೊತ್ತವನ್ನು ಬೇಟೆಯಾಡಿದ ಪಂಜಾಬ್ ಕಿಂಗ್ಸ್ ರೋಚಕ ಗೆಲುವು ಸಾಧಿಸಿ ವಿಶ್ವದಾಖಲೆ ಬರೆದಿದೆ.
ಹೈಸ್ಕೋರಿಂಗ್ ಗೇಮ್ನಲ್ಲಿ ಪಂಜಾಬ್ ಕಿಂಗ್ಸ್ ತಂಡ ವಿಶ್ವದಾಖಲೆಯ ಜಯ ದಾಖಲಿಸಿದೆ. ಜಾನಿ ಬೈರ್ಸ್ಟೋ ಮತ್ತು ಶಶಾಂಕ್ ಸಿಂಗ್ ಕ್ರೂರ ಬ್ಯಾಟಿಂಗ್ ನಡೆಸಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 8 ವಿಕೆಟ್ಗಳ ಗೆಲುವಿನ ಕೇಕೆ ಹಾಕಿದ್ದು, 262 ರನ್ಗಳ ಬೃಹತ್ ಮೊತ್ತವನ್ನು ಬೆನ್ನಟ್ಟಲು ಇನ್ನೂ 8 ಎಸೆತಗಳನ್ನು ಬಾಕಿ ಉಳಿಸಿದ್ದಾರೆ. ಇದು ಟಿ20 ಕ್ರಿಕೆಟ್ ಇತಿಹಾಸದಲ್ಲಿ ದಾಖಲೆಯ ರನ್ ಚೇಸ್ ಆಗಿದೆ. ಮೈದಾನದ ಅಷ್ಟ ದಿಕ್ಕುಗಳಿಗೂ ಚೆಂಡಿನ ದರ್ಶನ ಮಾಡಿದ ಉಭಯ ತಂಡಗಳು, ನೆರೆದಿದ್ದ ಫ್ಯಾನ್ಸ್ ಭರಪೂರ ಮನರಂಜನೆ ನೀಡಿದ್ದಾರೆ.
ಕೋಲ್ಕತ್ತಾದ ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗಿಳಿದ ಕೆಕೆಆರ್, ಮತ್ತೊಂದು ಬೃಹತ್ ಮೊತ್ತ ಪೇರಿಸಿತು. ಸುನಿಲ್ ನರೇನ್ (71) ಮತ್ತು ಫಿಲ್ ಸಾಲ್ಟ್ (75) ಅವರ ಬಿರುಸಿನ ಅರ್ಧಶತಕಗಳ ಸಹಾಯದಿಂದ ಕೋಲ್ಕತ್ತಾ, 20 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 261 ರನ್ ಬಾರಿಸಿತು. ಈ ಗುರಿ ಬೆನ್ನಟ್ಟಿದ ಪಂಜಾಬ್ ಇನ್ನೂ 8 ಎಸೆತಗಳನ್ನು ಉಳಿಸಿ ರೋಚಕ ಗೆಲುವು ಸಾಧಿಸಿತು. ಜಾನಿ ಬೈರ್ಸ್ಟೋ (108*), ಶಶಾಂಕ್ ಸಿಂಗ್ (68*) ಬಿರುಸಿನ ಆಟಕ್ಕೆ ಕೆಕೆಆರ್ ಬೌಲರ್ಗಳು ಚೆಲ್ಲಾಪಿಲ್ಲಿಯಾದರು.
ಟಿ20 ಕ್ರಿಕೆಟ್ ಇತಿಹಾಸದಲ್ಲಿ ವಿಶ್ವದಾಖಲೆಯ ರನ್ ಚೇಸ್
ಟಿ20 ಕ್ರಿಕೆಟ್ ಇತಿಹಾಸದಲ್ಲಿ ಪಂಜಾಬ್ ಕಿಂಗ್ಸ್ ಹೊಸ ಇತಿಹಾಸ ನಿರ್ಮಿಸಿದೆ. ಇದರೊಂದಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ದಕ್ಷಿಣ ಆಫ್ರಿಕಾ ನಿರ್ಮಿಸಿದ್ದ ದಾಖಲೆಯನ್ನು ಪುಡಿಗಟ್ಟಿದೆ. 2023ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ದಕ್ಷಿಣ ಆಫ್ರಿಕಾ 259 ರನ್ಗಳ ಚೇಸ್ ಮಾಡಿತ್ತು. ಇದೀಗ 262 ರನ್ಗಳ ಗುರಿ ಬೆನ್ನಟ್ಟಿ ಹೊಸ ಚರಿತ್ರೆ ಸೃಷ್ಟಿಸಿದೆ. ಐಪಿಎಲ್ನಲ್ಲಿ ಆರ್ಸಿಬಿ ದಾಖಲೆಯನ್ನು ಸರಿಗಟ್ಟಿದೆ. ಚೇಸಿಂಗ್ನಲ್ಲಿ ಅತ್ಯಧಿಕ ಮೊತ್ತ ಕಲೆ ಹಾಕಿದ ಎರಡನೇ ತಂಡ ಎನಿಸಿದೆ. ಆರ್ಸಿಬಿ ಚೇಸಿಂಗ್ನಲ್ಲಿ 262 ರನ್ ಪೇರಿಸಿದೆ.
ಜಾನಿ ಬೈರ್ಸ್ಟೋ, ಶಶಾಂಕ್ ಸಿಂಗ್, ಪ್ರಭು ಬೆಂಕಿ ಆಟ
ಬೃಹತ್ ಮೊತ್ತ ಬೆನ್ನಟ್ಟಲು ಕ್ರೀಸ್ಗೆ ಬಂದ ಪಂಜಾಬ್ ಸಹ ಭರ್ಜರಿ ಆರಂಭ ಪಡೆಯಿತು. ಪ್ರಭುಸಿಮ್ರಾನ್ ಸಿಂಗ್ ಮತ್ತು ಜಾನಿ ಬೈರ್ಸ್ಟೋ ಮೊದಲ ವಿಕೆಟ್ಗೆ 6 ಓವರ್ಗಳಲ್ಲಿ 93 ರನ್ ಕಲೆ ಹಾಕಿದರು. ಬೌಲರ್ಗಳ ಮೇಲೆ ಸವಾರಿ ಮಾಡಿದ ಪ್ರಭು, 20 ಎಸೆತಗಳಲ್ಲಿ 5 ಸಿಕ್ಸರ್, 4 ಸಿಕ್ಸರ್ ಸಹಿತ 54 ರನ್ ಸಿಡಿಸಿದರು. ಆದರೆ ಅನಗತ್ಯ ರನ್ ಕದಿಯಲು ಯತ್ನಿಸಿ ರನೌಟಾದರು. ಬಳಿಕ ರಿಲೀ ರೋಸೋ 28 ರನ್ ಗಳಿಸಿ ಔಟಾದರು.
ಆದರೆ, ಜಾನಿಯೊಂದಿಗೆ 85 ರನ್ಗಳ ಪಾಲುದಾರಿಕೆ ನೀಡಿ ಗಮನ ಸೆಳೆದರು. ಬೈರ್ಸ್ಟೋ ಮಧ್ಯಮ ಓವರ್ಗಳಲ್ಲೂ ರನ್ ಕೊರತೆ ಕಾಡದಂತೆ ನೋಡಿಕೊಂಡರು. ಅಲ್ಲದೆ, ಪಂದ್ಯವನ್ನು ಸೇಫ್ ಜೋನ್ಗೆ ತಂದು ನಿಲ್ಲಿಸಿದರು. ರೋಸೋ ಔಟಾದಾಗ ಪಂಜಾಬ್ ಗೆಲುವಿಗೆ ಇನ್ನೂ 84 ರನ್ಗಳ ಅಗತ್ಯ ಇತ್ತು. ಆದರೆ ಕಣಕ್ಕಿಳಿದ ಇನ್ಫಾರ್ಮ್ ಬ್ಯಾಟರ್ ಶಶಾಂಕ್ ಸಿಂಗ್, ಅಕ್ಷರಶಃ ಬೌಲರ್ಗಳ ಮೇಲೆ ದಂಡಯಾತ್ರೆ ನಡೆಸಿದರು. ಇದರ ಜಾನಿ ಐಪಿಎಲ್ನಲ್ಲಿ 2ನೇ ಶತಕ ಪೂರೈಸಿದರು.
ಸುನಿಲ್ ನರೇನ್ ಓವರ್ನಲ್ಲಿ ಸಿಂಗಲ್ಸ್ ಆಡಿದ ಈ ಜೋಡಿ, ಉಳಿದ ಬೌಲರ್ಗಳಿಗೆ ಸರಿಯಾಗಿ ದಂಡಿಸಿದರು. ಕೇವಲ 28 ಎಸೆತಗಳಲ್ಲಿ 8 ಭರ್ಜರಿ ಸಿಕ್ಸರ್, 2 ಬೌಂಡರಿ ಸಹಿತ ಅಜೇಯ 68 ರನ್ ಚಚ್ಚಿ ವಿಶ್ವದಾಖಲೆಯ ರನ್ ಚೇಸ್ನಲ್ಲಿ ಪ್ರಮುಖ ಪಾತ್ರವಹಿಸಿದರು. ಮತ್ತೊಂದೆಡೆ ಜಾನಿ 48 ಎಸೆತಗಳಲ್ಲಿ 9 ಸಿಕ್ಸರ್, 8 ಬೌಂಡರಿ ಅಜೇಯ 108 ರನ್ ಗಳಿಸಿದರು. 18.4 ಓವರ್ಗಳಲ್ಲೇ 262 ರನ್ಗಳ ಮುಟ್ಟಿದರು. ಒಟ್ಟಾರೆ ಪಂದ್ಯದಲ್ಲಿ 42 ಸಿಕ್ಸರ್ಗಳು ದಾಖಲಾಗಿವೆ. ಸುನಿಲ್ ನರೇನ್ 4 ಓವರ್ಗಳಲ್ಲಿ 24 ರನ್, 1 ವಿಕೆಟ್ ಪಡೆದರೆ, ಉಳಿದ ಬೌಲರ್ಗಳ 14.4 ಓವರ್ಗಳಲ್ಲಿ 236 ರನ್ ಹರಿದು ಬಂದಿದೆ.
ಕೆಕೆಆರ್ ಮತ್ತೊಂದು ಬೃಹತ್ ಮೊತ್ತ
ಮೊದಲು ಬ್ಯಾಟಿಂಗ್ ನಡೆಸಿದ ಕೆಕೆಆರ್ಗೆ ಸುನಿಲ್ ನರೇನ್ ಮತ್ತು ಫಿಲ್ ಸಾಲ್ಟ್ ಬಿರುಸಿನ ಆರಂಭ ಒದಗಿಸಿದರು. ಪಂಜಾಬ್ ಬೌಲರ್ಗಳ ಬೆವರಿಳಿಸಿದ ಈ ಆರಂಭಿಕ ಜೋಡಿ ಮೊದಲ ವಿಕೆಟ್ಗೆ 10.2 ಓವರ್ಗಳಲ್ಲಿ 138 ರನ್ಗಳ ಸ್ಫೋಟಕ ಜೊತೆಯಾಟವಾಡಿತು. ನರೇನ್ 32 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಸಹಿತ 71 ರನ್ ಬಾರಿಸಿದರು. ಸಾಲ್ಟ್ 37 ಎಸೆತಗಳಲ್ಲಿ 6 ಬೌಂಡರಿ, 6 ಸಿಕ್ಸರ್ ಸಹಿತ 75 ರನ್ ಚಚ್ಚಿದರು. ಈ ಇಬ್ಬರ 3 ಕ್ಯಾಚ್ಗಳನ್ನು ಆರಂಭದಲ್ಲೇ ಕಿಂಗ್ಸ್ ಫೀಲ್ಡರ್ಸ್ ಕೈಚೆಲ್ಲಿದರು.
ಇವರಿಬ್ಬರ ಆಕ್ರಮಣಕಾರಿ ಆಟದ ನೆರವಿನಿಂದ ಬೃಹತ್ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಇವರಿಗೆ ವೆಂಕಟೇಶ್ ಅಯ್ಯರ್ ಅಜೇಯ 39 ರನ್, ಆಂಡ್ರೆ ರಸೆಲ್ 24, ಶ್ರೇಯಸ್ ಅಯ್ಯರ್ 28 ರನ್ಗಳ ಕೊಡುಗೆ ನೀಡಿದರು. ಪರಿಣಾಮ ಕೆಕೆಆರ್ ಎರಡನೇ ಬಾರಿಗೆ 250ರ ಗಡಿ ದಾಟಲು ನೆರವಾಯಿತು. ಪಂಜಾಬ್ ಬೌಲರ್ಸ್ ಸಹ ತುಂಬಾ ದುಬಾರಿಯಾದರು. ವಿಕೆಟ್ ಪಡೆಯಲು ಪರದಾಡಿದರು. ಅರ್ಷದೀಪ್ ಸಿಂಗ್ 2, ಸ್ಯಾಮ್ ಕರನ್, ಹರ್ಷಲ್ ಪಟೇಲ್, ರಾಹುಲ್ ಚಹರ್ 1 ವಿಕೆಟ್ ಪಡೆದರು.
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ