ಕನ್ನಡ ಸುದ್ದಿ  /  Karnataka  /  Karnataka Election 2023: Bjp Rules Out Alliance With Jds What Is The Calculation Now

Karnataka election 2023: ಜೆಡಿಎಸ್‌ ಜತೆಗೆ ಮೈತ್ರಿ; ಬಿಜೆಪಿ ನಾಯಕರ ಲೆಕ್ಕಾಚಾರ ಏನು?

Karnataka election 2023: ಬಿಜೆಪಿಗೆ ಬಹುಮತ ಸಿಗದೇ ಇದ್ದರೂ, ಕಾಂಗ್ರೆಸ್‌ಗೆ ಬಹುಮತ ಸಿಗದೇ ಇದ್ದರೂ ಮೈತ್ರಿಗೆ ಸಿಗುವ ಪಕ್ಷ ಜೆಡಿಎಸ್‌. ಹೀಗಾಗಿ ಅತಂತ್ರ ಫಲಿತಾಂಶ ಬಂದಾಗ ಅದರ ಪ್ರಯೋಜನ ಬಹುತೇಕ ಜೆಡಿಎಸ್‌ ಪಾಲಿಗೆ. ಈ ಸನ್ನಿವೇಶದಲ್ಲಿ ಬಿಜೆಪಿ ನಾಯಕರ ಲೆಕ್ಕಾಚಾರ ಏನು?

ಕೇಂದ್ರ ಗೃಹ ಸಚಿವ ಅಮಿತ್‌ ಷಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಾಂದರ್ಭಿಕ ಚಿತ್ರ)
ಕೇಂದ್ರ ಗೃಹ ಸಚಿವ ಅಮಿತ್‌ ಷಾ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (ಸಾಂದರ್ಭಿಕ ಚಿತ್ರ)

ರಾಜ್ಯದಲ್ಲಿ ವಿಧಾನಸಭಾ ಚುನಾವಣಾ ಕಣ ನಿಧಾನವಾಗಿ ರಂಗೇರುತ್ತಿದೆ. ಅಧಿಕಾರ ಚುಕ್ಕಾಣಿ ಉಳಿಸಿಕೊಳ್ಳುವುದಕ್ಕೆ ಬಿಜೆಪಿಗೆ ಸ್ಪಷ್ಟ ಬಹುಮತ ಸಿಗಲಿದೆಯೇ? ಅಥವಾ ಕಳೆದ ಸಲದಂತೆ ಅತಂತ್ರವಾಗಬಹುದೇ? ಆದರೆ ಆಡಳಿತ ಚುಕ್ಕಾಣಿ ಹಿಡಿಯಲು ಮೈತ್ರಿ ಅನಿವಾರ್ಯವಾದೀತು. ಆಗ ಜೆಡಿಎಸ್‌ ಜತೆಗೆ ಮೈತ್ರಿ ಮಾಡಿಕೊಳ್ಳಲಿದೆಯೇ ಬಿಜೆಪಿ? ಇಷ್ಟಕ್ಕೂ ಬಿಜೆಪಿ ನಾಯಕರ ಈಗಿನ ಲೆಕ್ಕಾಚಾರ ಏನು?

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 150 ಗೆಲ್ಲಬೇಕು ಎಂಬ ಗುರಿಯನ್ನು ಬಿಜೆಪಿ ನಾಯಕರು ಸ್ವತಃ ಇರಿಸಿಕೊಂಡಿದ್ದಾರೆ. ಚುನಾವಣಾ ಪೂರ್ವದಲ್ಲಿ ಯಾವುದೇ ಪಕ್ಷದ ಜತೆಗೆ ಮೈತ್ರಿ ಇಲ್ಲ ಎಂಬುದರ ಸ್ಪಷ್ಟ ಸೂಚನೆ ಇದು. ಆದಾಗ್ಯೂ, ಬಿಜೆಪಿಗೆ ಬಹುಮತ ಸಿಗದೇ ಇದ್ದರೂ, ಕಾಂಗ್ರೆಸ್‌ಗೆ ಬಹುಮತ ಸಿಗದೇ ಇದ್ದರೂ ಮೈತ್ರಿಗೆ ಸಿಗುವ ಪಕ್ಷ ಜೆಡಿಎಸ್‌. ಹೀಗಾಗಿ ಅತಂತ್ರ ಫಲಿತಾಂಶ ಬಂದಾಗ ಅದರ ಪ್ರಯೋಜನ ಬಹುತೇಕ ಜೆಡಿಎಸ್‌ ಪಾಲಿಗೆ.

ಸರಳ ಬಹುಮತ ಪಡೆಯುವುದಕ್ಕಾಗಿ ಬಿಜೆಪಿ ನಾಯಕರು ಈ ಸಲ ಹಳೆ ಮೈಸೂರು ಪ್ರಾಂತ್ಯವನ್ನೇ ಟಾರ್ಗೆಟ್‌ ಮಾಡಿದ್ದಾರೆ. ಈ ಪ್ರಾಂತ್ಯದ ಜನ ಮಾನಸದಲ್ಲಿ ಬಿಜೆಪಿ-ಜೆಡಿಎಸ್‌ ಸಖ್ಯದ ವಿಚಾರ ಬಲವಾಗಿದೆ. ಅದನ್ನು ಹೋಗಲಾಡಿಸುವ ಪ್ರಯತ್ನಕ್ಕೆ ಈಗ ಬಿಜೆಪಿ ನಾಯಕರು ಮುಂದಾಗಿದ್ದಾರೆ.

ಪಕ್ಷದ ಮೂಲಗಳ ಪ್ರಕಾರ, ಬಿಜೆಪಿ ಈ ಸಲ ಹಳೆ ಮೈಸೂರು ಪ್ರಾಂತ್ಯ ಮತ್ತು ಕಲ್ಯಾಣ ಕರ್ನಾಟಕ ಭಾಗವನ್ನು ಹೆಚ್ಚು ಫೋಕಸ್‌ ಮಾಡುತ್ತಿದ್ದು, ಈ ಭಾಗದಲ್ಲಿ ಜೆಡಿಎಸ್‌ ಮತಬ್ಯಾಂಕ್‌ ಮೇಲೆ ಕಣ್ಣಿಟ್ಟಿದೆ. ಈ ಪ್ರಾಂತ್ಯಗಳಲ್ಲಿ ರಾಜಕೀಯವಾಗಿ ಪ್ರಭಾವಿಯಾಗಿರುವ ಒಕ್ಕಲಿಗ ಸಮುದಾಯದ ಶೇಕಡ 14 ಮತಗಳಿವೆ. ಬಹುತೇಕರು ಇದುವರೆಗೆ ಜೆಡಿಎಸ್‌ ಪರ ಒಲವು ಇರುವಂಥವರು. ಈವರೆಗಿನ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಈ ಮತದಾರರನ್ನು ತಲುಪುವ ಕೆಲಸ ಮಾಡಿಲ್ಲ. ಆದರೆ ಈ ಸಲ ಕೇಂದ್ರ ಗೃಹ ಸಚಿವ ಅಮಿತ್‌ ಷಾ ಡಿಸೆಂಬರ್‌ ತಿಂಗಳಲ್ಲಿ ರಾಜ್ಯಕ್ಕೆ ಬಂದಾಗ ಹಳೆ ಮೈಸೂರು ಪ್ರಾಂತ್ಯದಲ್ಲಿ ಸಂಚಲನ ಮೂಡಿಸಿದರು.

ಹಳೆ ಮೈಸೂರು ಪ್ರಾಂತ್ಯದಲ್ಲಿ ಕುರುಬ, ಲಿಂಗಾಯಿತ, ಒಕ್ಕಲಿಗ ಸಮುದಾಯದ ಪ್ರಭಾವಿ ನಾಯಕರು ಪಕ್ಷ ಸೇರುವುದನ್ನು ಬಿಜೆಪಿ ನಿರೀಕ್ಷಿಸುತ್ತಿದೆ. ಸಚಿವ ಸಂಪುಟದಲ್ಲಿ ಏಳು ಒಕ್ಕಲಿಗ ಸಚಿವರಿದ್ದಾರೆ. ಕೇಂದ್ರದಲ್ಲೂ ಒಬ್ಬ ಒಕ್ಕಲಿಗ ಸಚಿವರಾಗಿದ್ದಾರೆ. ಚುನಾವಣೆ ಘೋಷಣೆ ಆಗುತ್ತಿರುವಂತೆಯೇ ಮಂಡ್ಯ, ಹಾಸನ, ಚಾಮರಾಜನಗರ ಮುಂತಾದೆಡೆ ಒಕ್ಕಲಿಗರು ಬಿಜೆಪಿ ಸೇರಲಿದ್ದಾರೆ ಎಂಬುದು ಬಿಜೆಪಿ ನಾಯಕರ ನಿರೀಕ್ಷೆ.

ಹಳೆ ಮೈಸೂರು ಪ್ರಾಂತ್ಯದ 64 ಸ್ಥಾನಗಳ ಪೈಕಿ ಬಿಜೆಪಿಗೆ ಸದ್ಯ 13 ಸ್ಥಾನಗಳಿವೆ. ಅದೇ ರೀತಿ ಬೆಂಗಳೂರಿನಲ್ಲಿ 28 ಸ್ಥಾನಗಳ ಪೈಕಿ 16, ಕಲ್ಯಾಣ ಕರ್ನಾಟಕ ಭಾಗದಲ್ಲಿ40ರ ಪೈಕಿ 19 ಸ್ಥಾನಗಳಿವೆ. ರಾಜ್ಯದಲ್ಲಿ 2013ರಿಂದ 2018ರ ನಡುವೆ ಕಾಂಗ್ರೆಸ್‌ ಆಳ್ವಿಕೆ ಇತ್ತು. 2018ರಲ್ಲಿ ಬಿಜೆಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದರ ಸರಳ ಬಹುಮತ ಸಿಕ್ಕಿರಲಿಲ್ಲ. ಆಗ ಕಾಂಗ್ರೆಸ್‌ - ಜೆಡಿಎಸ್‌ ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂತು. 2019ರಲ್ಲಿ ಮೈತ್ರಿ ಸರ್ಕಾರದ 18 ಶಾಸಕರು ರಾಜೀನಾಮೆ ನೀಡಿ ಬಿಜೆಪಿ ಸೇರಿದರು. ಬಿಜೆಪಿ ಟಿಕೆಟ್‌ ಪಡೆದು ಉಪಚುನಾವಣೆ ಎದುರಿಸಿದರು. ಬಿಜೆಪಿ ಮತ್ತೆ ಅಧಿಕಾರಕ್ಕೆ ಬಂತು.

ಪಕ್ಷದ ಸಂಘಟನಾತ್ಮಕ ಹೊಣೆಗಾರಿಕೆಗಳಲ್ಲೂ ಬಿಜೆಪಿ ಜಾತಿ ಲೆಕ್ಕಾಚಾರಕ್ಕೆ ಹೆಚ್ಚು ಮಹತ್ವ ನೀಡುತ್ತಿರುವುದು ಕಂಡುಬಂದಿದೆ. ಇನ್ನು ಲಿಂಗಾಯಿತ ಸಮುದಾಯಕ್ಕೆ ಬಂದರೆ, ಮತದಾರರ ಪೈಕಿ ಶೇಕಡ 17 ಪಾಲು ಇವರದ್ದೇ ಆಗಿದೆ. ಇವರ ಬೆಂಬಲದಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ ಎಂಬ ವಿಶ್ವಾಸದಲ್ಲಿದ್ದಾರೆ ಬಿಜೆಪಿ ನಾಯಕರು. ಇನ್ನು ಕರಾವಳಿ ಭಾಗ, ಅದೇನಿದ್ದರೂ ಸಂಘ ಪರಿವಾರದ, ಬಿಜೆಪಿಯ ಭದ್ರಕೋಟೆ. ಹಾಗಾಗಿ ಅಲ್ಲಿ ಬಿಜೆಪಿ ಗೆಲುವಿಗೆ ಸಂಚಕಾರ ಇಲ್ಲ ಎಂಬುದು ಬಿಜೆಪಿ ವರಿಷ್ಠರ ಧೃಡ ಭಾವ.

ಇದನ್ನು ರಾಷ್ಟ್ರೀಯ ಪ್ರಧಾನಕಾರ್ಯದರ್ಶಿ, ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ದೃಢಪಡಿಸಿದ್ದು, ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳಾಗಿವೆ. ಪ್ರಧಾನಿ ಮೋದಿಯವರ ಜನಪ್ರಿಯತೆ ಕೂಡ ಚುನಾವಣೆ ಸಂದರ್ಭದಲ್ಲಿ ಕೆಲಸ ಮಾಡಲಿದೆ. ವಿಪಕ್ಷಗಳ ಮೇಲೆ ಗೆಲುವಿಗೆ ಇಷ್ಟು ಸಾಕಾದೀತು. ಆಡಳಿತ ವಿರೋಧಿ ಅಲೆ ರಾಜ್ಯದಲ್ಲಿ ಇಲ್ಲ. ಬೊಮ್ಮಾಯಿ ಸರ್ಕಾರಕ್ಕೂ ಸ್ವಚ್ಛ ಸರ್ಕಾರದ ಇಮೇಜ್‌ ಇದೆ. ಕಾಂಗ್ರೆಸ್‌ ಪಕ್ಷ ಅಭಿಯಾನಗಳು ಜನರ ಮನಸ್ಥಿತಿಯನ್ನು ಬದಲಾಯಿಸುವಲ್ಲಿ ಸಫಲವಾಗದು. ಕಾಂಗ್ರೆಸ್‌ ಪಕ್ಷದ ಅಭಿಯಾನವು ಕನ್ನಡಿಗರ ಅಸ್ಮಿತೆ ಮೇಲೆ ಕೊಟ್ಟ ಹೊಡೆತವಾಗಿ ಕನ್ನಡಿಗರು ಪರಿಗಣಿಸುತ್ತಾರೆ ಎಂದು ಹೇಳಿದ್ದಾರೆ.

ಎಸ್‌ಸಿ ಸಮುದಾಯದ ಮೀಸಲಾತಿ ಶೇಕಡ 15ರಿಂದ ಶೇಕಡ 17ಕ್ಕೆ, ಎಸ್‌ಟಿ ಸಮುದಾಯದ ಮೀಸಲಾತಿ ಶೇಕಡ 3ರಿಂದ ಶೇಕಡ 7ಕ್ಕೆ ಏರಿಸಿದ್ದು, ಪಕ್ಷಕ್ಕೆ ಲಾಭ ತಂದುಕೊಡಲಿದೆ. ಬಿಎಸ್‌ವೈ ಮತ್ತು ಬೊಮ್ಮಾಯಿ ಜೋಡಿ ಪಕ್ಷವನ್ನು ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಏರಿಸಲಿದೆ ಎಂಬ ವಿಶ್ವಾಸವನ್ನು ಅರುಣ್‌ ಸಿಂಗ್‌ ವ್ಯಕ್ತಪಡಿಸಿದ್ದರು.

ಈ ಲೆಕ್ಕಾಚಾರಗಳೆಲ್ಲವೂ ಸದ್ಯದ ಮಟ್ಟಿಗೆ ಓಡುತ್ತಿರುವಂಥವು. ಕಾಲಕಾಲಕ್ಕೆ ರಾಜಕೀಯ ಲೆಕ್ಕಾಚಾರಗಳು ಬದಲಾಗುವುದನ್ನು ಕೂಡ ನಾವು ಗಮನಿಸಬಹುದು.

IPL_Entry_Point