ಕನ್ನಡ ಸುದ್ದಿ  /  Karnataka  /  Karnataka Election After Voting And Exit Polls Millions Of Crores Betting Is Going In Karnataka On Who Will Win Rmy

Election Betting: ಮತದಾನ ಮುಗೀತು, ಮತಗಟ್ಟೆ ಸಮೀಕ್ಷೆಯೂ ಬಂತು; ಯಾರು ಗೆಲ್ತಾರೆ ಅಂತ ನಡೆಯುತ್ತಿದೆ ಕೋಟಿ ಕೋಟಿ ಬೆಟ್ಟಿಂಗ್

ರಾಜ್ಯ ವಿಧಾನಸಭೆ ಚುನಾವಣೆಯ ಫಲಿತಾಂಶಕ್ಕೆ ಇನ್ನ ಕೆಲವೇ ಗಂಟೆಗಳು ಬಾಕಿದ್ದು, ಇದರ ನಡುವೆ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆಯುತ್ತಿದೆ.

ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಗೆಲ್ಲಲಿದ್ದಾರೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಯಾವ ಅಭ್ಯರ್ಥಿ ಗೆಲ್ಲಲಿದ್ದಾರೆ, ಯಾವ ಪಕ್ಷ ಅಧಿಕಾರಕ್ಕೆ ಬರುತ್ತೆ ಎಂದು ಬೆಟ್ಟಿಂಗ್ ಜೋರಾಗಿ ನಡೆಯುತ್ತಿದೆ.

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆಯ (Karnataka Assembly Elections) ಮತದಾನ ಮುಗಿದು ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರುತ್ತಿದ್ದಂತೆ ರಾಜಕೀಯ ಪಕ್ಷಗಳ ನಾಯಕರು (Political Leaders) ಹಾಗೂ ಅಭ್ಯರ್ಥಿಗಳು (Candidates) ನಿನ್ನೆ (ಮೇ 11, ಗುರುವಾರ) ಹಾಗೂ ಇಂದು (ಮೇ 12, ಶುಕ್ರವಾರ) ಸಖತ್ ರಿಲ್ಯಾಕ್ಸ್ ಮೂಡ್‌ಗೆ ಜಾರಿದ್ದಾರೆ.

ಮತಎಣಿಕೆಗೆ ಇನ್ನ ಕೆಲವು ಗಂಟೆಗಳು ಬಾಕಿದ್ದು, ಅಭ್ಯರ್ಥಿಗಳ ಸೋಲು ಗೆಲುವಿನ ಲೆಕ್ಕಾಚಾರಗಳು ನಡೆಯುತ್ತಿವೆ. ಯಾವ ಅಭ್ಯರ್ಥಿ ಗೆಲ್ಲಬಹುದು, ಯಾವ ಪಕ್ಷ ಅಧಿಕಾರಕ್ಕೆ ಬರಬಹುದು ಎಂಬ ಚರ್ಚೆಗಳು ಆರಂಭವಾಗಿ ಬೆಟ್ಟಿಂಗ್ ಕೂಡ ಜೋರಾಗಿಯೇ ನಡೆಯುತ್ತಿದೆ.

ಪ್ರತಿವರ್ಷದ ಐಪಿಎಲ್ ಬೆಟ್ಟಿಂಗ್‌ಗಿಂತ ಐದು ವರ್ಷಕ್ಕೊಮ್ಮೆ ಬರುವ ಎಲೆಕ್ಷನ್ ಬೆಟ್ಟಿಂಗ್ ಕುತೂಹಲ ಹೆಚ್ಚಿಸಿದ್ದಷ್ಟೇ ಅಲ್ಲದೆ, ಭಾರಿ ಸದ್ದು ಮಾಡುತ್ತಿದೆ. ಸಿಪಾಯಿ ರಾಮು ಸಿನಿಮಾದ ಹಾಡು ಬಾಜಿ ಕಟ್ಟಿ ನೋಡು ಬಾರಾ ಮೀಸೆ ಮಾವ ಅಂತ ಕೆಲವರು ತಮ್ಮ ನೆಚ್ಚಿನ ಅಭ್ಯರ್ಥಿ ಹಾಗೂ ಪಕ್ಷದ ಪರ ಲಕ್ಷಾಂತರ ರೂಪಾಯಿ ಹಣವನ್ನು ಬಾಜಿ ಕಟ್ಟಿದ್ದಾರೆ ಎನ್ನವಾಗಿದೆ. ಕ್ರಿಕೆಟ್ ಬೆಟ್ಟಿಂಗ್‌ಗೆ ಕೆಲವು ಪ್ರತ್ಯೇಕ ವೆಬ್ ಸೈಟ್‌ಗಳು ಹಾಗೂ ಮೊಬೈಲ್ ಅಪ್ಲಿಕೇಷನ್‌ಗಳು ಇರುತ್ತವೆ. ಆದರೆ ಇಲ್ಲಿ ಪಕ್ಷಗಳ ಕಾರ್ಯಕರ್ತರ ನಡುವೆ ನೇರಾ ನೇರ ಬೆಟ್ಟಿಂಗ್ ನಡೆಯುತ್ತಿದೆ.

ಯಾರು ಮುಖ್ಯಮಂತ್ರಿ ಆಗಬಹುದು, ಯಾವ ಪಕ್ಷ ಅಧಿಕಾರಕ್ಕೆ ಬರಬಹುದು, ಕ್ಷೇತ್ರದಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಹಾಗೂ ಪಕ್ಷೇತರರಲ್ಲಿ ಯಾರು ಗೆಲ್ತಾರೆ ಎಂಬ ಬೆಟ್ಟಿಂಗ್‌ಗಳು ಕೆಲವು ಕ್ಷೇತ್ರಗಳಲ್ಲಿ ಜೋರಾಗಿಯೇ ನಡೆಯುತ್ತಿವೆ.

ಏನೇನು ಬೆಟ್ಟಿಂಗ್?

ಮತದಾನ ಮುಗಿದು ಹುರಿಯಾಳುಗಳ ಭವಿಷ್ಯ ಮತಪಟ್ಟಿಗೆಯಲ್ಲಿ ಭದ್ರವಾಗಿದ್ದು, ನಾಳೆ ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಹೀಗಾಗಿ ಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಶುರುವಾಗಿದೆ. ಇದರ ನಡುವೆಯೇ ನೆಚ್ಚಿನ ಅಭ್ಯರ್ಥಿಗಳ ಪರ ಭರ್ಜರಿ ಬೆಟ್ಟಿಂಗ್ ನಡೆಯುತ್ತಿದೆ. ಕಾರು, ಹಸು, ಕುರಿ, ಕೋಳಿ, ಮೇಕೆ, ಜಮೀನು, ಮನೆ, ನಿವೇಶನ, ಮೊಬೈಲ್ ಫೋನ್ ಸೇರಿದಂತೆ ಹಲವು ವಸ್ತುಗಳನ್ನು ಪಣಕ್ಕಿಟ್ಟು ಇದೇ ಅಭ್ಯರ್ಥಿ ಗೆಲ್ಲಲಿದ್ದಾರೆ ಅಂತ ಕೆಲವು ಕಾರ್ಯಕರ್ತರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಒಂದು ಸಾವಿರದಿಂದ 15 ಲಕ್ಷದವರೆಗೆ ಹಣದ ಬೆಟ್ಟಿಂಗ್ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ. ಇದಿಷ್ಟೇ ಅಲ್ಲದೆ, ಸೋತರೆ ತಲೆ, ಮೀಸೆ ಬೋಳಿಸಿಕೊಳ್ಳುವ ಚಿತ್ರ-ವಿಚಿತ್ರ ಬಾಜಿ ಕೂಡ ಗಮನ ಸೆಳೆಯುತ್ತಿದೆ.

ಟ್ರೆಂಡ್ ನೋಡಿಕೊಂಡು ಬೆಟ್ಟಿಂಗ್ ನಿರ್ಧಾರ

ಇಲ್ಲಿ ಅಭ್ಯರ್ಥಿಗಳ ಪರ ಏಕಾಏಕಿ ಲಕ್ಷಾಂತರ ರೂಪಾಯಿ, ಜಮೀನು, ಮನೆ, ನಿವೇಶಗಳನ್ನು ಬೆಟ್ಟಿಂಗ್ ಕಟ್ಟುತ್ತಿಲ್ಲ. ಬದಲಾಗಿ ಕ್ಷೇತ್ರದಲ್ಲಿರುವ ಟ್ರೆಂಡ್, ಯಾರ ಪರ ಹೆಚ್ಚಿನ ಒಲವು ಇದೆ ಎಂಬುದನ್ನು ನೋಡಿಕೊಂಡು ಬೆಟ್ಟಿಂಗ್ ಕಟ್ಟಲಾಗಿದೆ. ಜೊತೆಗೆ ನಿನ್ನೆ ಪ್ರಕಟವಾಗಿರುವ ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳನ್ನು ನೋಡಿಕೊಂಡು ಯಾರ ಪರ ಬೆಟ್ಟಿಂಗ್ ಕಟ್ಟಬೇಕು ಎಂಬ ನಿರ್ಧಾರ ಮಾಡಿದ್ದೇವೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ವಿವರಿಸಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಒಟ್ಟು ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಬಹುತೇಕ ಎಲ್ಲಾ ಕ್ಷೇತ್ರಗಳಲ್ಲೂ ಕೂಡ ಭರ್ಜರಿ ಬೆಟ್ಟಿಂಗ್ ನಡೆಯುತ್ತಿದೆ. ನೆರೆಯ ಆಂಧ್ರಪ್ರದೇಶದ ರಾಯಲಸೀಮಾ ಮಾದರಿಯ ರಾಜಕೀಯಕ್ಕೆ ಹೆಸರಾಗಿರುವ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆಆರ್ ರಮೇಶ್ ಕುಮಾರ್, ಜೆಡಿಎಸ್ ಅಭ್ಯರ್ಥಿ ಜಿಕೆ ವೆಂಕಟಶಿವಾರೆಡ್ಡಿ ಪರವಾಗಿ ಬೆಟ್ಟಿಂಗ್ ನಡೆಯುತ್ತಿದೆ. ಜೊತೆಗೆ ತೀವ್ರ ಕುತೂಹಲ ಕೆರಳಿಸಿರುವ ಮಾಲೂರು ವಿಧಾನಸಭಾ ಕ್ಷೇತ್ರದಲ್ಲೂ ಬೆಟ್ಟಿಂಗ್ ನಡೆಯುತ್ತಿದೆ. ಇಲ್ಲಿ ಪಕ್ಷೇತರ ಅಭ್ಯರ್ಥಿ ಹೂಡಿ ವಿಜಯ್‌ ಕುಮಾರ್, ಬಿಜೆಪಿಯ ಕೆಎಸ್ ಮಂಜುನಾಥ ಗೌಡ, ಕಾಂಗ್ರೆಸ್‌ನ ಕೆ ವೈ ನಂಜೇಗೌಡ ಪರವಾಗಿ ಬೆಟ್ಟಿಂಗ್ ಕಟ್ಟಲಾಗಿದೆ.

ಕೆಎಸ್ ಮಂಜುನಾಥಗೌಡ ಗೆದ್ದೇ ಗೆಲ್ತಾರೆ ಅಂತ ಎರಡು ಎಕರೆ ಜಮೀನು, 5 ಲಕ್ಷಕ್ಕೆ 25 ಲಕ್ಷ ರೂಪಾಯಿ, ಲಾರಿ, ಮನೆ ಹೀಗೆ ಹಲವು ವಸ್ತುಗಳನ್ನು ಕಟ್ಟಲಾಗಿದೆ ಎಂದು ಬಿಜೆಪಿ ಅಭ್ಯರ್ಥಿ ಕೆಎಸ್ ಮಂಜುನಾಥ ಗೌಡರ ಆಪ್ತರೊಬ್ಬರು ಮಾಹಿತಿ ನೀಡಿದ್ದಾರೆ.

ಮತ್ತೊಂದೆಡೆ ತ್ರಿಕೋನ ಸ್ಪರ್ಧೆಯ ಕಣವಾಗಿದ್ದ ಕೋಲಾರದಲ್ಲಿ ಪ್ರಮುಖ ಮೂರು ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಕಾರ್ಯಕರ್ತರು ದೊಡ್ಡ ಪ್ರಮಾಣದ ಬೆಟ್ಟಿಂಗ್ ಕಟ್ಟಿದ್ದಾರೆ. ಬಿಜೆಪಿ ಅಭ್ಯರ್ಥಿ ವರ್ತೂರು ಪ್ರಕಾಶ್, ಕಾಂಗ್ರೆಸ್‌ನ ಕೊತ್ತೂರು ಮಂಜುನಾಥ್, ಜೆಡಿಎಸ್‌ನ ಸಿಎಂಆರ್ ಶ್ರೀನಾಥ್ ಪರವಾಗಿ ಬೆಟ್ಟಿಂಗ್ ನಡೆದಿದೆ. ಕೆಜಿಎಫ್, ಬಂಗಾರಪೇಟೆ, ಮುಳಬಾಗಿಲು ಕೂಡ ಬಾಜಿಗೆ ಹೊರತಾಗಿಲ್ಲ.

ಬೆಟ್ಟಿಂಗ್ ಕಟ್ಟುವುದು ಕಾನೂನು ಬಾಹಿರವಾಗಿದೆ. ಹೀಗಾಗಿ ಇದೆಲ್ಲವೂ ಪಕ್ಷಗಳ ಕಾರ್ಯಕರ್ತರ ನಡುವೆ ಗುಟ್ಟಾಗಿ ನಡೆಯುತ್ತಿದೆ. ಅಂತಿಮವಾಗಿ ನಾಳೆ (ಮೇ 13, ಶನಿವಾರ) ಪ್ರಕಟವಾಗಲಿರುವ ಫಲಿತಾಂಶದ ಬಳಿಕ ಯಾರು ಗೆಲುವು ಸಾಧಿಸುತ್ತಾರೆ, ಯಾರಿಗೆ ಮುಖಭಂಗ ಆಗಲಿದೆ ಎಂಬುದು ಸ್ಪಷ್ಟವಾಗಲಿದೆ.

IPL_Entry_Point