ಕನ್ನಡ ಸುದ್ದಿ  /  ಕರ್ನಾಟಕ  /  Karnataka Election 2023: ಮಂಡ್ಯ ಮೈಸೂರಿನಲ್ಲಿ ಚುನಾವಣೆ ಬೆಟ್ಟಿಂಗ್‌; ಜಮೀನು ಜಾನುವಾರುಗಳನ್ನು ಪಣಕ್ಕೆ ಇಟ್ಟ ಗ್ರಾಮಸ್ಥರು

Karnataka Election 2023: ಮಂಡ್ಯ ಮೈಸೂರಿನಲ್ಲಿ ಚುನಾವಣೆ ಬೆಟ್ಟಿಂಗ್‌; ಜಮೀನು ಜಾನುವಾರುಗಳನ್ನು ಪಣಕ್ಕೆ ಇಟ್ಟ ಗ್ರಾಮಸ್ಥರು

ಜನರು ಛಾಪಾ ಕಾಗದದಲ್ಲಿ 5 ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿರುವ ಸುದ್ದಿ ಹೆಚ್.ಡಿ. ಕೋಟೆ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಪ್ರಕಾಶ್‌ ಹಾಗೂ ಶಿವರಾಜ್‌ ಎನ್ನುವವರು ಜೆಡಿಎಸ್‌ ಅಭ್ಯರ್ಥಿ ಪರವಾಗಿ, ಜಯರಾಮ್‌ ನಾಯ್ಕ ಎನ್ನುವವವರು ಕಾಂಗ್ರೆಸ್‌ ಅಭ್ಯರ್ಥಿ ಪರ 5 ಲಕ್ಷ ರೂಪಾಯಿ ಕಟ್ಟಿ ಅಗ್ರಿಮೆಂಟ್‌ ಮಾಡಿಕೊಂಡಿದ್ದಾರೆ.

ಮಂಡ್ಯ ಮೈಸೂರಿನಲ್ಲಿ ಚುನಾವಣೆ ಬೆಟ್ಟಿಂಗ್‌
ಮಂಡ್ಯ ಮೈಸೂರಿನಲ್ಲಿ ಚುನಾವಣೆ ಬೆಟ್ಟಿಂಗ್‌

ಮೈಸೂರು: ಕ್ರಿಕೆಟ್‌ ಬಂತೆಂದರೆ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್‌ ಕಟ್ಟುವುದು ಸಾಮಾನ್ಯ. ಆದರೆ ಚುನಾವಣೆ ಫಲಿತಾಂಶದ ವಿಚಾರದಲ್ಲೂ ಬೆಟ್ಟಿಂಗ್‌ ದಂಧೆ ಎಗ್ಗಿಲ್ಲದೆ ಸಾಗುತ್ತಿದೆ ಅನ್ನೋದು ಬಹಳ ಜನರಿಗೆ ತಿಳಿದಿಲ್ಲ.‌ ಎಷ್ಟೋ ಬಾರಿ ಈ ರೀತಿಯ ಬೆಟ್ಟಿಂಗ್‌ ಮಾಡಿ ಜನರು ಹಣ, ಭೂಮಿ, ಅಮೂಲ್ಯ ವಸ್ತುಗಳು, ಮನೆ ಮಠ ಎಲ್ಲವನ್ನೂ ಕಳೆದುಕೊಂಡು ಬೀದಿಗೆ ಬಿದ್ದಿರುವ ಉದಾಹರಣೆಗಳಿವೆ. ನಾಳೆ (ಮೇ 13) ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು ಮಂಡ್ಯ, ಮೈಸೂರಿನಲ್ಲಿ ಎಲೆಕ್ಷನ್‌ ಬೆಟ್ಟಿಂಗ್‌ ದಂಧೆ ನಡೆಯುತ್ತಿರುವ ವಿಚಾರ ಬೆಳಕಿಗೆ ಬಂದಿದೆ.

ಛಾಪಾ ಕಾಗದದಲ್ಲಿ ಅಗ್ರಿಮೆಂಟ್‌ ಮಾಡಿಕೊಂಡ ರಾಜಕೀಯ ಪಕ್ಷಗಳ ಬೆಂಬಲಿಗರು

ಜನರು ಛಾಪಾ ಕಾಗದದಲ್ಲಿ 5 ಲಕ್ಷದ ಬೆಟ್ಟಿಂಗ್ ಅಗ್ರಿಮೆಂಟ್ ಮಾಡಿಕೊಂಡಿರುವ ಸುದ್ದಿ ಹೆಚ್.ಡಿ. ಕೋಟೆ ಕ್ಷೇತ್ರದಲ್ಲಿ ಹರಿದಾಡುತ್ತಿದೆ. ಪ್ರಕಾಶ್‌ ಹಾಗೂ ಶಿವರಾಜ್‌ ಎನ್ನುವವರು ಜೆಡಿಎಸ್‌ ಅಭ್ಯರ್ಥಿ ಪರವಾಗಿ, ಜಯರಾಮ್‌ ನಾಯ್ಕ ಎನ್ನುವವವರು ಕಾಂಗ್ರೆಸ್‌ ಅಭ್ಯರ್ಥಿ ಪರ 5 ಲಕ್ಷ ರೂಪಾಯಿ ಕಟ್ಟಿ ಅಗ್ರಿಮೆಂಟ್‌ ಮಾಡಿಕೊಂಡಿದ್ದಾರೆ. ಎರಡೂ ಗುಂಪಿನವರು 10 ಲಕ್ಷ ರೂಪಾಯಿ ಹಣವನ್ನು ಪೂಜಾ ಎಲೆಕ್ಟ್ರಾನಿಕ್ಸ್‌ ಹಾಗೂ ಹಾರ್ಡ್‌ವೇರ್‌ ಅಂಗಡಿ ಮಾಲೀಕ‌ ನೇಮಿಚಂದ್ ಬಳಿ ನೀಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ಒಂದು ವೇಳೆ ಬಿಜೆಪಿ ಗೆದ್ದರೆ ಇಬ್ಬರು ಹಣವನ್ನು ವಾಪಸ್‌ ಪಡೆಯುವ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ.

ಛಾಪಾ ಕಾಗದದ ಮೇಲೆ ಚುನಾವಣೆ ಬೆಟ್ಟಿಂಗ್‌ ಅಗ್ರಿಮೆಂಟ್
ಛಾಪಾ ಕಾಗದದ ಮೇಲೆ ಚುನಾವಣೆ ಬೆಟ್ಟಿಂಗ್‌ ಅಗ್ರಿಮೆಂಟ್

ಜಮೀನು ಪಣಕ್ಕೆ ಇಟ್ಟ ಕಾಂಗ್ರೆಸ್‌ ಮುಖಂಡ

ಮತ್ತೊಂದೆಡೆ ಪಿರಿಯಾಪಟ್ಟಣ ತಾಲೂಕು ಹಾರನಹಳ್ಳಿ ಗ್ರಾಮದ ಯೋಗೇಶ್ ಗೌಡ ಎಂಬ ಕಾಂಗ್ರೆಸ್‌ ಮುಖಂಡ ಕೂಡಾ ಬೆಟ್ಟಿಂಗ್‌ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ‌ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ವೆಂಕಟೇಶ್ ಗೆದ್ದೇ ಗೆಲ್ಲುತ್ತಾರೆ ಎಂಬ ವಿಶ್ವಾದ ಮೇಲೆ ಈತ ಬರೊಬ್ಬರಿ 1 ಎಕರೆ 37 ಗುಂಟೆ ಜಮೀನನ್ನು ಪಣಕ್ಕೆ ಇಟ್ಟಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಕೆ. ವೆಂಕಟೇಶ್‌ ಖಂಡಿತ ಗೆಲ್ಲುತ್ತಾರೆ. ಬೆಟ್ಟಿಂಗ್‌ ಆಗಿ ನನ್ನ ಜಮೀನು ಕಟ್ಟುತ್ತೇನೆ. ಯಾರು ಬೇಕಾದರೂ ಬರಬಹುದು. ಜೊತೆಗೆ ನನ್ನ ಹೆಂಡತಿ ಮಕ್ಕಳ ಸಹಿ ಹಾಕಿಸಿಕೊಟ್ಟು ಅಗ್ರಿಮೆಂಟ್ ಕೂಡಾ ಮಾಡಿಕೊಡುತ್ತೇನೆ ಎಂದು ಕಾಂಗ್ರೆಸ್‌ ಮುಖಂಡ ವಿಡಿಯೋ ಮಾಡಿ ಸವಾಲು ಹಾಕಿದ್ದಾರೆ.

ಚುನಾವಣೆ ಫಲಿತಾಂಶದ ಮೇಲೆ ಜನರು ನಗದು, ಕೃಷಿ ಭೂಮಿ, ಕುರಿ, ಜಾನುವಾರುಗಳು, ಟ್ರ್ಯಾಕ್ಟರ್‌ಗಳು ಮತ್ತು ಇತರ ವಾಹನಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿರುವ ಪ್ರಕರಣಗಳು ಆಗಿಂದಾಗ್ಗೆ ಬೆಳಕಿಗೆ ಬರುತ್ತಿವೆ. ಬೆಟ್ಟಿಂಗ್ ದಂಧೆಯಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿ ಪ್ರಮುಖವಾಗಿದೆ ಎನ್ನಲಾಗಿದೆ. ಕಳೆದ 30-40 ವರ್ಷಗಳಿಂದ ಅರಕೆರೆಯಲ್ಲಿ ಅತಿ ಹೆಚ್ಚು ಬೆಟ್ಟಿಂಗ್ ನಡೆಯುತ್ತಿದೆ. ಈ ಹಿಂದಿನ ಚುನಾವಣೆಯಲ್ಲಿ ನಗದು, ಬೈಕ್, ಬಂಗಾರದ ಬೆಟ್ಟಿಂಗ್ ಸಾಮಾನ್ಯವಾಗಿದ್ದರೆ, ಈ ಬಾರಿ ಗ್ರಾಮಸ್ಥರು ಆಡು, ಕುರಿಗಳ ಮೇಲೆ ಬೆಟ್ಟಿಂಗ್ ನಡೆಸುತ್ತಿದ್ದಾರೆ ಎನ್ನಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನ ಹರಿಸಿ ಈ ಬೆಟ್ಟಿಂಗ್‌ ದಂಧೆಗೆ ಬ್ರೇಕ್‌ ಹಾಕಬೇಕಾಗಿ ಅನೇಕರು ಮನವಿ ಮಾಡುತ್ತಿದ್ದಾರೆ.

IPL_Entry_Point