Apple iPhone: ಆರ್ಡರ್ ಮಾಡಿದ್ದು ಐಫೋನ್, ಬಂದದ್ದು ನಿರ್ಮಾ ಡಿಟರ್ಜೆಂಟ್, ಕೊಪ್ಪಳದ ವಿದ್ಯಾರ್ಥಿಗೆ ಕೊನೆಗೂ ಸಿಗ್ತು ನ್ಯಾಯ
ಗ್ರಾಹಕರಿಗೆ ಆಗಿರುವ ತೊಂದರೆಗೆ ಪರಿಹಾರ ನೀಡುವಂತೆ ಕೊಪ್ಪಳದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್‌ಗೆ ಆದೇಶ ನೀಡಿದೆ.
ಬೆಂಗಳೂರು: ಆನ್‌ಲೈನ್ ಮೂಲಕ ಖರೀದಿ ಮಾಡುವಾಗ ಎಷ್ಟು ಎಚ್ಚರಿಕೆ ವಹಿಸಿದರೂ ಕಡಿಮೆಯೇ. ಎಷ್ಟೇ ಎಚ್ಚರಿಕೆ ವಹಿಸಿದರೂ ಗ್ರಾಹಕರಿಗೆ ಮೋಸ ಮಾಡಲು ಕಂಪನಿಗಳು ಅಥವಾ ಇನ್ಯಾರೋ ವಂಚಕರು ಕಾಯುತ್ತ ಇರುತ್ತಾರೆ. ಕರ್ನಾಟಕದ ಕೊಪ್ಪಳ ಜಿಲ್ಲೆಯ ವಿದ್ಯಾರ್ಥಿಯೊಬ್ಬರಿಗೆ ಇತ್ತೀಚೆಗೆ ಇದೇ ಅನುಭವವಾಗಿತ್ತು. ಅವರು ಇ ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್ ಮೂಲಕ ಐಫೋನ್ ಆರ್ಡರ್ ಮಾಡಿದ್ದರು. ಡೆಲಿವರಿ ವ್ಯಕ್ತಿ ಆರ್ಡರ್ ನೀಡಿದ ಬಳಿಕ ಬಿಚ್ಚಿ ನೋಡಿದ ಆ ವಿದ್ಯಾರ್ಥಿಗೆ ಷಾಕ್ ಆಗಿತ್ತು. ಏಕೆಂದರೆ, ಚಂದದ ಆಪಲ್ ಐಫೋನ್ ನಿರೀಕ್ಷೆಯಲ್ಲಿದ್ದ ಆ ವಿದ್ಯಾರ್ಥಿಗೆ ಕಂಡದ್ದು ಪ್ಯಾಕ್ ಮಾಡಿದ್ದ ನಿರ್ಮಾ ಡಿಟರ್ಜೆಂಟ್.
ಟ್ರೆಂಡಿಂಗ್ ಸುದ್ದಿ
ಇ-ಕಾಮರ್ಸ್ ಕಂಪನಿ ಫ್ಲಿಪ್‌ಕಾರ್ಟ್‌ನಿಂದ ಐಫೋನ್ ಅನ್ನು ಆರ್ಡರ್ ಮಾಡಿದಾಗ ಕಂಪನಿಯು ‘ನಿರ್ಮಾ’ ಡಿಟರ್ಜೆಂಟ್ ಸೋಪು ಕಳುಹಿಸಿದ್ದಾರೆ ಎಂದು ಕರ್ನಾಟಕದ ಕೊಪ್ಪಳದ ವಿದ್ಯಾರ್ಥಿಯೊಬ್ಬರು ದೂರು ನೀಡಿದ್ದಾರೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ವಿದ್ಯಾರ್ಥಿಗೆ ಆಗಿರುವ ವಂಚನೆಗೆ ಪರಿಹಾರ ನೀಡುವಂತೆ ಕೊಪ್ಪಳದ ಜಿಲ್ಲಾ ಗ್ರಾಹಕ ವಿವಾದ ಪರಿಹಾರ ಆಯೋಗವು ಫ್ಲಿಪ್‌ಕಾರ್ಟ್‌ಗೆ ಆದೇಶ ನೀಡಿದೆ.
ಗ್ರಾಹಕರಿಗೆ ಸೇವಾ ವ್ಯತ್ಯಯ ಉಂಟು ಮಾಡಿರುವುದಕ್ಕೆ ಪರಿಹಾರವಾಗಿ 25000 ರೂ. ನೀಡುವಂತೆ ಫ್ಲಿಪ್‌ಕಾರ್ಟ್ ಮತ್ತು ಅದರ ಚಿಲ್ಲರೆ ವ್ಯಾಪಾರಿಗಳಿಗೆ ಗ್ರಾಹಕ ನ್ಯಾಯಾಲಯ ಆದೇಶಿಸಿದೆ. ಅನ್ಯಾಯದ ವ್ಯಾಪಾರ ಅಭ್ಯಾಸಗಳಿಂದ ಗ್ರಾಹಕರಿಗೆ ಉಂಟಾದ ಮಾನಸಿಕ ಸಂಕಟ, ದೈಹಿಕ ಕಿರುಕುಳಕ್ಕೆ ಪರಿಹಾರ ನೀಡುವಂತೆ ಕೋರ್ಟ್ ತೀರ್ಪು ನೀಡಿದೆ.
ಕೊಪ್ಪಳದ ಹರ್ಷ ಎಸ್. ಎನ್ನುವ ವಿದ್ಯಾರ್ಥಿಗೆ ಫ್ಲಿಪ್‌ಕಾರ್ಟ್‌ನಿಂದ ಮೋಸವಾಗಿತ್ತು. ಇವರು 2021ರಲ್ಲಿ ಐಫೋನ್ ಖರೀದಿಸಲು ಫ್ಲಿಪ್‌ಕಾರ್ಟ್‌ನಲ್ಲಿ ಆರ್ಡರ್ ಮಾಡಿದ್ದರು. ಪಾರ್ಸೆಲ್ ತೆರೆದಾಗ ಆಘಾತಕ್ಕೆ ಒಳಗಾಗಿದ್ದಾರೆ. ಏಕೆಂದರೆ, ಡೆಲಿವರಿ ಪ್ಯಾಕೇಟ್‌ನೊಳಗೆ ಒಂದು ಸಣ್ಣ ಕೀಪ್ಯಾಡ್ ಫೋನ್ ಮತ್ತು 140 ಗ್ರಾಂನ ಒಂದು ನಿರ್ಮಾ ಡಿಟರ್ಜೆಂಟ್ ಸೋಪ್ ಇತ್ತು. ಹರ್ಷಾ ಅವರು ಐಫೋನ್‌ಗಾಗಿ 48, 999 ರೂಪಾಯಿ ಪಾವತಿಸಿದ್ದರು ಎಂದು ವರದಿಗಳು ತಿಳಿಸಿವೆ.
ಈ ತಪ್ಪಿನ ಹೊಣೆಗಾರಿಕೆಯನ್ನು ಮಾರಾಟಗಾರರು ತೆಗೆದುಕೊಳ್ಳಬೇಕು ಎಂದು ಕಳೆದ ವಾರ ಗ್ರಾಹಕ ನ್ಯಾಯಾಲಯವು ಕಳೆದ ವಾರ ತೀರ್ಪು ನೀಡಿದೆ.
"ಈಗ ಎಲ್ಲೆಡೆ ಆನ್‌ಲೈನ್ ಶಾಪಿಂಗ್ ಸಾಮಾನ್ಯವಾಗಿದೆ. ಇದು ಡಿಜಿಟಲ್ ಯುಗ ಮತ್ತು ಇದರಿಂದ ಹಣವೂ ಉಳಿತಾಯವಾಗುತ್ತದೆ. ಆದರೆ, ಉತ್ಪನ್ನವೊಂದನ್ನು ಮಾರಾಟ ಮಾಡಿದ ಬಳಿಕವೂ ಕಂಪನಿಯು ಅದರ ಜವಾಬ್ದಾರಿಯನ್ನು ಹೊಂದಿರಬೇಕು. ತನ್ನ ಗ್ರಾಹಕರಿಗೆ ತೃಪ್ತಿ ಒದಗಿಸುವುದು ಕಂಪನಿಯ ಕರ್ತವ್ಯ. ತಪ್ಪಾದ ಉತ್ಪನ್ನ ಕಳುಹಿಸುವ ಮೂಲಕ ಗ್ರಾಹಕರಿಗೆ ಮೋಸ ಮಾಡಬಾರದು" ಎಂದು ಕೋರ್ಟ್ ತಿಳಿಸಿದೆ.
ಫ್ಲಿಪ್‌ಕಾರ್ಟ್ ಮತ್ತು ಅದರ ರಿಟೇಲ್ ಮಾರಾಟಗಾರರು ತಮ್ಮ ಸೇವಾ ನ್ಯೂನತೆ ಮತ್ತು ಅನುಚಿತ ವ್ಯಾಪಾರಕ್ಕಾಗಿ ಗ್ರಾಹಕನಿಗೆ ಹತ್ತು ಸಾವಿರ ರೂ. ಪರಿಹಾರವನ್ನೂ ನೀಡುವಂತೆ ಕೋರ್ಟ್ ಆದೇಶಿಸಿದೆ. ಗ್ರಾಹಕರಿಗೆ ಉಂಟಾದ ಮಾನಸಿಕ ಮತ್ತು ದೈಹಿಕ ತೊಂದರೆಗಳಿಗಾಗಿ ಹಾಗೂ ಕಾನೂನು ಖರ್ಚು ವೆಚ್ಚಗಳಿಗಾಗಿ ಹದಿನೈದು ಸಾವಿರ ರೂ. ಪರಿಹಾರ ನೀಡುವಂತೆಯೂ ಸೂಚಿಸಿದೆ. ಇದರೊಂದಿಗೆ ಗ್ರಾಹಕ ನೀಡಿರುವ 48,999 ರೂ. ಮೊತ್ತವನ್ನು ಎಂಟು ವಾರಗಳ ಒಳಗೆ ರಿಫಂಡ್ ಮಾಡುವಂತೆಯೂ ಕೋರ್ಟ್ ಆದೇಶಿಸಿದೆ.