ಕನ್ನಡ ಸುದ್ದಿ  /  Karnataka  /  Karwar District News Conflict Between Fishermen And Seabird Dockyard Staff, District Collector Negotiates Pcp

Karwar News: ಕಾರವಾರ ನೌಕಾನೆಲೆ ಸೀಬರ್ಡ್‌ ಸಿಬ್ಬಂದಿಗೂ ಮೀನುಗಾರರಿಗೂ ಸಂಘರ್ಷ, ಜಿಲ್ಲಾಧಿಕಾರಿ ಸಂಧಾನ, ಇಲ್ಲಿದೆ ಸಮಸ್ಯೆಯ ಚಿತ್ರಣ

Karwar district News: ಉತ್ತರ ಕನ್ನಡ ಜಿಲ್ಲೆಯ ಕಾರವಾರದ ಮೀನುಗಾರರು ಸಮುದ್ರದಲ್ಲಿ ಮೀನು ಹಿಡಿಯಲು ಹಾಕುವ ಬಲೆಯನ್ನೇ ತುಂಡರಿಸಿ, ಕಸುಬಿಗೇ ಸಂಚಕಾರ ತರುತ್ತಿದ್ದಾರೆ ಎಂದು ಅಲ್ಲಿನ ಸೀಬರ್ಡ್ ನೌಕಾನೆಲೆ ಸಿಬಂದಿ ವಿರುದ್ಧ ದೂರಿತ್ತಿದ್ದಾರೆ. ಇದೀಗ ಇಬ್ಬರನ್ನೂ ಕೂಡಿಸಿ ಜಿಲ್ಲಾಧಿಕಾರಿ ಸಂಧಾನ ನಡೆಸಿದ್ದಾರೆ. ವಿವರ ಇಲ್ಲಿದೆ.

Karwar News: ಕಾರವಾರ ನೌಕಾನೆಲೆ ಸೀಬರ್ಡ್‌ ಸಿಬ್ಬಂದಿಗೂ ಮೀನುಗಾರರಿಗೂ ಸಂಘರ್ಷ, ಜಿಲ್ಲಾಧಿಕಾರಿ ಸಂಧಾನ, ಇಲ್ಲಿದೆ ಸಮಸ್ಯೆಯ ಚಿತ್ರಣ
Karwar News: ಕಾರವಾರ ನೌಕಾನೆಲೆ ಸೀಬರ್ಡ್‌ ಸಿಬ್ಬಂದಿಗೂ ಮೀನುಗಾರರಿಗೂ ಸಂಘರ್ಷ, ಜಿಲ್ಲಾಧಿಕಾರಿ ಸಂಧಾನ, ಇಲ್ಲಿದೆ ಸಮಸ್ಯೆಯ ಚಿತ್ರಣ (ಸಾಂದರ್ಭಿಕ ಚಿತ್ರ)

ಕಾರವಾರ: ಕರಾವಳಿ ತೀರದಲ್ಲಿ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿರುವ ಸಾವಿರಾರು ಕುಟುಂಬಗಳಿಗೆ ಮೀನುಗಾರಿಕೆಯೇ ಜೀವನಾಧಾರ. ಯಾಂತ್ರಿಕ ಮೀನುಗಾರಿಕಾ ಬೋಟುಗಳ ಮೀನುಗಾರರು, ಆಳ ಸಮುದ್ರಕ್ಕೆ ತೆರಳಿ ಮೀನುಗಾರಿಕೆ ನಡೆಸಿದರೆ, ಸಣ್ಣ ಬೋಟುಗಳ ಮೀನುಗಾರರು, ಸಮುದ್ರ ತೀರದಿಂದ 20 ಕಿ.ಮೀ ವ್ಯಾಪ್ತಿಯಲ್ಲಿ ಮೀನು ಹಿಡಿಯುತ್ತಾರೆ. ಆದರೆ, ಕಾರವಾರದ ಅರಬ್ಬಿ ಸಮುದ್ರ ವ್ಯಾಪ್ತಿಯಲ್ಲಿ ಮೀನುಗಾರಿಕೆಗೆ ನೌಕಾನೆಲೆ ಅಧಿಕಾರಿಗಳು ಕಿರುಕುಳ ಕೊಡುತ್ತಿದ್ದಾರೆ ಎಂಬ ಆರೋಪವನ್ನು ಮೀನುಗಾರರು ಮಾಡುತ್ತಿದ್ದು, ಈ ಕುರಿತು ಪ್ರತಿಭಟನೆಯನ್ನೂ ನಡೆಸಿದ್ದಾರೆ.

ಈ ಹಿನ್ನೆಲೆಯಲ್ಲಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಅವರು ಸಭೆಯೊಂದನ್ನು ನಡೆಸಿದ್ದರು. ಈ ಸಂದರ್ಭ ಮೀನುಗಾರಿಕೆ ಸಂದರ್ಭ ನಿಗದಿಪಡಿಸಿದ ಗಡಿ ದಾಟಿ ಮೀನುಗಾರಿಕೆ ಮಾಡದಂತೆ ಜಾಗೃತಿ ಮೂಡಿಸಬೇಕು. ಒಂದು ವೇಳೆ ಅರಿವಿಗೆ ಬಾರದೆ ಗಡಿ ದಾಟಿ ಬಂದರೆ, ಅದನ್ನು ಪರಿಶೀಲಿಸಿ, ಮಾಹಿತಿ ನೀಡಿ ಅಲ್ಲಿಂದ ತೆರಳುವಂತೆ ಸೂಚಿಸಬೇಕು ಎಂದು ನೌಕಾನೆಲೆ ಪ್ರತಿನಿಧಿಗೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಇಂಥ ಸಂದರ್ಭ ಕಿರುಕುಳ ನೀಡುವ ಬದಲು ಪೊಲೀಸರಿಗೆ ತಿಳಿಸಿ ಎಂದು ಖಡಕ್ ಆಗಿ ಎಚ್ಚರಿಸಿದ್ದಾರೆ.

ಮೀನುಗಾರರ ಸಮಸ್ಯೆ ಏನು?

ಕೆಲ ದಿನಗಳ ಹಿಂದೆ ಮುದಗಾ ಭಾಗದ ಮೀನುಗಾರರು, ನೌಕಾನೆಲೆ ವ್ಯಾಪ್ತಿಯಿಂದ ಏಳೆಂಟು ಕ.ಮೀ. ದೂರದಲ್ಲಿ ಮೀನುಗಾರಿಕೆ ನಡೆಸಿದ್ದರು. ಈ ವೇಳೆ ಏಕಾಏಕಿ ಸ್ಪೀಡ್ ಬೋಟ್ ನಲ್ಲಿ ಆಗಮಿಸಿದ ನೌಕಾನೆಲೆ ಅಧಿಕಾರಿಗಳು, ಮೀನುಗಾರರು ಹಾಕಿದ್ದ ಬಲೆಗಳನ್ನು ತುಂಡರಿಸಿ ತೆರಳಿದ್ದಾರೆ. ವಿನಾ ಕಾರಣ ಅವರು ತೊಂದರೆ ನೀಡುತ್ತಿದ್ದಾರೆ ಎಂದು ಮೀನುಗಾರರಾದ ಶ್ರೀಕಾಂತ್ ದುರ್ಗೇಕರ್ ಆಪಾದಿಸಿದ್ದಾರೆ.

ಮುದಗಾ, ಹಾರವಾಡ ಭಾಗದ ನೂರಾರು ಮೀನುಗಾರರು, ನಿತ್ಯ ಮೀನುಗಾರಿಕೆಗಾಗಿ ನೌಕಾನೆಲೆ ಪ್ರದೇಶವನ್ನೇ ದಾಟಿಕೊಂಡು ಬಂದು, ಅಲ್ಲಿಂದ ದೂರದಲ್ಲಿ ಮೀನುಗಾರಿಕೆ ನಡೆಸುತ್ತಾರೆ. ಆದರೂ ಮೀನುಗಾರರು ಇದ್ದಲ್ಲಿಗೆ ಬರುವ ನೌಕಾನೆಲೆ ಅಧಿಕಾರಿಗಳು, ಬಲೆ ತುಂಡರಿಸುವುದಲ್ಲದೆ, ಕೆಲವೊಮ್ಮೆ ದೋಣಿಗಳು ಪಲ್ಟಿಯಾಗುವಂತೆ ವೇಗವಾಗಿ ಬೋಟು ಚಲಾಯಿಸಿಕೊಂಡು ಹೋಗುತ್ತಾರೆ. ಅರಗಾ ಗ್ರಾಮದಲ್ಲಿ ನೌಕಾನೆಲೆ ಸ್ಥಾಪನೆಗೂ ಮೊದಲು ನೂರಾರು ಮೀನುಗಾರರ ಕುಟುಂಬಗಳೇ ವಾಸವಾಗಿದ್ದು, ಬಳಿಕ ನೌಕಾನೆಲೆಗಾಗಿ ಭೂಮಿ ತ್ಯಾಗ ಮಾಡಿದ್ದಾರೆ. ಇದೀಗ ಅದೇ ಮೀನುಗಾರರಿಗೆ ನೌಕಾನೆಲೆ ಸಿಬಂದಿ ತೊಂದರೆ ನೀಡುತ್ತಿದ್ದಾರೆ. ನಿಂದಿಸುತ್ತಾರೆ ಎನ್ನುತ್ತಾರೆ ಮೀನುಗಾರರಾದ ತೇಲು ತಾಂಡೇಲ.

ಉತ್ತರ ಕನ್ನಡ ಜಿಲ್ಲಾ ಸಹಕಾರ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಮಾತನಾಡಿ, ನೌಕಾನೆಲೆಯವರು ಗುರುತಿಸಿದ ಗಡಿ ಪ್ರದೇಶದ ಹೊರಗೆ ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೂ ನೌಕಾಪಡೆ ಅಧಿಕಾರಿಗಳು, ಸಿಬಂದಿ ವಿನಾ ಕಾರಣ ಬಲೆ ಕತ್ತರಿಸುವುದು, ದೋಣಿ ಮಗುಚಿ ಹಾಕುವುದು, ಮೀನುಗಳನ್ನು ಸಮುದ್ರಕ್ಕೆ ಎಸೆಯುವ ಕೆಲಸ ಮಾಡುತ್ತಿದ್ದಾರೆ ಎಂದರು.

ಸಮುದ್ರದಲ್ಲಿನ ಗಾಳಿ ಮೇಲೆ ಬಲೆ ಎಷ್ಟು ದೂರಕ್ಕೆ ಹೋಗುತ್ತದೆ ಎಂಬುದು ನಿರ್ಧಾರ ಆಗುತ್ತದೆ. ಮೀನುಗಾರರು ಹತ್ತಾರು ಕಿ.ಮೀ.ಗಳಲ್ಲಿ ಬಲೆ ಬೀಸಿದರೂ ಕೆಲವೊಮ್ಮೆ ಗಾಳಿಯ ವೇಗಕ್ಕೆ ಬಲೆ ನೌಕಾನೆಲೆ ಪ್ರದೇಶಕ್ಕೆ ಹೋಗಿ ಬೀಳಬಹುದು. ಇದನ್ನು ಎಳೆಯಲು ಮೂರರಿಂದ ನಾಲ್ಕು ತಾಸು ಬೇಕು, ಕೂಡಲೇ ಎಳೆಯಿರಿ ಎಂದರೆ ಹೇಗೆ? ನೌಕಾನೆಲೆಯವರು ಹೇಳಿದ ಕೂಡಲೇ ಬಲೆ ತೆಗೆಯದಿದ್ದರೆ, ಹಲ್ಲೆ ಮಾಡಿ ನಿಂದಿಸುತ್ತಾರೆ ಎಂದವರ ಆರೋಪ.

ನೌಕಾನೆಲೆಯವರು ಏನು ಹೇಳುತ್ತಾರೆ?

ನೌಕಾನೆಲೆಯ ಭದ್ರತಾ ವಿಭಾಗದ ಕಮಾಂಡರ್ ಆರ್.ಡಿ.ಪವಾರ ಅವರು ಇದನ್ನು ತಳ್ಳಿಹಾಕುತ್ತಾರೆ. ನಮಗೆ ಮೀನುಗಾರರು ಎಂದರೆ ಕಣ್ಣು ಮತ್ತು ಕಿವಿ ಇದ್ದ ಹಾಗೆ. ನಾವು ಯಾರಿಗೂ ತೊಂದರೆ ಕೊಡುವ ಉದ್ದೇಶ ಹೊಂದಿಲ್ಲ. ಮೀನುಗಾರರನ್ನು ಗೌರವ, ಪ್ರೀತಿಯಿಂದ ಕಾಣುತ್ತೇವೆ. ಯುದ್ಧನೌಕೆ, ಯುದ್ಧ ವಿಮಾನ, ವಾಹಕ ನೌಕೆ, ಸಬ್ ಮರೀನ್ ಮೊದಲಾದವುಗಳ ಭದ್ರತೆಗೆ ಬೇಕಾದ ವ್ಯವಸ್ಥೆ ಇರುವ ಕಾರಣ, ನಾವು ಕಟ್ಟೆಚ್ಚರ ವಹಿಸುವುದು ಅನಿವಾರ್ಯ. ಗಡಿ ಸಮೀಪ ಬಂದಾಗ ವಿಚಾರಣೆ ಮಾಡುತ್ತೇವೆ ಎನ್ನುತ್ತಾರೆ.

ಜಿಲ್ಲಾಧಿಕಾರಿ ಸೂಚನೆ ಹೀಗಿದೆ

ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಕಟ್ಟಿ ಎರಡೂ ಕಡೆಯವರಿಗೆ ಈ ರೀತಿಯ ಸೂಚನೆ ನೀಡಿದ್ದು, ಅರಿವಿಗೆ ಬಾರದೆ ನೌಕಾನೆಲೆ ಪ್ರವೇಶಿಸಿದರೆ, ಅವರಿಗೆ ಮಾಹಿತಿ ನೀಡಿ, ಅಲ್ಲಿಂದ ತೆರಳುವಂತೆ ಸೂಚಿಸಬೇಕು. ಕರಾವಳಿ ಕಾವಲು ಪಡೆಗೆ ಮಾಹಿತಿ ನೀಡಬೇಕೇ ಹೊರತು, ಮೀನುಗಾರರಿಗೆ ಕಿರುಕುಳ ನೀಡುವುದು ಸಲ್ಲದು ಎಂದು ಹೇಳಿದ್ದಾರೆ.

ಯಾಕೆ ಈ ಸಂಘರ್ಷ?

ಸೀಬರ್ಡ್ ನೌಕಾನೆಲೆ ಸಮುದ್ರದ ಹಲವು ವ್ಯಾಪ್ತಿಯನ್ನು ಹೊಂದಿದ್ದು, ಭಾರತದ ರಕ್ಷಣಾ ದೃಷ್ಟಿಯಿಂದ ಕಾರವಾರ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಸಂದರ್ಭ ನೂರಾರು ಕುಟುಂಬಗಳು ಜಾಗ ಬಿಟ್ಟುಕೊಟ್ಟಿವೆ. ಇವರಲ್ಲಿ ಬಹುತೇಕರು ಮೀನುಗಾರರೇ ಆಗಿದ್ದಾರೆ. ಈ ಸಮಸ್ಯೆಯೊಂದಾದರೆ, ಇನ್ನೊಂದು ಸಮೃದ್ಧ ಮೀನುಗಾರಿಕೆ ನಡೆಸುವ ಜಾಗದಲ್ಲಿ ನೌಕಾನೆಲೆ ಸಿಬಂದಿ ತಳವೂರಿ, ತಮ್ಮ ಮೀನುಗಾರಿಕೆಗೇ ಕುತ್ತು ತಂದಿದ್ದಾರೆ ಎಂಬ ಕೋಪವೂ ಇದೆ. ಸಾಂಪ್ರದಾಯಿಕ ಮೀನುಗಾರಿಕೆಯನ್ನಷ್ಟೇ ಬಲ್ಲವರು ಇದರಿಂದ ತೊಂದರೆಗೊಳಗಾಗಿದ್ದಾರೆ. ನೌಕಾನೆಲೆಗೆ ತನ್ನದೇ ಆದ ರಕ್ಷಣಾ ವ್ಯೂಹವಿರುತ್ತದೆ. ಇದನ್ನು ಅರಿವಿಲ್ಲದೆ ಪ್ರವೇಶಿಸುವ ಮೀನುಗಾರರನ್ನು ಹ್ಯಾಂಡಲ್ ಮಾಡುವ ವಿಚಾರದಲ್ಲೀಗ ಸಂಘರ್ಷ ಎದುರಾಗಿದೆ.

ವರದಿ: ಹರೀಶ ಮಾಂಬಾಡಿ