Kolar Crime: ಬಳ್ಳಾರಿ ಮೂಲದ ವೈದ್ಯಕೀಯ ವಿದ್ಯಾರ್ಥಿನಿ ಕೋಲಾರದಲ್ಲಿ ಆತ್ಮಹತ್ಯೆ; ವೈದ್ಯರಿಂದ ಕಿರುಕುಳ ಆರೋಪ
Kolar Medical student suicide: ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸಿದ್ದ ದರ್ಶಿನಿ ಎಂವಿಜೆ ಕಾಲೇಜಿನಲ್ಲಿ ಎಂಡಿ, ಪೀಡಿಯಾಟ್ರಿಕ್ಸ್‌ಗೆ (ಮಕ್ಕಳ ತಜ್ಞೆ) ಪ್ರವೇಶ ಪಡೆದು, ಹಾಸ್ಟೆಲ್ನಲ್ಲಿ ವಾಸವಾಗಿದ್ದಳು. ಕೋವಿಡ್ ಸಾಂಕ್ರಾಮಿಕದ ವೇಳೆ ತನ್ನ ತಂದೆಯನ್ನು ಕಳೆದುಕೊಂಡಿದ್ದಳು.
ಕೋಲಾರ: ಈಕೆ ಡಾಕ್ಟರ್ ಆಗುವ ಕನಸು ಹೊತ್ತು ಬಳ್ಳಾರಿ ಜಿಲ್ಲೆಯಿಂದ ಬೆಂಗಳೂರಿಗೆ ಬಂದಿದ್ದಳು. ಆದರೆ ಯಾವುದೋ ಕೆಟ್ಟ ಪರಿಸ್ಥಿತಿ ಈಕೆಯನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾಡಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ಎಂವಿಜೆ ವೈದ್ಯಕೀಯ ಕಾಲೇಜಿನಲ್ಲಿ (MVJ Medical College of Hoskote) ಮೊದಲ ವರ್ಷದ ಎಂ.ಡಿ (ಮಕ್ಕಳ ತಜ್ಞೆ) ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಕೋಲಾರದ ಕೆಂದಟ್ಟಿ ಬಳಿಯ ಕ್ವಾರಿಗೆ ಹಾರಿ ಜೂನ್ 4 (ಭಾನುವಾರ) ರಂದು ಪ್ರಾಣಬಿಟ್ಟಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ಬಳ್ಳಾರಿಯ ಕೌಲ್ ಬಜಾರ್ನ ನಿವಾಸಿ ದರ್ಶಿನಿ (26) ಎಂದು ಗುರುತಿಸಲಾಗಿದೆ. ಕೋಲಾರ ಪೊಲೀಸರ ಪ್ರಕಾರ, ವಿದ್ಯಾರ್ಥಿಯು ಕಾಲೇಜಿನಿಂದ ಸುಮಾರು 25 ಕಿಮೀ ದೂರದಲ್ಲಿರುವ ಕೆಂದಟ್ಟಿ ಕ್ವಾರಿಗೆ ಹೋಗಲು ಆಟೋರಿಕ್ಷಾ ಏರಿದ್ದಾಳೆ. ಕ್ವಾರಿ ತಲುಪಿದ ನಂತರ ಆಕೆ ತನ್ನ ಸ್ನೇಹಿತೆಗೆ ಕರೆ ಮಾಡಿ ದುರಂತ ಹೆಜ್ಜೆಯ ಬಗ್ಗೆ ತಿಳಿಸಿದ್ದಾಳೆ ಎನ್ನಲಾಗಿದೆ.
ಆದರೆ ಆಕೆಯ ಸ್ನೇಹಿತೆ ಪೊಲೀಸರು ಮತ್ತು ಕಾಲೇಜು ಅಧಿಕಾರಿಗಳಿಗೆ ಮಾಹಿತಿ ನೀಡುವಷ್ಟರಲ್ಲಿ ದರ್ಶಿನಿ ಕ್ವಾರಿಗೆ ಹಾರಿ ಸಾವನ್ನಪ್ಪಿದ್ದಳು. ಮಧ್ಯಾಹ್ನದ ವೇಳೆಗೆ ವಿದ್ಯಾರ್ಥಿಯ ಮೃತದೇಹ ಕ್ವಾರಿಯಲ್ಲಿ ಬಿದ್ದಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೊಪ್ಪಳ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಎಂಬಿಬಿಎಸ್ ಮುಗಿಸಿದ್ದ ದರ್ಶಿನಿ ಎಂವಿಜೆ ಕಾಲೇಜಿನಲ್ಲಿ ಎಂಡಿ, ಪೀಡಿಯಾಟ್ರಿಕ್ಸ್‌ಗೆ ಪ್ರವೇಶ ಪಡೆದು, ಹಾಸ್ಟೆಲ್ನಲ್ಲಿ ವಾಸವಾಗಿದ್ದಳು. ಕೋವಿಡ್ ಸಾಂಕ್ರಾಮಿಕದ ವೇಳೆ ತನ್ನ ತಂದೆಯನ್ನು ಕಳೆದುಕೊಂಡಿದ್ದ ದರ್ಶಿನಿಗೆ ತಾಯಿ ಮತ್ತು ಸಹೋದರ ಇದ್ದಾರೆ. ಇವರ ತಾಯಿ ಬಳ್ಳಾರಿಯಲ್ಲಿ ಶಿಕ್ಷಕಿಯಾಗಿದ್ದಾರೆ.
ಕಾಲೇಜು ಅಧಿಕಾರಿಗಳ ಪ್ರಕಾರ ದರ್ಶಿನಿ ಕಾಲೇಜಿನ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಳು. ಭಾನುವಾರ ಬೆಳಗ್ಗೆ 10ರವರೆಗೆ ಕರ್ತವ್ಯ ನಿರ್ವಹಿಸಿದ ದರ್ಶಿನಿ ಬಳಿಕ ಆಸ್ಪತ್ರೆಯಿಂದ ನಿರ್ಗಮಿಸಿದ್ದಳು ಎಂದು ಎಂವಿಜೆ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕಿ ಡಾ.ದಯಾನಂದ ಜಿ ತಿಳಿಸಿದ್ದಾರೆ.
ವೈದ್ಯರಿಂದ ಕಿರುಕುಳ ಆರೋಪ
ದರ್ಶಿನಿ ಸಾವಿನಿಂದ ನೊಂದಿರುವ ಆಕೆಯ ಕುಟುಂಬ ಮಗಳ ಈ ಕಠಿಣ ಹೆಜ್ಜೆಗೆ ಹಿರಿಯ ವೈದ್ಯರೊಬ್ಬರು ನೀಡಿದ ಕಿರುಕುಳವೇ ಕಾರಣ ಎಂದು ಆರೋಪಿಸಿದ್ದಾರೆ. ಸಹೋದರನ ದೂರಿನ ಮೇರೆಗೆ ಕೋಲಾರ ಗ್ರಾಮಾಂತರ ಪೊಲೀಸರು ಕಾಲೇಜಿನ ಹಿರಿಯ ವೈದ್ಯರೊಬ್ಬರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 306 ರ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.