ಕನ್ನಡ ಸುದ್ದಿ  /  Karnataka  /  Metro Pillar Collapse Case: A Case Of Mother-child Death; Engineer, Contractor Responsible- Bmrcl Md Faced Inquiry

Metro pillar collapse case: ತಾಯಿ-ಮಗು ಸಾವಿನ ಪ್ರಕರಣ; ಇಂಜಿನಿಯರ್‌, ಗುತ್ತಿಗೆದಾರ ಹೊಣೆಗಾರರು- ವಿಚಾರಣೆ ಎದುರಿಸಿದ BMRCL MD

Metro pillar collapse case: ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ಗೆ ನೋಟಿಸ್‌ ನೀಡಿದ್ದರು. ಇದರಂತೆ ಅವರು ಶನಿವಾರ ಸಂಜೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರ ಎದುರು ವಿಚಾರಣೆಗೆ ಹಾಜರಾದರು.

ಬೆಂಗಳೂರಿನಲ್ಲಿ ತಾಯಿ - ಮಗು ಸಾವಿಗೆ ಕಾರಣವಾದ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್‌ ಅವಶೇಷ
ಬೆಂಗಳೂರಿನಲ್ಲಿ ತಾಯಿ - ಮಗು ಸಾವಿಗೆ ಕಾರಣವಾದ ನಿರ್ಮಾಣ ಹಂತದ ನಮ್ಮ ಮೆಟ್ರೋ ಪಿಲ್ಲರ್‌ ಅವಶೇಷ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ನಾಗವಾರ ಸಮೀಪ ನಿರ್ಮಾಣ ಹಂತದಲ್ಲಿದ್ದ ಮೆಟ್ರೋ ಪಿಲ್ಲರ್‌ ಕುಸಿದು ತಾಯಿ-ಮಗು ಮೃತಪಟ್ಟ ಪ್ರಕರಣದಲ್ಲಿ ಇಂಜಿನಿಯರ್‌ ಮತ್ತು ಗುತ್ತಿಗೆದಾರ ಹೊಣೆಗಾರರು ಎಂದು ಐಐಎಸ್‌ಸಿ ತಜ್ಞರ ತಂಡ ವರದಿ ನೀಡಲಿದೆ. ಇದೇ ಪ್ರಕರಣ ಸಂಬಂಧ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಶನಿವಾರ ವಿಚಾರಣೆಗೆ ಹಾಜರಾದರು.

ಪ್ರಕರಣದ ತನಿಖೆ ನಡೆಸುತ್ತಿರುವ ಗೋವಿಂದಪುರ ಠಾಣಾ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಬಿಎಂಆರ್‌ಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ಗೆ ನೋಟಿಸ್‌ ನೀಡಿದ್ದರು. ಇದರಂತೆ ಅವರು ಶನಿವಾರ ಸಂಜೆ ಪೂರ್ವ ವಿಭಾಗದ ಡಿಸಿಪಿ ಭೀಮಾಶಂಕರ್ ಗುಳೇದ್ ಅವರ ಎದುರು ವಿಚಾರಣೆಗೆ ಹಾಜರಾದರು.

ವಿಚಾರಣೆ ಬಳಿಕ ಸುದ್ದಿಗಾರರ ಜತೆಗೆ ಮಾತನಾಡಿದ ಅಂಜುಂ ಪರ್ವೇಜ್‌, ವಿಚಾರಣೆಗೆ ಬರುವಂತೆ ಹೇಳಿದ್ದರಿಂದ ಹಾಜರಾಗಿದ್ದೇನೆ. ಘಟನೆಯ ಕುರಿತು ಮತ್ತು ಭವಿಷ್ಯದಲ್ಲಿ ಇಂಥ ದುರಂತ ಸಂಭವಿಸದಂತೆ ತಡೆಯಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್‌ ಸೈನ್ಸ್‌ನ ಪರಿಣತರ ವರದಿ ಕೇಳಿದ್ದೇವೆ. ಬಿಎಂಆರ್‌ಸಿಎಲ್‌ನ ಇಂಜಿನಿಯರ್​ಗಳಿಗೂ ಸುರಕ್ಷತಾ ಕ್ರಮಗಳ ಬಗ್ಗೆ ತರಬೇತಿ ನೀಡುತ್ತಿದ್ದೇವೆ. ಕಾಂಟ್ರಾಕ್ಟ್ ಅಗ್ರಿಮೆಂಟ್ ಪ್ರಕಾರ ನಿರ್ಮಾಣ ಕಂಪನಿಯ ವಿರುದ್ಧ ಕ್ರಮ ಕೈಗೊಳ್ಳಲಿದ್ದೇವೆ. ಭವಿಷ್ಯದಲ್ಲಿ ಈ ರೀತಿ ದುರಂತ ಸಂಭವಿಸದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಮಾಧ್ಯಮ ವರದಿಗಳ ಪ್ರಕಾರ, ಐಐಎಸ್‌ಸಿಯ ಕಿಶೋರ್‌ ಚಂದ್ರ ನೇತೃತ್ವದ ಪರಿಣತರ ತಂಡ ನಿರ್ಮಾಣ ಹಂತದ ಮೆಟ್ರೋ ಪಿಲ್ಲರ್ ಚೌಕಟ್ಟು ಬಿದ್ದು ತಾಯಿ, ಮಗು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸಿದ್ದು, ವರದಿ ಸಿದ್ಧಪಡಿಸಿದೆ. ಐಐಎಸ್‌ಸಿ ಪರಿಣತರ ತಂಡ ತನಿಖೆಯನ್ನು ಪ್ರಾರಂಭಿಸುವಾಗ, ಕಾಮಗಾರಿಗೆ ಬಳಸಿದ್ದ ಕಂಬಿ, ಮರಳು, ಸಿಮೆಂಟ್‌ಗಳ ಗುಣಮಟ್ಟ ಪರಿಶೀಲಿಸಿದೆ. ಅಲ್ಲದೆ, ಜಲ್ಲಿ, ಮಣ್ಣು, ಸಿಮೆಂಟ್‌ಗಳ ಪರೀಕ್ಷೆಯನ್ನೂ ಮಾಡಿಸಿತ್ತು. ಈ ದುರಂತಕ್ಕೆ ಇಂಜಿನಿಯರ್‌ ಮತ್ತು ಗುತ್ತಿಗೆದಾರರೇ ಹೊಣೆಗಾರರು ಎಂಬ ಅಂಶ ವರದಿಯಲ್ಲಿದೆ.

ಗಮನಾರ್ಹ ಅಂಶಗಳು ಹೀಗಿವೆ - ಪಿಲ್ಲರ್ ನಿರ್ಮಾಣದ ವೇಳೆ 18 ಮೀಟರ್ ಎತ್ತರದ ಕಂಬಿ ಚೌಕಟ್ಟು ಕಟ್ಟಲಾಗಿತ್ತು. ಈ ಎತ್ತರದಲ್ಲಿ 6 ಮಹಡಿ ಮನೆ ಕಟ್ಟಬಹುದು. ಅಷ್ಟು ಉದ್ದದ ಕಂಬಿ ಪಿಲ್ಲರ್ ಯಾಕೆ ನಿರ್ಮಿಸಿದರು?

ಇಷ್ಟು ಎತ್ತರದ ಪಿಲ್ಲರ್ ಕಟ್ಟಿದಾಗ, ಮುಂಜಾಗ್ರತಾ ಕ್ರಮವಾಗಿ ಕಂಬಿಯ ಪಿಲ್ಲರ್ ಚೌಕಟ್ಟಿಗೆ ಸರಿಯಾದ ಸಪೋರ್ಟ್‌ ನೀಡಬೇಕಿತ್ತು. ಅದನ್ನು ನಿರ್ಲಕ್ಷಿಸಿದ್ದೇಕೆ? ಕಾರ್ಮಿಕರಿಗೆ ಈ ಸೂಕ್ಷ್ಮ ವಿಚಾರ ಗೊತ್ತಾಗಲ್ಲ, ಗುತ್ತಿಗೆದಾರರು ಹಾಗೂ ಇಂಜಿನಿಯರ್‌ಗಳೇ ಅದನ್ನು ಹೇಳಿ ಮಾಡಿಸಬೇಕಾಗಿತ್ತು. ಸದ್ಯ ಮೇಲ್ನೋಟಕ್ಕೆ ಗುತ್ತಿಗೆದಾರ ಮತ್ತು ಇಂಜಿನಿಯರ್‌ಗಳು ಈ ದುರಂತದ ಹೊಣೆಗಾರರಾಗುತ್ತಾರೆ ಎಂದು ವರದಿ ವಿವರಿಸಿದೆ.

ಐವರು ಅಧಿಕಾರಿಗಳಿಗೆ ವಿಚಾರಣೆ ನೋಟಿಸ್‌

ದುರಂತಕ್ಕೆ ಸಂಬಂಧಿಸಿದಂತೆ ಐವರು ಅಧಿಕಾರಿಗಳು​ ವಿಚಾರಣೆಗೆ ಹಾಜರಾಗುವಂತೆ ಪೊಲೀಸರು ನೋಟಿಸ್​ ಜಾರಿ ಮಾಡಿದ್ದರು. ಅದರಂತೆ ಐವರು ಅಧಿಕಾರಿಗಳು ಗೋವಿಂದಪುರ, ಬಾಣಸವಾಡಿ, ಕೆಜಿ ಹಳ್ಳಿ ಸೇರಿ ವಿವಿಧ ಪೊಲೀಸ್ ಠಾಣೆಗಳಲ್ಲಿ ವಿಚಾರಣೆಗೆ ಹಾಜರಾಗಿದ್ದರು. ನಾಗಾರ್ಜುನಾ ಕನ್​ಸ್ಟ್ರಕ್ಷನ್ ಕಂಪನಿಯ ಪ್ರಭಾಕರ್, ವಿಕಾಸ್ ಸಿಂಗ್, ಲಕ್ಷ್ಮೀಪತಿ, ಬಿಎಂಆರ್​ಸಿಎಲ್ ಡೆಪ್ಯೂಟಿ ಚೀಫ್ ವೆಂಕಟೇಶ್ ಶೆಟ್ಟಿ, ಎಕ್ಸಿಕ್ಯೂಟಿವ್ ಎಂಜಿನಿಯರ್ ಮಹೇಶ್ ಬೆಂಡೆಕೇರಿ ವಿಚಾರಣೆ ಎದುರಿಸಿದ ಅಧಿಕಾರಿಗಳು

ಇನ್ನು, ಮೆಟ್ರೋ ಪಿಲ್ಲರ್ ಕುಸಿದು ಬಿದ್ದ ಪ್ರಕರಣದಲ್ಲಿ ಉಪ ಮುಖ್ಯ ಇಂಜಿನಿಯರ್, ಕಾರ್ಯನಿರ್ವಾಹಕ ಇಂಜಿನಿಯರ್ ಮತ್ತು ಸೈಟ್ ಇಂಜಿನಿಯರ್​ಗಳನ್ನು ಬಿಎಂಆರ್​ಸಿಎಲ್​ ಅಮಾನತು ಮಾಡಿತ್ತು. ಸ್ವತಂತ್ರ ತನಿಖೆಗೆ ಮತ್ತು ವರದಿ ನೀಡಲು ಇಂಡಿಯನ್​ ಇನ್​ಸ್ಟಿಟ್ಯೂಟ್​ ಆಫ್​ ಸೈನ್ಸ್​ಗೆ (ಐಐಎಸ್ ಸಿ) ಗೆ ಬಿಎಂಆರ್‌ಸಿಎಲ್‌ ಮನವಿ ಮಾಡಿತ್ತು.

IPL_Entry_Point

ವಿಭಾಗ