ಕನ್ನಡ ಸುದ್ದಿ  /  Karnataka  /  Mission To Heal Sick Elephants Karnataka S First Elephant Caring Center In Kolar Full Details Here Rmy

Kolar: ಆನೆಗಳ ಆರೈಕೆಯೇ ಏಕೈಕ ಉದ್ದೇಶ; ಕೋಲಾರದಲ್ಲಿದೆ ರಾಜ್ಯದ ಮೊದಲ ಎಲಿಫೆಂಟ್ ಕೇರಿಂಗ್ ಸೆಂಟರ್

ರಾಜ್ಯದ ಮೊದಲ ಆನೆಗಳ ಆರೈಕೆ ಕೇಂದ್ರ ಕೋಲಾರದಲ್ಲಿ ಆರಂಭವಾಗಿದ್ದು, ಪ್ರಸ್ತುತ ಐದು ಆನೆಗಳ ಆರೈಕೆ ಮಾಡಲಾಗುತ್ತಿದೆ. ಎಲಿಫೆಂಟ್ ಕೇರಿಂಗ್ ಸೆಂಟರ್ ಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ. ಯಾಕೆ ಅನ್ನೋದರ ಮಾಹಿತಿ ಇಲ್ಲಿದೆ.

ಕೋಲಾರದಲ್ಲಿ ಆನೆಗಳ ಆರೈಕೆ ಕೇಂದ್ರ ಆರಂಭವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಐದು ಐನೆಗಳಿಗೆ ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ.
ಕೋಲಾರದಲ್ಲಿ ಆನೆಗಳ ಆರೈಕೆ ಕೇಂದ್ರ ಆರಂಭವಾಗಿದ್ದು, ಅನಾರೋಗ್ಯದಿಂದ ಬಳಲುತ್ತಿರುವ ಐದು ಐನೆಗಳಿಗೆ ಪ್ರಸ್ತುತ ಚಿಕಿತ್ಸೆ ನೀಡಲಾಗುತ್ತಿದೆ.

ಕೋಲಾರ: ಹೈನುಗಾರಿಕೆ, ರೇಷ್ಮೆ ಹಾಗೂ ತರಕಾರಿ ಬೆಳೆಯುವ ಅಗ್ರ ಜಿಲ್ಲೆಗಳ ಸಾಲಿನಲ್ಲಿ ನಿಲ್ಲುವ ಚಿನ್ನದ ನಾಡು ಕೋಲಾರ (Kolar) ಮತ್ತೊಮ್ಮೆ ಗಮನ ಸೆಳೆದಿದೆ. ತಾಲೂಕಿನ ಖಾಜಿಕಲ್ಲಹಳ್ಳಿ ಬಳಿಯ ಲಕ್ಷ್ಮೀಪುರ ಅರಣ್ಯ ವಲಯದಲ್ಲಿ (Lakshmipur Forest Zone) ಸುಮಾರು 20 ಎಕರೆ ಪ್ರದೇಶದಲ್ಲಿ ಆನೆಗಳ ಆರೈಕೆ ಕೇಂದ್ರವನ್ನು (Elephant Care Centre) ಆರಂಭಿಸಲಾಗಿದೆ. ಇದು ರಾಜ್ಯದಲ್ಲೇ ಮೊದಲ ಎಲಿಫೆಂಟ್ ಕೇರಿಂಗ್ ಸೆಂಟರ್ ಎಂಬ ಹಿರಿಮೆಗೆ ಪಾತ್ರವಾಗಿದೆ.

ಕಾಡಿನಲ್ಲಿ ರಾಜಾರೋಷವಾಗಿ ತನಗಿಷ್ಟಬಂದಂತೆ ಬದುಕಬೇಕಾದ ಆನೆಗಳು ನಾನಾ ಕಾರಣಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಜೀವ ಉಳಿಸಿಕೊಳ್ಳಲು ಇಲ್ಲಿ ನಿತ್ಯ ಹೋರಾಟ ನಡೆಸುತ್ತಿವೆ. ಮೂವರು ವೈದ್ಯರು, ಐವರು ಮಾವುತರು ಸೇರಿದಂತೆ 9 ಮಂದಿ ಸಿಬ್ಬಂದಿ ಇವುಗಳ ಆರೈಕೆಯ ಕೆಲಸ ಮಾಡುತ್ತಿದ್ದಾರೆ.

ದುರ್ಗಾ, ಅನೀಶಾ, ಗೌರಿ ಹಾಗೂ ಜಾನುಮಣಿ ಹೆಸರಿನ ನಾಲ್ಕು ಹೆಣ್ಣಾಗಳಿದ್ದು, ಹೊಸದಾಗಿ ಮತ್ತೊಂದು ಆನೆ ಸೇರ್ಪಡೆಯಾಗಿದೆ. ಬೆಂಗಳೂರಿನಿಂದ ದುರ್ಗಾ, ನೆರೆಯ ತಮಿಳುನಾಡಿನ ತೂತುಕುಡಿಯಿಂದ ಅನಿಶಾ, ನಂಜನಗೂಡಿನಿಂದ ಗೌರಿ ಹಾಗೂ ಗೋವಾದಿಂದ ಜಾನುಮಣಿಯನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಎಲ್ಲಾ ಆನೆಗಳಿಗೂ ಒಂದೊಂದು ರೀತಿಯ ಅನಾರೋಗ್ಯ ಸಮಸ್ಯೆಗಳಿವೆ.

ಎಲಿಫ್ಯಾಂಟ್ ಕೇರಿಂಗ್ ಸೆಂಟರ್ ಕುರಿತು ಕೋಲಾರದ ಉಪ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು ಅವರು ಹೆಚ್ ಟಿ ಕನ್ನಡ ಜೊತೆ ಮಾತನಾಡಿದ್ದು, ಸದ್ಯಕ್ಕೆ ಈ ಸೆಂಟರ್ ನಲ್ಲಿ ವಿವಿಧ ಬಗೆಯ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಐದು ಆನೆಗಳಿದ್ದು, ಅವುಗಳಿಗೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತಿದ್ದೇವೆ. ದೇಹದಲ್ಲಿ ಗಾಯ, ಸ್ಥೂಲಕಾಯ, ಆರ್ಥ್ರೈಟಿಸ್, ಬಾರ್ಡರ್ ಲೈನ್ ಹಾಗೂ ಮಧುಮೇಹ ಸೇರಿದಂತೆ ಬೇರೆ ಬೇರೆ ಕಾಯಿಲೆಗಳಿಂದ ಬಳಲುತ್ತಿದ್ದು, ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡುತ್ತೇವೆ ಎಂದು ಹೇಳಿದ್ದಾರೆ.

ಕೆಲವೊಂದಕ್ಕೆ ಆಪರೇಷನ್ ಮಾಡಿ ಬ್ಯಾಂಡೇಜ್ ಹಾಕಿರುತ್ತೇವೆ. ಇದೊಂದು ರೀತಿಯ ಆಸ್ಪತ್ರೆ ಇದ್ದಂತೆ. ಇಂತಹ ಆನೆಗಳು ಸಾರ್ವಜನಿಕರ ವೀಕ್ಷಣೆಗೆ ಸೂಕ್ತವಲ್ಲ. ಇದೇ ಕಾರಣಕ್ಕೆ ನಾವು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಈಗ ಐದು ಆನೆಗಳಿದ್ದು, ಇದನ್ನು ಗರಿಷ್ಠ 8 ರಿಂದ 10 ಗರಿಷ್ಠ ಹೆಚ್ಚಿಸುವ ಯೋಜನೆ ಇದೆ. ಸದ್ಯದ ಮಟ್ಟಿಗೆ ಆರು ಆನೆಗಳಿಗೆ ಚಿಕಿತ್ಸೆ ನೀಡಲು ಅವಕಾಶ ಮತ್ತು ಸೌಲಭ್ಯಗಳು ಇಲ್ಲಿವೆ. ಪರಿಸ್ಥಿತಿ ನೋಡಿಕೊಂಡು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ವಿಸ್ತರಿಸಲಾಗುತ್ತದೆ ಎಂದು ಹೇಳಿದ್ದಾರೆ.

ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರವು-WRRC (Wildlife Rescue and Rehabilitation Center) ಆರ್ಥಿಕ ನೆರವು ನೀಡುತ್ತಿದೆ. ಆನೆಗಳಿಗೆ ಬೇಕಾದ ಆಹಾರ, ಚಿಕಿತ್ಸೆ, ಔಷಧಿ ಹಾಗೂ ಸಿಬ್ಬಂದಿ ವೇತನ ಎಲ್ಲಾವನ್ನು ಡಬ್ಲ್ಯೂಆರ್‌ಆರ್‌ಸಿನವರೇ ನೋಡಿಕೊಳ್ಳುತ್ತಿದ್ದು, ಒಟ್ಟಾರೆಯಾಗಿ ಅರಣ್ಯ ಇಲಾಖೆಯಡಿಯಲ್ಲೇ ಸೆಂಟರ್ ನಡೆಯುತ್ತಿವೆ.

ಕೋಲಾರದ ಲಕ್ಷ್ಮೀಪುರ ಅರಣ್ಯ ವಲಯದಲ್ಲಿರುವ ಎಲಿಫೆಂಟ್ ಕೇರ್ ಸೆಂಟರ್ ಹೈಬ್ರಿಡ್ ಆಗಿದೆ. 20 ಎಕರೆ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಆರೈಕೆ ಕೇಂದ್ರವಿದ್ದು, ಸುತ್ತಲೂ ಪೆನ್ಸಿಂಗ್ ಮಾಡಿದ್ದೇವೆ. ಆನೆಗಳಿಗೆ ವಾಕಿಂಗ್ ಮಾಡಲು ಕನಿಷ್ಠ ಐದರಿಂದ 8 ಕಿಲೋ ಮೀಟರ್ ನಷ್ಟು ಜಾಗಬೇಕಾಗುತ್ತದೆ. ಅದಕ್ಕಾಗಿ 50 ಎಕರೆಗೆ ವಿಸ್ತರಣೆ ಮಾಡುವ ಉದ್ದೇಶವಿದ್ದು, ಆನೆಗಳಿಗೆ ಬೇಕಾದ ಹುಲ್ಲು, ಎಲೆ ಹಾಗೂ ಸೊಪ್ಪನ್ನು ಇಲ್ಲೇ ಬೆಳೆಸುವ ಯೋಜನೆಯೂ ಇದೆ ಎಂದು ಏಡುಕೊಂಡಲು ವಿವರಿಸಿದ್ದಾರೆ.

ಪ್ರತಿ ಆನೆಗೆ ಬೆಳಗ್ಗೆ 25 ಕೆಜಿ ಹುಲ್ಲು, ರಾಗಿ ಮುದ್ದೆ, ಹಣ್ಣುಗಳು ಹಾಗೂ ಪೋಷಕಾಂಶಗಳಿರುವ ಆಹಾರವನ್ನು ನೀಡಲಾಗುತ್ತಿದೆ. ಮಧ್ಯಾಹ್ನದ ಆಹಾರವಾಗಿ ಭತ್ತ, ಕೊಬ್ಬರಿ, ಕುಚುರೆ, ಅವಲಕ್ಕಿ, ಮುದ್ದೆ ನೀಡಲಾಗುತ್ತೆ.

ದಿನವೊಂದಕ್ಕೆ ಒಟ್ಟು 150 ಕೆಜಿ ಹುಲ್ಲು, 20 ಕೆಜಿಯಂತೆ ದಿನಕ್ಕೆ ಎರಡು ಬಾರಿ ಒಟ್ಟು 40 ಕೆಜಿ ಪೌಷ್ಠಿಕಾಂಶವುಳ್ಳ ರಾಗಿ ಮುದ್ದೆಯನ್ನು ನೀಡಿ ಬೇಗ ಚೇತರಿಸಿಕೊಳ್ಳುವಂತೆ ಮಾಡಲಾಗುತ್ತಿದೆ. ಇದಕ್ಕಾಗಿ ಪ್ರತಿ ಆನೆಗೆ ತಿಂಗಳಿಗೆ ಒಂದೂವರೆಯಿಂದ ಎರಡು ಲಕ್ಷ ರೂಪಾಯಿ ಖರ್ಚಾಗುತ್ತಿದೆಯಂತೆ. ಆದಷ್ಟು ಬೇಗ ಈ ಆನೆಗಳು ಚೇತರಿಸಿಕೊಂಡು ಮತ್ತೆ ಕಾಡು ಸೇರುವಂತಾಗಬೇಕಿದೆ.

IPL_Entry_Point