ಕನ್ನಡ ಸುದ್ದಿ  /  Karnataka  /  No Other Party Will Be Allowed To Come To Power Says Yediyurappa

BS Yediyurappa: ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡಲ್ಲ ಎಂದ ಯಡಿಯೂರಪ್ಪ

ರಾಜ್ಯದಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡಲ್ಲ. ಪ್ರಾಮಾಣಿಕ ಕಾರ್ಯಕರ್ತರನ್ನ ಬಿಜೆಪಿಯಲ್ಲಿ ಕೈ ಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು: ಕೇಂದ್ರಿಯ ಸಂಸದೀಯ ಹಾಗೂ ಚುನಾವಣಾ ಸಮಿತಿಗೆ ಸದಸ್ಯರನ್ನಾಗಿ ಮಾಡಿರುವುದಕ್ಕೆ ಅತ್ಯಂತ ಸಂತೋಷ ತಂದಿದೆ. ಇದನ್ನು ವಿನಮ್ರತೆಯಿಂದ ಸ್ವೀಕರಿಸಿ, ದಕ್ಷಿಣ ಭಾರತ ಹಾಗೂ ರಾಜ್ಯದಲ್ಲಿ ಸಂಚರಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ಪ್ರಯತ್ನ ಮಾಡಲಾಗುವುದು. ಪ್ರಾಮಾಣಿಕ ಕಾರ್ಯಕರ್ತರನ್ನ ಬಿಜೆಪಿಯಲ್ಲಿ ಕೈ ಬಿಡಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ. ಪಕ್ಷ ಅಧಿಕಾರಕ್ಕೆ ಬರಲು ಪ್ರಮಾಣಿಕವಾಗಿ ಶ್ರಮಿಸಲಾಗುವುದು. ದಕ್ಷಿಣ ಭಾರತದಲ್ಲಿ ಕೂಡ ಪಕ್ಷ ಅಧಿಕಾರಕ್ಕೆ ಬರಲು ಶ್ರಮಿಸಲಾಗುವುದು ಎಂದು ತಿಳಿಸಿದರು.

ಕೇಂದ್ರ ನೀಡಿರುವ ಜವಾಬ್ದಾರಿಯನ್ನು ಸ್ವೀಕರಿಸಿ ಪ್ರಮಾಣಿಕವಾಗಿ ರಾಜ್ಯದ ಎಲ್ಲೆಡೆ ಸಂಚರಿಸಿ ಪಕ್ಷವನ್ನು ಅಧಿಕಾರಕ್ಕೆ ತರಲು ಪ್ರಯತ್ನಿಸಲಾಗುವುದು. ಸ್ವಂತ ಬಲದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಲು ಸಾಮೂಹಿಕವಾಗಿ ಪ್ರಯತ್ನಿಸಲಾಗುವುದು. ಯಡಿಯೂರಪ್ಪ ಒಬ್ಬರೇ ಅಲ್ಲ ಎಲ್ಲರೂ ಒಟ್ಟುಗೂಡಿ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಲಾಗುವುದು ಎಂದರು. ನಾನು ಯಾವುದೇ ಇಂತಹ ಸ್ಥಾನಮಾನ ನಿರೀಕ್ಷೆ ಮಾಡಿರಲಿಲ್ಲ. ಇಂತಹ ಬೆಳವಣಿಗೆಯಿಂದ ತಮಗೆ ಆನೆ ಬಲ ಬಂದತಾಗಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಚುನಾವಣಾ ವರ್ಷ ಸಮೀಪವಿರುವ ಕಾರಣ, ಬಿಜೆಪಿ ಸಂಸದೀಯ ಮಂಡಳಿಯಲ್ಲಿ ಮಹತ್ತರ ಬದಲಾವಣೆ ತರಲಾಗಿದೆ. ಕೇಂದ್ರ ಸಚಿವ ನಿತಿನ್‌ ಗಡ್ಕರಿ, ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ಅವರನ್ನು ಪಕ್ಷದ ಸಂಸದೀಯ ಮಂಡಳಿಯಿಂದ ಕೈಬಿಡಲಾಗಿದೆ. ಇದೇ ವೇಳೆ, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿ ಆರು ಹೊಸಬರನ್ನು ಸಂಸದೀಯ ಮಂಡಳಿಗೆ ಸೇರಿಸಲಾಗಿದೆ.

ಯಡಿಯೂರಪ್ಪ ಅವರಲ್ಲದೆ, ಕೇಂದ್ರ ಸಚಿವ ಸರ್ಬಾನಂದ ಸೊನೊವಾಲ್‌, ಇಕ್ಬಾಲ್‌ ಸಿಂಗ್‌ ಲಾಲ್‌ಪುರ, ಕೆ.ಲಕ್ಷ್ಮಣ್‌, ಸುಧಾ ಸಾದವ್‌, ಸತ್ಯನಾರಾಯಣ ಜಟಿಯಾ ಅವರು ಸಂಸದೀಯ ಮಂಡಳಿ ಸೇರಿದ ಹೊಸಬರು. ಮಹಾರಾಷ್ಟ್ರದಲ್ಲಿ ಉದ್ಧವ್ ಠಾಕ್ರೆ ಸರ್ಕಾರ ಪತನಗೊಳಿಸಿ ಅಧಿಕಾರಕ್ಕೇರಿದ ಏಕನಾಥ್ ಶಿಂಧೆ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೂ ಸ್ಥಾನ ಲಭಿಸಿದೆ. ಇದು ಕೂಡ ರಾಜಕೀಯವಾಗಿ ಲೆಕ್ಕಾಚಾರದ ನಡೆಯೇ ಆಗಿದೆ.

ಸಂಸದೀಯ ಮಂಡಳಿಯನ್ನು ಹೆಚ್ಚು ಸಮಾಜಮುಖಿ ಮತ್ತು ಪ್ರಾದೇಶಿಕ ಪ್ರಾತಿನಿಧ್ಯದಿಂದ ಇರುವಂತೆ ನೋಡಿಕೊಳ್ಳುವುದಕ್ಕೆ ಈ ರೀತಿ ಪುನಾರಚನೆ ಮಾಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಾದ ಅಮಿತ್‌ ಷಾ, ರಾಜನಾಥ್‌ ಸಿಂಗ್‌, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಕೂಡ ಸಂಸದೀಯ ಮಂಡಳಿಯಲ್ಲಿದ್ದಾರೆ.

ಲೋಕಸಭಾ, ವಿಧಾನಸಭಾ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸುವ ಕೇಂದ್ರ ಚುನಾವಣಾ ಸಮಿತಿಯಲ್ಲಿಯೂ ಬಿಎಸ್‌ ಯಡಿಯೂರಪ್ಪ ಅವರಿಗೆ ಸ್ಥಾನ ನೀಡಲಾಗಿದೆ.

IPL_Entry_Point

ವಿಭಾಗ