ಕನ್ನಡ ಸುದ್ದಿ  /  Karnataka  /  Pm Modi S Visit To Bangalore On November 11 Inauguration Of Various Development Programmes

PM Modi visit to Bangalore on November 11: ಪ್ರಧಾನಿ ಮೋದಿ ನ.11ಕ್ಕೆ ಬೆಂಗಳೂರಿಗೆ ಆಗಮನ: ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ

ಪ್ರಧಾನಿ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸಲಿದ್ದಾರೆ. ನಮೋ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಸಿದ್ಧತೆ ಕುರಿತು ಸಿಎಂ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದಾರೆ.

ಸಿಎಂ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರಿಗೆ ಬೆಂಗಳೂರಿನ ಕಾರ್ಯಕ್ರಮಗಳ ಸಿದ್ಧತೆಗಳ ಬಗ್ಗೆ ವಿವರಿಸಿದರು.
ಸಿಎಂ ಬೊಮ್ಮಾಯಿ ಅವರು ಪ್ರಧಾನಿ ಮೋದಿ ಅವರಿಗೆ ಬೆಂಗಳೂರಿನ ಕಾರ್ಯಕ್ರಮಗಳ ಸಿದ್ಧತೆಗಳ ಬಗ್ಗೆ ವಿವರಿಸಿದರು.

ಬೆಂಗಳೂರು: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನವೆಂಬರ್ 11 ರಂದು ಬೆಂಗಳೂರಿಗೆ ಆಗಮಿಸಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಸಿದ್ಧತೆ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೊಂದಿಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದರು.

ಪ್ರಧಾನಮಂತ್ರಿಯವರು ತಮ್ಮ ಭೇಟಿಯ ಸಂದರ್ಭದಲ್ಲಿ ಪಾಲ್ಗೊಳ್ಳಲಿರುವ ಕಾರ್ಯಕ್ರಮಗಳ ಸವಿವರ ಮಾಹಿತಿಯನ್ನು ಪಡೆದರು. ತಮ್ಮ ಭೇಟಿಯ ಸಂದರ್ಭದಲ್ಲಿ ಸಾರ್ವಜನಿಕರಿಗೆ ಹೆಚ್ಚಿನ ಅಡಚಣೆಯಾಗದಂತೆ ಸಿದ್ಧತೆ ಕೈಗೊಳ್ಳಲು ಸೂಚಿಸಿದ್ದಾರೆ ಎಂದು ಮೂಲಕಗಳು ತಿಳಿಸಿವೆ.

ಕಾರ್ಯಕ್ರಮದಂದು ಚೆನ್ನೈ ಮೈಸೂರು ನಡುವೆ, ದಕ್ಷಿಣ ಭಾರತದ ಮೊದಲ ಹಾಗೂ ಭಾರತದ ಐದನೇ ವಂದೇ ಭಾರತ್ ಎಕ್ಸ್ ಪ್ರೆಸ್ ರೈಲಿಗೆ ಪ್ರಧಾನಮಂತ್ರಿಯವರು ಚಾಲನೆ ನೀಡಲಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ರ ಉದ್ಘಾಟನೆ ಮಾಡಲಿದ್ದಾರೆ. 5,000 ಕೋಟಿ ರೂ. ವೆಚ್ಚದಲ್ಲಿ ಇದನ್ನು ನಿರ್ಮಾಣ ಮಾಡಲಾಗಿದ್ದು, ವರ್ಷಕ್ಕೆ 2.5 ಕೋಟಿ ಪ್ರಯಾಣಿಕರ ನಿರ್ವಹಣೆ ಸಾಮರ್ಥ್ಯ ಹೊಂದಿದೆ. ಉದ್ಯಾನವನದ ವಿನ್ಯಾಸ. ಸುಸ್ಥಿರತೆ, ರಾಮಾಯಣ, ಮಹಾಭಾರತದ ಕಾಲದ ಸಸ್ಯಗಳನ್ನು ಗುರುತಿಸಿ, ನೆಡಲಾಗಿದೆ. ನೀರಿನ ಮರುಬಳಕೆ, ವಿದ್ಯುತ್ ಬಳಕೆಯಲ್ಲಿ ಸುಸ್ಥಿರತೆಯನ್ನು ಹೊಂದಿರುವ ಟರ್ಮಿನಲ್ ಇದಾಗಿದೆ.

ವಿಮಾನ ನಿಲ್ದಾಣದ ಆವರಣದಲ್ಲಿರುವ 108 ಅಡಿ ಎತ್ತರದ ಕೆಂಪೇಗೌಡ ಪ್ರತಿಮೆ ಅನಾವರಣ ಮಾಡಲಿದ್ದು, ನಂತರ ಸಾರ್ವಜನಿಕ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ರಾಜ್ಯ ಸರ್ಕಾರದ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಐಟಿ, ಬಿಟಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಹಾಗೂ ರೈಲ್ವೆ ಮಂಡಳಿಯ ಅಧಿಕಾರಿಗಳು, ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ದೇವನಹಳ್ಳಿಯ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ಕಂಚಿನ ಪ್ರತಿಮೆಯನ್ನು ನ.11ರಂದು ಲೋಕಾರ್ಪಣೆಗೊಳಿಸಲಿದ್ದಾರೆ. ಇದರ ಪ್ರಯುಕ್ತ ಅ.21ರಿಂದ ನ.7ರ ವರೆಗೆ ರಾಜ್ಯಾದ್ಯಂತ ಮೃತ್ತಿಕಾ ಸಂಗ್ರಹಣಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಸಿದ್ಧಗೊಳಿಸಿರುವ 20 'ನಾಡಪ್ರಭು ಕೆಂಪೇಗೌಡ ರಥ' ಅಕ್ಟೋಬರ್ 21ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಸೌಧದದುರು ಚಾಲನೆ ನೀಡಿದ್ದರು.

ಈ ಅಭಿಯಾನಕ್ಕಾಗಿ ಜಿಲ್ಲಾ ಮಟ್ಟದಲ್ಲಿ ಸಮಿತಿಗಳನ್ನು ರಚಿಸಲಾಗಿದೆ. ಈ ರಥಗಳು ಆಯಾಯ ಪ್ರದೇಶ, ಜಿಲ್ಲೆಗಳಿಗೆ ಪ್ರವೇಶಿಸುವಾಗ ಪೂರ್ಣಕುಂಭ ಸ್ವಾಗತದೊಂದಿಗೆ ಬರಮಾಡಿಕೊಳ್ಳಲಾಗುವುದು. ಅಭಿಯಾನದ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದ ಕೆರೆಕಟ್ಟೆ, ಕಲ್ಯಾಣಿ, ನದಿ, ಪುಷ್ಕರಿಣಿ, ಪುಣ್ಯಪುರುಷರ ಸಮಾಧಿ ಸ್ಥಳಗಳಿಂದ ಪವಿತ್ರವಾದ ಮಣ್ಣನ್ನು ಸಂಗ್ರಹಿಸಲಾಗುತ್ತದೆ ಎಂದು ಸಚಿವ ಅಶ್ವತ್ಥ್ ನಾರಾಯಣ್ ತಿಳಿಸಿದ್ದರು.

ಆಯಾಯ ಜಿಲ್ಲೆಗಳಲ್ಲಿ ಪ್ರತಿಯೊಬ್ಬರೂ ಸಕ್ರಿಯವಾಗಿ ಪಾಲ್ಗೊಳ್ಳಲು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಕೆಂಪೇಗೌಡರ ಪ್ರತಿಮೆ "ಪ್ರಗತಿಯ ಪ್ರತಿಮೆ": ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ "ಪ್ರಗತಿಯ ಪ್ರತಿಮೆ" ಎಂದು ಹೆಸರಿಡಲಾಗಿದೆ. ಪವಿತ್ರ ಮೃತ್ತಿಕೆಯನ್ನು ವಿಮಾನ ನಿಲ್ದಾಣ ಆವರಣದ ಕೆಂಪೇಗೌಡ ಥೀಮ್ ಪಾರ್ಕ್‌ನಲ್ಲಿ ಬಳಸಲಾಗುತ್ತದೆ. ನಿಲ್ದಾಣದ ಬಳಿ ಇಂತಹ ಭವ್ಯ ಪ್ರತಿಮೆಯನ್ನು ಸ್ಥಾಪಿಸಬೇಕೆಂಬುದು ಹಲವು ವರ್ಷಗಳಿಂದ ಬೇಡಿಕೆ ಇತ್ತು ಎಂದು ಹೇಳಿದ್ದಾರೆ.

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಕೆಂಪೇಗೌಡರ ಪ್ರತಿಮೆ ಉದ್ಘಾಟನೆ ಹಾಗೂ ಎಸ್ಸಿ,ಎಸ್ಟಿಗಳಿಗೆ ಮೀಸಲಾತಿ ಹೆಚ್ಚಳ ಬಿಜೆಪಿಗೆ ಮತಗಳನ್ನು ತಂದುಕೊಡಲಿದಿಯೇ ಎಂಬುದು 2023ರ ವಿಧಾನಸಭೆ ಚುನಾವಣೆಯ ಫಲಿತಾಂಶದ ಬಳಿಕ ಗೊತ್ತಾಗಲಿದೆ.

IPL_Entry_Point