ಐಪಿಎಲ್‌ನಲ್ಲಿ 5157 ದಿನಗಳ ನಂತರ ದಾಖಲೆ ನಿರ್ಮಿಸಿದ ಆರ್ಸಿಬಿ; 14 ವರ್ಷಗಳಿಂದ ಈ ಸಾಧನೆ ಮಾಡಿಯೇ ಇರಲಿಲ್ಲ!
RCB Record : 17ನೇ ಆವೃತ್ತಿಯ ಐಪಿಎಲ್‌ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ 200 ಪ್ಲಸ್ ರನ್‌ಗಳ ಚೇಸ್ ಮಾಡಿದ ಆರ್ಸಿಬಿ, 5157 ದಿನಗಳ ನಂತರ ಈ ಸಾಧನೆ ಮಾಡಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾನುವಾರ (ಏಪ್ರಿಲ್ 28) ನಡೆದ ಐಪಿಎಲ್ನ 46ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ (Gujarat Titans) ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಭರ್ಜರಿ ಗೆಲುವು ಸಾಧಿಸಿತು. ವಿಲ್ ಜಾಕ್ಸ್ (Will Jacks) ಸ್ಫೋಟಕ ಶತಕ ಮತ್ತು ವಿರಾಟ್ ಕೊಹ್ಲಿ (Virat Kohli) ಅವರ ಆಕರ್ಷಕ ಅರ್ಧಶತಕಕ್ಕೆ ಬೆಚ್ಚಿದ ಜಿಟಿ, 9 ವಿಕೆಟ್ಗಳಿಂದ ಶರಣಾಯಿತು. ಈ ಗೆಲುವಿನೊಂದಿಗೆ ಆರ್ಸಿಬಿ, 5157 ದಿನಗಳ ನಂತರ ಹೊಸ ದಾಖಲೆ ನಿರ್ಮಿಸಿದೆ.
ವಿಲ್ ಜಾಕ್ಸ್ ಕೇವಲ 41 ಎಸೆತಗಳಲ್ಲಿ 10 ಸಿಕ್ಸರ್ ಮತ್ತು 5 ಬೌಂಡರಿ ಸಹಿತ ಅಜೇಯ 100 ರನ್ ಬಾರಿಸಿದರು. ಇದು ಅವರ ಚೊಚ್ಚಲ ಐಪಿಎಲ್ ಶತಕವಾಗಿದೆ. ಅಲ್ಲದೆ, ಐಪಿಎಲ್‌ನಲ್ಲಿ 5ನೇ ಅತಿವೇಗದ ಶತಕವಾಗಿದೆ. ಮತ್ತೊಂದೆಡೆ ಕೊಹ್ಲಿ 44 ಎಸೆತಗಳಲ್ಲಿ 70 ರನ್ ಸಿಡಿಸಿ ಅಜೇಯರಾಗಿ ಉಳಿದರು. ಈ ಜಯದೊಂದಿಗೆ ಆರ್ಸಿಬಿ, ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಜೊತೆ ಅಂಕಪಟ್ಟಿಯಲ್ಲಿ 6 ಅಂಕ ಪಡೆಯಿತು. ನೆಟ್ ರನ್ ರೇಟ್ ಪಂಜಾಬ್, ಮುಂಬೈಗಿಂತ ಕಡಿಮೆ ಇದೆ.
ಆರ್ಸಿಬಿ ವಿಶೇಷ ದಾಖಲೆ
ಆರ್ಸಿಬಿ ಐಪಿಎಲ್ ಇತಿಹಾಸದಲ್ಲಿ ಆರ್ಸಿಬಿ ಎರಡನೇ ಬಾರಿಗೆ 200+ ರನ್ ಚೇಸ್ ಮಾಡಿದ ದಾಖಲೆ ಬರೆಯಿತು. ಮೊದಲ ಬಾರಿಗೆ ಅಂದರೆ 14 ವರ್ಷಗಳ (5157 ದಿನಗಳ) ಹಿಂದೆ 2010ರ ಮಾರ್ಚ್ 16ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ (ಈಗಿನ ಪಂಜಾಬ್ ಕಿಂಗ್ಸ್) ವಿರುದ್ಧ 204 ರನ್‌ಗಳ ಚೇಸ್ ಮಾಡಿತ್ತು. ಆರ್ಸಿಬಿ ಎರಡು ಬಾರಿ ಮಾತ್ರ 200+ ರನ್ ಚೇಸ್ ಮಾಡಿದೆ. 2016ರಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ವಿರುದ್ಧ 192 ರನ್, 2023ರಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 187 ರನ್ ಮತ್ತು 2018ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್) ವಿರುದ್ಧ ಆರ್ಸಿಬಿ 187 ರನ್ ಚೇಸಿಂಗ್ ಮಾಡಿದೆ.
ವಿರಾಟ್ ಕೊಹ್ಲಿ ದಾಖಲೆ
10 ಪಂದ್ಯಗಳಲ್ಲಿ 71.42 ಸರಾಸರಿ ಮತ್ತು 147.47 ಸ್ಟ್ರೈಕ್ ರೇಟ್‌ನಲ್ಲಿ 500 ರನ್ ಗಳಿಸುವ ಮೂಲಕ ಕೊಹ್ಲಿ, 2024 ರ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಏಳು ಸೀಸನ್‌ಗಳಲ್ಲಿ 500 ರನ್‌ಗಳ ಗಡಿ ದಾಟಿದ ಮೊದಲ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ. ಒಟ್ಟಾರೆಯಾಗಿ, ಡೇವಿಡ್ ವಾರ್ನರ್ ನಂತರ ಈ ಸಾಧನೆ ಮಾಡಿದ ಎರಡನೇ ಆಟಗಾರ.
ಐಪಿಎಲ್‌ನಲ್ಲಿ ವೇಗದ ಶತಕ ಸಿಡಿಸಿದವರು
30 ಎಸೆತ - ಕ್ರಿಸ್ಗೇಲ್ vs ಪಿಡಬ್ಲ್ಯುಐ, ಬೆಂಗಳೂರು 2013
37 ಎಸೆತ - ಯೂಸಫ್ ಪಠಾಣ್ vs ಮುಂಬೈ ಇಂಡಿಯನ್ಸ್, ಮುಂಬೈ ಬಿಎಸ್ 2010
38 ಎಸೆತ - ಡೇವಿಡ್ ಮಿಲ್ಲರ್ vs ಆರ್ಸಿಬಿ, ಮೊಹಾಲಿ 2013
39 ಎಸೆತ - ಟ್ರಾವಿಸ್ ಹೆಡ್ vs ಆರ್ಸಿಬಿ, ಬೆಂಗಳೂರು 2024
41 ಎಸೆತ - ವಿಲ್ ಜಾಕ್ಸ್ vs ಜಿಟಿ, ಅಹಮದಾಬಾದ್ 2024
ಮತ್ತಷ್ಟು ಕ್ರಿಕೆಟ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.