ತುಮಕೂರಿನಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟ; 10 ಗುಡಿಸಲುಗಳು ಸುಟ್ಟು ಭಸ್ಮ, ಮತದಾನಕ್ಕೆ ತೆರಿಳಿದ್ದರಿಂದ ತಪ್ಪಿದ ಭಾರಿ ಅನಾಹುತ
ಕೊರಟಗೆರೆ ತಾಲೂಕಿನ ಚಿಂಪುಗಾನಹಳ್ಳಿಯಲ್ಲಿ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ 10 ಗುಡಿಸಲುಗಳು ಸುಟ್ಟು ಭಸ್ಮವಾಗಿವೆ. ಇಲ್ಲಿನ ಜನರು ಮತದಾನಕ್ಕೆ ತೆರೆಳಿದ್ದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ. (ವರದಿ: )
ತುಮಕೂರು: ಜಿಲ್ಲೆಯ ಕೊರಟಗೆರೆ (Koratagere) ತಾಲೂಕಿನ ಹೊಳವನಹಳ್ಳಿ ಹೋಬಳಿ ವ್ಯಾಪ್ತಿಯ ಚಿಂಪುಗಾನಹಳ್ಳಿಯಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿಗೆ (Tumkur Fire Incident) ಹತ್ತಕ್ಕೂ ಹೆಚ್ಚು ಗುಡಿಸಲು ಸುಟ್ಟು ಭಸ್ಮವಾಗಿವೆ. ಜಿಲ್ಲೆಯಲ್ಲಿ ಸಾರ್ವತ್ರಿಕ ಲೋಕಸಭಾ ಚುನಾವಣೆಗೆ ಮತದಾನ (Lok Sabha Election 2024) ನಡೆಯುತ್ತಿದ್ದ ವೇಳೆಯೇ ಬೆಂಕಿ ಅವಘಡ ಸಂಭವಿಸಿ ಗುಡಿಸಲುಗಳು ಭಸ್ಮವಾಗಿವೆ. ಕರ್ತವ್ಯ ನಿರತ ಚುನಾವಣಾ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದರು.
ಲೋಕಸಭಾ ಚುನಾವಣೆಯಿಂದ ತಪ್ಪಿದ ಭಾರಿ ದುರಂತ
ಬೆಂಕಿಯ ಕೆನ್ನಾಲಿಗೆಗೆ ಸುಮಾರು 5 ಗುಡಿಸಲಿನಲ್ಲಿದ್ದ ಗ್ಯಾಸ್ ಸಿಲಿಂಡರ್ ಪೈಕಿ ಎರಡಕ್ಕೂ ಗ್ಯಾಸ್ ಸಿಲಿಂಡರ್ ಸ್ಪೋಟ ಆಗಿವೆ. ಗುಡಿಸಲಿನಲ್ಲಿದ್ದ ಜನರು ಮತದಾನ ಮಾಡಲು ಮತಗಟ್ಟೆಗೆ ತೆರಳಿದ್ದ ವೇಳೆ ಈ ಘಟನೆ ಸಂಭವಿಸಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗದೆ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಬೆಂಕಿಯಿಂದಾಗಿ ಗುಡಿಸಲುಗಳಲ್ಲಿ ಇದ್ದ ಅಪಾರ ಆಹಾರ ದಾಸ್ತಾನು, ಬಟ್ಟೆ, ಸಣ್ಣ ಪುಟ್ಟ ವಸ್ತುಗಳು ಸೇರಿದಂತೆ ಎಲ್ಲಾ ವಸ್ತುಗಳು ಸುಟ್ಟು ಕರಕಲಾಗಿವೆ. ಈ ಗುಡಿಸಲುಗಳ ಕುಟುಂಬಸ್ಥರ ರೋಧನೆ ಹೇಳ ತೀರದಾಗಿದೆ. ಸುಮಾರು ವರ್ಷಗಳಿಂದ ಖಾಲಿ ನಿವೇಶನಕ್ಕಾಗಿ ಗುಡಿಸಲು ಹಾಕಿಕೊಂಡಿದ್ದ ಸ್ಥಳದಲ್ಲಿ ಸುಮಾರು ಹತ್ತಕ್ಕೂ ಹೆಚ್ಚು ಗುಡಿಸಲು ಸುಟ್ಟು ಭಸ್ಮವಾಗಿವೆ. ಗೃಹ ಮಂತ್ರಿ ಡಾ.ಜಿ ಪರಮೇಶ್ವರ್ ಪ್ರತಿನಿಧಿಸುವ ಕೊರಟಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಿಂಪುಗಾನಹಳ್ಳಿಯಲ್ಲಿ ಈ ಘಟನೆ ನಡೆದಿದ್ದು.
ಈ ಹಿಂದೆಯೂ ಸಿಲಿಂಡರ್ ಸ್ಪೋಟ ಆಗಿ ಅನೇಕ ಗುಡಿಸಲು ಬೆಂಕಿಗೆ ಆಹುತಿಯಾಗಿದ್ದ ಸ್ಥಳದಲ್ಲೇ ಮತ್ತೆ ದುರ್ಘಟನೆ ಸಂಭವಿಸಿದೆ. ಬೆಂಕಿಯ ದುರಂತದಲ್ಲಿ ಮೇಕೆಗಳು ಗಾಯಗೊಂಡಿವೆ ಎಂದು ತಿಳಿದು ಬಂದಿದೆ. ಗಾಯಗೊಂಡ ಮೇಕೆಗಳ ಸ್ಥಿತಿ ಚಿಂತಜನಕವಾಗಿವೆ. ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ನಿವೇಶನ ಹಂಚಿಕೆ ಮಾಡಿ ಮನೆ ಕಟ್ಟಿಸಿ ಕೊಡುಬೇಕು, ಕೇವಲ ನೆಪ ಮಾತ್ರಕ್ಕೆ ಸ್ಥಳ ಪರಿಶೀಲನೆ ಮಾಡಿ ತೆರಳುವ ಕಾರ್ಯ ವೈಖರಿ ಸರಿಯಲ್ಲ ಎಂದು ಚಿಂಪುಗಾನಹಳ್ಳಿ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.