ಕನ್ನಡ ಸುದ್ದಿ  /  ಕರ್ನಾಟಕ  /  Tumkur News: ತುಮಕೂರಲ್ಲಿ ಚುನಾವಣೆ ಅಕ್ರಮದ 2.20 ಕೋಟಿ ರೂ. ವಸ್ತುಗಳ ವಶ, ಮತದಾನಕ್ಕೆ ಹೇಗಿದೆ ಸಿದ್ದತೆ

Tumkur News: ತುಮಕೂರಲ್ಲಿ ಚುನಾವಣೆ ಅಕ್ರಮದ 2.20 ಕೋಟಿ ರೂ. ವಸ್ತುಗಳ ವಶ, ಮತದಾನಕ್ಕೆ ಹೇಗಿದೆ ಸಿದ್ದತೆ

ಲೋಕಸಭೆ ಚುನಾವಣೆಗೆ ತುಮಕೂರು ಜಿಲ್ಲೆಯಲ್ಲಿ ಸಿದ್ದತೆಗಳು ಪೂರ್ಣಗೊಂಡಿವೆ. ಮೂರು ಕ್ಷೇತ್ರದಲ್ಲಿ ಹಂಚಿರುವ ಜಿಲ್ಲೆಯಲ್ಲಿ ಚುನಾವಣಾ ಅಕ್ರಮ ವಸ್ತು. ಹಣವನ್ನು ಜಪ್ತಿ ಮಾಡಲಾಗಿದೆ.ವರದಿ: ಈಶ್ವರ್‌ ತುಮಕೂರು.

ಚುನಾವಣೆಗೆ ಅಣಿಯಾಗಿ ಹೊರಟ ತುಮಕೂರು ಸಿಬ್ಬಂದಿ.
ಚುನಾವಣೆಗೆ ಅಣಿಯಾಗಿ ಹೊರಟ ತುಮಕೂರು ಸಿಬ್ಬಂದಿ.

ತುಮಕೂರು: ಕಲ್ಪತರು ನಾಡಿನ ತುಮಕೂರು ಲೋಕಸಭಾ ಕ್ಷೇತ್ರ ಚುನಾವಣೆ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಕೈಗೊಳ್ಳಲಾಗಿದ್ದು, ಜಿಲ್ಲೆಯ ಎಲ್ಲಾ ಮತ ಕೇಂದ್ರಗಳಿಗೆ ಮತ ಯಂತ್ರ ಹಾಗೂ ವಿವಿ ಪ್ಯಾಟ್ ಹಾಗೂ ಇತರರ ಪರಿಕರಗಳೊಂದಿಗೆ ಚುನಾವಣಾ ಸಿಬ್ಬಂದಿ ತೆರಳಿದರು. ಏ. 26 ರಂದು ದೇಶದ ದೊಡ್ಡ ಚುನಾವಣೆ ನಡೆಯುತ್ತಿದ್ದು, ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುತ್ತಿದೆ, ತುಮಕೂರು ಕ್ಷೇತ್ರದಲ್ಲೂ ಶುಕ್ರವಾರ ಮತದಾನ ನಡೆಯುತ್ತಿದ್ದು, ಮತ ಕೇಂದ್ರಗಳಲ್ಲಿ ಸಕಲ ಸಿದ್ಧತೆ, ಬಿಗಿ ಪೊಲೀಸ್ ಬಂದೋ ಬಸ್ತ್‌ ಕೈಗೊಳ್ಳಲಾಗಿದ್ದು, ಮತದಾರರಿಗೆ ಸುಗಮ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

22,91,260 ಮತದಾರರು

ಜಿಲ್ಲೆಯಲ್ಲಿ ತುಮಕೂರು ಲೋಕಸಭಾ ಕ್ಷೇತ್ರ ಹಾಗೂ ಶಿರಾ, ಪಾವಗಡ, ಕುಣಿಗಲ್ ವಿಧಾನ ಸಭಾ ಕ್ಷೇತ್ರದ 11,35,973 ಪುರುಷ, 11,55,194 ಮಹಿಳೆ ಹಾಗೂ 93 ಇತರೆ ಸೇರಿದಂತೆ ಒಟ್ಟು 22,91,260 ಮತದಾರರಿದ್ದು, ಏಪ್ರಿಲ್ 26 ರಂದು ತಮ್ಮ ಮತ ಚಲಾಯಿಸಲಿದ್ದಾರೆ.

2618 ಮತಗಟ್ಟೆ ಸ್ಥಾಪನೆ

ಮತದಾರರು ಮತ ಚಲಾಯಿಸಲು ಅನುವಾಗುವಂತೆ ಚಿಕ್ಕನಾಯಕನ ಹಳ್ಳಿ, ತಿಪಟೂರು, ತುರುವೇಕೆರೆ, ತುಮಕೂರು ನಗರ, ತುಮಕೂರು ಗ್ರಾಮಾಂತರ, ಕೊರಟಗೆರೆ, ಗುಬ್ಬಿ, ಮಧುಗಿರಿ ವಿಧಾನಸಭಾ ಕ್ಷೇತ್ರ ಸೇರಿದಂತೆ ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು 1846, ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೊಳಪಡುವ ಜಿಲ್ಲೆಯ ಶಿರಾ ಮತ್ತು ಪಾವಗಡ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 507 ಹಾಗೂ ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೊಳಪಡುವ ಕುಣಿಗಲ್ ವಿಧಾನಸಭಾ ಕ್ಷೇತ್ರದಲ್ಲಿ 265 ಮತಗಟ್ಟೆ ಸೇರಿ ಒಟ್ಟು 2618 ಮತಗಟ್ಟೆ ಸ್ಥಾಪಿಸಲಾಗಿದೆ, ಈ ಪೈಕಿ 546 ಕ್ರಿಟಿಕಲ್ ಮತಗಟ್ಟೆ ಸೇರಿ ಒಟ್ಟು 1312 ಮತಗಟ್ಟೆಗಳು ವೆಬ್ ಕಾಸ್ಟಿಂಗ್ ವ್ಯವಸ್ಥೆಗೆ ಒಳಪಡಲಿದೆ.

10472 ಮತಗಟ್ಟೆ ಅಧಿಕಾರಿಗಳ ನೇಮಕ

ಚುನಾವಣೆ ಲೋಪದೋಷವಿಲ್ಲದಂತೆ ನಡೆಸುವ ನಿಟ್ಟಿನಲ್ಲಿ 2618 ಮತಗಟ್ಟೆಗಳಿಗೆ 10472 ಮತಗಟ್ಟೆ ಅಧಿಕಾರಿಗಳು, 2618 ಗ್ರೂಪ್ ಡಿ. ನೌಕರರು ಹಾಗೂ 610 ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಕ ಮಾಡಲಾಗಿದ್ದು, ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿರುವ ಸಿಬ್ಬಂದಿಯನ್ನು ಮತಗಟ್ಟೆಗಳಿಗೆ ಕರೆದೊಯ್ಯಲು 382 ಬಸ್, 74 ಮಿನಿ ಬಸ್, 113 ಜೀಪ್ ಸೇರಿದಂತೆ ಒಟ್ಟು 569 ವಾಹನ ವ್ಯವಸ್ಥೆ ಮಾಡಲಾಗಿದೆ.

ಇವಿಎಂಗಳ ಹಂಚಿಕೆ

ಜಿಲ್ಲೆಯಲ್ಲಿ ಸ್ಥಾಪಿಸಿರುವ 2618 ಮತಗಟ್ಟೆಗಳಿಗೆ ಮತದಾರರು ಮತದಾನ ಮಾಡಲು 3962 ಕಂಟ್ರೋಲ್ ಯೂನಿಟ್, 5354 ಬ್ಯಾಲೆಟ್ ಯೂನಿಟ್ ಹಾಗೂ 3568 ವಿವಿ ಪ್ಯಾಟ್ ಹಂಚಿಕೆ ಮಾಡಲಾಗಿದೆ. ಮಸ್ಟರಿಂಗ್, ಡಿ- ಮಸ್ಟರಿಂಗ್ ಕೇಂದ್ರ ಜಿಲ್ಲೆಯ ಚಿಕ್ಕನಾಯಕನ ಹಳ್ಳಿ ಸರ್ಕಾರಿ ಸ್ವತಂತ್ರ ಪದವಿಪೂರ್ವ ಕಾಲೇಜು, ತಿಪಟೂರು ಸರ್ಕಾರಿ ಬಾಲಕರ ಪ.ಪೂ. ಕಾಲೇಜು, ತುರುವೇಕೆರೆ ಸರ್ಕಾರಿ ಪ.ಪೂ. ಕಾಲೇಜು, ತುಮಕೂರುಸರ್ಕಾರಿ ಪ.ಪೂ. ಕಾಲೇಜು, ತುಮಕೂರು ವಿಜಯ ನಗರದ ಸರ್ವೋದಯ ಪ್ರೌಢಶಾಲೆ, ಗುಬ್ಬಿ ಮಾರನಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕೊರಟಗೆರೆ ಸರ್ಕಾರಿ ಪ.ಪೂ. ಕಾಲೇಜು, ಮಧುಗಿರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್ ಸರ್ಕಾರಿ ಮಹಾತ್ಮಗಾಂಧಿ ಪ.ಪೂ. ಕಾಲೇಜು, ಶಿರಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಪಾವಗಡದ ಸರ್ಕಾರಿ ಪ.ಪೂ. ಕಾಲೇಜಿನಲ್ಲಿ ಮಸ್ಟರಿಂಗ್, ಡಿ- ಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.

2.20 ಕೋಟಿ ರೂ. ಮೌಲ್ಯದ ಸಾಮಗ್ರಿ ವಶ

ಜಿಲ್ಲೆಯಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಡಿ 76,80,424 ರೂ. ಮೌಲ್ಯದ 29442.96 ಲೀ. ಮದ್ಯ, 1,29,15,052 ರೂ. ನಗದು, 5,45,309 ರೂ. ಮೌಲ್ಯದ 1306 ಫ್ರೀಬೀಸ್, 7,60,837 ರೂ. ಮೌಲ್ಯದ 0.126 ಗ್ರಾಂ ಚಿನ್ನ ಹಾಗೂ 1,70,000 ರೂ. ಮೌಲ್ಯದ 5.35 ಕೆ.ಜಿ. ಗಾಂಜಾ ಸೇರಿದಂತೆ ಒಟ್ಟು 2.20 ಕೋಟಿ ರೂ. ಮೌಲ್ಯದ ಸಾಮಗ್ರಿ ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಸುಭಾ ಕಲ್ಯಾಣ್‌ ಮಾಹಿತಿ ನೀಡಿದ್ದಾರೆ.

ವರದಿ: ಈಶ್ವರ್‌ ತುಮಕೂರು.

ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point