ಕನ್ನಡ ಸುದ್ದಿ  /  ಜೀವನಶೈಲಿ  /  Pan Card: ನೀವಿನ್ನೂ ಪ್ಯಾನ್‌ ಕಾರ್ಡ್‌ ಮಾಡಿಸಿಲ್ವಾ? ಆನ್‌ಲೈನ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ, ಇಲ್ಲಿದೆ ಹಂತ ಹಂತದ ವಿವರ

Pan Card: ನೀವಿನ್ನೂ ಪ್ಯಾನ್‌ ಕಾರ್ಡ್‌ ಮಾಡಿಸಿಲ್ವಾ? ಆನ್‌ಲೈನ್‌ನಲ್ಲೇ ಸುಲಭವಾಗಿ ಅರ್ಜಿ ಸಲ್ಲಿಸಿ, ಇಲ್ಲಿದೆ ಹಂತ ಹಂತದ ವಿವರ

PAN Card: ಪ್ಯಾನ್‌ ಕಾರ್ಡ್‌ನಲ್ಲಿ ನಿಮ್ಮ ವಿಳಾಸ ಹಾಗೂ ಇತರೆ ವಿವರಗಳನ್ನು ಅವಶ್ಯಕತೆಯಿದ್ದಾಗ ಬದಲಾಯಿಸಿಕೊಳ್ಳಬಹುದು. ಆದರೆ ಪ್ಯಾನ್‌ ನಂಬರ್‌, ಇದು ನಿಮ್ಮ ಇಡೀ ಜೀವಿತಾವಧಿಯಲ್ಲಿ ಎಂದೂ ಬದಲಾಗದ ಸಂಖ್ಯೆ. ನೀವು ಹೊಸದಾಗಿ ಪ್ಯಾನ್‌ ಕಾರ್ಡ್‌ ಮಾಡಿಸಬೇಕೆಂದಿದ್ದರೆ, ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬಹುದು. (ಬರಹ: ಅರ್ಚನಾ ವಿ. ಭಟ್‌)

ಪ್ಯಾನ್‌ ಕಾರ್ಡ್‌ ಪಡೆಯಲು ಆನ್‌ಲೈನ್‌ನಲ್ಲಿ ಹೀಗೆ ಅರ್ಜಿ ಸಲ್ಲಿಸಿ
ಪ್ಯಾನ್‌ ಕಾರ್ಡ್‌ ಪಡೆಯಲು ಆನ್‌ಲೈನ್‌ನಲ್ಲಿ ಹೀಗೆ ಅರ್ಜಿ ಸಲ್ಲಿಸಿ

ಭಾರತದಲ್ಲಿ ಸದ್ಯ ನೀವು ಯಾವುದೇ ಹಣಕಾಸಿನ ವ್ಯವಹಾರ ಮಾಡಬೇಕು ಎಂದರೂ ನಿಮಗೆ ಪ್ಯಾನ್‌ ನಂಬರ್‌ ಬೇಕೇ ಬೇಕು. ಭಾರತದ ಆದಾಯ ತೆರಿಗೆ ಇಲಾಖೆಯು (Income Tax Department of India) ಅರ್ಹ ಭಾರತೀಯ ಪ್ರಜೆಗೆ ವಿಶಿಷ್ಟ ಸಂಖ್ಯೆಯ ಪರ್ಮನೆಂಟ್‌ ಅಕೌಂಟ್‌ ನಂಬರ್‌ (ಪ್ಯಾನ್‌ ಕಾರ್ಡ್‌) ನೀಡುತ್ತದೆ. ಇದು 10 ಸಂಖ್ಯೆಗಳ (ಸಂಖ್ಯೆ ಮತ್ತು ಇಂಗ್ಲೀಷ್‌ ಅಕ್ಷರಗಳನ್ನೊಳಗೊಂಡ ಸಂಖ್ಯೆ) ಒಂದು ಗುರುತಿನ ಚೀಟಿ ಆಗಿದೆ. ಇದು ಹಣಕಾಸಿನ ವಹಿವಾಟುಗಳಿಗೆ ಅದರಲ್ಲೂ ವಿಶೇಷವಾಗಿ ತೆರಿಗೆಗೆ ಸಂಬಂಧಿಸಿದ ಪ್ರಮುಖ ದಾಖಲೆಗಳನ್ನಿಡುವ ಕಾರ್ಯ ನಿರ್ವಹಿಸುತ್ತದೆ. ಬ್ಯಾಂಕ್‌ ಖಾತೆ ತೆರೆಯಲು, ಹೂಡಿಕೆ ಮಾಡಲು, ಆಸ್ತಿ ಖರೀದಿಸಲು, ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಮತ್ತು ವಿವಿಧ ಹಣಕಾಸಿನ ವಹಿವಾಟು ನಡೆಸಲು ಪ್ಯಾನ್‌ ಕಾರ್ಡ್‌ ಅತ್ಯಗತ್ಯವಾಗಿ ಬೇಕು. ಪ್ಯಾನ್‌ ನಂಬರ್‌, ಇದು ಇಡೀ ಜೀವಿತಾವಧಿಯಲ್ಲಿ ಎಂದೂ ಬದಲಾಗದ ಸಂಖ್ಯೆ ಆಗಿದೆ. ಪ್ಯಾನ್ ಕಾರ್ಡ್‌ನಲ್ಲಿರುವ ವಿಳಾಸ ಮತ್ತು ಇತರೆ ವಿವರಗಳನ್ನು ಬದಲಾಯಿಸಿಕೊಳ್ಳಬಹುದು.

ಟ್ರೆಂಡಿಂಗ್​ ಸುದ್ದಿ

ಪ್ಯಾನ್‌ ಕಾರ್ಡ್‌ ಏಕೆ ಬೇಕು?

ಹಣಕಾಸಿನ ವ್ಯವಹಾರಗಳಿಗೆ ಪ್ಯಾನ್‌ ಕಾರ್ಡ್‌ ಏಕೆ ಬೇಕು ಎಂಬುದು ಹಲವರ ಪ್ರಶ್ನೆಯಾಗಿದೆ. ಮೊಟ್ಟ ಮೊದಲಿಗೆ ಪ್ಯಾನ್‌ ಕಾರ್ಡ್‌, ಆದಾಯ ತೆರಿಗೆ ರಿಟರ್ನ್ಸ್‌ ಸಲ್ಲಿಸಲು ಮತ್ತು ತೆರಿಗೆಗಳನ್ನು ಪಾವತಿಸಲು ಬೇಕಾಗುತ್ತದೆ. ಇದು ವಾರ್ಷಿಕವಾಗಿ ನಡೆಸಿದ ಎಲ್ಲಾ ಹಣಕಾಸಿನ ವಹಿವಾಟುಗಳನ್ನು ಟ್ರ್ಯಾಕ್‌ ಮಾಡಲು ತೆರಿಗೆ ಇಲಾಖೆಗೆ ಸಹಾಯ ಮಾಡುತ್ತದೆ. ತೆರಿಗೆಗೆ ಒಳಪಡುವ ಪ್ರತಿಯೊಬ್ಬ ನಾಗರಿಕನು ಸರಿಯಾದ ಪ್ರಮಾಣದ ತೆರಿಗೆಗಳನ್ನು ಪಾವತಿಸುತ್ತಿದ್ದಾನೆ ಎಂಬುದನ್ನು ಇದು ಖಚಿತಪಡಿಸುತ್ತದೆ. ಜೊತೆಗೆ ಪ್ರತಿಯೊಬ್ಬ ನಾಗರಿಕನು ತಾನು ಸರಿಯಾಗಿ ತೆರಿಗೆ ಪಾವತಿಸುತ್ತಿದ್ದೇನೆ ಎಂಬುದಕ್ಕೂ ದಾಖಲೆಯಾಗಿದೆ.

ಪ್ಯಾನ್‌ ಯಾರಿಗೆ ಬೇಕು?

ಪ್ಯಾನ್‌ ಕಾರ್ಡ್‌ನ್ನು ಎಲ್ಲಾ ತೆರಿಗೆದಾರರು, ಆದಾಯ ತೆರಿಗೆ ರಿಟರ್ನ್‌ ತುಂಬಿಕೊಡುವ ವ್ಯಕ್ತಿಗಳು ಹೊಂದಿರಲೇಬೇಕು. ಹಣಕಾಸಿನ ವಹಿವಾಟು ಮಾಡುವ ಎಲ್ಲಾ ವ್ಯಕ್ತಿಗಳು ಪ್ಯಾನ್‌ ಕಡ್ಡಾಯವಾಗಿದೆ.

ನೀವು ಹೊಸದಾಗಿ ಪ್ಯಾನ್‌ ಕಾರ್ಡ್‌ ಮಾಡಿಸುತ್ತಿದ್ದರೆ, ಅದಕ್ಕೆ ಪ್ಯಾನ್‌ ಕಾರ್ಡ್‌ ಮಾಡಿಕೊಡುವ ಕೇಂದ್ರಗಳಿಗೆ ಭೇಟಿ ನೀಡಬೇಕೆಂದಿಲ್ಲ. ಆನ್‌ಲೈನ್‌ ಮುಖಾಂತರವೂ ಅರ್ಜಿ ಸಲ್ಲಿಸಬಹುದು. ಪ್ಯಾನ್‌ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಈ ಕೆಳಗಿನ ಹಂತಗಳನ್ನು ಪಾಲಿಸಿ.

ಪ್ಯಾನ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅಪ್ಲಿಕೇಷನ್‌ ಹಾಕುವ ವಿಧಾನ 

* ಮೊದಲಿಗೆ ಅಧಿಕೃತ ವೆಬ್‌ಸೈಟ್‌ https://www.protean-tinpan.com/services/pan/pan-index.html ಗೆ ಭೇಟಿ ಕೊಡಿ.

* ಪ್ಯಾನ್‌ ಅರ್ಜಿಯ ಪ್ರಕಾರದ ಮೇಲೆ ಕ್ಲಿಕ್‌ ಮಾಡಿ. ಅಲ್ಲಿ ನ್ಯೂ ಪ್ಯಾನ್‌ ಇಂಡಿಯನ್‌ ಸಿಟಿಜನ್‌, ನ್ಯೂ ಪ್ಯಾನ್‌ ಫಾರಿನ್‌ ಸಿಟಿಜನ್‌ ಅಲ್ಲಿ ನಿಮ್ಮ ಆಯ್ಕೆ ಕ್ಲಿಕ್‌ ಮಾಡಿ.

* ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತುಂಬಿ.

* ಪೇಮೆಂಟ್‌ ಮೋಡ್‌ ಅನ್ನು ಆಯ್ಕೆ ಮಾಡಿ.

* ನಂತರ ಫಾರ್ಮ್‌ ಅನ್ನು ಸಬ್‌ಮಿಟ್‌ ಮಾಡಿ. ಭರ್ತಿ ಮಾಡಿದ ಅರ್ಜಿ ಮತ್ತು ಪೇಮೆಂಟ್‌ ಸರಿಯಾಗಿದ್ದರೆ ಅಕ್ನಾಲಡ್ಜ್‌ ರಿಸೀಟ್‌ನ್ನು ಕಳುಹಿಸಲಾಗುತ್ತದೆ.

* ಅದನ್ನು ಭವಿಷ್ಯದ ಅವಶ್ಯಕತೆಗಾಗಿ ಅದನ್ನು ಸೇವ್‌ ಮಾಡಿಕೊಳ್ಳಿ. ನಂತರ ಪ್ರಿಂಟ್‌ಔಟ್‌ ತೆಗೆದುಕೊಳ್ಳಿ.

* ಆ ಪ್ರಿಂಟ್‌ ಔಟ್‌ನಲ್ಲಿ ಒದಗಿಸಿರುವ ಜಾಗದಲ್ಲಿ ಸಹಿ ಮಾಡಿ. ನಿಮ್ಮ ಇತ್ತೀಚಿನ ಭಾವಚಿತ್ರ ಅಂಟಿಸಿ.

* ಅಗತ್ಯ ದಾಖಲೆಗಳೊಂದಿಗೆ ಪ್ಯಾನ್‌ ಅರ್ಜಿಯನ್ನು ನಿಮ್ಮ ಹತ್ತಿರದ ಆದಾಯ ತೆರಿಗೆ ಮತ್ತು ಪ್ಯಾನ್‌ ಸೇವೆಗಳ ಕೇಂದ್ರಕ್ಕೆ ಸಲ್ಲಿಸಿ.

* 15 ಅಂಕಿಗಳ ಅಕ್ನಾಲಡ್ಜ್‌ ರಿಸೀಟ್‌ನಲ್ಲಿರುವ ಸಂಖ್ಯೆಯ ಮೂಲಕ ನಿಮ್ಮ ಪ್ಯಾನ್‌ ಸ್ಟೇಟಸ್‌ ಅನ್ನು ತಿಳಿದುಕೊಳ್ಳಬಹುದಾಗಿದೆ.

ಹೀಗೆ ಸುಲಭದಲ್ಲಿ ನಿಮ್ಮ ಪ್ಯಾನ್‌ ನಂಬರ್‌ ಪಡೆದುಕೊಳ್ಳಬಹುದು. ಪ್ಯಾನ್‌ ಕಾರ್ಡ್‌ ಮಾಡಿಕೊಡುವ ಕೇಂದ್ರಗಳಿಗೆ ಅಲೆದಾಡುವ ಬದಲು ಇದು ಉತ್ತಮವಾಗಿದೆ.