ಹರ್ಷಲ್ ಪಟೇಲ್ ಮಾರಕ ಯಾರ್ಕರ್‌ಗೆ ಧೋನಿ ಗೋಲ್ಡನ್ ಡಕ್; ಧರ್ಮಶಾಲಾ ಫ್ಯಾನ್ಸ್ ಅಚ್ಚರಿಯ ರಿಯಾಕ್ಷನ್ -Video
MS Dhoni Golden Duck: ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಎಂಎಸ್ ಧೋನಿ ಮೊದಲ ಬಾರಿಗೆ ಗೋಲ್ಡನ್ ಡಕ್ ಆದರು. ಮಾಹಿಯನ್ನು ಈ ಬಾರಿ ಔಟ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಹರ್ಷಲ್ ಪಟೇಲ್ ಪಾತ್ರರಾದರು.
ಐಪಿಎಲ್ 2024ರ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ವೇಗದ ಬೌಲರ್ ಹರ್ಷಲ್ ಪಟೇಲ್, ವಿಶೇಷ ಸಾಧನೆ ಮಾಡಿದ್ದಾರೆ. ಪ್ರಸಕ್ತ ಐತುವಿನಲ್ಲಿ ಸಿಎಸ್‌ಕೆ ಮಾಜಿ ನಾಯಕ ಎಂಎಸ್ ಧೋನಿಯನ್ನು ಔಟ್ ಮಾಡಿದ ಮೊದಲ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (Punjab Kings vs Chennai Super Kings) ವಿರುದ್ಧ ಆರ್‌ಸಿಬಿ ಮಾಜಿ ವೇಗಿ ಹರ್ಷಲ್ ಈ ದಾಖಲೆ ನಿರ್ಮಿಸಿದ್ದಾರೆ. ನಿಧಾನಗತಿಯ ಯಾರ್ಕರ್ ಮೂಲಕ ದಿಗ್ಗಜ ಆಟಗಾರ ಮಾಹಿಯನ್ನು ಗೋಲ್ಡನ್ ಡಕ್ ಮಾಡಿದ್ದಾರೆ.
ಪ್ರಸಕ್ತ ಆವೃತ್ತಿಯ ಐಪಿಎಲ್‌ನಲ್ಲಿ ಧೋನಿ ಕೇವಲ 48 ಎಸೆತಗಳಲ್ಲಿ 110 ರನ್ ಗಳಿಸಿದ್ದಾರೆ. ಎದುರಿಸಿದ ಪ್ರತಿ ಮೂರು ಎಸೆತಗಳಲ್ಲಿ ಒಂದು ಬೌಂಡರಿಯಂತೆ ರನ್ ಗಳಿಸಿದ್ದಾರೆ. ಟಿ20 ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ 9ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದ ಮಾಹಿ, ಕೆಳ ಕ್ರಮಾಂಕದಲ್ಲಿ ಕಣಕ್ಕಿಳಿದು ಕಳಪೆ ದಾಖಲೆ ಬರೆದರು.
ಪಂದ್ಯದ ಡೆತ್ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ಮಾಡಿದ ಹರ್ಷಲ್, ಸತತ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆದು ಮಿಂಚಿದರು. ಶಾರ್ದೂಲ್ ಠಾಕೂರ್ ಅವರನ್ನು ಆಫ್ ಕಟ್ಟರ್ ಎಸೆತದಲ್ಲಿ ಕ್ಲೀನ್ ಬೋಲ್ಡ್ ಮಾಡಿದ ನಂತರದ ಎಸೆತದಲ್ಲೇ, ಧೋನಿ ಕೂಡಾ ಔಟಾದರು. ಸ್ಟಂಪ್‌ಗಳನ್ನು ಗುರಿಯಾಗಿಸಿ ಮತ್ತೊಂದು ಅದ್ಭುತ ನಿಧಾನಗತಿಯ ಎಸೆತ ಎಸೆದ ಹರ್ಷಲ್, ವಿಕೆಟ್ ಉರುಳಿಸುವಲ್ಲಿ ಯಶಸ್ವಿಯಾದರು. ಆ ಮೂಲಕ ಮಾಹಿ ಎದುರಿಸಿದ ಮೊದಲ ಎಸೆತದಲ್ಲಿ ಔಟಾಗುವ ಮೂಲಕ ಗೋಲ್ಡನ್ ಡಕ್ ಆದರು. ಮೈದಾನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ ಹಳದಿ ಆರ್ಮಿಗೆ ಮಾಹಿ ವಿಕೆಟ್ ಉರುಳಿದ್ದು ಅಚ್ಚರಿಯಾಯ್ತು. ಸಿಎಸ್‌ಕೆ ಪ್ರೇಕ್ಷಕರು ಒಂದು ಕ್ಷಣ ಮೌನವಾದರು.
ಐಪಿಎಲ್ ಸುಧೀರ್ಘ ವೃತ್ತಿಜೀವನದಲ್ಲಿ ಧೋನಿ ಗೋಲ್ಡನ್ ಡಕ್ ಆಗಿದ್ದು ಕೇವಲ ನಾಲ್ಕನೇ ಬಾರಿ. ಕಳೆದ ವರ್ಷದ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ಕೊನೆಯ ಬಾರಿಗೆ ಧೋನಿ ಮೊದಲ ಎಸೆತದಲ್ಲೇ ಔಟಾಗಿದ್ದರು.
ಪಂಜಾಬ್ ಕಿಂಗ್ಸ್ ಪರ ಅಮೋಘ ಬೌಲಿಂಗ್ ಪ್ರದರ್ಶನ ನೀಡಿದ ಹರ್ಷಲ್ 24 ರನ್ ಬಿಟ್ಟುಕೊಟ್ಟು 3 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ | ಸುಂದರ ಧರ್ಮಶಾಲಾದಲ್ಲಿ ಸಿಎಸ್‌ಕೆ ವಿರುದ್ಧ ಟಾಸ್ ಗೆದ್ದ ಪಂಜಾಬ್ ಬೌಲಿಂಗ್; ಹಾಲಿ ಚಾಂಪಿಯನ್ ವಿರುದ್ಧ 6ನೇ ಗೆಲುವಿನ ಗುರಿ
ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಸಿಎಸ್‌ಕೆ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದ್ದು, ಮಿಚೆಲ್ ಸ್ಯಾಂಟ್ನರ್ ಆಡುತ್ತಿದ್ದಾರೆ. ಅತ್ತ ಪಂಜಾಬ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ.
ಪಂಜಾಬ್ ಕಿಂಗ್ಸ್ ಆಡುವ ಬಳಗ
ಜಾನಿ ಬೈರ್‌ಸ್ಟೋವ್, ರಿಲೀ ರೊಸ್ಸೋ, ಶಶಾಂಕ್ ಸಿಂಗ್, ಸ್ಯಾಮ್ ಕರನ್ (ನಾಯಕ), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಅಶುತೋಷ್ ಶರ್ಮಾ, ಹರ್‌ಪ್ರೀತ್ ಬ್ರಾರ್, ಹರ್ಷಲ್ ಪಟೇಲ್, ರಾಹುಲ್ ಚಾಹರ್, ಕಗಿಸೊ ರಬಾಡ, ಅರ್ಶ್‌ದೀಪ್ ಸಿಂಗ್.
ಚೆನ್ನೈ ಸೂಪರ್ ಕಿಂಗ್ಸ್ ಆಡುವ ಬಳಗ
ಅಜಿಂಕ್ಯ ರಹಾನೆ, ರುತುರಾಜ್ ಗಾಯಕ್ವಾಡ್ (ನಾಯಕ), ಡೇರಿಲ್ ಮಿಚೆಲ್, ಶಿವಂ ದುಬೆ, ಮೊಯಿನ್ ಅಲಿ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಮಿಚೆಲ್ ಸ್ಯಾಂಟ್ನರ್, ಶಾರ್ದೂಲ್ ಠಾಕೂರ್, ರಿಚರ್ಡ್ ಗ್ಲೀಸನ್, ತುಷಾರ್ ದೇಶಪಾಂಡೆ.