ಎಲ್‌ಎಸ್‌ಜಿ vs ಕೆಕೆಆರ್: ಹೆಡ್ ಟು ಹೆಡ್ ದಾಖಲೆ, ಪಿಚ್-ಹವಾಮಾನ ವರದಿ ಹಾಗೂ ಸಂಭಾವ್ಯ ತಂಡ ಹೀಗಿದೆ
ಪ್ಲೇ ಆಫ್ ಹಂತಕ್ಕೇರಲು ಕೋಲ್ಕತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ತುದಿಗಾಲಲ್ಲಿ ನಿಂತಿವೆ. ಉಭಯ ತಂಡಗಳು ನಡುವಿನ ಐಪಿಎಲ್ 2024ರ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ಗೆದ್ದು ಬೀಗಿತ್ತು.
ಐಪಿಎಲ್ 2024ರ ಆವೃತ್ತಿಯಲ್ಲಿ ಮೇ 5ರ ಭಾನುವಾರದ ಎರಡನೇ ಪಂದ್ಯದಲ್ಲಿ ಎರಡು ಬಾರಿಯ ಚಾಂಪಿಯನ್ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಉಭಯ ತಂಡಗಳ ನಡುವಿನ ಎರಡನೇ ಮುಖಾಮುಖಿ ಇದಾಗಿದ್ದು, ಈ ಬಾರಿ ಕೆಎಲ್ ರಾಹುಲ್ ಬಳಗದ ತವರು ಲಕ್ನೋದ ಎಕಾನಾ ಕ್ರೀಡಾಂಗಣ ಪಂದ್ಯಕ್ಕೆ ಆತಿಥ್ಯ ವಹಿಸುತ್ತಿದೆ. ತಂಡಗಳ ನಡುವಣ ಟೂರ್ನಿಯ ಮೊದಲ ಪಂದ್ಯದಲ್ಲಿ ಆತಿಥೇಯ ಕೆಕೆಆರ್ 8 ವಿಕೆಟ್ ಗೆಲುವು ಸಾಧಿಸಿತ್ತು. ಇದೀಗ ಆ ಸೋಲಿಗೆ ಸೇಡು ತೀರಿಸಲು ಲಕ್ನೋ ಸಜ್ಜಾಗಿದೆ.
ಟೂರ್ನಿಯಲ್ಲಿ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡುತ್ತಿವೆ. ಇದರೊಂದಿಗೆ ಅಂಕಪಟ್ಟಿಯಲ್ಲಿ ಎರಡು ಹಾಗೂ ಮೂರನೇ ಸ್ಥಾನ ಪಡೆದುಕೊಂಡು ಪ್ಲೇ ಆಫ್ ಹಂತಕ್ಕೆ ಪ್ರವೇಶಿಸುವ ಲೆಕ್ಕಾಚಾರ ಹಾಕಿಕೊಂಡಿವೆ. ಕೆಕೆಆರ್ ಪರ ಆರಂಭಿಕ ಆಟಗಾರರಾದ ಫಿಲ್ ಸಾಲ್ಟ್ ಮತ್ತು ಸುನಿಲ್ ನರೈನ್ ಪ್ರಚಂಡ ಫಾರ್ಮ್‌ನಲ್ಲಿದ್ದಾರೆ. ಆರಂಭದಲ್ಲಿ ಫಾರ್ಮ್ ಕಳೆದುಕೊಂಡಿದ್ದ ಐಪಿಎಲ್‌ನ ಅತ್ಯಂತ ದುಬಾರಿ ಆಟಗಾರ ಮಿಚೆಲ್ ಸ್ಟಾರ್ಕ್, ಮುಂಬೈ ಇಂಡಿಯನ್ಸ್ ವಿರುದ್ಧ ನಾಲ್ಕು ವಿಕೆಟ್ ಪಡೆದು ಲಯಕ್ಕೆ ಮರಳಿದ್ದಾರೆ.
ಅತ್ತ ಲಕ್ನೋ ತಂಡ ಪ್ರಸ್ತುತ ಇನ್ನಿಂಗ್ಸ್ ಆರಂಭಿಸುವಲ್ಲಿ ಸಂಕಷ್ಟ ಅನುಭವಿಸುತ್ತಿದೆ. ಕೊನೆಯ ಪಂದ್ಯದಲ್ಲಿ ತಂಡವು ಕ್ವಿಂಟನ್ ಡಿ ಕಾಕ್ ಬದಲಿಗೆ ನಾಯಕ ರಾಹುಲ್ ಹಾಗೂ ಯುವ ಆಟಗಾರ ಅರ್ಶಿನ್ ಕುಲಕರ್ಣಿ ಆರಂಭಿಕರಾಗಿ ಕಣಕ್ಕಿಳಿದಿದ್ದರು. ಆ ತಂತ್ರ ಕೂಡಾ ಫಲ ಕೊಡಲಿಲ್ಲ. ಮತ್ತೊಂದೆಡೆ ವೇಗಿ ಮಯಾಂಕ್ ಯಾದವ್ ಮತ್ತೆ ಗಾಯಾಳುವಾಗಿದ್ದು ತಂಡದ ಚಿಂತೆ ಹೆಚ್ಚಿಸಿದೆ.
ಕೆಕೆಆರ್ vs ಎಲ್‌ಎಸ್‌ಜಿ ಮುಖಾಮುಖಿ ದಾಖಲೆ
ಉಭಯ ತಂಡಗಳು ಐಪಿಎಲ್‌ನಲ್ಲಿ ಈವರೆಗೆ ನಾಲ್ಕು ಬಾರಿ ಮುಖಾಮುಖಿಯಾಗಿವೆ. ಇದರಲ್ಲಿ ಎಲ್ಎಸ್‌ಜಿ ವಿರುದ್ಧ ಕೆಕೆಆರ್ 3 ಪಂದ್ಯಗಳಲ್ಲಿ ಗೆದ್ದು ಮೇಲುಗೈ ಸಾಧಿಸಿದೆ. ಐಪಿಎಲ್ 2024ರ ಪಂದ್ಯದಲ್ಲಿ ಕೋಲ್ಕತ್ತಾ ಗೆದ್ದಿದೆ.
ಏಕಾನಾ ಕ್ರೀಡಾಂಗಣ ಪಿಚ್ ವರದಿ
ಎಕಾನಾ ಕ್ರೀಡಾಂಗಣದಲ್ಲಿ ಬ್ಯಾಟರ್‌ಗಳು ಸುಲಭವಾಗಿ ರನ್ ಗಳಿಸುವುದು ಕಷ್ಟ. ಇದು ಬ್ಯಾಟಿಂಗ್‌ಗೆ ಕ್ಲಿಷ್ಟಕರ ಪಿಚ್ ಎಂದು ಪರಿಗಣಿಸಲಾಗಿದೆ. ಈ ಮೈದಾನದಲ್ಲಿ ಆಡಿದ 13 ಪಂದ್ಯಗಳಲ್ಲಿ, 7 ಪಂದ್ಯಗಳಲ್ಲಿ ಚೇಸಿಂಗ್ ಮಾಡಿದ ತಂಡ ಗೆದ್ದಿದೆ. ಮೈದಾನದಲ್ಲಿ ಬೌಲರ್‌ಗಳು ತುಸು ಮೇಲುಗೈ ಸಾಧಿಸಲಿದ್ದಾರೆ.
ಹವಾಮಾನ ವರದಿ
ಪಂದ್ಯದ ದಿನವಾದ ಮೇ 5ರಂದು ಲಕ್ನೋದಲ್ಲಿ ಮಳೆಯಾಗುವ ಸಾಧ್ಯತೆಗಳಿಲ್ಲ. ನಗರದಲ್ಲಿ ತಾಪಮಾನವು ಸುಮಾರು 42 ಡಿಗ್ರಿ ಸೆಲ್ಸಿಯಸ್ ಇರುವ ಮುನ್ಸೂಚನೆ ಇದೆ.
ಕೆಕೆಆರ್ ಸಂಭಾವ್ಯ ತಂಡ (ಮೊದಲು ಬ್ಯಾಟಿಂಗ್ ಮಾಡಿದರೆ)
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಗ್ರಿಶ್ ರಘುವಂಶಿ, ರಿಂಕು ಸಿಂಗ್, ಮನೀಶ್ ಪಾಂಡೆ, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ
ಕೆಕೆಆರ್ ಸಂಭಾವ್ಯ ತಂಡ (ಮೊದಲು ಬೌಲಿಂಗ್ ಮಾಡಿದರೆ)
ಫಿಲ್ ಸಾಲ್ಟ್ (ವಿಕೆಟ್ ಕೀಪರ್), ಸುನಿಲ್ ನರೈನ್, ಶ್ರೇಯಸ್ ಅಯ್ಯರ್ (ನಾಯಕ), ವೆಂಕಟೇಶ್ ಅಯ್ಯರ್, ಆಂಗ್ರಿಶ್ ರಘುವಂಶಿ, ರಿಂಕು ಸಿಂಗ್, ಆಂಡ್ರೆ ರಸೆಲ್, ರಮಣ್ದೀಪ್ ಸಿಂಗ್, ಮಿಚೆಲ್ ಸ್ಟಾರ್ಕ್, ವೈಭವ್ ಅರೋರಾ, ವರುಣ್ ಚಕ್ರವರ್ತಿ
ಇದನ್ನೂ ಓದಿ | ಜಿಟಿ ವಿರುದ್ಧ ಗೆದ್ದ ಆರ್ಸಿಬಿ ಭಾರಿ ಜಿಗಿತ; 10ನೇ ಸ್ಥಾನಕ್ಕೆ ಜಾರಿದ ಮುಂಬೈ ಇಂಡಿಯನ್ಸ್- ಹೀಗಿದೆ ಐಪಿಎಲ್ ಅಂಕಪಟ್ಟಿ
ಇಂಪ್ಯಾಕ್ಟ್ ಆಟಗಾರರು: ವರುಣ್ ಚಕ್ರವರ್ತಿ, ಮನೀಶ್ ಪಾಂಡೆ, ಅನುಕುಲ್ ರಾಯ್
ಎಲ್ಎಸ್‌ಜಿ ಸಂಭಾವ್ಯ ತಂಡ (ಮೊದಲು ಬ್ಯಾಟಿಂಗ್ ಮಾಡಿದರೆ)
ಕೆಎಲ್ ರಾಹುಲ್ (ನಾಯಕ / ವಿಕೆಟ್ ಕೀಪರ್), ಅರ್ಶಿನ್ ಕುಲಕರ್ಣಿ, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಷ್ಟನ್ ಟರ್ನರ್, ಆಯುಷ್ ಬದೋನಿ, ಕೃನಾಲ್ ಪಾಂಡ್ಯ, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್.
ಲಕ್ನೋ ಸಂಭಾವ್ಯ ಇಲೆವೆನ್ (ಮೊದಲು ಬೌಲಿಂಗ್ ಮಾಡಿದರೆ)
ಕೆಎಲ್ ರಾಹುಲ್ (ನಾಯಕ/ ವಿಕೆಟ್ ಕೀಪರ್), ಅರ್ಶಿನ್ ಕುಲಕರ್ಣಿ, ಮಾರ್ಕಸ್ ಸ್ಟೊಯ್ನಿಸ್, ದೀಪಕ್ ಹೂಡಾ, ನಿಕೋಲಸ್ ಪೂರನ್, ಆಷ್ಟನ್ ಟರ್ನರ್, ಕೃನಾಲ್ ಪಾಂಡ್ಯ, ನವೀನ್-ಉಲ್-ಹಕ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಎಂ ಸಿದ್ಧಾರ್ಥ್
ಇಂಪ್ಯಾಕ್ಟ್ ಆಟಗಾರರು: ಅರ್ಶಿನ್ ಕುಲಕರ್ಣಿ, ಕೃಷ್ಣಪ್ಪ ಗೌತಮ್, ಎಂ ಸಿದ್ಧಾರ್ಥ್