ಕನ್ನಡ ಸುದ್ದಿ  /  ಜೀವನಶೈಲಿ  /  Mangaluru Recipe: 54 ವರ್ಷಗಳಿಂದಲೂ ಅದೇ ಶೈಲಿ, ಅದೇ ಸ್ವಾದ; ಬಂಟ್ವಾಳದ ಐತಾಳರ ಸ್ವಾಗತ್‌ ಹೋಟೆಲ್‌ನ ಬಾಳೆಲೆ ಊಟಕ್ಕೆ ಹತ್ತೂರಿನವರೂ ಫಿದಾ

Mangaluru Recipe: 54 ವರ್ಷಗಳಿಂದಲೂ ಅದೇ ಶೈಲಿ, ಅದೇ ಸ್ವಾದ; ಬಂಟ್ವಾಳದ ಐತಾಳರ ಸ್ವಾಗತ್‌ ಹೋಟೆಲ್‌ನ ಬಾಳೆಲೆ ಊಟಕ್ಕೆ ಹತ್ತೂರಿನವರೂ ಫಿದಾ

ದಕಿಣ ಕನ್ನಡದ ಬಂಟ್ವಾಳಕ್ಕೆ ಭೇಟಿ ನೀಡಿದ್ದರೆ ಇಲ್ಲಿನ ಬಿಸಿ ರೋಡ್‌ನಲ್ಲಿರುವ ಐತಾಳರ ಸ್ವಾಗತ್‌ ಹೋಟೆಲ್‌ಗೆ ಒಮ್ಮೆ ಭೇಟಿ ನೀಡಿ. ಸಸ್ಯಾಹಾರ ಇಷ್ಟಪಡುವವರಿಗೆ ಇಲ್ಲಿ ಸ್ವಾದಿಷ್ಟ ಬಾಳೆಲೆ ಊಟ ಸಿಗುತ್ತದೆ. ಕಳೆದ 54 ವರ್ಷಗಳಿಂದ ಒಂದೇ ರುಚಿಯನ್ನು ನೀಡುತ್ತಿದೆ ಈ ಹೋಟೆಲ್‌ (ಬರಹ: ಹರೀಶ್ ಮಾಂಬಾಡಿ).

54 ವರ್ಷಗಳಿಂದಲೂ ಅದೇ ಶೈಲಿ, ಅದೇ ಸ್ವಾದ; ಐತಾಳರ ಸ್ವಾಗತ್‌ ಹೋಟೆಲ್‌ನ ಬಾಳೆಲೆ ಊಟಕ್ಕೆ ಹತ್ತೂರಿನವರೂ ಫಿದಾ
54 ವರ್ಷಗಳಿಂದಲೂ ಅದೇ ಶೈಲಿ, ಅದೇ ಸ್ವಾದ; ಐತಾಳರ ಸ್ವಾಗತ್‌ ಹೋಟೆಲ್‌ನ ಬಾಳೆಲೆ ಊಟಕ್ಕೆ ಹತ್ತೂರಿನವರೂ ಫಿದಾ

Mangaluru Food News: ಮಂಗಳೂರಿನಿಂದ ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವ ಸಂದರ್ಭದಲ್ಲಿ ಸಿಗುವ ಬಿ.ಸಿ.ರೋಡ್ ಪುಟ್ಟ ಪೇಟೆ. ಇಲ್ಲಿ ರಸ್ತೆ ಪಕ್ಕವೇ ಹೋಟೆಲ್‌ಗಳ ಸಾಲುಗಳೇ ದೊರಕುತ್ತವೆ. ಆದರೆ ಈ ಊರಿನ ಕುರಿತು ಗೊತ್ತಿದ್ದವರು, ಮಾಜಿ ಎಂಎಲ್ಎಗಳು, ಅಧಿಕಾರಿಗಳು, ಹತ್ತೂರುಗಳಿಂದ ಕಚೇರಿ ಕಾರ್ಯಗಳಿಗೆ ಆಗಮಿಸುವವರು ಮಧ್ಯಾಹ್ನವೇನಾದರೂ ಈ ಭಾಗದಲ್ಲಿ ಸಂಚರಿಸುವ ಸಂದರ್ಭ ಹಸಿವಾಗುತ್ತದೆ ಎಂದಾದರೆ ಕಾಲಿಡುವುದೇ ಈ ಹೋಟೆಲ್‌ಗೆ. ಇಲ್ಲಿ ಗ್ರಾಹಕರನ್ನು ಸ್ವಾಗತಿಸುವ ಐತಾಳರ ಬಾಳೆಲೆ ಊಟದ ಹೋಟೆಲ್ ಹೆಸರೇ ಸ್ವಾಗತ್.

ಟ್ರೆಂಡಿಂಗ್​ ಸುದ್ದಿ

ಬಿ.ಸಿ. ರೋಡ್ ಎಂಬುದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕು ಕೇಂದ್ರಸ್ಥಾನ. ಇಲ್ಲಿ ಸರ್ಕಾರಿ ಕಚೇರಿಗಳಲ್ಲದೆ ಐವತ್ತರಷ್ಟು ಅಂಗಡಿ ಮಳಿಗೆಗಳಿವೆ. ಅಲ್ಲಿ ಕೆಲಸ ಮಾಡುವವರಷ್ಟೇ ಅಲ್ಲ, ಹೊರಭಾಗಗಳಾದ ಕಲ್ಲಡ್ಕದಿಂದಲೂ ಈ ಹೋಟೆಲ್‌ಗೆ ಬಂದು ಉಂಡು ತೃಪ್ತಿಯಿಂದ ಹೋಗುತ್ತಾರೆ. ಒಂದು ಊಟಕ್ಕೆ 40 ರೂಪಾಯಿ. ಹಣದುಬ್ಬರಕ್ಕೆ ಸ್ವಲ್ಪ ದರವೂ ಜಾಸ್ತಿ ಆಗಬಹುದು. ಆದರೆ ಕಳೆದ ಐದು ದಶಕಗಳಿಂದ ಹೋಟೆಲ್‌ನ ಸ್ವಾದ, ಊಟ ಬಡಿಸುವ ಶೈಲಿ ಬದಲಾಗಿಲ್ಲ ಎನ್ನುತ್ತಾರೆ ಹಿರಿಯ ಗ್ರಾಹಕರು.

ಯಾಕೆ ಸ್ವಾಗತ್ ಅಷ್ಟೊಂದು ವಿಶೇಷ

ಸ್ವಾಗತ್ ಹೋಟೆಲ್ ಶುದ್ಧ ಸಸ್ಯಾಹಾರಿ. ಇಲ್ಲಿ ಕುಚ್ಚಲಕ್ಕಿ ಮತ್ತು ಬೆಳ್ತಿಗೆ ಅಕ್ಕಿಯ ಅನ್ನ, ಸಾರು, ಪಲ್ಯ, ಗಸಿ, ಉಪ್ಪಿನಕಾಯಿ, ಮೊಸರು, ಮಜ್ಜಿಗೆಯ ಸಾದಾ ಊಟವನ್ನು ನೀಡಲಾಗುತ್ತದೆ. ಸುತ್ತಮುತ್ತಲೆಲ್ಲವೂ ಇಲ್ಲಿನ ರುಚಿಯಷ್ಟು ಬೇರಾವುದೂ ಇಲ್ಲ ಎಂಬುದು ಗ್ರಾಹಕರ ಮಾತು. ಬಾಳೆ ಎಲೆಯಲ್ಲಿ ಪ್ರೀತಿಯಿಂದ ಬಡಿಸುವ ಜಯಂತ್ ಮತ್ತು ಪರಮೇಶ್ ಐತಾಳ್ ಅವರೇ ತಯಾರಿಸುವ ಸ್ವಾದ ಕೆಟ್ಟಿಲ್ಲ. ಅನ್ನವನ್ನೂ ಸಾಂಪ್ರದಾಯಿಕ ರೀತಿಯಲ್ಲಿ ಅಂದರೆ ಮನೆಯಲ್ಲಿ ಒಲೆಯಲ್ಲಿ ಬೇಯಿಸುವ ಶೈಲಿಯಲ್ಲೇ ಮಾಡಲಾಗುತ್ತದೆ. ಯಾವುದೇ ಟೇಸ್ಟಿಂಗ್ ಪೌಡರ್ ಇತ್ಯಾದಿಗಳನ್ನು ಸುರಿಯುವುದಿಲ್ಲ. ಹೀಗಾಗಿ ಇಲ್ಲಿ ಒಮ್ಮೆ ಬಂದವರು ಮತ್ತೆ ಮತ್ತೆ ಬರುತ್ತಾರೆ. ಬೇರೆ ಯಾವುದೇ ಊರಿಗೆ ಹೋದವರೂ ಇಲ್ಲಿಗೇ ಬರುತ್ತಾರೆ. ಮಧ್ಯಾಹ್ನದ 2 ಗಂಟೆ ವೇಳೆ ಇಲ್ಲಿ ಕ್ಯೂ ಇರುತ್ತದೆ.

ಹೋಟೆಲ್ ಹೇಗಿದೆ

ಬಿ.ಸಿ.ರೋಡಿನಲ್ಲಿ ಮಂಗಳೂರಿಗೆ ತೆರಳುವ ಬಸ್ಸುಗಳು ನಿಲ್ಲುವ ಜಾಗದ ಪಕ್ಕದಲ್ಲೇ ಇರುವ ರಸ್ತೆಯಲ್ಲಿ ಸ್ವಾಗತ್ ಹೋಟೆಲ್ ಇದೆ. ಪುಟ್ಟ ಕ್ಯಾಂಟೀನ್ ರೂಪದಲ್ಲಿ ಈ ಹೋಟೆಲ್ ಹಿಂದೆ ಬಿ.ಸಿ.ರೋಡಿನ ಭಾರತ್ ಸ್ಟೋರ್ಸ್ ಹತ್ತಿರ ಕಾರ್ಯಾಚರಿಸುತ್ತಿತ್ತು. ರಸ್ತೆ ಅಗಲೀಕರಣ ಹಾಗೂ ಹಲವು ಕಾರಣಗಳಿಂದ ಹೋಟೆಲ್ ಅನ್ನು ಈಗ ಇರುವ ಕಡೆಗೆ ಸ್ಥಳಾಂತರಿಸಬೇಕಾಯಿತು. 1967ರಲ್ಲಿ ಜಿ. ಸುಬ್ರಾಯ ಐತಾಳ್ ಸ್ವಾಗತ್ ಹೋಟೆಲನ್ನು ಸ್ಥಾಪಿಸಿದರು. ಆಗಲೂ ಇದ್ದದ್ದು ಇದೇ ಮೆನ್ಯು. ಕಟ್ಟಿಗೆಯ ಒಲೆಯಲ್ಲಿ ಬೇಯಿಸುತ್ತಿದ್ದ ಅನ್ನದ ಘಮಘಮಕ್ಕೆ ಜನರು ಬರುತ್ತಿದ್ದರು. ಅವರ ನಂತರ ಪುತ್ರ ಪರಮೇಶ್ ಮುಂದುವರಿಸಿದರು. ಜತೆಗೆ ಜಯಂತ್ ಸಹಕಾರ ನೀಡಿದರು.

ಈ ಹೋಟೆಲ್ ನ ಮತ್ತೊಂದು ವಿಶೇಷವೆಂದರೆ ಊಟವನ್ನಲ್ಲದೆ ಬೇರೇನೂ ಇಲ್ಲಿ ಕೊಡುವುದಿಲ್ಲ. ಸೋಮವಾರದಿಂದ ಶನಿವಾರದವರೆಗೆ ಮಧ್ಯಾಹ್ನ 12ರಿಂದ ಸಂಜೆ 4ರವರೆಗೆ ಹಸಿದವರು ಸಸ್ಯಾಹಾರಿ ಹೋಟೆಲ್‌ನಲ್ಲಿ ಮನೆಯೂಟದಂಥ ವಾತಾವರಣ ದೊರಕಬೇಕು ಎಂದಿದ್ದರೆ ಇಲ್ಲಿಗೆ ಹೋಗುತ್ತಾರೆ. ಜನರ ಮೆಚ್ಚುಗೆ ಬಾಯಿಂದ ಬಾಯಿಗೆ ಹರಡಿ, ಈಗ ಸ್ವಾಗತ್ ಯಾವುದೇ ಆಧುನಿಕ ಶೈಲಿಯನ್ನು ರೂಢಿಸಿಕೊಳ್ಳದೇ ಇದ್ದರೂ ತನ್ನ ರುಚಿ, ಶುಚಿಯೊಂದಿಗೆ ಪ್ರೀತಿಯನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ.

ವರದಿ: ಹರೀಶ್‌ ಮಾಂಬಾಡಿ, ಮಂಗಳೂರು

ಬಾಯಿಗೆ ರುಚಿ ನೀಡುವ ಬಗೆಬಗೆ ಅಡುಗೆಗಳ ಲೇಖನಗಳಿಗೆ ಇಲ್ಲಿ ಕ್ಲಿಕ್‌ ಮಾಡಿ