ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್‌ಸಿಬಿ vs ಗುಜರಾತ್ ಟೈಟಾನ್ಸ್ ಪಂದ್ಯ; ಹೀಗಿದೆ ಪಿಚ್ ಹಾಗೂ ಹವಾಮಾನ ವರದಿ
GT vs RCB: ಐಪಿಎಲ್ 17ನೇ ಆವೃತ್ತಿಯಲ್ಲಿ ಏಪ್ರಿಲ್ 28ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ಮಧ್ಯಾಹ್ನ 3.30ಕ್ಕೆ ಪಂದ್ಯ ಆರಂಭವಾಗುತ್ತಿದ್ದು, ಅಹಮದಾಬಾದ್ ಹವಾಮಾನ ಹಾಗೂ ಪಿಚ್ ವರದಿ ಇಲ್ಲಿದೆ.
ಅಹಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಏಪ್ರಿಲ್ 28ರಂದು ನಡೆಯಲಿರುವ ಐಪಿಎಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Gujarat Titans vs Royal Challengers Bengaluru) ತಂಡಗಳು ಎದುರಾಗುತ್ತಿವೆ. ಉಭಯ ತಂಡಗಳು ಐಪಿಎಲ್ 2024ರಲ್ಲಿ ಇದೇ ಮೊದಲ ಬಾರಿಗೆ ಮುಖಾಮುಖಿಯಾಗುತ್ತಿವೆ. ಟೂರ್ನಿಯಲ್ಲಿ ಈವರೆಗೆ ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿರುವ ಜಿಟಿ, ಅಂಕಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಅತ್ತ ಕೇವಲ 2 ಪಂದ್ಯಗಳಲ್ಲಿ ಮಾತ್ರ ಜಯ ಒಲಿಸಿಕೊಂಡಿರುವ ಆರ್‌ಸಿಬಿ, ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಸದ್ಯ ಟೂರ್ನಿಯಲ್ಲಿ ಜೀವಂತವಾಗಿ ಉಳಿಯಲು ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ವಾರಾಂತ್ಯದ ಭಾನುವಾರ ಎರಡೆರಡು ಪಂದ್ಯಗಳು ನಡೆಯುತ್ತಿವೆ. ದಿನದ ಮೊದಲ ಪಂದ್ಯ ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದೆ. ಗುಜರಾತ್ ಮತ್ತು ಬೆಂಗಳೂರು ತಂಡಗಳು ಈವರೆಗೆ 3 ಬಾರಿ ಮಾತ್ರ ಐಪಿಎಲ್‌ನಲ್ಲಿ ಮುಖಾಮುಖಿಯಾಗಿವೆ. ಇದರಲ್ಲಿ ಗುಜರಾತ್ 2 ಪಂದ್ಯಗಳಲ್ಲಿ ಗೆದ್ದರೆ, ಆರ್‌ಸಿಬಿ 1ರಲ್ಲಿ ಗೆದ್ದು ಬೀಗಿದೆ.
ಉಭಯ ತಂಡಗಳು ಕೊನೆಯ ಬಾರಿಗೆ ಕಳೆದ ವರ್ಷದ ಮೇ 23ರಂದು ಪರಸ್ಪರ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ವಿರಾಟ್ ಶತಕದಾಟದೊಂದಿಗೆ, ಮೊದಲು ಬ್ಯಾಟಿಂಗ್ ನಡೆಸಿದ ಆರ್‌ಸಿಬಿ 197 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಗುಜರಾತ್ ತಂಡವು ಕೇವಲ 19.1 ಓವರ್‌ಗಳಲ್ಲಿ ಚೇಸಿಂಗ್ ಮಾಡಿ ಗೆದ್ದಿತು. 52 ಎಸೆತಗಳಲ್ಲಿ ಅಜೇಯ 104 ರನ್ ಸಿಡಿಸಿದ ಶುಭ್ಮನ್ ಗಿಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು
ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂ ಪಿಚ್ ವರದಿ
ಮೈದಾನದಲ್ಲಿ ಕಪ್ಪು ಮಣ್ಣಿನ 5 ಪಿಚ್‌ಗಳು ಹಾಗೂ ಕೆಂಪು ಮಣ್ಣಿನ 6 ಪಿಚ್‌ಗಳಿವೆ. ಸ್ಥಿರವಾದ ಬೌನ್ಸ್ ಮತ್ತು ವೇಗದಿಂದಾಗಿ ನರೇಂದ್ರ ಮೋದಿ ಕ್ರೀಡಾಂಗಣದ ಪಿಚ್‌ಗಳು ಬ್ಯಾಟರ್ ಹಾಗೂ ಬೌಲರ್‌ಗಳಿಗೆ ಸಮಾನ ನೆರವು ನೀಡುತ್ತವೆ.
ಇದನ್ನೂ ಓದಿ | ಬುಮ್ರಾ, ಪಾಂಡ್ಯ ಎಸೆತಗಳು ಹಣ್ಣುಗಾಯಿ-ನೀರುಗಾಯಿ; 2ನೇ ಬಾರಿ ದಾಖಲೆಯ ಅರ್ಧಶತಕ ಬಾರಿಸಿದ ಜೇಕ್ ಫ್ರೇಸರ್-ಮೆಕ್‌ಗುರ್ಕ್
ಐಪಿಎಲ್ 2024ರಲ್ಲಿ ಈ ಮೈದಾನದಲ್ಲಿ ಗುಜರಾತ್ ಆಡಿದ ನಾಲ್ಕು ಪಂದ್ಯಗಳಲ್ಲಿ ತಲಾ 2 ಸೋಲು ಹಾಗೂ ಗೆಲುವುಗಳನ್ನು ಕಂಡಿದೆ. ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ 6 ರನ್‌ಗಳಿಂದ ಗೆದ್ದಿದ್ದ ತಂಡ, ಆ ಬಳಿಕ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 7 ವಿಕೆಟ್‌ಗಳ ಜಯ ಸಾಧಿಸಿತ್ತು. ಆ ಬಳಿಕ ಪಂಜಾಬ್ ಕಿಂಗ್ಸ್ ತಂಡವು ಚೇಸಿಂಗ್ ಮಾಡಿ ಗೆದ್ದಿತ್ತು. ಕೊನೆಯ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೇವಲ 89 ರನ್‌ಗಳಿಗೆ ಜಿಟಿ ಆಲೌಟ್ ಆಗಿ ಸೋತಿತ್ತು.
ಅಹಮದಾಬಾದ್ ಹವಾಮಾನ ವರದಿ
ಪಂದ್ಯವು ಮಧ್ಯಾಹ್ನದ ಬಿಸಿಲಿನ ಸಮಯದಲ್ಲಿ ನಡೆಯುತ್ತಿದೆ. ಆರಂಭದ ವೇಳೆ ಅಹ್ಮದಾಬಾದ್ ತಾಪಮಾನ 40 ಡಿಗ್ರಿ ಸೆಲ್ಸಿಯಸ್ ಇರಲಿದೆ. ಪಂದ್ಯಕ್ಕೆ ಮಳೆ ಅಡ್ಡಿಪಡಿಸುವ ಸಾಧ್ಯತೆ ಇಲ್ಲ.
ಗುಜರಾತ್ ಟೈಟಾನ್ಸ್ ಸಂಭಾವ್ಯ ತಂಡ
ಶುಭ್ಮನ್ ಗಿಲ್ (ನಾಯಕ), ವೃದ್ಧಿಮಾನ್ ಸಹಾ, ಸಾಯಿ ಸುದರ್ಶನ್, ಕೇನ್ ವಿಲಿಯಮ್ಸನ್, ಡೇವಿಡ್ ಮಿಲ್ಲರ್, ಶಾರುಖ್ ಖಾನ್, ರಾಹುಲ್ ತೆವಾಟಿಯಾ, ಸಾಯಿ ಕಿಶೋರ್, ರಶೀದ್ ಖಾನ್, ರಶೀದ್ ಖಾನ್, ನೂರ್ ಅಹ್ಮದ್, ಮೋಹಿತ್ ಶರ್ಮಾ.
ಆರ್‌ಸಿಬಿ ಸಂಭಾವ್ಯ ತಂಡ
ವಿರಾಟ್ ಕೊಹ್ಲಿ, ಫಾಫ್ ಡು ಪ್ಲೆಸಿಸ್ (ನಾಯಕ), ವಿಲ್ ಜಾಕ್ಸ್, ರಜತ್ ಪಾಟೀದಾರ್, ಕ್ಯಾಮರೂನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಹಿಪಾಲ್ ಲೊಮ್ರರ್, ಕರ್ಣ್ ಶರ್ಮಾ, ಸ್ವಪ್ನಿಲ್ ಸಿಂಗ್, ಲಾಕಿ ಫರ್ಗುಸನ್, ಮೊಹಮ್ಮದ್ ಸಿರಾಜ್.