ಕನ್ನಡ ಸುದ್ದಿ  /  Lifestyle  /  Mental Health Counselling Expert Answers For Questions On Psychological Problems Children Study Relationship Dmg

ಮನದ ಮಾತು: ಮಗ ಹೆಚ್ಚು ಮಾರ್ಕು ತೆಗೆಯಲು ನಾನೇನು ಮಾಡಬಹುದು? ಅತ್ತೆಯನ್ನು ಬದಲಿಸೋಕೆ ಆಗುತ್ತಾ? ಕಾಡುವ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

Counselling: ಬದುಕಿನ ಪ್ರತಿ ಹಂತದಲ್ಲಿಯೂ ಒಂದಲ್ಲ ಒಂದು ಪ್ರಶ್ನೆ ಮನಸ್ಸನ್ನು ಕಾಡುತ್ತಲೇ ಇರುತ್ತದೆ. ಕೆಲವರು ಹೇಳಿಕೊಂಡು ಹಗುರಾಗುತ್ತಾರೆ, ಕೆಲವರು ಮನಸ್ಸಿನಲ್ಲಿ ಇಟ್ಟುಕೊಂಡು ಸಪ್ಪಗಾಗುತ್ತಾರೆ. ಮನದ ಮಾತು ಹಂಚಿಕೊಳ್ಳಲು, ತಜ್ಞರ ಉತ್ತರ ತಿಳಿಯಲು ಇದು ವೇದಿಕೆ. ಈ ಸಂಚಿಕೆಯಲ್ಲಿ ಮೂರು ಪ್ರಶ್ನೆಗಳಿಗೆ ಆಪ್ತಸಮಾಲೋಚಕಿ ಭವ್ಯಾ ವಿಶ್ವನಾಥ್ ಉತ್ತರಿಸಿದ್ದಾರೆ.

ಭವ್ಯಾ ವಿಶ್ವನಾಥ್
ಭವ್ಯಾ ವಿಶ್ವನಾಥ್

1) ನನ್ನ ಮಗ ಈ ವರ್ಷ 10ನೇ ಕ್ಲಾಸಿಗೆ ಸೇರಿದ್ದಾನೆ. ಅವನು ಹೇಗೆ ಓದುತ್ತಾನೋ, ಎಷ್ಟು ಮಾರ್ಕು ತೆಗೀತಾನೋ ಎಂದು ಭಯವಾಗುತ್ತಿದೆ. ಅವನ ನೆನಪಿನ ಶಕ್ತಿ ಚೆನ್ನಾಗಿ ಆಗಬೇಕು, ಅವನು ಚೆನ್ನಾಗಿ ಓದಬೇಕು. ನಾನು ಏನು ಮಾಡಬಹುದು?

- ತುಳಸಿ, ಗೌರಿಬಿದನೂರು

ಉತ್ತರ: ಮಕ್ಕಳ ಓದಿನ ವಿಷಯದಲ್ಲಿ ಪೋಷಕರಾದ ನಿಮ್ಮ ಭಯ ಹಾಗು ಆತಂಕ ಸಹಜವಾದುದು. ಆದರೂ ಸಹ ಇಂಥ ಸಮಯದಲ್ಲಿ ಸಾಧ್ಯವಾದಷ್ಟರ ಮಟ್ಟಿಗೂ ‘ಭಯ’ವನ್ನು ‘ಬೆಂಬಲ’ವಾಗಿ ಪರಿವತಿ೯ಸಿಕೊಳ್ಳಲು ಪ್ರಯತ್ನಿಸಿ. ಇಲ್ಲವಾದಲ್ಲಿ ನಿಮ್ಮ ಭಯ ಮಗನಿಗೂ ಸಹ ವರ್ಗಾವಣೆಯಾಗಿ ಅವನ ಮೇಲೆಯೂ ಪ್ರಭಾವ ಬೀರಿ ಅವನ ಆತ್ಮವಿಶ್ವಾಸವನ್ನು ಕುಗ್ಗಿಸುತ್ತದೆ. ಎಷ್ಟೇ ಓದಿ ತಯಾರಿಯಾದರೂ ತನ್ನ ಸಾಮರ್ಥ್ಯದ ಮೇಲೆ ನಂಬಿಕೆ ಕಳೆದುಕೊಳ್ಳುತ್ತಾನೆ. ಮಗನ ಸಾಮರ್ಥ್ಯದ ಮೇಲೆ ನಿಮಗೆ ಇರುವ ನಂಬಿಕೆಯು ಅವನ ಆತ್ಮವಿಶ್ವಾಸದಲ್ಲಿ ಬಹಳ ದೊಡ್ಡ ಪಾತ್ರ ನಿರ್ವಹಿಸುತ್ತದೆ. ಆತ್ಮವಿಶ್ವಾಸ ಕುಗ್ಗಿದರೆ ವ್ಯಕ್ತಿಯು ಭಯದ ಒತ್ತಡದಿಂದ ನರಳುತ್ತಾನೆ. ಇದರಿಂದ ಗ್ರಹಿಸುವ ಹಾಗೂ ನೆನಪಿನ ಶಕ್ತಿ ಕಡಿಮೆಯಾಗುತ್ತದೆ. ಭಯದ ಬದಲು ಮಗನ ಪ್ರಯತ್ನಗಳಿಗೆ ಬೆಂಬಲ ನೀಡಿ. ಮಾನಸಿಕವಾಗಿ ಅವನನ್ನು ಸದೃಢಗೊಳಿಸಿ.

ಈ ತಂತ್ರಗಳನ್ನು ಅನುಸರಿಸಿ…

- ಅವನ ಆತ್ಮವಿಶ್ವಾಸ ಹೆಚ್ಚಿಸಲು ಸತತ ಪ್ರಯತ್ನ ಮಾಡಿ.

- ಮಗನ ಪ್ರಯತ್ನ ಹಾಗೂ ಸಾಮರ್ಥ್ಯಗಳ ಒಳ್ಳೆಯ ಮಾತು ಆಡಿ. ಆಗಾಗ ಹೊಗಳಿದರೂ ತಪ್ಪಲ್ಲ. ಅದರಿಂದ ಅವನ ಆತ್ಮವಿಶ್ವಾಸ ಹೆಚ್ಚಾಗುತ್ತದೆ.

- ಕ್ರಮಬದ್ಧ ದಿನಚರಿ, ಒಳ್ಳೆಯ ನಿದ್ದೆ, ಉತ್ತಮ ಆಹಾರ, ತಕ್ಕಮಟ್ಟಿನ ದೈಹಿಕ ಚಟುವಟಿಕೆ, ಆಟದಲ್ಲಿ ತೊಡಗಲು ಮಗನಿಗೆ ಅವಕಾಶ ಸಿಗುವಂತೆ ನೋಡಿಕೊಳ್ಳಿ.

- ನಿಮ್ಮ ನಿರೀಕ್ಷೆಗಳು ಮಗನ ಸಾಮರ್ಥ್ಯಕ್ಕೆ ತಕ್ಕಂತೆ ಇರಲಿ.

- ಬೇರೆ ಮಕ್ಕಳ ಅಂಕವನ್ನಾಗಲಿ, ಪಠ್ಯಕ್ರಮವಾಗಲಿ ನಿಮ್ಮ ಮಗನ ಜೊತೆಗೆ ಹೋಲಿಸಬೇಡಿ. ಹೀಗೆ ಮಾಡುವುದರಿಂದ ನಿಮ್ಮ ಭಯ ಹೆಚ್ಚಾಗುತ್ತದೆ.

- ಫಲಿತಾಂಶ ಏನೇ ಬಂದರೂ ಒಪ್ಪಿಕೊಳ್ಳುವ ಪ್ರಯತ್ನದಲ್ಲಿದ್ದರೆ ಭಯವು ಕಡಿಮೆಯಾಗುತ್ತದೆ.

2) ನಮ್ಮ ಮದುವೆಯಾಗಿ 20 ವರ್ಷವಾಗುತ್ತಾ ಬಂತು. ಇತ್ತೀಚೆಗೆ ಗಂಡ ಸದಾ ಮೊಬೈಲ್ ಹಿಡಿದಿರುತ್ತಾನೆ. ರಾತ್ರಿ ಬಹುಹೊತ್ತಿನ ತನಕವೂ ಯಾರಿಗೂ ಮೆಸೇಜ್ ಕಳಿಸುತ್ತಿರುತ್ತಾನೆ. ಎಷ್ಟೋ ಸಲ ಅವನ ಮೊಬೈಲ್ ನೋಡಿದ್ದೇನೆ. ಆದರೆ ಅದರಲ್ಲಿ ಏನೂ ಇರುವುದಿಲ್ಲ. ಅವನು ಯಾವುದೋ ಹುಡುಗಿಯ ಜೊತೆಗೆ ಚಾಟ್ ಮಾಡುತ್ತಿದ್ದಾನೆ ಎಂದು ಅನುಮಾನ. ಹೇಗೆ ಪತ್ತೆ ಮಾಡಲಿ? ನನಗೆ ತುಂಬಾ ಬೇಸರವಾಗುತ್ತಿದೆ.

- ರಾಣಿ, ಜೆಪಿ ನಗರ, ಬೆಂಗಳೂರು

ಇಂಥ ಪರಿಸ್ಥಿತಿಯಲ್ಲಿ ಮನಸ್ಸಿಗೆ ಬೇಸರವಾಗುವುದು ಸಹಜ. ಬೇಸರ ಅತಿಯಾದ ಪಕ್ಷದಲ್ಲಿ, ಮನಸ್ಸಿನ ಆರೋಗ್ಯದ ಮೇಲೆ ಪರಿಣಾಮ ಬೀಳುತ್ತದೆ. ಜೊತೆಗೆ ಅನುಮಾನದಿಂದ ಮನಸ್ಸುಗಳು ದೂರವಾಗಿ ಸಂಬಂಧ ಮತ್ತಷ್ಟು ಹದಗೆಡುತ್ತದೆ. ಹೆಚ್ಚಿನ ದುಃಖ, ಭಯ, ಚಿಂತೆ, ಆತಂಕಗಳಿಗೆ ಈಡಾಗುವಿರಿ. ನಿಮ್ಮ ಸಂಗಾತಿಯೊಡನೆ ನೇರವಾಗಿ ಕುಲಂಕಶವಾಗಿ ಮಾತನಾಡಿ ಅನುಮಾನವನ್ನು ಬಗೆಹರಸಿಕ್ಕೊಳುವುದು ಉತ್ತಮ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಸರಿಯಾದ ವಿಶ್ಲೇಷಣೆ ಮಾಡಿ. ಸಂಯಮ, ಪ್ರೀತಿ, ನಂಬಿಕೆ ವಿಶ್ವಾಸದಿಂದ ಪರಿಹಾರ ಕಂಡುಕೊಳ್ಳಿ. ನಿಮಗಿದು ಸಾಧ್ಯವಾಗದಿದ್ದರೆ, ನಿಮ್ಮ ದಿನಚರಿ ಏರುಪೇರಾಗುತ್ತಿದ್ದರೆ, ನೆಮ್ಮದಿ ಇಲ್ಲ ಎನಿಸಿದರೆ ಒಂಟಿಯಾಗಿ ಬಳಲಬೇಡಿ. ಆಪ್ತಸಮಾಲೋಚಕರ ಸಹಾಯ ಪಡೆದುಕೊಳ್ಳಿ.

3) ನನ್ನ ಅತ್ತೆ ಮೂರು ಹೊತ್ತೂ ದೇವರು ದಿಂಡರು ಅಂತ ಕೂತು ಬಿಡ್ತಾರೆ. ಸರಿಯಾಗಿ ಊಟ ತಿಂಡಿ ಮಾಡಲ್ಲ. ಆರೋಗ್ಯ ಹಾಳು ಮಾಡಿಕೊಳ್ತಾರೆ. ಕೇಳಿದರೆ ದೇವರಿದ್ದಾನೆ ಅಂತಾರೆ. ನನ್ನ ಬದುಕು ಏರುಪೇರಾಗುತ್ತಿದೆ. ನಮ್ಮತ್ತೆಗೆ ಬುದ್ಧಿ ಕಲಿಸುವುದು ಹೇಗೆ?

- ಮಂಗಳ, ಬಳ್ಳಾರಿ

ನಮ್ಮ ಹತ್ತಿರದ ಸಂಬಧಗಳಲ್ಲಿ ಕಿರಿಕಿರಿಯಾದಾಗ ಆದು ನಮ್ಮ ಬದುಕಿನ ಮೇಲೆಯೂ ಪರಿಣಾಮ ಬೀರುವುದು ಸಹಜ. ಆದರೆ ನಮ್ಮ ಬದುಕಿನ ಕೀಲಿ ನಮ್ಮ ಕೈಲಿರುತ್ತದೆ. ಆದರೆ ಬೇರೆಯವರ ಯೋಚನೆ, ನಡವಳಿಕೆ, ಮಾತು, ಸ್ವಭಾವ ನಮ್ಮ ನಿಯಂತ್ರಣದಲ್ಲಿರುವುದಿಲ್ಲ. ನಮಗೆ ಎಷ್ಟರಮಟ್ಟಿಗೆ ಬೇರಯವರಿಂದ ಮನಸ್ಸು ಬೇಸರವಾಗುತ್ತದೆ, ಅದಕ್ಕೆ ನಾವು ಹೇಗೆ ಪ್ರತಿಕ್ರಿಯೆ ಮಾಡಬಹುದು ಎನ್ನುವುದನ್ನು ನಮ್ಮ ನಿಯಂತ್ರಣದಲ್ಲಿಯೇ ಇರಿಸಿಕೊಂಡಿರಬೇಕು. ಇದೇ ನಮ್ಮ ಬದುಕಿನ ಕೀಲಿ. ನಿಮ್ಮ ಅತ್ತೆಯ ಆರೋಗ್ಯದ ವಿಚಾರದಲ್ಲಿ ನಿಮಗಿರುವ ಕಾಳಜಿ ಪ್ರಶಂಸನೀಯ. ಆದರೆ ನಿಮ್ಮ ಪ್ರಯತ್ನ ಹಾಗೂ ಕಾಳಜಿಗೆ ಅವರು ತಕ್ಕ ಪ್ರತಿಕ್ರಿಯೆ ನೀಡದಿರವುದರಿಂದ ನಿಮಗೆ ಬೇಸರವಾಗುತ್ತಿದೆ. ಅವರಲ್ಲಿರುವ ದೇವರ ನಂಬಿಕೆಯೇ ಅವರನ್ನು ಕಾಪಡುತ್ತದೆಯೆಂದರೆ ನೀವಾದರೂ ಏನು ಮಾಡಬಹುದು? ಅವರ ನಂಬಿಕೆಯನ್ನು ಗೌರವಿಸಿ, ಒಪ್ಪಿಕೊಳ್ಳಿ. ಇಲ್ಲವಾದರೆ ಅವರನ್ನು ಬದಲಿಸುವುದು ನಿಮ್ಮ ನಿಯಂತ್ರಣದಲ್ಲಿಲ್ಲವೆಂದು ಅವರ ಪಾಡಿಗೆ ಅವರನ್ನು ಬಿಡುವುದು ಒಳ್ಳೆಯದು.

ನಿಮ್ಮ ಕಾಳಜಿ ಹಾಗೂ ಕರ್ತವ್ಯಪಾಲನೆ ನಿಮಗೆ ಸಮಾಧಾನ ನೀಡುವುದಾದರೆ ನಿಮ್ಮ ಸೇವೆ ಮುಂದುವರೆಯಲಿ. ಹಾಗೆಯೇ, ಅವರಿಗೆ ದೇವರ ಮೇಲಿರುವ ನಂಬಿಕೆ, ಭಕ್ತಿ, ಶ್ರದ್ಧೆಯ ಬಗ್ಗೆ ಒಮ್ಮೆ ಅಥವಾ ಆಗಾಗ ಮೆಚ್ಚಿಕೊಂಡು ಪ್ರಶಂಸೆ ನೀಡುವ ಪ್ರಯತ್ನವನ್ನು ಮಾಡಿ. ನಿಮಗಿರುವ ಕಾಳಜಿಯನ್ನು ನೇರವಾಗಿ ಪ್ರೀತಿ ಗೌರವದಿಂದ ಅವರೊಂದಿಗೆ ಹಂಚಿಕೊಳ್ಳಿ. ಇದರಿಂದ ಅತ್ತೆಯವರಿಗೂ ಸಂತೋಷವಾಗಿ ಅವರು ನಿಮ್ಮ ಮಾತು ಕೇಳಬಹುದು ಹಾಗೂ ನಿಮ್ಮ ನಡುವಿನ ಸಂಭದವು ಸುಧಾರಣೆಯಾಗಬಹುದು.

---

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 98808 07003.

ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಇನ್ನು ಮುಂದೆ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸಲಿದ್ದಾರೆ.