Pet Health: ಹೆಚ್ಚಾಗಿದೆ ಸುಡು ಬಿಸಿಲಿನ ತಾಪ: ಬೇಸಿಗೆಯಲ್ಲಿ ಸಾಕುಪ್ರಾಣಿಗಳ ಆಹಾರದ ಬಗ್ಗೆ ಇರಲಿ ಗಮನ
ಬೇಸಿಗೆಯ ಅತಿಯಾದ ತಾಪಮಾನವು ಸಾಕುಪ್ರಾಣಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಬೇಸಿಗೆ ಕಾಲದಲ್ಲಿ ನಾಯಿ, ಬೆಕ್ಕು ಸೇರಿ ಮನೆಯ ಪ್ರಾಣಿಗಳ ಆಹಾರ ಬದಲಾಯಿಸುವ ಅಗತ್ಯವಿಲ್ಲ. ಅದರ ಬದಲಿಗೆ ಆಹಾರಕ್ರಮ ಪಾಲಿಸುವ ಅಗತ್ಯವಿದೆ.
ಬೇಸಿಗೆಯ ಸುಡು ಬಿಸಿಲಿನ ತಾಪಮಾನ ಹೆಚ್ಚಿದ್ದು, ಜನಸಾಮಾನ್ಯರು ಎಳನೀರು, ಜ್ಯೂಸ್, ಮಜ್ಜಿಗೆ ಮುಂತಾದ ತಂಪಾದ ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಬೇಸಿಗೆಯಲ್ಲಿ ನಮ್ಮ ಆಹಾರಕ್ರಮವು ವಿಭಿನ್ನವಾಗಿರುತ್ತದೆ. ಈ ಸಮಯದಲ್ಲಿ ತೂಕನಷ್ಟವೂ ಆಗಬಹುದು. ಕೆಲವರು ಹೆಚ್ಚು ಆಹಾರ ಸೇವಿಸಿದ್ರೆ, ಇನ್ನೂ ಕೆಲವರು ಕಡಿಮೆ ಆಹಾರ ಸೇವಿಸುತ್ತಾರೆ. ಇನ್ನು ಸಾಕುಪ್ರಾಣಿಗಳ ಗತಿಯೇನು?
ಸುಡುವ ಬೇಸಿಗೆಯ ಶಾಖವು ನಮ್ಮ ಮೇಲೆ ಮಾತ್ರವಲ್ಲ ಸಾಕುಪ್ರಾಣಿಗಳ ಮೇಲೆಯೂ ಪರಿಣಾಮ ಬೀರುತ್ತದೆ. ಬೇಸಿಗೆ ತಿಂಗಳಿನಲ್ಲಿ ನಿಮ್ಮ ಸಾಕುಪ್ರಾಣಿಗಳಿಗೆ ಯಾವ ಪೌಷ್ಟಿಕಾಂಶದ ಅಗತ್ಯವಿದೆ? ಇಂಥ ಋತುವಿನಲ್ಲಿ ಅದರ ಆಹಾರವನ್ನು ಬದಲಾಯಿಸಬೇಕೇ ಎಂಬಿತ್ಯಾದಿ ಪ್ರಶ್ನೆಗಳು ನಿಮ್ಮಲ್ಲಿ ಮೂಡುತ್ತಿರಬಹುದು. ನಿಮ್ಮ ಸಾಕುಪ್ರಾಣಿಗಳು ಸರಿಯಾದ ಆಹಾರಕ್ರಮದಲ್ಲಿದ್ದರೆ, ಬೇಸಿಗೆಯ ತಿಂಗಳುಗಳಲ್ಲಿ ಅದನ್ನು ಬದಲಾಯಿಸುವ ಅಗತ್ಯವಿಲ್ಲ. ನಿಮ್ಮ ನಾಯಿ ಅಥವಾ ಬೆಕ್ಕು ಅಲರ್ಜಿ, ಸ್ಥೂಲಕಾಯ ಅಥವಾ ಸಂಧಿವಾತ ಮುಂತಾದ ಸಮಸ್ಯೆಗಳನ್ನು ಹೊಂದಿದ್ದರೆ, ನೀವು ಕೆಲವು ಆಹಾರದ ಬದಲಾವಣೆಗಳನ್ನು ಮಾಡಬೇಕಾಗುತ್ತದೆ.
ಹಾಗಂತ ಮನೆಯ ಶ್ವಾನಗಳ ಆಹಾರವನ್ನು ಇದ್ದಕ್ಕಿದ್ದಂತೆ ಬದಲಾಯಿಸಬೇಡಿ. ಹಠಾತ್ ಬದಲಾವಣೆಗಳು ವಾಂತಿ ಮತ್ತು ಅತಿಸಾರದಂಥ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಶ್ವಾನಗಳ ಪೋಷಣೆಗೆ ಏನೇನು ಅಗತ್ಯವಿದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.
ಶ್ವಾನಗಳಿಗೆ ಹಣ್ಣು ಮತ್ತು ತರಕಾರಿ ನೀಡಿ ಉಪಚರಿಸಿ
ಹಣ್ಣುಗಳು ಮತ್ತು ತರಕಾರಿಗಳು ಶ್ವಾನಗಳಿಗೆ ಉತ್ತಮ ಹಾಗೂ ಸುರಕ್ಷಿತ ಆಯ್ಕೆ. ವಿಶೇಷವಾಗಿ ನೀರಿನ ಅಂಶ ಹೊಂದಿರುವ ಕಲ್ಲಂಗಡಿ ಮತ್ತು ಸೌತೆಕಾಯಿಗಳನ್ನು ನೀಡುವುದು ಉಪಯುಕ್ತ. ಅಲ್ಲದೆ, ಬೀಜರಹಿತ ಕರ್ಬೂಜ (musk melon)ವನ್ನು ನಾಯಿಗಳಿಗೆ ನೀಡುವುದರಿಂದ ದೇಹವನ್ನು ತಂಪಾಗಿಸುತ್ತದೆ.
ಈ ಆಹಾರವನ್ನು ಅಪ್ಪಿ-ತಪ್ಪಿಯೂ ನಿಮ್ಮ ಶ್ವಾನಕ್ಕೆ ನೀಡದಿರಿ
ಕೊಬ್ಬಿನ ಮಾಂಸ (fatty meats) ಮತ್ತು ಬಿಸಿ ಆಹಾರವನ್ನು ಶ್ವಾನಗಳಿಗೆ ನೀಡದಿರಿ. ದ್ರಾಕ್ಷಿ ಹಾಗೂ ಒಣದ್ರಾಕ್ಷಿಗಳನ್ನು ಸಹ ನಾಯಿಗಳು ತಿನ್ನಬಾರದು. ಇದನ್ನು ಸೇವಿಸಿದರೆ ನಾಯಿಗಳಲ್ಲಿ ವಾಂತಿ ಮತ್ತು ಮೂತ್ರಪಿಂಡ ವೈಫಲ್ಯಕ್ಕೆ ಕಾರಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯವಾಗಿದೆ.
ಬೆಕ್ಕುಗಳ ಆರೋಗ್ಯದತ್ತ ಇರಲಿ ಗಮನ
ಬೆಕ್ಕುಗಳು ಏನಾದರೂ ತಿಂದ ಬಳಿಕ ತನ್ನ ಬಾಯಿ ಮತ್ತು ಕೈಯನ್ನು ನಾಲಿಗೆ ಮೂಲಕ ನೆಕ್ಕುತ್ತದೆ. ಬೆಕ್ಕುಗಳಿಗೆ ತುಂಬಾ ಶುದ್ಧವಾಗಿರಬೇಕು, ಗಲೀಜು ಅಂದರೆ ಆಗುವುದಿಲ್ಲ. ಅದಕ್ಕೆ ಈ ರೀತಿ ನೆಕ್ಕುತ್ತವೆ ಎಂದು ನಮ್ಮ ಹಿರಿಯರು ಹೇಳುತ್ತಾರೆ. ಆದರೆ, ಬೆಕ್ಕುಗಳು ಕೆಲವೊಮ್ಮೆ ಗಲೀಜು ನೀರು ಕುಡಿಯುತ್ತವೆ. ಹೀಗಾಗಿ, ಮಾಲೀಕರು ತಮ್ಮ ಬೆಕ್ಕುಗಳ ಆಹಾರದ ಬಗ್ಗೆ ಗಮನ ಹರಿಸಬೇಕು. ತಜ್ಞರ ಪ್ರಕಾರ, ಬೆಕ್ಕುಗಳಿಗೆ ನೀಡುವ ಆಹಾರದಲ್ಲಿ ಶೇ.60ರಷ್ಟು ಒದ್ದೆಯಾದ ಆಹಾರ ಮತ್ತು ಶೇ.40ರಷ್ಟು ಒಣ ಆಹಾರ ಇರಬೇಕು. ಬೆಕ್ಕುಗಳ ದೈನಂದಿನ ಆಹಾರದಲ್ಲಿ ಇಂಥ ಆಹಾರ ಅವಶ್ಯಕವಾಗಿದೆ. ಇದು ಮೂತ್ರದ ಸೋಂಕಿನ ಅಪಾಯವನ್ನು ಕಡಿಮೆ ಮಾಡುತ್ತದೆ.
ಇದನ್ನೂ ಓದಿ | Ringworm: ಬೇಸಿಗೆಯಲ್ಲಿ ಚರ್ಮದ ಕಿರಿಕಿರಿಗೆ ಕಾರಣವಾಗುವ ರಿಂಗ್‌ವರ್ಮ್ ನಿವಾರಣೆಗೆ ಇಲ್ಲಿದೆ ಸುಲಭ ಮನೆಮದ್ದು
ಬೆಕ್ಕುಗಳಿಗೆ ಹಣ್ಣುಗಳು ಅಥವಾ ಹಗುರವಾದ ಆಹಾರ ಪದಾರ್ಥವನ್ನು ತಿನ್ನಿಸಲು ಪ್ರಯತ್ನಿಸಿ. ಅಲ್ಲದೆ ಸೌತೆಕಾಯಿಯು ಬೆಕ್ಕಿಗೆ ಉತ್ತಮ ತರಕಾರಿ. ಇದರಲ್ಲಿ ಹೆಚ್ಚಿನ ನೀರಿನ ಅಂಶ ಹಾಗೂ ಪೌಷ್ಠಿಕಾಂಶ ಇರುವುದರಿಂದ ಬೇಸಿಗೆಯಲ್ಲಿ ಅತ್ಯುತ್ತಮ ಆಹಾರವಾಗಿದೆ. ಹಾಗಂತ ಜಾಸ್ತಿ ತಿನ್ನಲು ಕೊಟ್ಟರೆ ಅತಿಸಾರ ಸಮಸ್ಯೆ ಉಂಟಾಗಬಹುದು. ಕಡಿಮೆ ಪ್ರಮಾಣದಲ್ಲಿ ನಿಮ್ಮ ಬೆಕ್ಕುಗಳಿಗೆ ಸೌತೆಕಾಯಿ ತಿನ್ನಲು ಕೊಡಿ.
ಬೆಕ್ಕುಗಳಿಗೆ ಈ ಆಹಾರ ಕೊಡದಿರಿ
ಯಾವುದೇ ಪ್ರಾಣಿಗಳಿಗೆ, ವಿಶೇಷವಾಗಿ ಬೆಕ್ಕುಗಳಿಗೆ ಚಾಕೊಲೇಟ್ ಎಂದಿಗೂ ಒಳ್ಳೆಯದಲ್ಲ. ಚಾಕೊಲೇಟ್‌ನಲ್ಲಿ ಕೆಫೀನ್ ಮತ್ತು ಥಿಯೋಬ್ರೊಮಿನ್ ಅಂಶ ಇದೆ. ಇದು ಹೃದಯಕ್ಕೆ ತೊಂದರೆ ಉಂಟುಮಾಡುವುದು, ಸ್ನಾಯುಗಳ ನಡುಕ ಮತ್ತು ರೋಗಗ್ರಸ್ತವಾಗುವಿಕೆಯ ಸಮಸ್ಯೆಯನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿದೆ.
ಮುಖ್ಯವಾಗಿ ನಿಮ್ಮ ಸಾಕು ಪ್ರಾಣಿಗಳಿಗೆ ಈ ಬೇಸಿಗೆಯಲ್ಲಿ ನೀರು ಅತ್ಯಗತ್ಯ. ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ನೀರನ್ನು ಒದಗಿಸಿ. ಸಾಕುಪ್ರಾಣಿಗಳಿಗೆ ಸುಲಭವಾಗಿ ಸಿಗುವಂತೆ ಮನೆಯಲ್ಲಿ ನೀರಿನ ಮೂಲಗಳನ್ನು ಇರಿಸಿ. ಸಾಕು ಪ್ರಾಣಿಗಳು ನಿರ್ಜಲೀಕರಣದಿಂದ ಬಳಲದಂತೆ ಗಮನಹರಿಸಿ. ಅವುಗಳ ಮೇಲೆ ನೀರು ಸಿಂಪಡಿಸುವುದರಿಂದ ಅವು ತಂಪಾಗಿರುತ್ತದೆ. ಅವುಗಳ ಪಂಜರವನ್ನು ನೇರ ಸೂರ್ಯನ ಬಿಸಿಲು ಬೀಳುವ ಹಾಗೆ ಇಡದಿರಿ.