ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  International Anti-corruption Day 2022: ಏನಿದು ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನ?: ಇತಿಹಾಸ, ಮಹತ್ವ, ಉದ್ದೇಶ ತಿಳಿಯಿರಿ

International Anti-Corruption Day 2022: ಏನಿದು ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನ?: ಇತಿಹಾಸ, ಮಹತ್ವ, ಉದ್ದೇಶ ತಿಳಿಯಿರಿ

ಇಂದು(ಡಿ.9-ಶುಕ್ರವಾರ) ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನವಾಗಿದ್ದು, ಭ್ರಷ್ಟಾಚಾರ ಎಂಬ ಜಾಗತಿಕ ಪಿಡುಗನ್ನು ತೊಲಗಿಸುವ ಹೊಸ ಸಂಕಲ್ಪ ಎದ್ದು ಕಾಣುತ್ತಿದೆ. ಭಾರತವೂ ಸೇರಿದಂತೆ ಹಲವೆಡೆ ಭ್ರಷ್ಟಾಚಾರ ವಿರೋಧಿ ಜನಜಾಗೃತಿಗೆ ಮುಂದಡಿ ಇಡಲಾಗಿದ್ದು, ಈ ಪಿಡುಗು ಹೇಗೆ ಸಮಾಜವನ್ನು ದುರ್ಬಲಗೊಳಿಸುತ್ತದೆ ಎಂಬುದರ ಕುರಿತು ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ. ಈ ಕುರಿತು ಮಾಹಿತಿ ಇಲ್ಲಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT)

ನವದೆಹಲಿ: ಭ್ರಷ್ಟಾಚಾರ ಎಂಬುದು ಮಾನವ ನಿರ್ಮಿತ ಜಾಗತಿಕ ಸಾಮಾಜಿಕ ಪಿಡುಗು. ಭ್ರಷ್ಟಾಚಾರ ಅಥವಾ ಲಂಚಗುಳಿತನ ದೇಶವೊಂದರ ಅಭಿವೃದ್ಧಿಗೆ ಕಂಟಕವಾಗಿದ್ದು, ಇದರ ನಿರ್ಮೂಲನೆಗೆ ಜಾಗತಿಕವಾಗಿ ಹಲವು ಐತಿಹಾಸಿಕ ಚಳುವಳಿಗಳು ನಡೆದಿರುವುದು ನಮ್ಮ ಕಣ್ಣ ಮುಂದಿರುವ ಇತಿಹಾಸ.

ಇಂದು(ಡಿ.9-ಶುಕ್ರವಾರ) ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನವಾಗಿದ್ದು, ಭ್ರಷ್ಟಾಚಾರ ಎಂಬ ಜಾಗತಿಕ ಪಿಡುಗನ್ನು ತೊಲಗಿಸುವ ಹೊಸ ಸಂಕಲ್ಪ ಎದ್ದು ಕಾಣುತ್ತಿದೆ. ಭಾರತವೂ ಸೇರಿದಂತೆ ಹಲವೆಡೆ ಭ್ರಷ್ಟಾಚಾರ ವಿರೋಧಿ ಜನಜಾಗೃತಿಗೆ ಮುಂದಡಿ ಇಡಲಾಗಿದ್ದು, ಈ ಪಿಡುಗು ಹೇಗೆ ಸಮಾಜವನ್ನು ದುರ್ಬಲಗೊಳಿಸುತ್ತದೆ ಎಂಬುದರ ಕುರಿತು ಅರಿವು ಮೂಡಿಸುವ ಪ್ರಯತ್ನಗಳು ನಡೆಯುತ್ತಿವೆ.

ಭ್ರಷ್ಟಾಚಾರವನ್ನು ಕೊನೆಗೊಳಿಸುವುದು ಎಂದರೆ ಉತ್ತಮ ಜಗತ್ತನ್ನು ನಿರ್ಮಿಸಲು ಕೆಲಸ ಮಾಡುವುದು, ಸಮಾನತೆಯನ್ನು ಉತ್ತೇಜಿಸುವುದು ಮತ್ತು ಸುಸ್ಥಿರ ಅಭಿವೃದ್ಧಿ ಗುರಿಗಳತ್ತ ಪ್ರಗತಿ ಸಾಧಿಸುವುದು ಎಂದರ್ಥ. ಹೀಗಾಗಿ ಈ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು ನಾವೆಲ್ಲರೂ ಒಗ್ಗಟ್ಟಾಗಬೇಕಿದೆ.

ಉದ್ದೇಶ:

ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಹಾಗೂ ಒಂದು ಸಮಾಜವಾಗಿ ನಾವು ಭ್ರಷ್ಟಾಚಾರವನ್ನು ಹೇಗೆ ತಡೆಯಬಹುದು ಎಂಬ ಅರಿವು ಮೂಡಿಸಲೆಂದೇ ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ.ಅಲ್ಲದೇ ಭ್ರಷ್ಟಾಚಾರವನ್ನು ಸಮರ್ಥವಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸುವ ಕ್ರಮಗಳನ್ನು ಬಲಪಡಿಸುವ ಉದ್ದೇಶದಿಂದ, ಪ್ರತಿವರ್ಷ ಡಿಸೆಂಬರ್ 9ರಂದು ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಣೆ ಮಾಡಲಾಗುತ್ತದೆ.

ಭ್ರಷ್ಟಾಚಾರವು ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಯನ್ನು ಹಾಳುಮಾಡುತ್ತಿದ್ದು, ಇದೊಂದು ರೋಗವಾಗಿ ಇಡೀ ಜಗತ್ತನ್ನು ಕಾಡುತ್ತಿದೆ. ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ಅನಿವಾರ್ಯವಾಗಿದ್ದು, ಇದೇ ಕಾರಣಕ್ಕೆ ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಣೆ ಮಾಡಲಾಗುತ್ತದೆ.

ಮಾನವ ತನ್ನ ಶ್ರೇಯೋಭಿವೃದ್ಧಿಗಾಗಿ ನಿರ್ಮಿಸಿಕೊಂಡಿರುವ ಎಲ್ಲಾ ಕ್ಷೇತ್ರಗಳಲ್ಲೂ ಭ್ರಷ್ಟಾಚಾರ ಆಳವಾಗಿ ಬೇರೂರಿದೆ. ಭ್ರಷ್ಟಾಚಾರದಿಂದ ಉಂಟಾಗುವ ಸಮಸ್ಯೆಗಳು ಗಂಭೀರ ಸ್ವರೂಪದ್ದಾಗಿದ್ದು, ಇದು ಪ್ರಜಾತಂತ್ರ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಅಪಾಯ ಇದ್ದೇ ಇದೆ.

ಇತಿಹಾಸ:

ಭ್ರಷ್ಟಾಚಾರ ಎಂಬ ಸಾಮಾಜಿಕ ಪಿಡುಗನ್ನು ಹೋಗಲಾಡಿಸಲು, ಅಕ್ಟೋಬರ್ 31, 2003ರಲ್ಲಿ ವಿಶ್ವಸಸಂಸ್ಥೆಯಲ್ಲಿ ಜಾಗತಿಕ ಭ್ರಷ್ಟಾಚಾರ ದಿನ ಆಚರಣೆಯ ಪ್ರಸ್ತಾವನೆಯನ್ನು ಮಂಡಿಸಲಾಯಿತು. ಅದರಂತೆ 2005ರಲ್ಲಿ ಪ್ರತಿವರ್ಷ ಡಿಸೆಂಬರ್ 9ರಂದು ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಣೆ ಮಾಡುವ ನಿರ್ಧಾರವನ್ನು ವಿಶ್ವಸಂಸ್ಥೆ ಕೈಗೊಂಡಿತು.ಭ್ರಷ್ಟಾಚಾರ ವಿರುದ್ಧ ಜಾಗೃತಿ ಮತ್ತು ಅದರ ವಿರುದ್ಧ ಜಾಗತಿಕ ಹೋರಾಟ ಹಾಗೂ ತಡೆ ಇದರ ಪ್ರಮುಖ ಉದ್ದೇಶವಾಗಿದೆ.

ಭಾರತ ಕೂಡ ವಿಶ್ವಸಂಸ್ಥೆಯ ಈ ನಿರ್ಣಯಕ್ಕೆ ಸಹಿ ಮಾಡಿದ್ದು, ಈ ಹಿನ್ನೆಲೆಯಲ್ಲಿ ಪ್ರತಿವರ್ಷ ಡಿ.9ರಂದು ದೇಶಾದ್ಯಂತ ಜಾಗತಿಕ ಭ್ರಷ್ಟಾಚಾರ ವಿರೋಧಿ ದಿನವನ್ನು ಆಚರಿಸಲಾಗುತ್ತದೆ. ವಿಶ್ವದಾದ್ಯಂತ ಇರುವ ಸರ್ಕಾರಗಳು, ಸರ್ಕಾರೇತರ ಸಂಘಟನೆಗಳು, ಮಾಧ್ಯಮಗಳು ವಿವಿಧ ಚಟುವಟಿಕೆಗಳನ್ನು ಆಯೋಜಿಸಿ, ಭ್ರಷ್ಟಾಚಾರದ ವಿರುದ್ಧ ಜನಜಾಗೃತಿ ಮೂಡಿಸುತ್ತವೆ.

ಅಷ್ಟೇ ಅಲ್ಲದೇ ಟ್ವಿಟರ್, ಫೇಸ್‌ಬುಕ್ ಸೇರಿದಂತೆ, ಹಲವು ಸಾಮಾಜಿಕ ಜಾಲತಾಣಗಳ ಮೂಲಕವೂ, ಭ್ರಷ್ಟಾಚಾರದ ವಿರುದ್ಧ ಪರಿಣಾಮಕಾರಿ ಸಂದೇಶಗಳನ್ನು ಹರಡಿ ಜಾಗೃತಿ ಮೂಡಿಸಲಾಗುತ್ತದೆ.

ಈ ವರ್ಷದ ಥೀಮ್‌ ಏನು?

"ಭ್ರಷ್ಟಾಚಾರದ ವಿರುದ್ಧ ಜಗತ್ತನ್ನು ಒಗ್ಗೂಡಿಸುವುದು.." ಪ್ರಸಕ್ತ ವರ್ಷದ ಅಂತರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದ ಥೀಮ್ ಆಗಿದೆ. ಇದರ ಅಧಿಕೃತ ಹೇಳಿಕೆಯು ''2022 ರ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ (IACD) ಭ್ರಷ್ಟಾಚಾರ-ವಿರೋಧಿ ಮತ್ತು ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಯ ನಡುವಿನ ನಿರ್ಣಾಯಕ ಕೊಂಡಿಯನ್ನು ಎತ್ತಿ ತೋರಿಸಲು ಪ್ರಯತ್ನಿಸುತ್ತದೆ. ಈ ಅಪರಾಧವನ್ನು ನಿಭಾಯಿಸುವುದು ಪ್ರತಿಯೊಬ್ಬರ ಹಕ್ಕು ಮತ್ತು ಜವಾಬ್ದಾರಿಯಾಗಿದೆ. ಪ್ರತಿಯೊಬ್ಬ ವ್ಯಕ್ತಿ ಮತ್ತು ಸಂಸ್ಥೆಯ ಸಹಕಾರ ಮತ್ತು ಒಳಗೊಳ್ಳುವಿಕೆಯ ಮೂಲಕ ಮಾತ್ರ, ಈ ಅಪರಾಧದ ಋಣಾತ್ಮಕ ಪರಿಣಾಮವನ್ನು ನಾವು ಜಯಿಸಬಹುದು ಎಂಬ ಕಲ್ಪನೆಯು ಅದರ ಕೇಂದ್ರ ಭಾಗದಲ್ಲಿದೆ. ರಾಜ್ಯಗಳು, ಸರ್ಕಾರಿ ಅಧಿಕಾರಿಗಳು, ನಾಗರಿಕ ಸೇವಕರು, ಕಾನೂನು ಜಾರಿ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳು, ಖಾಸಗಿ ವಲಯ, ನಾಗರಿಕ ಸಮಾಜ, ಶೈಕ್ಷಣಿಕ, ಸಾರ್ವಜನಿಕ ಮತ್ತು ಯುವಕರು ಎಲ್ಲರೂ ಭ್ರಷ್ಟಾಚಾರದ ವಿರುದ್ಧ ಜಗತ್ತನ್ನು ಒಗ್ಗೂಡಿಸುವಲ್ಲಿ ಪಾತ್ರವನ್ನು ವಹಿಸಬೇಕು.. '' ಎಂದು ಹೇಳಿದೆ.

ಪ್ರತಿವರ್ಷ ಜಾಗತಿಕವಾಗಿ ಸುಮಾರು ಒಂದು ಟ್ರಿಲಿಯನ್‌ ಅಮೆರಿಕನ್‌ ಡಾಲರ್‌ ಹಣವನ್ನು ಲಂಚವಾಗಿ ನೀಡಲಾಗುತ್ತಿದೆ. ಇದು ಜಾಗತಿಕ ಜಿಡಿಪಿಯ ಶೇ.5 ಕ್ಕಿಂತ ಹೆಚ್ಚು ಮೊತ್ತಕ್ಕೆ ಸಮಾನ ಎಂಬುದು ನಿಜಕ್ಕೂ ದಂಗುಬಡಿಸುತ್ತದೆ. ಅಭಿವೃದ್ಧಿ ಹೊಂದುತ್ತಿರುವ ದೇಶಗಳಲ್ಲಿ ಭ್ರಷ್ಟಾಚಾರದಲ್ಲಿ ಕಳೆದು ಹೋಗುವ ಹಣದಿಂದ, ಅಭಿವೃದ್ಧಿಯ ವೇಗವನ್ನು ಹತ್ತು ಪಟ್ಟು ಹೆಚ್ಚಿಸಬಹುದು ಎಂದು ವಿಶ್ವಸಂಸ್ಥೆಯ ವರದಿಯೊಂದು ಅಂದಾಜಿಸಿದೆ.

IPL_Entry_Point

ವಿಭಾಗ