ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Supreme Court: ಬಲವಂತದ ಮತಾಂತರ 'ಗಂಭೀರ ವಿಷಯ'; ತೆಗೆದುಕೊಂಡ ಕ್ರಮ ಕುರಿತು ಕೇಂದ್ರದ ಉತ್ತರ ಕೋರಿದ ಸುಪ್ರೀಂ ಕೋರ್ಟ್

Supreme Court: ಬಲವಂತದ ಮತಾಂತರ 'ಗಂಭೀರ ವಿಷಯ'; ತೆಗೆದುಕೊಂಡ ಕ್ರಮ ಕುರಿತು ಕೇಂದ್ರದ ಉತ್ತರ ಕೋರಿದ ಸುಪ್ರೀಂ ಕೋರ್ಟ್

ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ದ್ವಿಸದಸ್ಯ ಪೀಠವು, “ಬಲವಂತದ ಧಾರ್ಮಿಕ ಮತಾಂತರ ಆಗಿದೆ ಎಂಬುದು ಕಂಡುಬಂದರೆ, ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಇದು ಅಂತಿಮವಾಗಿ ರಾಷ್ಟ್ರದ ಭದ್ರತೆ ಮೇಲೆ ಗಂಭೀರ ಸಮಸ್ಯೆ ಆಗುವಂತೆ ಮಾಡಬಹುದು. ಅಲ್ಲದೆ ಸ್ವಾತಂತ್ರ್ಯ ಮತ್ತು ನಾಗರಿಕರ ಧರ್ಮದ ಮೇಲೂ ಪರಿಣಾಮ ಬೀರಬಹುದು,” ಎಂದು ತಿಳಿಸಿದೆ.

ಸುಪ್ರೀಂ ಕೋರ್ಟ್‌
ಸುಪ್ರೀಂ ಕೋರ್ಟ್‌ (ANI)

ನವದೆಹಲಿ: ಬಲವಂತದ ಮತಾಂತರವು ರಾಷ್ಟ್ರದ ಭದ್ರತೆಯ ಮೇಲೆ ಪರಿಣಾಮ ಬೀರುವ ಬಹಳ ಗಂಭೀರ ಸಮಸ್ಯೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ಹೀಗಾಗಿ ಈ ವಿಷಯದ ಬಗ್ಗೆ ಸೂಕ್ತ ನಿಲುವು ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ. ಅಲ್ಲದೆ ಅಂತಹ ಘಟನೆಯನ್ನು ತಡೆಯಲು ತೆಗೆದುಕೊಳ್ಳುತ್ತಿರುವ ಕ್ರಮಗಳನ್ನು ಒಂದು ವಾರದಲ್ಲಿ ನ್ಯಾಯಾಲಯಕ್ಕೆ ಪ್ರತಿಕ್ರಿಯೆಯ ರೂಪದಲ್ಲಿ ಸಲ್ಲಿಸುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ.

ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಹಿಮಾ ಕೊಹ್ಲಿ ಅವರ ದ್ವಿಸದಸ್ಯ ಪೀಠವು, “ಬಲವಂತದ ಧಾರ್ಮಿಕ ಮತಾಂತರ ಆಗಿದೆ ಎಂಬುದು ಕಂಡುಬಂದರೆ, ಇದು ಅತ್ಯಂತ ಗಂಭೀರವಾದ ವಿಷಯವಾಗಿದೆ. ಇದು ಅಂತಿಮವಾಗಿ ರಾಷ್ಟ್ರದ ಭದ್ರತೆ ಮೇಲೆ ಗಂಭೀರ ಸಮಸ್ಯೆ ಆಗುವಂತೆ ಮಾಡಬಹುದು. ಅಲ್ಲದೆ ಸ್ವಾತಂತ್ರ್ಯ ಮತ್ತು ನಾಗರಿಕರ ಧರ್ಮದ ಮೇಲೂ ಪರಿಣಾಮ ಬೀರಬಹುದು,” ಎಂದು ತಿಳಿಸಿದೆ.

"ಬಲವಂತದ ಮತಾಂತರವನ್ನು ನಿಲ್ಲಿಸಲು ಕೇಂದ್ರವು ಪ್ರಾಮಾಣಿಕ ಪ್ರಯತ್ನಗಳನ್ನು ಮಾಡಬೇಕಾಗಿದೆ. ಇಲ್ಲದಿದ್ದರೆ, ಮುಂದೆ ಬಹಳ ಕಷ್ಟಕರ ಪರಿಸ್ಥಿತಿ ಬರುತ್ತದೆ. ನೀವು ಇದನ್ನು ತಡೆಯಲು ಯಾವ ಕ್ರಮವನ್ನು ಪ್ರಸ್ತಾಪಿಸುತ್ತೀರಿ ಎಂಬುದನ್ನು ನಮಗೆ ತಿಳಿಸಿ. ಇದನ್ನು ನೀವು ಗಂಭೀರವಾಗಿ ಪರಿಗಣಿಸಿ ಮುಂದೆ ಹೆಜ್ಜೆ ಇಡಬೇಕು," ಎಂದು ಪೀಠ ಹೇಳಿದೆ.

ಬಲವಂತದ ಮತಾಂತರದ ಅಪರಾಧವನ್ನು ಭಾರತೀಯ ದಂಡ ಸಂಹಿತೆಯಲ್ಲಿ ಸೇರಿಸುವಂತೆ ಕೋರಿ ದೆಹಲಿಯ ಬಿಜೆಪಿ ನಾಯಕ ಅಶ್ವಿನಿ ಕುಮಾರ್ ಉಪಾಧ್ಯಾಯ ಅವರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಮೇರೆಗೆ ನ್ಯಾಯಾಲಯವು ಈ ಆದೇಶವನ್ನು ನೀಡಿದೆ. ನ್ಯಾಯಾಲಯವು ನವೆಂಬರ್ 28ರಂದು ಈ ಪ್ರಕರಣವನ್ನು ಮತ್ತೊಮ್ಮೆ ಕೈಗೆತ್ತಿಕೊಳ್ಳಲಿದೆ.

ಈ ಅಭ್ಯಾಸವನ್ನು ತಡೆಯುವ ಕ್ರಮಗಳನ್ನು ಪಟ್ಟಿ ಮಾಡಲು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ನ್ಯಾಯಾಲಯ ಕೇಳಿದೆ. ಬುಡಕಟ್ಟು ಪ್ರದೇಶಗಳಲ್ಲಿ ಬಲವಂತದ ಧಾರ್ಮಿಕ ಮತಾಂತರಗಳು ವ್ಯಾಪಕವಾಗಿವೆ ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ. ಅನೇಕ ಬಾರಿ ಸಂತ್ರಸ್ತರಿಗೆ ತಾವು ಕ್ರಿಮಿನಲ್ ಅಪರಾಧದ ಭಾಗವಾಗಿದ್ದೇವೆ ಎಂಬುದೇ ತಿಳಿದಿರುವುದಿಲ್ಲ ಎಂದು ಮೆಹ್ತಾ ಹೇಳಿದರು.

"ಉಡುಗೊರೆಗಳು ಮತ್ತು ಹಣಕಾಸಿನ ಆಮಿಷವೊಡ್ಡುವ ಮೂಲಕ ಬೆದರಿಕೆ, ವಂಚನೆ ಮತ್ತು ಮಾಟಮಂತ್ರ, ಮೂಢನಂಬಿಕೆ ಸೇರಿದಂತೆ ಇತರ ಮಾರ್ಗಗಳನ್ನು ಬಳಸಿಕೊಂಡು ಮತಾಂತರಗೊಳ್ಳುವ ಘಟನೆಗಳು ದೇಶದಾದ್ಯಂತ ಪ್ರತಿ ವಾರ ವರದಿಯಾಗುತ್ತಿವೆ. ಆದರೆ ಕೇಂದ್ರ ಮತ್ತು ರಾಜ್ಯಗಳು ಈ ಬೆದರಿಕೆಯನ್ನು ತಡೆಯಲು ಕಠಿಣ ಕ್ರಮಗಳನ್ನು ತೆಗೆದುಕೊಂಡಿಲ್ಲ." ಎಂದು ವಕೀಲ ಅಶ್ವನಿ ಕುಮಾರ್ ದುಬೆ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದಾರೆ.

ಬೆದರಿಕೆ ಮತ್ತು ವಿತ್ತೀಯ ಲಾಭಗಳ ಮೂಲಕ ಧಾರ್ಮಿಕ ಮತಾಂತರವನ್ನು ನಿಯಂತ್ರಿಸಲು ವರದಿಯನ್ನು ನೀಡಲು ಮತ್ತು ಸೂಕ್ತ ಮಸೂದೆಯನ್ನು ತಯಾರಿಸಲು ಭಾರತೀಯ ಕಾನೂನು ಆಯೋಗಕ್ಕೆ ನಿರ್ದೇಶನ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.

IPL_Entry_Point