ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಲೋಕಸಭಾ ಚುನಾವಣೆ; ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ಸಂಜೆ 6ರ ತನಕ, 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ, 10 ಮುಖ್ಯ ಅಂಶಗಳು

ಲೋಕಸಭಾ ಚುನಾವಣೆ; ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ಸಂಜೆ 6ರ ತನಕ, 102 ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ, 10 ಮುಖ್ಯ ಅಂಶಗಳು

ಲೋಕಸಭಾ ಚುನಾವಣೆ 2024 ರ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 19) ನಡೆಯುತ್ತಿದ್ದು, 102 ಲೋಕಸಭಾ ಸ್ಥಾನಗಳಿಗೆ ಬೆಳಗ್ಗೆ 7 ರಿಂದ ಸಂಜೆ 6 ರ ತನಕ ಮತದಾನ ನಡೆಯಲಿದೆ. ಈ ಮತದಾನ ಹಂತದ ಕುರಿತ 10 ಮುಖ್ಯ ಅಂಶಗಳ ವಿವರ ಇಲ್ಲಿದೆ.

ನವದೆಹಲಿಯಲ್ಲಿರುವ ಭಾರತ ಚುನಾವಣಾ ಆಯೋಗದ ಕಚೇರಿ ಎದುರು ಮಾದರಿ ಇವಿಎಂನ ಫೋಟೋ ಇದು. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ಸಂಜೆ 6ರ ತನಕ ನಡೆಯಲಿದೆ.
ನವದೆಹಲಿಯಲ್ಲಿರುವ ಭಾರತ ಚುನಾವಣಾ ಆಯೋಗದ ಕಚೇರಿ ಎದುರು ಮಾದರಿ ಇವಿಎಂನ ಫೋಟೋ ಇದು. ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು ಬೆಳಗ್ಗೆ 7 ರಿಂದ ಸಂಜೆ 6ರ ತನಕ ನಡೆಯಲಿದೆ. (PTI)

ನವದೆಹಲಿ: ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ ಉತ್ಸವ ಇಂದು ಶುರು. ಭಾರತದ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಏಪ್ರಿಲ್ 19) ಬೆಳಗ್ಗೆ 7 ರಿಂದ ಸಂಜೆ 6 ರ ತನಕ ನಡೆಯಲಿದೆ. ಚುನಾವಣಾ ಆಯೋಗ ಬಿಡುಗಡೆ ಮಾಡಿದ ವೇಳಾಪಟ್ಟಿ ಪ್ರಕಾರ, ಈ ದಿನ 102 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಅದೇ ರೀತಿ ಕೆಲವು ವಿಧಾನಸಭೆ ಚುನಾವಣೆ ನಡೆಯುತ್ತಿದ್ದು, ಆ ಪೈಕಿ 92 ವಿಧಾನಸಭಾ ಸ್ಥಾನಗಳಿಗೂ ಇಂದು ಮತದಾನ ನಡೆಯುತ್ತಿದೆ.

ಟ್ರೆಂಡಿಂಗ್​ ಸುದ್ದಿ

“ಪ್ರಜಾಪ್ರಭುತ್ವಕ್ಕೆ ಸಂಬಂಧಿಸಿ ವಿಶ್ವದ ಅತಿದೊಡ್ಡ ಹಬ್ಬವನ್ನು ಆಚರಿಸಲು ಭಾರತ ಸಜ್ಜಾಗಿದೆ. ಸಾರ್ವತ್ರಿಕ ಚುನಾವಣೆ 2024 ರ ಮತದಾನವು ನಾಳೆ (ಏಪ್ರಿಲ್ 19) ಪ್ರಾರಂಭವಾಗುತ್ತದೆ. ಚುನಾವಣಾ ಆಯೋಗವು ಎರಡು ವರ್ಷಗಳ ಕಾಲ ನಡೆಸಿದ ಕಠಿಣ ಸಿದ್ಧತೆಗಳಿಗೆ ಫಲ ಸಿಗುತ್ತಿರುವ ಕ್ಷಣ" ಎಂದು ಚುನಾವಣಾ ಆಯೋಗ ನಿನ್ನೆ (ಏಪ್ರಿಲ್ 18) ಹೇಳಿತ್ತು. ಈ ದಿನ 102 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, 1.87 ಲಕ್ಷ ಮತಗಟ್ಟೆಗಳಲ್ಲಿ 16.63 ಕೋಟಿ ಮತದಾರರು ಮತ ಚಲಾವಣೆ ಮಾಡಲಿದ್ದಾರೆ. ಕರ್ನಾಟಕದಲ್ಲಿ ಮೊದಲ ಹಂತದ ಮತದಾನ ಏಪ್ರಿಲ್ 26ರಂದು ನಡೆಯಲಿದೆ.

ಅಭ್ಯರ್ಥಿಗಳ ಹಿನ್ನೆಲೆ ಗಮನಿಸಲು ಹೀಗೆ ಮಾಡಬಹುದು

ಲೋಕಸಭಾ ಚುನಾವಣೆಯಲ್ಲಿ ಅರ್ಹ ಅಭ್ಯರ್ಥಿಯನ್ನು ಆಯ್ಕೆ ಮಾಡುವುದಕ್ಕೆ ಮತದಾರರಿಗೆ ತಿಳಿವಳಿಕೆ ನೀಡಬೇಕು ಎಂಬುದನ್ನು ಚುನಾವಣಾ ಆಯೋಗವು ಪ್ರತಿಪಾದಿಸುತ್ತದೆ. ಹೀಗಾಗಿ ಕ್ರಿಮಿನಲ್ ಹಿನ್ನೆಲೆಯ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಿದರೆ, ಆ ಕ್ರಮವನ್ನು ರಾಜಕೀಯ ಪಕ್ಷಗಳು ಸಮರ್ಥಿಸಿಕೊಳ್ಳಬೇಕು. ಇದಕ್ಕಾಗಿ ಪತ್ರಿಕಾ ಹೇಳಿಕೆ ನೀಡಬೇಕು ಎಂದು ಆಯೋಗ ಸೂಚಿಸಿದೆ. ಇವೆಲ್ಲದರ ಹೊರತಾಗಿ ಅಭ್ಯರ್ಥಿಗಳು ಸಲ್ಲಿಸಿದ ಅಫಿಡವಿಟ್‌ಗಳು ಚುನಾವಣಾ ಆಯೋಗದ ಇಸಿಐ ಕೆವೈಸಿ ಆಪ್‌ ಮತ್ತು ಅಭ್ಯರ್ಥಿಯ ಅಫಿಡವಿಟ್ ಪೋರ್ಟಲ್‌ (https://affidavit.eci.gov.in/ ) ನಲ್ಲಿ ಲಭ್ಯವಿದೆ. ಅದರಲ್ಲಿ ಅವರ ಆಸ್ತಿ, ಪಾಸ್ತಿ, ಸಾಲ ಬಾಧ್ಯತೆ, ಶೈಕ್ಷಣಿಕ ಅರ್ಹತೆ, ಅಪರಾಧ ಹಿನ್ನೆಲೆ ಮತ್ತು ಇತರೆ ಮಾಹಿತಿಗಳಿದ್ದು, ಮತದಾರರು ಅವುಗಳನ್ನು ಓದಿ ತಿಳಿದುಕೊಳ್ಳಬಹುದಾಗಿದೆ.

ಲೋಕಸಭಾ ಚುನಾವಣೆ ಮೊದಲ ಹಂತದ ಮತದಾನ- 10 ಮುಖ್ಯ ಅಂಶಗಳು

1) ಲೋಕಸಭಾ ಚುನಾವಣೆ 2024ರ ಮೊದಲ ಹಂತ; ಇಂದು (ಏಪ್ರಿಲ್ 19) 102 ಲೋಕಸಭಾ ಸ್ಥಾನ ಮತ್ತು ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳ 92 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ.

2) 102 ಲೋಕಸಭಾ ಕ್ಷೇತ್ರಗಳಲ್ಲಿ ಬೆಳಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆ ತನಕ ಮತದಾನ ನಡೆಯಲಿದೆ. ಇದೇ ಅವಧಿಯಲ್ಲಿ ಅರುಣಾಚಲ ಪ್ರದೇಶ, ಸಿಕ್ಕಿಂ ರಾಜ್ಯಗಳ 92 ವಿಧಾನಸಭಾ ಕ್ಷೇತ್ರಗಳಲ್ಲೂ ಮತದಾನ ನಡೆಯಲಿದೆ.

3) ಮೊದಲ ಹಂತದಲ್ಲಿ ಅತಿ ಹೆಚ್ಚು ಲೋಕಸಭಾ ಕ್ಷೇತ್ರಗಳಿಗೆ (102 ಲೋಕಸಭಾ ಸ್ಥಾನ) ಮತದಾನ ನಡೆಯುತ್ತಿದೆ. ಇನ್ನುಳಿದ 6 ಹಂತಗಳಲ್ಲಿ ಇಷ್ಟು ಲೋಕಸಭಾ ಸ್ಥಾನಗಳ ಮತದಾನ ಇಲ್ಲ.

4) 102 ಲೋಕಸಭಾ ಸ್ಥಾನಗಳಲ್ಲಿ 1.87 ಲಕ್ಷಕ್ಕೂ ಹೆಚ್ಚು ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, 18 ಲಕ್ಷಕ್ಕೂ ಹೆಚ್ಚು ಚುನಾವಣಾ ಸಿಬ್ಬಂದಿ ಕರ್ತವ್ಯದಲ್ಲಿದ್ದಾರೆ. 16.63 ಕೋಟಿಗೂ ಅಧಿಕ ಮತದಾರರು ಮತಚಲಾವಣೆ ಮಾಡಲಿದ್ದಾರೆ.

5) 16.63 ಕೋಟಿಗೂ ಅಧಿಕ ಮತದಾರ ಪೈಕಿ 8.23 ಕೋಟಿ ಮಹಿಳೆಯರು, 8.4 ಕೋಟಿ ಪುರುಷರು ಮತ್ತು 11,371 ತೃತೀಯ ಲಿಂಗಿಗಳು.

6) 35.67 ಲಕ್ಷ ಮತದಾರರು ಮೊದಲ ಸಲ ಮತಚಲಾವಣೆ ಮಾಡುತ್ತಿದ್ದಾರೆ. 20 ರಿಂದ 29 ವರ್ಷ ವಯೋಮಾನದ ಮತದಾರರ ಸಂಖ್ಯೆ 3.51 ಕೋಟಿ ಇದೆ.

7) ಮೊದಲ ಹಂತದ ಮತದಾನದಲ್ಲಿ 102 ಲೋಕಸಭಾ ಕ್ಷೇತ್ರಗಳಲ್ಲಿ ಒಟ್ಟು 1625 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 134 ಮಹಿಳೆಯರು, 1491 ಪುರುಷ ಅಭ್ಯರ್ಥಿಗಳು.

8) 41 ಹೆಲಿಕಾಪ್ಟರ್‌ಗಳು, 84 ವಿಶೇಷ ರೈಲುಗಳು, 1 ಲಕ್ಷದ ಅಂದಾಜು ವಾಹನಗಳನ್ನು ಮತದಾನ ಮತ್ತು ಭದ್ರತಾ ಅಗತ್ಯಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ.

9) ಮತದಾನ ಮಾಡುವುದಕ್ಕಾಗಿ 85 ವರ್ಷ ಮೇಲ್ಪಟ್ಟವರಿಗೆ ಮತ್ತು ಅಂಗ ವೈಕಲ್ಯ ಹೊಂದಿದ ಮತದಾರರನ್ನು ಮತಗಟ್ಟೆಗೆ ಕರೆದೊಯ್ಯುವ ಮತ್ತು ಮನೆಗೆ ವಾಪಸ್ ಬಿಡುವ ಸೌಲಭ್ಯವಿದೆ. ಸೂಚನಾ ಫಲಕ, ಇವಿಎಂನಲ್ಲಿ ಬ್ರೈಲ್‌ ಸಂಕೇತ, ಸ್ವಯಂಸೇವಕರ ನೆರವು ಸೇರಿ ಎಲ್ಲ ಸೌಲಭ್ಯಗಳನ್ನೂ ಚುನಾವಣಾ ಆಯೋಗವು ಒದಗಿಸುತ್ತಿದೆ. ಇದಕ್ಕಾಗಿ ಈ ಮತದಾರರು ಇಸಿಐ ಸಕ್ಷಮ್ ಎಂಬ ಆಪ್‌ ಮೂಲಕ ವ್ಹೀಲ್‌ಚೇರ್ ಸೌಲಭ್ಯ ಕಾಯ್ದಿರಿಸಬಹುದು.

10) ಮತದಾನ ಕೇಂದ್ರಗಳಲ್ಲಿ ಗುರುತಿನ ಪರಿಶೀಲನೆಗಾಗಿ ಮತದಾರರ ಗುರುತಿನ ಚೀಟಿ (ಎಪಿಕ್ ಕಾರ್ಡ್‌) ಹೊರತುಪಡಿಸಿ 12 ಪರ್ಯಾಯ ದಾಖಲೆಗಳನ್ನು ಆಯೋಗವು ಸೂಚಿಸಿದೆ. ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ಇದ್ದರೆ, ಈ ದಾಖಲೆಗಳಲ್ಲಿ ಯಾವುದಾದರೂ ದಾಖಲೆಗಳನ್ನು ತೋರಿಸಿ ಮತದಾನ ಮಾಡಬಹುದು.

IPL_Entry_Point