Pakistan: ರಾವಲ್‌ಪಿಂಡಿ ಜೈಲಿನ ಹೊರಗೆ ಇಮ್ರಾನ್ ಖಾನ್ ಆಪ್ತ ಶಾ ಮಹ್‌ಮೂದ್ ಖುರೇಷಿ ಮತ್ತೆ ಬಂಧನ
Imran Khan: ‘ಪಾಕಿಸ್ತಾನದ ನಿಜವಾದ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಹೋರಾಡಬೇಕು’ ಎಂದು ಇಮ್ರಾನ್ ಖಾನ್ ಆಪ್ತ ಮತ್ತು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಶಾ ಮಹಮೂದ್ ಖುರೇಷಿ ಜೈಲಿನ ಹೊರಗೆ ಕರೆ ನೀಡಿದ್ದರು.
ಇಸ್ಲಾಮಾಬಾದ್: ಪಾಕಿಸ್ತಾನದ ಮಾಜಿ ವಿದೇಶಾಂಗ ವ್ಯವಹಾರಗಳ ಸಚಿವ ಶಾ ಮಹ್‌ಮೂದ್ ಖುರೇಷಿ ಅವರನ್ನು ಮಂಗಳವಾರ ರಾವಲ್‌ಪಿಂಡಿಯಲ್ಲಿ ಮತ್ತೊಮ್ಮೆ ಬಂಧಿಸಲಾಗಿದೆ. ಅವರು ಜೈಲಿನಿಂದ ಬಿಡುಗಡೆಯಾಗಿ ಹೊರಗೆ ಬಂದ ಕೆಲವೇ ಗಂಟೆಗಳಲ್ಲಿ ಮತ್ತೊಮ್ಮೆ ಅವರನ್ನು ಬಂಧಿಸಿ ಪುನಃ ಜೈಲಿಗೆ ಅಟ್ಟಲಾಯಿತು. ಮಹ್‌ಮೂಹ್ ಖುರೇಷಿ ಅವರು ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ನೇತೃತ್ವದ 'ಪಾಕಿಸ್ತಾನ್ ತೆಹ್‌ರೀಕ್-ಎ-ಇನ್‌ಸಾಫ್' (Pakistan Tehreek-e-Insaf - PTI) ರಾಜಕೀಯ ಪಕ್ಷದ ಉಪಾಧ್ಯಕ್ಷರೂ ಹೌದು. ಪಕ್ಷದ ಮತ್ತೋರ್ವ ಮುಂಚೂಣಿ ನಾಯಕಿ ಮಸಾರತ್ ಜಮ್‌ಶೇದ್ ಚೀಮಾ ಅವರನ್ನೂ ಇದೇ ರೀತಿ ಜೈಲಿನ ಹೊರಗೆ ಬಂಧಿಸಲಾಗಿದೆ.
ಜೈಲಿನಿಂದ ಹೊರಗೆ ಬಂದ ಖುರೇಷಿ ತಮ್ಮ ಬೆಂಬಲಿಗರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡುವಾಗ, 'ನಾನಿನ್ನೂ ಪಿಟಿಐ ಸದಸ್ಯ. ಮುಂದೆಯೂ ನಾನು ಅದೇ ಪಕ್ಷದಲ್ಲಿ ಇರುತ್ತೇನೆ' ಎಂದು ಹೇಳಿಕೊಂಡಿದ್ದರು. ಪೊಲೀಸರು ಖುರೇಷಿ ಅವರನ್ನು ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ. ಪಕ್ಷದ ಮತ್ತೋರ್ವ ಉಪಾಧ್ಯಕ್ಷೆ ಶಿರೀನ್ ಮಝಾರಿ ತಾವು ಪಿಟಿಐನಿಂದ ದೂರವಾಗುವುದಾಗಿ ಹೇಳಿಕೆ ನೀಡಿದ್ದು, ಸಕ್ರಿಯ ರಾಜಕೀಯದಲ್ಲಿ ಉಳಿಯುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಮಾಜಿ ವಿದೇಶಾಂಗ ಸಚಿವರ ಬಂಧನವಾಗಿರುವುದು ಹಲವು ವಿಶ್ಲೇಷಣೆಗಳಿಗೆ ಕಾರಣವಾಗಿದೆ.
ಇಸ್ಲಾಮಾಬಾದ್ ಹೈಕೋರ್ಟ್ ನಿನ್ನೆ (ಮೇ 23) ಖುರೇಷಿ ಅವರ ಬಿಡುಗಡೆಗೆ ಆದೇಶಿಸಿತ್ತು. ಪ್ರತಿಭಟನೆಗಳಿಂದ ದೂರ ಉಳಿಯುವೆ ಮತ್ತು ಉದ್ರೇಕಕಾರಿ ಭಾಷಣ ಮಾಡುವುದಿಲ್ಲ ಎಂದು ಖುರೇಷಿ ನ್ಯಾಯಾಲಯಕ್ಕೆ ಭರವಸೆ ನೀಡಿದ್ದರು. ಕಳೆದ ಮೇ 9ರಂದು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಬಂಧನದ ನಂತರ ದೇಶಾದ್ಯಂತ ಬಂಧಿಸಲಾದ ಹಲವು ಪಿಟಿಐ ಕಾರ್ಯಕರ್ತರು ಮತ್ತು ನಾಯಕರ ಪೈಕಿ ಖುರೇಷಿ ಸಹ ಪ್ರಮುಖರು. ಅಲ್-ಖಾದಿರ್ ಟ್ರಸ್ಟ್ ಅವ್ಯವಹಾರಕ್ಕೆ ಸಂಬಂಧಿಸಿದ ಆರೋಪದಲ್ಲಿ ಇಮ್ರಾನ್ ಖಾನ್ ಅವರ ಬಂಧನವಾಗಿತ್ತು.
ಪಾಕಿಸ್ತಾನದ ಪಂಜಾಬ್ ಮತ್ತು ಖೈಬರ್ ಪಂಖ್ತುಖ್ವಾ ಪ್ರಾಂತ್ಯಗಳಲ್ಲಿ ನಡೆದ ಗಲಭೆಗಳಲ್ಲಿ ಖುರೇಷಿ ಅವರ ಪಾತ್ರವಿದೆ ಎಂದು ಪೊಲೀಸರು ಆರೋಪಿಸಿದ್ದರು. ತಮ್ಮ ಬಂಧನಕ್ಕೂ ಮೊದಲು ಪಿಟಿಐ ಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ್ದ ಖುರೇಷಿ, 'ಪಾಕಿಸ್ತಾನದ ನಿಜವಾದ ಸ್ವಾತಂತ್ರ್ಯಕ್ಕಾಗಿ ಎಲ್ಲರೂ ಹೋರಾಡಬೇಕು. ನಾನು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವನಾಗಿ ಎಲ್ಲ ವೇದಿಕೆಗಳಲ್ಲಿ ದೇಶದ ಹಿತ ಕಾಪಾಡಲು ಪ್ರಯತ್ನಿಸಿದ್ದೆ. ಕಳೆದ 40 ವರ್ಷಗಳಿಂದ ಸಕ್ರಿಯ ರಾಜಕಾರಣದಲ್ಲಿರುವ ನನಗೆ ದೇಶದ ಹಿತ ಯಾವುದು ಎಂಬುದು ಸ್ಪಷ್ಟವಾಗಿ ಗೊತ್ತಿದೆ' ಎಂದು ಹೇಳಿದ್ದರು.
ಇದನ್ನೂ ಓದಿ: ಕುಸಿತದತ್ತ ಪಾಕಿಸ್ತಾನ, ಭಾರತದ ಮೇಲೇನು ಪರಿಣಾಮ
ವಿಭಾಗ