ಕನ್ನಡ ಸುದ್ದಿ  /  Nation And-world  /  Pm Modi Still Popular? Who Will Win If Lok Sabha Election Is Held Today?

PM Modi still popular?: ಪ್ರಧಾನಿ ಮೋದಿ ಈಗಲೂ ಜನಪ್ರಿಯರೇ? ಇಂದೇ ಚುನಾವಣೆ ನಡೆದರೆ ಅವರಿಗೆ ಗೆಲುವು ದೊರಕಬಹುದೇ? ಆಸಕ್ತಿದಾಯಕ ಸಮೀಕ್ಷೆ

ಇಂದು ಚುನಾವಣೆ ನಡೆದರೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸೀಟುಗಳನ್ನು ಗೆಲ್ಲಲಿದೆ, ಕಾಂಗ್ರೆಸ್‌ಗೆ 191 ಸೀಟುಗಳು ದೊರಕಬಹುದು ಎಂದು ಇಂಡಿಯಾ ಟುಡೇ ಜನಮತಗಣನೆ ಕಂಡುಕೊಂಡಿದೆ.

ಮೋದಿ ಈಗಲೂ ಜನಪ್ರಿಯರೇ? ಇಂದೇ ಚುನಾವಣೆ ನಡೆದರೆ ಅವರಿಗೆ ಗೆಲುವು ದೊರಕಬಹುದೇ?
ಮೋದಿ ಈಗಲೂ ಜನಪ್ರಿಯರೇ? ಇಂದೇ ಚುನಾವಣೆ ನಡೆದರೆ ಅವರಿಗೆ ಗೆಲುವು ದೊರಕಬಹುದೇ?

ನವದೆಹಲಿ: ಎಲ್ಲಾದರೂ ಇಂದು ಚುನಾವಣೆ ಘೋಷಣೆಯಾದರೆ ಬಿಜೆಪಿ ಗೆಲ್ಲಬಹುದೇ? ಕಾಂಗ್ರೆಸ್‌ಗೆ ಎಷ್ಟು ಸೀಟು ದೊರಕಬಹುದು? ಪ್ರಧಾನಿ ಜನಪ್ರಿಯತೆ ಉಳಿಸಿಕೊಂಡಿದ್ದಾರೆಯೇ? ಇಂತಹ ಪ್ರಶ್ನೆಗಳಿಗೆೆ ಉತ್ತರ ಕಂಡುಕೊಳ್ಳುವ ಪ್ರಯತ್ನವನ್ನು ಇಂಡಿಯಾ ಟುಡೇ ಮಾಡಿದೆ. ಇಂಡಿಯಾ ಟುಡೇ ವೋಟರ್‌ ಮೂಡ್‌ ಸಮೀಕ್ಷೆ ಪ್ರಕಾರ ಇಂದು ಚುನಾವಣೆ ನಡೆದರೂ ಬಿಜೆಪಿ ಗೆಲ್ಲಬಹುದಂತೆ.

ಇಂಡಿಯಾ ಟುಡೇ ಜನಮತಗಣನೆ ಪ್ರಕಾರ ಇಂದು ಚುನಾವಣೆ ನಡೆದರೆ ಭಾರತೀಯ ಜನತಾ ಪಕ್ಷವು (ಬಿಜೆಪಿ) ಸೀಟುಗಳನ್ನು ಗೆಲ್ಲಲಿದೆ. ಕಾಂಗ್ರೆಸ್‌ಗೆ 191 ಸೀಟುಗಳು ದೊರಕಬಹುದು ಎಂದು ಜನಮತ ಸಮೀಕ್ಷೆ ತಿಳಿಸಿದೆ.

ಈಗಲೂ ಪ್ರಧಾನಮಂತ್ರಿ ನರೇಂದ್ರ ಮೋದಿ ಜನಪ್ರಿಯ ಅಭ್ಯರ್ಥಿಯೇ? ಎಂಬ ಪ್ರಶ್ನೆಗೂ ಈ ಸಮೀಕ್ಷೆಯಲ್ಲಿ ಶೇಕಡ 72ರಷ್ಟು ಜನರು ಹೌದು ಎಂದಿದ್ದಾರೆ. ಈ ಸಮೀಕ್ಷೆಯಲ್ಲಿ ಶೇಕಡ 72ರಷ್ಟು ಜನರು "ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯವೈಖರಿಯ ಕುರಿತು ತೃಪ್ತಿ ಹೊಂದಿದ್ದೇವೆʼʼ ಎಂದಿದ್ದಾರೆ.

ಆದರೆ, ನರೇಂದ್ರ ಮೋದಿಯವರ ಎದುರಾಳಿಯಾಗಿ ಬಿಂಬಿಸಲಾದ ರಾಹುಲ್‌ ಗಾಂಧಿಯವರ ಕುರಿತು ಮಿಶ್ರ ಅಭಿಪ್ರಾಯಗಳು ಈ ಜನಮತಗಣನೆಯಲ್ಲಿ ಬಂದಿದೆ. ರಾಹುಲ್‌ ಗಾಂಧಿಯವರು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಭಾರತ್‌ ಜೋಡೊ ಯಾತ್ರೆ ಕೈಗೊಂಡಿದ್ದಾರೆ.

ಭಾರತ್‌ ಜೋಡೋ ಯಾತ್ರೆಯು ಜನಪ್ರಿಯವಾಗಿದೆ ನಿಜ, ಆದರೆ, ಇದು ಕಾಂಗ್ರೆಸ್‌ಗೆ ಅಧಿಕಾರಕ್ಕೆ ಬರಲು ನೆರವಾಗದು ಎಂದು ಜನಮತಗಣನೆಯಲ್ಲಿ ಶೇಕಡ 37ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

1,40,917 ಜನರು ಈ ಜನಮತಗಣನೆಯಲ್ಲಿ ಭಾಗವಹಿಸಿದ್ದಾರೆ ಎಂದು ಇಂಡಿಯಾ ಟುಡೇ ಮಾಹಿತಿ ನೀಡಿದ್ದಾರೆ. ಈ ಸಮೀಕ್ಷೆಯಲ್ಲಿ ಕಂಡುಕೊಂಡ ಪ್ರಮುಖ ಅಂಶಗಳು ಈ ಮುಂದಿನಂತೆ ಇವೆ.

- ಜನವರಿ 2023ರಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಶೇಕಡ 67ರಷ್ಟು ಜನರು ನರೇಂದ್ರ ಮೋದಿಯವರ ಕಾರ್ಯನಿರ್ವಹಣೆ ತೃಪ್ತಿದಾಯಕ ಎಂದಿದ್ದಾರೆ. ಆಗಸ್ಟ್‌ 2022ರ ಸಮೀಕ್ಷೆಗೆ ಹೋಲಿಸಿದರೆ ಇದು ಶೇಕಡ 11ರಷ್ಟು ಹೆಚ್ಚಳವಾಗಿದೆ.

- ಕಳೆದ ವರ್ಷದ ಆಗಸ್ಟ್‌ನ ಸಮೀಕ್ಷೆಯಲ್ಲಿ ಎನ್‌ಡಿಎ ಸರಕಾರದ ಆಡಳಿತ ತೃಪ್ತಿದಾಯಕವಾಗಿಲ್ಲವೆಂದು ಶೇಕಡ 37ರಷ್ಟು ಜನರು ಅಭಿಪ್ರಾಯಪಟ್ಟಿದ್ದರು. ಈ ವರ್ಷದ ಜನವರಿ ಸಮೀಕ್ಷೆಯಲ್ಲಿ ಇದು ಶೇಕಡ 18ಕ್ಕೆ ತಲುಪಿದೆ. ಅಂದರೆ, ತೃಪ್ತಿದಾಯವಾಗಿಲ್ಲವೆಂದು ಹೇಳುವವರ ಪ್ರಮಾಣ ಗಮನಾರ್ಹವಾಗಿ ಇಳಿಕೆಯಾಗಿದೆ.

-ಎನ್‌ಡಿಎ ಸರಕಾರದ ಪ್ರಮುಖ ಸಾಧನೆಯೇನು ಎಂಬ ಪ್ರಶ್ನೆಗೂ ಈ ಜನಮತಗಣನೆ ಉತ್ತರ ಕಂಡುಕೊಂಡಿದೆ. ಶೇಕಡ 20ರಷ್ಟು ಜನರ ಪ್ರಕಾರ ಕೋವಿಡ್‌ 19 ನಿರ್ವಹಣೆಯು ಮೋದಿ ಸರಕಾರದ ಪ್ರಮುಖ ಸಾಧನೆ ಎಂದು ಹೇಳಿದ್ದಾರೆ. ಶೇಕಡ 14 ರಷ್ಟು ಜನರು "ಆರ್ಟಿಕಲ್‌ 370ʼʼ ರದ್ದು ಮಾಡಿರುವುದು ಪ್ರಮುಖ ಸಾಧನೆ ಎಂದಿದ್ದಾರೆ.

- ಶೇಕಡ 12ರಷ್ಟು ಸಂವಾದಿಗಳು "ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣʼʼವು ಈ ಸರಕಾರದ ಪ್ರಮುಖ ಸಾಧನೆ ಎಂದಿದ್ದಾರೆ.

- ಎನ್‌ಡಿಎ ಸರಕಾರದ ಪ್ರಮುಖ ವೈಫಲ್ಯವೇನು ಎಂಬ ಪ್ರಶ್ನೆಗೆ ಶೇಕಡ 25ರಷ್ಟು ಜನರು ಬೆಲೆಯೇರಿಕೆ ಎಂದಿದ್ದಾರೆ. ನಿರುದ್ಯೋಗ ಹೆಚ್ಚಳವು ಪ್ರಮುಖ ವೈಫಲ್ಯ ಎಂದು ಶೇಕಡ 17ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ.

- ಈ ಸಮೀಕ್ಷೆಯಲ್ಲಿ ಜನರನ್ನು ಸಂಪರ್ಕಿಸಲು ಭಾರತ್‌ ಜೋಡೋ ಯಾತ್ರೆಯು ಅತ್ಯುತ್ತಮ ವಿಧಾನವಾಗಿದೆ ಎಂದು ಶೇಕಡ 27ರಷ್ಟು ಜನರು ಅಭಿಪ್ರಾಯಪಟ್ಟಿದ್ದಾರೆ. ಆದರೆ, ಶೇಕಡ 13ರಷ್ಟು ಜನರ ಪ್ರಕಾರ, ಇದು ರಾಹುಲ್‌ ಗಾಂಧಿಯವರನ್ನು ಮತ್ತೆ ಬ್ರ್ಯಾಂಡ್‌ ಮಾಡುವ ಒಂದು ಪ್ರಯತ್ನವಾಗಿದೆ ಎಂದಿದ್ದಾರೆ.

- ಶೇಕಡ 26ರಷ್ಟು ಜನರ ಪ್ರಕಾರ ರಾಹುಲ್‌ ಗಾಂಧಿಯು ಕಾಂಗ್ರೆಸ್‌ ನಾಯಕತ್ವಕ್ಕೆ ಸೂಕ್ತ ಎಂದಿದ್ದಾರೆ. ಶೇಕಡ 17ರಷ್ಟು ಜನರು ರಾಹುಲ್‌ ಗಾಂಧಿಗಿಂತ ಸಚಿನ್‌ ಪೈಲಟ್‌ ಸೂಕ್ತ ಎಂದಿದ್ದಾರೆ.

IPL_Entry_Point