ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Gujarat Assembly Elections 2022: ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಚುನಾವಣಾ ಕರ್ತವ್ಯ ನಿರತ ಯೋಧ!

Gujarat Assembly Elections 2022: ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದ ಚುನಾವಣಾ ಕರ್ತವ್ಯ ನಿರತ ಯೋಧ!

ಗುಜರಾತ್‌ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೇ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅರೆಸೇನಾ ಪಡೆ ಯೋಧನೋರ್ವ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದಿದ್ಧಾನೆ. ಕಾನ್‌ಸ್ಟೇಬಲ್‌ ಎಸ್.‌ ಇನೌಚಾಸಿಂಗ್‌ ಎಂಬಾತ ತನ್ನ ಎಕೆ -47 ರೈಫಲ್‌ನಿಂದ, ಸಹೋದ್ಯೋಗಿಗಳತ್ತ ಮನಸೋಇಚ್ಛೆ ಗುಂಡು ಹಾರಿಸಿದ್ದಾನೆ. ದುರ್ಘಟನೆಯಲ್ಲಿ ಗಾಯಗೊಂಡ ಇತರ ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (HT_PRINT)

ಅಹಮದಾಬಾದ್: ಗುಜರಾತ್‌ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಂತೆಯೇ, ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಅರೆಸೇನಾ ಪಡೆ ಯೋಧನೋರ್ವ ತನ್ನ ಇಬ್ಬರು ಸಹೋದ್ಯೋಗಿಗಳನ್ನು ಗುಂಡಿಕ್ಕಿ ಕೊಂದಿದ್ಧಾನೆ.

ಗುಜರಾತ್‌ನ ಪೋರಬಂದರ್ ಬಳಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಮಣಿಪುರದ ಇಂಡಿಯನ್ ರಿಸರ್ವ್ ಬೆಟಾಲಿಯನ್ (IRB) ಯೋಧನೋರ್ವ, ಎಕೆ-47 ನಿಂದ ತನ್ನ ಸಹೋದ್ಯೋಗಿಗಳತ್ತ ಮನಬಂದಂತೆ ಗುಂಡು ಹಾರಿಸಿದ್ದಾನೆ. ಈ ದಾಳಿಯಲ್ಲಿ ಇಬ್ಬರು ಯೋಧರು ಸಾವನ್ನಪ್ಪಿದ್ದು, ಮತ್ತಿಬ್ಬರು ಗಂಭೀಋವಾಗಿ ಗಾಯಗೊಂಡಿದ್ದಾರೆ.

ನಿನ್ನೆ(ನ.26-ಶನಿವಾರ) ಸಂಜೆ ಕ್ಷುಲ್ಲಕ ವಿಷಯಕ್ಕೆ ಅರೆಸೇನಾ ಪಡೆಯ ಯೋಧರ ನಡುವೆ ಜಗಳವಾಗಿದೆ. ಸಿಟ್ಟಿನ ಭರದಲ್ಲಿ ಕಾನ್‌ಸ್ಟೇಬಲ್‌ ಎಸ್.‌ ಇನೌಚಾಸಿಂಗ್‌ ಎಂಬಾತ ತನ್ನ ಎಕೆ -47 ರೈಫಲ್‌ನಿಂದ, ಸಹೋದ್ಯೋಗಿಗಳತ್ತ ಮನಸೋಇಚ್ಛೆ ಗುಂಡು ಹಾರಿಸಿದ್ದಾನೆ. ದುರ್ಘಟನೆಯಲ್ಲಿ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟರೆ, ಗಾಯಗೊಂಡ ಮತ್ತಿಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಣಿಪುರದ ಇಂಡಿಯನ್ ರಿಸರ್ವ್ ಬೆಟಾಲಿಯನ್ (IRB) ನ ಭಾಗವಾಗಿದ್ದ ಈ ಯೋಧರು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ (CAPF) ಜೊತೆಗೆ ಗುಜರಾತ್‌ನಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು ಎನ್ನಲಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪೋರಬಂದರ್ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಚುನಾವಣಾ ಅಧಿಕಾರಿ ಎ.ಎಂ. ಶರ್ಮಾ, ಘರ್ಷಣೆಗೆ ಕಾರಣವೇನು ಎಂಬುದರ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಗಾಯಗೊಂಡ ಇಬ್ಬರು ಜವಾನರನ್ನು ಪೋರಬಂದರ್‌ನ ಜನರಲ್ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ. ಬಳಿಕ ಅವರನ್ನು ಸುಧಾರಿತ ಚಿಕಿತ್ಸೆಗಾಗಿ ಸುಮಾರು 150 ಕಿಮೀ ದೂರದಲ್ಲಿರುವ ಜಾಮ್‌ನಗರದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದೂ ಜಿಲ್ಲಾಧಿಕಾರಿ ಎ.ಎಂ. ಶರ್ಮಾ ಮಾಹಿತಿ ನೀಡಿದ್ದಾರೆ.

ಪೊಲೀಸ್ ವರದಿಯು ಆರೋಪಿಯನ್ನು ಕಾನ್‌ಸ್ಟೆಬಲ್ ಎಸ್ ಇನೌಚಾಸಿಂಗ್ ಎಂದು ಗುರುತಿಸಿದ್ದು, ಕೊಲೆಯಾದ ಇಬ್ಬರು ವ್ಯಕ್ತಿಗಳನ್ನು ತೊಯ್ಬಾ ಸಿಂಗ್ ಮತ್ತು ಜಿತೇಂದ್ರ ಸಿಂಗ್ ಎಂದು ಉಲ್ಲೇಖಿಸಿದೆ. ಅದರಂತೆ ಗಾಯಗೊಂಡವರನ್ನು ಕಾನ್‌ಸ್ಟೆಬಲ್‌ಗಳಾದ ಚೋರಜಿತ್ ಮತ್ತು ರೋಹಿಕಾನಾ ಎಂದು ಗುರುತಿಸಲಾಗಿದ್ದು, ಇವರೆಲ್ಲರೂ ಮಣಿಪುರಕ್ಕೆ ಸೇರಿದವರು ಎಂದು ಹೇಳಲಾಗಿದೆ.

ಪೋರಬಂದರ್‌ನಿಂದ ಸುಮಾರು 25 ಕಿಮೀ ದೂರದಲ್ಲಿರುವ ತುಕ್ಡಾ ಗೋಸಾ ಗ್ರಾಮದ ಸೈಕ್ಲೋನ್ ಕೇಂದ್ರದಲ್ಲಿ ಈ ದುರ್ಘಟನೆ ಸಂಭವಿಸಿದೆ ಎಂದೂ ಪೊಲೀಸರು ತಿಳಿಸಿದ್ದಾರೆ. ಪೋರಬಂದರ್ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಡಿಸೆಂಬರ್ 1 ರಂದು ಮತದಾನ ನಡೆಯಲಿದೆ.

ಸದ್ಯ ಆರೋಪಿ ಕಾನ್‌ಸ್ಟೇಬಲ್‌ ಎಸ್.‌ ಇನೌಚಾಸಿಂಗ್‌ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ನಡೆಸಿದ್ದಾರೆ ಎಂದು ಮೂಲಗಳು ಖಚಿತಪಡಿಸಿವೆ.

ಗುಜರಾತ್‌ನಲ್ಲಿ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟವಾಗಲಿದ್ದು, ಅಂದೇ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಕೂಡ ಘೋಷಣೆಯಾಗಲಿದೆ.

ಈ ಮಧ್ಯೆ ಸೂರತ್‌ನಲ್ಲಿ ನಡೆದ ಆಪ್‌ ಚುನಾವಣಾ ಸಭೆಯ ವೇಳೆ, ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಆಪ್‌ ರಾಜ್ಯಾಧ್ಯಕ್ಷ ಗೋಪಾಲ್‌ ಇಟಾಲಿಯಾ ಆರೋಪಿಸಿದ್ದಾರೆ. ಇಲ್ಲಿಮ ಕಟರ್ಗಾಮ್ ಕ್ಷೇತ್ರದಲ್ಲಿ ಆಪ್ ಸಭೆ ನಡೆಯುತ್ತಿರುವಾಗ‌ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿದ್ದು, ಈ ವೇಳೆ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂದು ಇಟಾಲಿಯಾ ತಿಳಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಗೋಪಾಲ್‌ ಇಟಾಲಿಯಾ, ''ಕಟರ್ಗಾಮ್ ವಿಧಾನಸಭಾ‌ ಕ್ಷೇತ್ರದಲ್ಲಿ ಸೋಲಿನ ಭಯದಿಂದಾಗಿ ಬಿಜೆಪಿ ಗೂಂಡಾಗಳು ನನ್ನ ಸಾರ್ವಜನಿಕ ಸಭೆಯ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಚಿಕ್ಕ ಬಾಲಕನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ..'' ಎಂದು ಆರೋಪಿಸಿದ್ದಾರೆ.

IPL_Entry_Point